ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಆಡಳಿತ ವೈಖರಿಗೆ ಖಂಡನೆ

Last Updated 5 ಜನವರಿ 2012, 8:20 IST
ಅಕ್ಷರ ಗಾತ್ರ

ರಾಣೆಬೆನ್ನೂರು; ನಗರಸಭೆಯ ಸರ್.ಎಂ. ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ನಡೆದ ಆಯ ವ್ಯಯ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರಸಭಾ ಆಡಳಿತ ವೈಖರಿಯನ್ನು ಮತ್ತು ವಿರೋಧಿ ನಿರ್ಣಯಗಳನ್ನು ವಿರೋಧಿಸಿ ಧಿಕ್ಕಾರ ಕೂಗಿ ಸಾರ್ವಜನಿಕರು ಸಭಾತ್ಯಾಗ ಮಾಡಿದರು. ಆಯವ್ಯಯ ಸಭೆ ಸಂಪೂರ್ಣ ಗೊಂದಲದ ಗೂಡಾಗಿ ಮುಕ್ತಾಯವಾಯಿತು.

ನಗರದಲ್ಲಿ ಉದ್ಯಾನವನ ಶುಲ್ಕ ಮತ್ತು ಕಟ್ಟಡ ಪರವಾನಿಗೆ ಮತ್ತು ಅಭಿವೃದ್ಧಿ ಕರಗಳನ್ನು ನಿಗಧಿಪಡಿಸಿದ್ದು ಅವೈಜ್ಞಾನಿಕವಾಗಿದ್ದು, ಇದನ್ನು ರದ್ದು ಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಮಂಗಳವಾರ  ಭೇಟಿ ನೀಡಿದಾಗ ಉದ್ಯಾನವನ ಶುಲ್ಕ ಮತ್ತು ಅಭಿವೃದ್ಧಿ ಕರಗಳನ್ನು ತುಂಬಿಸಿಕೊಳ್ಳುವ ಮತ್ತು ಬಿಡುವ ನಿರ್ಧಾರವನ್ನು ನಗರಸಭೆಗೆ ಸೂಚಿಸಲಾಗಿದೆ, ಬುಧವಾರ ಆಯವ್ಯಯ ಸಭೆ ನಡೆಯುವುದು ಅಲ್ಲಿ ಎಲ್ಲರೂ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ, ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿರಿ ಎಂದು ತಿಳಿಸಿದ್ದಾರೆ ಎಂದು ವಿಶ್ವನಾಥ ಹೊಳೆಬಾಗಿಲ ಮತ್ತು ಡಾ.ಎಸ್.ಎಲ್. ಪವಾರ ಮುಂತಾದವರು ಸಭೆಗೆ ತಿಳಿಸಿದರು.

ನಗರಸಭೆ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅವರು ಇದು ಆಯ ವ್ಯಯ ಸಭೆಯಾಗಿದ್ದು,  ಮುಂಬರುವ ವರ್ಷದಲ್ಲಿ ಸಾಧಿಸಬೇಕಿರುವ ಪ್ರಗತಿಯ ವಿಸ್ತೃತ ಕಾರ್ಯ ಸೂಚಿಯಾಗಿದೆ. ನಗರದಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳ, ಆಡಳಿತ ಸುಧಾರಣಾ ಕ್ರಮಗಳ ದಿಕ್ಸೂಚಿ ಇದಾಗಿದೆ, ಕಾರಣ ಅಗತ್ಯ ಸಲಹೆ ಅಭಿಪ್ರಾಯಗಳನ್ನು ನೀಡಬೇಕೆಂದು ಪದೇ ಪದೇ ಮನವಿ ಮಾಡಿದರೂ ಸಿಟ್ಟಿಗೆದ್ದ ಕೆಲ ಸಾರ್ವಜನಿಕರು  ಹೊರ ನಡೆದರು.

ಫಾರ್ಕ್ ಪೀ ಬಗ್ಗೆ ಜಿಲ್ಲಾಧಿಕಾರಿಗಳಿಂದ ಆದೇಶ ಮಂಗಳವಾರ ಸಂಜೆ ಬಂದಿದ್ದು, ಎಲ್ಲ ಸದಸ್ಯರು ಒಟ್ಟಿಗೆ ಸೇರಿ ಚರ್ಚಿಸಿ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದಾಗ ಯಾವಾಗ ಸಭೆ ಕರೆಯುತ್ತೀರಿ ದಿನಾಂಕ ತಿಳಿಸಬೇಕೆಂದು ಸಾರ್ವಜನಿಕರು ಹಠ ಹಿಡಿದರು. ಗೊಂದಲ ಗೂಡಿನಲ್ಲಿಯೇ ಪೌರಾಯುಕ್ತರು ವಿವಿಧ ಸಂಘಟನೆಗಳ ಸದಸ್ಯರಿಗೆ ಅವರು ಕೂಗಲಿ ನಿಮ್ಮ ಸಲಹೆ ಹೇಳಿ ಹೇಳಿ ಎಂದು ಪದೇ ಪದೇ ಒತ್ತಾಯ ಪಡಿಸುತ್ತಿದ್ದರು.

 ನಗರಸಭೆಯವರು ಯಾವ ತೆರಿಗೆ ಹೆಚ್ಚು ಮಾಡುತ್ತೀರಿ, ಯಾವುದನ್ನು ಕಡಿಮೆಗೊಳಿಸುತ್ತೀರಿ ಎಂದು ಇದರಲ್ಲಿ ಸೂಚಿಸಿದ್ದರೆ ನಮಗೆ ಸಲಹೆ ನೀಡಲು ಅನುಕೂಲವಾಗುತ್ತಿತ್ತು, ಆಯವ್ಯಯ ಶೀರ್ಷಿಕೆಯಲ್ಲಿ ಹೆಚ್ಚಿನ ಹಣ ನಿಗಧಿಪಡಿಸಿದ್ದು, ನಿರ್ವಹಣೆಗಿಟ್ಟ ಹಣಕ್ಕಿಂತ ಕಡಿಮೆ ಖರ್ಚು ಮಾಡಿದ್ದೀರಿ ಹಾಗಾದರೆ ನಗರಸಭೆಯಲ್ಲಿ ಹೆಚ್ಚಿನ ಅನುದಾನ ಉಳಿದಿದೆ ಎಂದರು.

ನಗರದಲ್ಲಿ ವಾಹದ ದಟ್ಟಣೆ ಹೆಚ್ಚುತ್ತಿದ್ದು ವಿವಿಧ ಬಡಾವಣೆಗಳಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು, ಜನನಿಬಿಡ ಪ್ರದೇಶಗಳಲ್ಲಿ ಫುಟ್‌ಪಾತ್ ನಿರ್ಮಿಸಬೇಕು ಎಂದರು. ಇದರಿಂದ ನಗರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಸೂಚಿಸಿದರು.      

ನಿವೃತ್ತ ಶಿಕ್ಷಕ ವಿ.ವಿ. ಹರಪನಹಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ಮಹಿಳೆಯು ಮತ್ತೆ ಮರಳಿ ತಮ್ಮ ಊರಿಗೆ ಹೋದಾಗ ಶೌಚಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ, ಕಾರಣ ನಗರದಲ್ಲಿ ವಿವಿಧ ಕಡೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಸಭೆಗೆ ತಿಳಿಸಿದರು.

ಹಳೇ ಅಭಿವೃದ್ಧಿ ಕರ ಏಕೆ ತುಂಬಿಸಿಕೊಳ್ಳುತ್ತಿಲ್ಲ, ಅನೇಕ ತಿಂಗಳಿಂದ ಸಾರ್ವಜನಿಕರು ಹಣ ತುಂಬಿಕೊಂಡು ವಾಪಸ್ಸು ಹೋಗುತ್ತಿದ್ದಾರೆ ಎಂದು ಶಂಭುಲಿಂಗ ಹಡಪದ ಪ್ರಶ್ನಿಸಿದರು.

ಸದಸ್ಯ ಡಿ.ಸಿ. ಕುಲಕರ್ಣಿ ಅವರು ಮಾತನಾಡಿ, ಕಳೆದ 9 ತಿಂಗಳಿಂದ ಯಾವುದು ಎಸಿಮೇಟ್ ಸೆಂಕ್ಸನ್ ಮಾಡಿಲ್ಲ ಅಂದರೆ ನಿಮ್ಮ ಕಾರ್ಯ ವೈಖರಿ ಏನು, ಯಾವ ಕೆಲಸದ ಆಧಾರದ ಮೇಲೆ ನಿಮಗೆ ಪ್ರಶಸ್ತಿ ನೀಡಿದ್ದಾರೆ, ಹೌಸಿಂಗ್ ಬೋರ್ಡ್‌ನಲ್ಲಿ ಹಳೆ ಯುಜಿಡಿ ಸರಿಯಾಗಿಲ್ಲ, ಹೊಸ ಯುಜಿಡಿ ಕಾಮಗಾರಿ ಮಾಡಬೇಕೆಂದರು.

ನಾಗರಿಕ ಹಿರಕ್ಷಣಾ ವೇದಿಕ ಅಧ್ಯಕ್ಷ ಪಿ.ಯು. ಮಜ್ಜಿಗಿ ಮಾತನಾಡಿ, ಉದ್ಯಾನವನ ಶುಲ್ಕ ತುಂಬಿಸಕೊಳ್ಳುವ ಬಗ್ಗೆ ಶಿರ್ಸಿ, ಮೈಸೂರು ಮುಂತಾದ ಕಡೆ ಮಾಹಿತಿ ಹಕ್ಕು ಕಾಯ್ದೆಯಡಿ ಉತ್ತರ ಪಡೆದುಕೊಂಡು ಬಂದಿದ್ದೇವೆ, ರಾಜ್ಯದಲ್ಲಿ ಇಲ್ಲದ ಪಾರ್ಕ ಫಿ ಇಲ್ಲಿ ಅಷ್ಟೇ ಏಕೆ ಇದನ್ನು ರದ್ದು ಪಡಿಸಬೇಕು, ಸ್ವಯಂ ಘೋಷಿತ ಆಸ್ತೆ ತೆರಿಗೆ ಅರ್ಜಿಗಳನ್ನು ರಾಜ್ಯಾಧ್ಯಂತ ಉಚಿತವಾಗಿ ನೀಡುತ್ತಾರೆ, ನಮ್ಮ ಊರಲ್ಲಿ ಏಕೆ 2 ರೂ ನಿಂದ 5 ರೂ ವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.

ಆಯ ವ್ಯಯ ಸಭೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರು ಗೈರು ಹಾಜರು ಇದ್ದದ್ದನ್ನು ಕಂಡು  ಇವರಿಗೆ ಬಡವರ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ಗೊಣಗುತ್ತ ಸಾರ್ವಜನಿಕರು ಸಭೆಯಿಂದ ಹೊರ ನಡೆದರು. ಸಂಜೀವ ಶಿರಹಟ್ಟಿ, ಚೆನ್ನರಾಜ, ಎಸ್. ಸಪ್ಪಣ್ಣನವರ, ನಾಗರಾಜ ಪವಾರ, ಕೆ.ಎಸ್. ಷಣ್ಮುಖ ಕೆ.ಎನ್. ವಿಶ್ವನಾಥ ಹೊಳೆಬಾಗಿಲ, ಎನ್.ಎನ್.ಭೂತೆ, ಎಸ್.ಎಲ್.ಪವಾರ, ಜಿ.ಎಸ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT