ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲೊಂದು ಕೀಟೋದ್ಯಾನ

Last Updated 23 ಜೂನ್ 2015, 19:30 IST
ಅಕ್ಷರ ಗಾತ್ರ

ಅನೇಕರಿಗೆ ಕೀಟಗಳು ಎಂದಕೂಡಲೆ ನೆನಪಾಗುವುದು ಜೇನುಹುಳು, ಚಿಟ್ಟೆಗಳು, ಸೊಳ್ಳೆ ಹಾಗೂ ನೊಣಗಳು ಮಾತ್ರ. ಆದರೆ ಕೀಟ ಜಗತ್ತಿನಲ್ಲಿ ಲಕ್ಷಾಂತರ ಕೀಟಗಳಿವೆ. ಅವುಗಳಲ್ಲಿ ಉಪಯುಕ್ತ ಹಾಗೂ ಹಾನಿಕಾರಕ ಕೀಟಗಳಿವೆ. ಕೀಟಗಳಿಂದ ಲಾಭಗಳೂ ಅನೇಕ. 

ಮನುಷ್ಯ ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರ ಹಾಗೂ ಹಾನಿಕಾರಕ ಕೀಟಗಳ ನಾಶಕ್ಕೆ ಕ್ರಿಮಿನಾಶಕಗಳನ್ನು ಬಳಸುವುದು ಹೆಚ್ಚು. ಇದು ಉಪಯುಕ್ತ ಕೀಟಗಳ ಸಾವಿಗೂ ಕಾರಣವಾಗುತ್ತಿದೆ. ಇಂದು ಉಪಯುಕ್ತ ಕೀಟಗಳಲ್ಲಿ ಹಲವಾರು ಸಂತತಿಗಳು ಅಳಿವಿನ ಅಂಚಿಗೆ ಸಾಗಿವೆ. ಇದು ಪರಿಸರದಲ್ಲಿ ಅಸಮತೋಲನಕ್ಕೂ ಕಾರಣವಾಗಿದೆ.

ಈ ಅಸಮತೋಲನವನ್ನು ನಿವಾರಿಸಲು ಮತ್ತು ರೈತ ಸ್ನೇಹಿ ಪರಾಗಸ್ಪರ್ಶ ಮಾಡುವ ಕೀಟಗಳ ಸಂರಕ್ಷಣೆಗಾಗಿ ಹೆಬ್ಬಾಳದಲ್ಲಿರುವ ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಪನ್ಮೂಲ (ಎನ್‌ಬಿಎಐಆರ್‌) ಸಂಸ್ಥೆ ಮುಂದಾಗಿದೆ.  ನಗರದ ಯಲಹಂಕದಲ್ಲಿ 20 ಎಕರೆ ಪ್ರದೇಶದಲ್ಲಿ ‘ಕೀಟಗಳ ಜೀವ ವೈವಿಧ್ಯ ಉದ್ಯಾನ’ವನ್ನು ನಿರ್ಮಿಸಿದ್ದು, ಪರಾಗಸ್ಪರ್ಶ ಮಾಡುವ ಕೀಟಗಳನ್ನು ಆಕರ್ಷಿಸುವ ಗಿಡಗಳನ್ನು ನೆಡುವ ಮೂಲಕ ನಗರದಲ್ಲಿರುವ ಪರಾಗಸ್ಪರ್ಶ ಮಾಡುವ ಕೀಟಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ನಾಂದಿ ಹಾಡಿದೆ.

ಉಪಯುಕ್ತ ಕೀಟಗಳ ಸಂರಕ್ಷಣೆ ಮತ್ತು ಜೈವಿಕ ನಿಯಂತ್ರಣ ಕುರಿತಂತೆ ಸಂಶೋಧನೆ ಮಾಡಲು ಹತ್ತು ವರ್ಷಗಳ ಹಿಂದೆ ಜಿಕೆವಿಕೆಯಿಂದ ಈ ಸ್ಥಳವನ್ನು ಎನ್‌ಬಿಎಐಆರ್‌ ಭೋಗ್ಯಕ್ಕೆ ಪಡೆದಿದೆ. ನಂತರ 2010ರಿಂದ ಇಲ್ಲಿ ಸಂಶೋಧನಾಲಯಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಯಿತು. 2013ರಲ್ಲಿ ಪ್ರಯೋಗಾಲಯ ಮತ್ತು ಸಂಶೋಧನಾಲಯಗಳ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆ ಕೀಟಗಳ ಜೀವ ವೈವಿಧ್ಯ ಉದ್ಯಾನದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು.

ಕಳೆದ ಎರಡು ವರ್ಷಗಳಿಂದ 20  ಎಕರೆ ಪ್ರದೇಶದಲ್ಲಿ ಒಟ್ಟು 200 ರೀತಿಯ ವಿಭಿನ್ನ ತಳಿಗಳ ಗಿಡಗಳನ್ನು ನೆಡಲಾಗಿದೆ. ಇಲ್ಲಿ ಬೆಳೆಸಲಾಗಿರುವ ಒಂದೊಂದು ಗಿಡಕ್ಕೂ ಒಂದೊಂದು ವಿಶೇಷ ಇದೆ. ಪ್ರತಿಯೊಂದು ಗಿಡವೂ ಒಂದೊಂದು ರೀತಿಯ ಪರಾಗಸ್ಪರ್ಶ ಮಾಡುವ ಕೀಟಗಳನ್ನು ಆಕರ್ಷಿಸುತ್ತದೆ.

ಕೆಲವು ಗಿಡಗಳಂತೂ 10 ರಿಂದ 18 ಕೀಟಗಳನ್ನು ಆಕರ್ಷಿಸುತ್ತವೆ. ಜತೆಗೆ ಒಟ್ಟಾರೆ ಕೀಟಗಳನ್ನು ಕುರಿತು ಅಧ್ಯಯನ ಮಾಡುವ ಐದು ಸಂಶೋಧನಾಲಯಗಳನ್ನೂ ಇಲ್ಲಿ  ಸ್ಥಾಪಿಸಲಾಗಿದೆ. ಪ್ರಧಾನ ವಿಜ್ಞಾನಿ ಶಿವಲಿಂಗ ಸ್ವಾಮಿ ಅವರು ಈ ಉದ್ಯಾನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

ಪಾಲಿನೇಟರ್‌ ಸಂಶೋಧನಾ ವಿಭಾಗದಲ್ಲಿ ಪರಾಗಸ್ಪರ್ಶ ಮಾಡುವ ಕೀಟಗಳು, ಅವುಗಳ ಉಪಯೋಗಗಳು, ಅವುಗಳನ್ನು ಅವಲಂಬಿಸಿ ಜೀವಿಸುವ ಕೀಟಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಕೀಟ ವರ್ಗೀಕರಣ ವಿಭಾಗದಲ್ಲಿ, ಯಾವ ಪ್ರದೇಶ ಹಾಗೂ ಹವಾಮಾನಕ್ಕೆ ಕೀಟಗಳು ಹೊಂದಿಕೊಳ್ಳುತ್ತವೆ, ಅವುಗಳ ಜೀವಿತಾವಧಿ ಎಷ್ಟು ಎಂದು ಇಲ್ಲಿ ಪರೀಕ್ಷಿಸಿ ಸಂಶೋಧನೆ ನಡೆಸಲಾಗುತ್ತದೆ.

ಮಾಲಿಕ್ಯುಲರ್‌ ವಿಭಾಗದಲ್ಲಿ ಕೀಟಗಳನ್ನು ಪತ್ತೆ ಮಾಡಲು ಬಾರ್‌ ಕೋಡ್‌ ನೀಡಲಾಗುತ್ತದೆ. ಕೀಟಗಳ ಹೆಜ್ಜೆ ಗುರುತು ಸಿಕ್ಕರೂ ಅದು ಯಾವ ಕೀಟದ್ದು ಎಂದು ಕಂಡು ಹಿಡಿಯಬಹುದು. ಇದರಿಂದ ಯಾವುದೇ ಬೆಳೆಯ ಮೇಲೆ ಸಿಗುವ ಕೀಟಗಳ ಕುರುಹುಗಳಿಂದ ಅದು ಯಾವ ಕೀಟ ಎಂದು ಪತ್ತೆ ಮಾಡಬಹುದು.

ಸಾಕು ಪ್ರಾಣಿಗಳು ಮತ್ತು ಒಣ ಮೀನಿನ ಮೇಲೆ ಬರುವ ಕೀಟಗಳ ವಿಭಾಗದಲ್ಲಿ ಸಾಕು ಪ್ರಾಣಿಗಳ ಮೇಲೆ ಬರುವ ಕೀಟಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಒಣ ಮೀನು, ನಾಯಿ, ಕೋಳಿ, ಹಸು, ಕುರಿ ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ಬರುವ ಉಣ್ಣೆ, ನೊಣ, ಚಿಗಟ ಕುರಿತಂತೆ ಹಲವಾರು ಸಂಶೋಧನೆಗಳನ್ನು ನಡೆಸಲಾಗುತ್ತಿದೆ.

ಸದ್ಯಕ್ಕೆ ಪೌಲ್ಟ್ರಿ ಹಾಗೂ ಮನೆಗಳಲ್ಲಿ ಕಾಣಿಸಿಕೊಳ್ಳುವ ನೊಣಗಳ ಕಾಟದಿಂದ ಪಾರಾಗಲು ಸಂಶೋಧನೆ ನಡೆಯುತ್ತಿದೆ. ಅದಕ್ಕಾಗಿ ಕಾಡುಗಳಲ್ಲಿ ದೊರೆಯುವ ನಾನಾ ರೀತಿಯ ಗಿಡಮೂಲಿಕೆಗಳಿಂದ ರಸ ತೆಗೆದು ನೊಣಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ.  ಕೀಟಗಳ ಸಹ ಸೂಕ್ಷ್ಮ ಜೀವಗಳ ವಿಭಾಗದಲ್ಲಿ ಕೀಟಗಳನ್ನೇ ಅವಲಂಬಿಸಿ ಜೀವಿಸುವ ಸಹ ಸೂಕ್ಷ್ಮ ಜೀವಗಳ ಕುರಿತು ಸಂಶೋಧನೆ ನಡೆಯುತ್ತಿದೆ. ಇತ್ತೀಚೆಗೆ ಬನ್ನೇರುಘಟ್ಟದ ಮೃಗಾಲಯದಲ್ಲಿರುವ ಕೋಬ್ರಾ ಮೈಯಲ್ಲಿ ಒಂದು ಕೀಟ ದೊರೆತಿದ್ದು, ಅದರ ಮೇಲೂ ಸಂಶೋಧನೆ ನಡೆಯುತ್ತಿದೆ. 

ನೆಟ್‌ಹೌಸ್‌ಗಳಲ್ಲಿ ಬೆಳೆಯುವ ಬೆಳೆಗಳಲ್ಲಿ ನಡೆಯುವ ಪರಾಗಸ್ಪರ್ಶ ಕ್ರಿಯೆಯಲ್ಲಿ ಭಾಗಿಯಾಗುವ ಕೀಟಗಳ ಕುರಿತು ಸಂಶೋಧನೆ ನಡೆಸಲು ಇಲ್ಲಿ ಎರಡು ನೆಟ್‌ ಹೌಸ್‌ಗಳನ್ನು ನಿರ್ಮಿಸಲಾಗಿದೆ. ನೆಟ್‌ ಹೌಸ್‌ಗಳಲ್ಲಿ ಬೆಳೆಯಬಹುದಾದ ಪರಾಗಸ್ಪರ್ಶ ಕೀಟಗಳನ್ನು ಆಕರ್ಷಿಸುವ ಸಸಿಗಳನ್ನು ನಡೆಲಾಗಿದೆ. ಸಾಮಾನ್ಯವಾಗಿ ಇಂತಹ ನೆಟ್‌ಹೌಸ್‌ಗಳಲ್ಲಿ ಜೇನು ನೊಣಗಳು ಪರಾಗಸ್ಪರ್ಶ ಮಾಡುವುದಿಲ್ಲ. ಅದಕ್ಕಾಗಿ ಬೇರೆ ಯಾವ ಕೀಟಗಳು ಇದರೊಳಗೆ ಬಂದು ಪರಾಗಸ್ಪರ್ಶ ನಡೆಸುತ್ತವೆ ಎಂದು ಈಗ ಸಂಶೋಧನೆ ಪ್ರಾರಂಭಿಸಲಾಗಿದೆ.

ಪರಾಗಸ್ಪರ್ಶ ನಡೆಯುವ ಸಮಯ
ಬೆಳಿಗ್ಗೆ 10ರಿಂದ 12 ಹಾಗೂ ಸಂಜೆ 3ರಿಂದ 4.30ರವರೆಗೆ ಇಲ್ಲಿ ಪರಾಗಸ್ಪರ್ಶ ಮಾಡುವ ಕೀಟಗಳನ್ನು ಕಾಣಬಹುದು. ಏಕೆಂದರೆ ಪರಾಗಸ್ಪರ್ಶ ಕ್ರಿಯೆ ನಡೆಯುವುದು ಬಿಸಿಲಿನಲ್ಲಿ. ಹಾಗೆಂದು ಬಿಸಿಲು ತುಂಬಾ ಹೆಚ್ಚಾದ ನಂತರ ಪರಾಗಸ್ಪರ್ಶ ನಡೆಸಲು ಹೆಚ್ಚಿನ ಕೀಟಗಳು ಬರುವುದಿಲ್ಲ. ಆದ್ದರಿಂದ ಕೀಟಗಳನ್ನು ನೋಡಲು ಬಯಸುವ ಶಾಲಾ ವಿದ್ಯಾರ್ಥಿಗಳು ಬೆಳಿಗ್ಗೆ 9.30ರ ಒಳಗೆ ಯಲಹಂಕದ ಈ ಉದ್ಯಾನಕ್ಕೆ ಭೇಟಿ ನೀಡಬೇಕು. 

ಕೀಟಗಳ ಬಗ್ಗೆ ಅರಿವು ಮೂಡಿಸಲು ನಗರದ ಶಾಲಾ ಮಕ್ಕಳಿಗೆ ಈ ಉದ್ಯಾನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಮಕ್ಕಳಿಗೆ ಮೊದಲು ಇಲ್ಲಿನ ಉದ್ಯಾನದಲ್ಲಿ ಒಂದು ಸುತ್ತು ಹಾಕಿಸಲಾಗುತ್ತದೆ. ನಂತರ ಇಲ್ಲಿರುವ ವಿಜ್ಞಾನಿಗಳು ಮತ್ತು ಸಿಬ್ಬಂದಿ ಕೀಟಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆಮೇಲೆ ಇಲ್ಲಿನ ಐದು ಸಂಶೋಧನಾಲಯಗಳಿಗೂ ಕರೆದುಕೊಂಡು ಹೋಗಿ ಅಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ ತಿಳಿಸಿಕೊಡುತ್ತಾರೆ. ಆಸಕ್ತರು ಈ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
*
ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ರೈತ ಸ್ನೇಹಿ ಹಾಗೂ ಪರಿಸರ ಸ್ನೇಹಿ ಕೀಟಗಳಿವೆ. ಅವುಗಳಲ್ಲಿ ಅಧಿಕೃತವಾಗಿ ಪತ್ತೆಯಾಗಿರುವುದು ಕೇವಲ 60 ಸಾವಿರ. ಇದರಲ್ಲಿ ರಾಜ್ಯದಲ್ಲಿರುವ, ಪರಾಗಸ್ಪರ್ಶ ಮಾಡುವ ಕೀಟಗಳ ಸಂಖ್ಯೆ ಮೂರರಿಂದ ನಾಲ್ಕು ಸಾವಿರ. ಈ ಪೈಕಿ ನೂರಕ್ಕೂ ಹೆಚ್ಚು ಕೀಟಗಳು ನಗರದಲ್ಲೇ ಇವೆ. ಅವುಗಳನ್ನು ಆಕರ್ಷಿಸಿ ಸಂರಕ್ಷಿಸಲು ಈ ಉದ್ಯಾನವನ್ನು ನಿರ್ಮಿಸಲಾಗಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಕೀಟಗಳ ಸಂರಕ್ಷಣೆಗೆ ಮುಂದಾಗಿರುವುದು ದೇಶದಲ್ಲಿ ಇದೇ ಮೊದಲು. ವಿಶ್ವದ ಮೂಲೆಮೂಲೆಗಳಲ್ಲಿ ಚಿಟ್ಟೆ, ಪತಂಗ ಸೇರಿದಂತೆ ಕೆಲವು ಕೀಟಗಳ ರಕ್ಷಣೆಗೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ. ಆದರೆ ಯಲಹಂಕದಲ್ಲಿ ಎಲ್ಲಾ ರೀತಿಯ ಉಪಯುಕ್ತ ಕೀಟಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ 40ಕ್ಕೂ ಹೆಚ್ಚು ಕೀಟಗಳನ್ನು ಈ ಉದ್ಯಾನದಲ್ಲಿ ಕಾಣಬಹುದು.
-ಅಬ್ರಾಹಂ ವರ್ಗೀಸ್‌,
ನಿರ್ದೇಶಕ, ಎನ್‌ಬಿಎಐಆರ್‌


ಮಾಹಿತಿಗೆ: 080–23511982.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT