ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವೊಂದರ ಆತ್ಮಕತೆ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಒಂದು ನಗರ. ಅದರೊಳಗೆ ಇದ್ದೂ ಇಲ್ಲದಂತಿರುವ ಪುಟ್ಟ ಹಳ್ಳಿ. ಆ ಹಳ್ಳಿಯೊಳಗೆ ಉಸಿರಾಡುತ್ತಿರುವುದು ಮುಗ್ಧರು. ಅದೇ ನಗರದಲ್ಲಿ ಇನ್ನೊಂದು ಬಗೆಯ ಜನರೂ ಇದ್ದಾರೆ. ಪಕ್ಕದ ಮನೆಯವರೂ ಅಪರಚಿತರು ಎನ್ನುವಷ್ಟು ಆಗಂತುಕ ಲೋಕ ಅವರದು. ಎಲ್ಲೆಲ್ಲೂ ಅನುಮಾನ, ಯಾರನ್ನು ಕಂಡರೂ ಪುಕ್ಕಲುತನ. ನಗರವೆಂದರೆ ಮನುಷ್ಯರಷ್ಟೇ ಅಲ್ಲವಲ್ಲ? ಅಲ್ಲಿ ಗುಬ್ಬಿಯೂ ಗೂಡು ಕಟ್ಟುತ್ತದೆ, ಹಸಿರೂ ಟಿಸಿಲೊಡೆಯುತ್ತದೆ.

ಕಲಾವಿಮರ್ಶಕ ಗಿರಿಧರ ಖಾಸನೀಸ ಅವರ ನೇತೃತ್ವದಲ್ಲಿ ನಡೆಯುತ್ತಿರುವ `ಮೈ ಸಿಟಿ~ ಕಲಾ ಪ್ರದರ್ಶನದ ಕೆಲವು ಝಲಕ್‌ಗಳು ಇವು. ಒಟ್ಟು ಆರು ಕಲಾವಿದರು ನಗರವನ್ನೇ ಧ್ಯಾನಿಸಿ ಬರೆದ ಕಲಾಕೃತಿಗಳು ಇಲ್ಲಿವೆ. ಆರ್ಕಿಲಿಕ್ ಮತ್ತು ಜಲವರ್ಣದ ಇಲ್ಲಿನ ಕಲಾಕೃತಿಗಳು ಗಾಢ ಅನುಭವ ಕಟ್ಟಿಕೊಡುವ ಮೂಲಕ ಥಟ್ಟನೆ ನೋಡುಗರನ್ನು ಸೆಳೆಯುತ್ತವೆ.

ನಗರದ ಹೊರಾಂಗಣದಲ್ಲಿ ಅತೀತ ಮಾನವರನ್ನು ಸೃಷ್ಟಿಸಿರುವ ಪ್ರವೀಣ್ ಕುಮಾರ್ ಕಲಾಕೃತಿ ಪ್ರದರ್ಶನದ ಹೈಲೈಟ್. ಫ್ಯಾಂಟಮ್, ಸೂಪರ್‌ಮ್ಯಾನ್, ಬ್ಯಾಟ್‌ಮನ್ ಮುಂತಾದವರು ನಗರಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಹೆಣಗುವ ವ್ಯಕ್ತಿಗಳಾಗಿ ಒಮ್ಮಮ್ಮೆ ಶಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯರಿಗೆ ಅಂಥಹ ಮುಕ್ತಿ ಸಾಧ್ಯವಿಲ್ಲ ಎಂಬುದನ್ನು ಸಾರುವುದರೊಂದಿಗೆ ಕಲಾಕೃತಿಗಳಿಗೆ ಎತ್ತರದ ಸ್ಥಾನ ದಕ್ಕಿದೆ.

ಈಗಾಗಲೇ ಹಲವು ಪ್ರದರ್ಶನಗಳ ಮೂಲಕ ಗಮನ ಸೆಳೆದಿರುವ ಮಂಜುನಾಥ್ ಹಾಸನ್ ಅವರಿಗೆ ನಗರವೆಂಬುದು ಸಾದಾಸೀದ ಲೋಕವಲ್ಲ. ವಾಸ್ತವವನ್ನು ಮುರಿದು ಕಟ್ಟಿ ಹೊಸ ಜಗತ್ತನ್ನು ಸೃಷ್ಟಿಸುವ `ಸರ‌್ರಿಯಲಿಸಂ~, ಮಂಜುನಾಥ್ ಅವರಿಗೆ ಅತ್ಯಂತ ಪ್ರಿಯವಾದ ಪಂಥ. ಅವರ ಅನೇಕ ಕಲಾಕೃತಿಗಳಲ್ಲಿ ಇದು ವ್ಯಕ್ತವಾಗಿದೆ. ಗೂಡಿನ ಮೊಟ್ಟೆಯಲ್ಲಿ ವಾಹನಗಳು, ಇಸ್ತ್ರಿ ಪೆಟ್ಟಿಗೆಯೊಳಗೆ ಬೇಯುತ್ತಿರುವ ಕಾಡು, ತುಂಡು ಮರಗಳ ಮೇಲೆ ನಿಂತಿರುವ ಗೋಪುರ, ಬೀಗದೊಳಗೆ ಕಾಣುವ ರಸ್ತೆ ಹೀಗೆ ಅವರದು ಮಾಯಾ ಜಗತ್ತು.

ದೇವರಾಜ್ ಅವರ ಕಲಾಕೃತಿಗಳಲ್ಲಿ ಮುಗ್ಧರಿಗೆ ಸ್ಥಾನ. ಸಿಮೆಂಟು ಜಗುಲಿಯ ಮೇಲೋ, ಕಬ್ಬಿಣದ ಬೆಂಚಿನ ಮೇಲೋ, ಮರದ ತುಂಡಿನ ಮೇಲೋ ಕುಳಿತ ಸಾಮಾನ್ಯಾತಿ ಸಾಮಾನ್ಯರು. ಇವರಿಗೆ ಹಳ್ಳಿಯಷ್ಟೇ ನಗರವೂ ಹೊಸತು. ಹಳ್ಳಿಯನ್ನು ನಿಸ್ಸಂಶಯವಾಗಿ ನೋಡುವಷ್ಟೇ ನಗರವನ್ನೂ ನಿಸ್ಸಂಶಯವಾಗಿ ಪ್ರೀತಿಸುವವರು. ಊರು ತೊರೆದವರ ಕತೆ ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ.

ಬಿ.ಶಿವಾನಂದ್ ನಗರದ ಕತೆ ಹೇಳಲು ಹಳೆ ಯಂತ್ರಗಳ ಮೊರೆ ಹೋಗಿದ್ದಾರೆ. ಅವೆಲ್ಲವೂ ಕೆಟ್ಟು ನಿಂತ, ತುಕ್ಕು ಹಿಡಿದ, ಇನ್ನೆಂದೂ ರಿಪೇರಿಯಾಗಲು ಸಾಧ್ಯವೇ ಇಲ್ಲದ ಯಂತ್ರಗಳು. ಅವರ ಕಲಾಕೃತಿಗಳಲ್ಲೆಲ್ಲೂ ಮನುಷ್ಯರ ಛಾಯೆ ಇಲ್ಲ. ಆದರೆ ಆ ಯಂತ್ರಗಳೇ ಮನುಷ್ಯರಂತೆ ವೀಕ್ಷಕರ ಕಣ್ಣಿಗೆ ಭಾಸವಾಗುತ್ತವೆ. ಮನುಷ್ಯನ ಬದುಕೂ ಯಂತ್ರಮಯ ಎಂಬುದನ್ನು ಧ್ವನಿಸುತ್ತವೆ.

ವಿ.ಜಿ. ಊರ್ಮಿಳಾ ಅವರ ಕಲಾಕೃತಿಗಳಿಗೆ ನೆರಳಿನಂತಿರುವ ಬೆಳಕು, ಬೆಳಕಿನಂತಿರುವ ನೆರಳನ್ನು ಹಿಡಿದಿಡುವ ಶಕ್ತಿ ಇದೆ. ಮೆಟ್ಟಿಲುಗಳನ್ನು ಬಣ್ಣಿಸುವ ಮೂಲಕವೇ ಇಡೀ ನಗರದ ಬದುಕನ್ನು ಕಟ್ಟಿಕೊಡುವಲ್ಲಿ ಅವರು ಸಫಲರು. ಹಲವು ಮಹಡಿಗಳ ಮನೆ, ಆ ಮನೆಯ ನೆತ್ತಿಯ ಮೇಲೆ ಕಾಣುವ ದೃಶ್ಯಗಳೇ ಇವರ ಕಲಾಕೃತಿಯ ವಸ್ತುಗಳು. ಕಪ್ಪು ವರ್ಣದಲ್ಲಿ, ಛಿದ್ರ ಸ್ಥಿತಿಯಲ್ಲಿ ನಗರವನ್ನು ಹಿಡಿದಿಟ್ಟಿರುವುದು ಅವರ ವೈಶಿಷ್ಟ್ಯ. ಮುರಿದ ಕುರ್ಚಿ, ಕುಂಡದ ಗಿಡ, ಅರೆ ತೆರೆದ ಬಾಗಿಲು, ಆಂಟೆನಾ ಅವರ ಕಲ್ಪನೆಯಲ್ಲಿರುವ ಸಿಟಿಯ ತುಣುಕುಗಳು ಒಂದೇ ಎರಡೇ?

ವೇಣುಗೋಪಾಲ್ ಅಮೂರ್ತ ರೀತಿಯಲ್ಲಿ ನಗರವನ್ನು ಸ್ಪರ್ಶಿಸಿದ್ದಾರೆ. ಅವರಿಗೆ ಯುವಕ ಯುವತಿಯರ ಟಿ ಷಟ್ ಮುಖ್ಯವಾಗಿ ಕಂಡಿದೆ. ಮನುಷ್ಯನ ನಂಬಿಕೆ, ಅಪನಂಬಿಕೆಗಳನ್ನು ಪ್ರಶ್ನಿಸಲಾಗಿದೆ. ಲೌಕಿಕ ಜಗತ್ತನ್ನೇ ನೆಚ್ಚಿಕೊಂಡಿರುವವರನ್ನು ಅಣಕಿಸಲಾಗಿದೆ.

ಈ ಎಲ್ಲಾ ಕಲಾಕೃತಿಗಳು ಜನಪರವಷ್ಟೇ ಅಲ್ಲ ಜೀವಪರವಾಗಿ ಕೆಲಸ ಮಾಡಿವೆ. ಬದುಕಿನ ಸಾವಯವ ಆಯಾಮವನ್ನು ಎತ್ತಿ ಹಿಡಿದಿವೆ. ಈ ಕಾರಣಕ್ಕೆ `ಮೈ ಸಿಟಿ~ ನೋಡಲೇಬೇಕಾದ ಕಲಾಪ್ರದರ್ಶನ.

ಮೇ 30ರವರೆಗೆ ನಗರದ ಯು.ಬಿ.ಸಿಟಿಯಲ್ಲಿರುವ ತೂಗು ಗ್ಯಾಲರಿ ಸಬ್‌ಲೈಮ್ ಗೆಲೇರಿಯಾದಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 2222 1667 / 88610 03866.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT