ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಸಭೆ

Last Updated 28 ಜನವರಿ 2012, 7:20 IST
ಅಕ್ಷರ ಗಾತ್ರ

ತುಮಕೂರು: ಕ್ಷಣ ಹೊತ್ತು ಪ್ರಜಾಪ್ರಭುತ್ವ ತಲೆ ತಗ್ಗಿಸಿ ನಿಂತಿತು. ಸದಸ್ಯರಿಂದ ಪುಃಖಾನುಪುಃಖ ಅಶ್ಲೀಲ ಪದಗಳ ಪ್ರಯೋಗ. ಸಭೆ ಕರೆದು ನಿಗೂಢವಾದ ಆಯುಕ್ತೆ. ಕ್ಷಣ, ಕ್ಷಣವೂ ನಗರಸಭೆ ಸದಸ್ಯರ ಮುಖದಲ್ಲಿ ಬದಲಾಗುತ್ತಿದ್ದ ರೌದ್ರತೆ. ಆಯುಕ್ತೆ ಸಂಪರ್ಕಕ್ಕೆ ಸಿಗದಿದ್ದರೆ ಆಯುಕ್ತೆ ಬಳಸುವ ವಾಹನ, ಚಾಲಕನ್ನು ಎಲ್ಲಿದ್ದರೂ ಬಂಧಿಸುವಂತೆ ಪೊಲೀಸರಿಗೆ ದೂರು ನೀಡಲು ಜಿಲ್ಲಾಧಿಕಾರಿ ಆದೇಶ.

-ಇವಿಷ್ಟು ಶುಕ್ರವಾರ ನಗರಸಭೆ ಅಧ್ಯಕ್ಷೆ ಯಶೋಧಾ ಗಂಗಪ್ಪ ಅವರನ್ನು ಪದಚ್ಯುತಿಗೊಳಿಸಲು ಕರೆದಿದ್ದ ಅವಿಶ್ವಾಸ ಸಭೆ ಆರಂಭಕ್ಕೂ ಮುನ್ನ ನಡೆದ ಘಟನೆಗಳ ಅಲ್ಪ ಚಿತ್ರಣ.

ಅವಿಶ್ವಾಸ ಸಭೆ ಕರೆದು `ಮಂಗಮಾಯ~ವಾಗಿದ್ದ ಆಯುಕ್ತೆ ಕುರಿತು ಸಭೆಯ ವರದಿ ಮಾಡಲು ಬಂದಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮಯ್ಯ ಅವರನ್ನು ಸದಸ್ಯರು ಕೇಳಿದಾಗ ಅವರಿಂದಲೂ ಮಾಹಿತಿ ಇಲ್ಲ ಎಂಬ ಉತ್ತರ. ಆಯುಕ್ತರು ಲಿಖಿತ ರೂಪದ ಅಧಿಕಾರ ನೀಡಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್ ಹೇಳಿಕೆ. ತಮಗೇನು ಗೊತ್ತಿಲ್ಲ; ಯೋಜನಾ ನಿರ್ದೇಶಕರನ್ನು ಕಳುಹಿಸಲಾಗಿದೆ ಅವರಿಂದಲೇ ಮಾಹಿತಿ ಪಡೆಯಿರಿ ಎಂದು ಜಿಲ್ಲಾಧಿಕಾರಿ ದೂರವಾಣಿ ಮೂಲಕ ಸಬೂಬು.

ಆಕ್ರೋಶಭರಿತ ಸದಸ್ಯರಿಂದ ರೌದ್ರಾವತಾರ. ಇದರ ನಡುವೆಯೂ ಮೂವರು ಸದಸ್ಯೆಯರೊಂದಿಗೆ ಅಧ್ಯಕ್ಷೆ ಯಶೋಧಾ ಗಂಗಪ್ಪ ತಮ್ಮ ಕೊಠಡಿ ಮತ್ತು ಸಭೆ ನಡೆಯುವ ಸ್ಥಳಕ್ಕೂ ಓಡಾಡುತ್ತಿದ್ದದ್ದು ಕಂಡುಬಂತು.

ಮತ ಇದ್ದರೂ ಶಾಸಕ ಎಸ್.ಶಿವಣ್ಣ, ಸಂಸದ ಜಿ.ಎಸ್.ಬಸವರಾಜು ನಗರಸಭೆಯತ್ತ ಸುಳಿಯಲಿಲ್ಲ. ಬಿಜೆಪಿಯ 9 ಸದಸ್ಯರಲ್ಲಿ ಐವರು ಸದಸ್ಯರು ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಅವರು ಕೂಡ ಸಭೆಯತ್ತ ತಲೆಹಾಕಲಿಲ್ಲ. ವಾಸ್ತವವಾಗಿ ಅಧಿಕಾರ ನಡೆಸಲು ಬೆಂಬಲ ಇಲ್ಲದಿದ್ದರೂ, ಬಿಜೆಪಿ ಅವಿಶ್ವಾಸ ಸಭೆ ಮುಂದೂಡಲು ಮಾಡಿದ ನಾಟಕ ಇಡೀ ಘಟನೆಯ ಹಿಂದೆ ಕಾಣುತ್ತಿತ್ತು. ಸದ್ಯ, ನಾಲ್ವರು ಸದಸ್ಯರ ಬಲ ಇರುವ (ಅದರಲ್ಲೂ ಒಬ್ಬರು ಸಿಪಿಎಂನಿಂದ ಗೆದ್ದವರು) ಬಿಜೆಪಿ ನಗರಸಭೆ ಅಧಿಕಾರ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.

`ತಾಕತ್ತಿದ್ದರೆ ನೇರವಾಗಿ ಮುಂದೆ ನಿಂತು ಕುಸ್ತಿಆಡಲಿ. ಹಿಂದೆ ನಿಂತು ಆಡುವುದು ಬೇಡ~ ಎಂದು ಪದೇಪದೇ ಆಕ್ರೋಶಭರಿತರಾಗಿ ಉಪಾಧ್ಯಕ್ಷ ಅಸ್ಲಾಂ ಪಾಷಾ ಸಭೆ ಆರಂಭವಾಗುವವರೆಗೂ ಪರೋಕ್ಷವಾಗಿ ಶಾಸಕ ಎಸ್.ಶಿವಣ್ಣ ವಿರುದ್ಧ ಕೂಗಾಡಿದರು.

ಬಲಾಬಲ
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಅವರಲ್ಲಿ ಕಾಂಗ್ರೆಸ್ 13, ಬಿಜೆಪಿ 9 (ಐವರು ಸದಸ್ಯರು ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಈಚೆಗೆ ರಾಜೀನಾಮೆ ಸಲ್ಲಿಸಿದ್ದಾರೆ), ಜೆಡಿಎಸ್ 9, ಮೂವರು ಪಕ್ಷೇತರರು ಹಾಗೂ ಸಿಪಿಎಂ (ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ) ಒಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT