ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ನಡಿಗೆ ಹಳ್ಳದ ಕಡೆಗೆ...

Last Updated 9 ಡಿಸೆಂಬರ್ 2013, 8:40 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರಸಭೆಯ ಇತ್ತೀಚಿನ ಕಾರ್ಯವೈಖರಿ ಗಮನಿಸಿ­ದರೆ ಸುಂದರ ಬಾಗಲಕೋಟೆ ನಿರ್ಮಾಣವಾಗುವ ಬದಲು ಹದಗೆಟ್ಟ ಹೈದರಾಬಾದ್‌ ಆಗ ತೊಡಗಿದೆ.

ನಗರಸಭೆ ಆಡಳಿತ ಪಕ್ಷದ(ಬಿಜೆಪಿ) ತಾತ್ಸಾರ ಮತ್ತು ನಿರ್ಲಕ್ಷ್ಯ ಧೋರಣೆ ಹಾಗೂ ಪ್ರತಿಯೊಂದರಲ್ಲೂ ರಾಜಕೀಯ ಹುಡುಕುತ್ತಿರುವ ವಿರೋಧ ಪಕ್ಷದ(ಕಾಂಗ್ರೆಸ್‌) ನಡೆಯಿಂದ ನಗರಸಭೆ ಆಡಳಿತ ಹಳ್ಳದ ಕಡೆಗೆ ಎಂಬಂತಾಗಿದೆ. 

ಕಳೆದ ಏಳೆಂಟು ತಿಂಗಳಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿರಲಿ ಸ್ವಚ್ಛತಾ ಕಾರ್ಯಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ವರ್ಷದ ಹಿಂದಷ್ಟೇ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಸ್ತೆಗಳ ಡಾಂಬರ್‌ ಕಿತ್ತುಹೋಗಿದೆ. ರಸ್ತೆಗಳ ನಡುವೆ ಗುಂಡಿ ಬಿದ್ದಿವೆ. ಹಂದಿ, ನಾಯಿ, ಬಿಡಾಡಿ ದನಕರುಗಳು ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ವಾರ­ಕ್ಕೊಮ್ಮೆಯೂ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ತ್ಯಾಜ್ಯ ವಿಲೇವಾರಿಯಾಗದೆ ರಸ್ತೆ, ಚರಂಡಿಯಲ್ಲೇ ಉಳಿದು ದುರ್ವಾಸನೆ ಬೀರುತ್ತಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.

ಶಾಸಕರು ಬೇರೆ ಪಕ್ಷ, ನಗರಸಭೆ ಆಡಳಿತ ಬೇರೆ ಪಕ್ಷದ ಕೈಯಲ್ಲಿ ಇರುವುದೇ ನಗರದ ಸಮಸ್ಯೆಗಳು ಉಲ್ಬಣಗೊಳ್ಳಲು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗತೊಡಗಿದೆ. ಸ್ವಚ್ಛತೆ ನಿರ್ಲಕ್ಷ್ಯದ ಬಗ್ಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಪ್ರಶ್ನಿಸಿದರೆ ಶಾಸಕರತ್ತ ಕೈತೋರಿಸಿ ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಬಾಗಲಕೋಟೆ ನಗರದಲ್ಲೇ ವಾಸವಾಗಿರುವ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ, ಸ್ಥಳೀಯ ಶಾಸಕ ಎಚ್‌.ವೈ. ಮೇಟಿ ನಡೆದು­ಕೊಳ್ಳತೊಡಗಿದ್ದಾರೆ. ಒಮ್ಮೆಯೂ ಈ ಇಬ್ಬರು ಜನಪ್ರತಿನಿಧಿಗಳು ನಗರ ಪ್ರದಕ್ಷಿಣೆ ಹಾಕಿ ಜನರ ಬೇಕು, ಬೇಡಗಳನ್ನು ಆಲಿಸಿಲ್ಲ, ನಗರಸಭೆ ಆಡಳಿತವನ್ನು ಚುರುಕುಗೊಳಿಸಲು ಪ್ರಯತ್ನಿಸಿಲ್ಲ.

ಚರಂತಿಮಠ ಮಾದರಿ: ಈ ಹಿಂದಿನ ನಗರಸಭೆ ಅಧಿಕಾರವಧಿಯಲ್ಲಿ ಅಂದಿನ ಶಾಸಕ ವೀರಣ್ಣ ಚರಂತಿಮಠ ತಪ್ಪದೇ ಪ್ರತಿ ತಿಂಗಳ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ನಗರದ ಬೇಕು, ಬೇಡಗಳನ್ನು ಸ್ವಂತ ನಿರ್ಧರಿಸುತ್ತಿದ್ದರು.

ಸದಸ್ಯರು ಗಮನಕ್ಕೆ ತರುವ ಕೆಲಸಗಳನ್ನು ಅಧಿಕಾರಿಗಳ ಜುಟ್ಟುಹಿಡಿದು ಮಾಡಿಸುತ್ತಿದ್ದರು. ಅಲ್ಲದೇ, ತಾವೇ ಸ್ವತಃ ನಗರ ಪ್ರದಕ್ಷಿಣೆ ಹಾಕುವ ಮೂಲಕ ಪ್ರತಿ ಬಡವಾಣೆ, ಓಣಿಯ ಕುಂದುಕೊರತೆಗಳನ್ನು ಪರಿಶೀಲಿಸಿ ಸಮಸ್ಯೆ ಕಂಡುಬಂದಲ್ಲಿ ಆ ಕ್ಷಣವೇ ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಆಹ್ವಾನಿಸಿ ಕೆಲಸ ಮಾಡಿಸುವ ಮೂಲಕ ನಗರವನ್ನು ಶಿಸ್ತುಬದ್ಧವಾಗಿಟ್ಟುಕೊಂಡಿದ್ದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಬದಲು ಚರಂತಿಮಠ ಅವರೇ ಮುಂದೆನಿಂತು ಸಾಮಾನ್ಯಸಭೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಸಭೆಯಲ್ಲೂ ಯಾವುದೇ ಗೊಂದಲ, ಗದ್ದಲ ಇಲ್ಲದೇ, ಯಾವುದೇ ತಾರತಮ್ಯವಿಲ್ಲದೇ ವಿರೋಧ ಪಕ್ಷದ ಸದಸ್ಯರ ಕೆಲಸಗಳನ್ನೂ ಮಾಡಿಸುವ ಮೂಲಕ ನಗರಸಭೆಗೆ ಒಂದು ಗಾಂಭೀರ್ಯ ತಂದುಕೊಟ್ಟಿದ್ದರು.

ಆದರೆ, ಈಗಿನ ಶಾಸಕ ಎಚ್‌.ವೈ.ಮೇಟಿ ನಗರಸಭೆಯ ಸಾಮಾನ್ಯ ಸಭೆಗಳಿಗೆ ಹಾಜರಾ­ಗುತ್ತಿಲ್ಲ, ನಗರಸಭೆ ಮೇಲೆ ಯಾವುದೇ ಹಿಡಿತ ಸಾಧಿಸುತ್ತಿಲ್ಲ. ಇದರಿಂದ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು ಮನಸ್ಸಿಗೆ ಬಂದಂತೆ ಆಡಳಿತ ನಡೆಸತೊಡಗಿದ್ದಾರೆ.

‘ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಜಿ.ಪಂ. ಕೆಡಿಪಿ ಸಭೆಗಳಲ್ಲಿ ಭಾಗವಹಿಸಲು ತೋರುತ್ತಿರುವ ಉತ್ಸಾಹವನ್ನು ಶಾಸಕ ಎಚ್‌.ವೈ.ಮೇಟಿ ಅವರು ನಗರಸಭೆ ಸಾಮಾನ್ಯ ಸಭೆಯಲ್ಲಿ ತೋರಬೇಕಾದ ಅಗತ್ಯವಿದೆ. ಅಧಿಕಾರಿಗಳಿಂದ ಕೆಲಸ ಮಾಡಿಸುವ ತುರ್ತು ಅಗತ್ಯವಿದೆ. ಇಲ್ಲವಾದರೇ ಬಾಗಲಕೋಟೆ ನಗರ ಅವ್ಯವಸ್ಥೆಯ ಆಗರವಾಗಲಿದೆ’ ಎಂಬುದು ಅವರದೇ ಪಕ್ಷದ ಕಾರ್ಯಕರ್ತರ ಆಗ್ರಹವಾಗಿದೆ.

ಕಾರ್ಮಿಕರ ಕೊರತೆ: ನಗರಸಭೆ­ಯಲ್ಲಿ ಪೌರಕಾರ್ಮಿಕರ ಕೊರತೆ ಅಧಿಕವಾಗಿದೆ. ಹಳೆನಗರ, ನವನಗರ ಮತ್ತು ವಿದ್ಯಾಗಿರಿ ಸೇರಿದಂತೆ ಮೂರು ಕಡೆ ಒಬ್ಬ ವ್ಯಕ್ತಿಯೇ ಸ್ವಚ್ಛತಾ ಕಾರ್ಯವನ್ನು ಗುತ್ತಿಗೆ ಹಿಡಿದಿದ್ದು, ತನ್ನ ಬಳಿ ಇರುವ ಹತ್ತಾರು ಪೌರ­ಕಾರ್ಮಿಕರನ್ನೇ ಅಲ್ಲಿ, ಇಲ್ಲಿ ಲೆಕ್ಕ ತೋರಿಸಿ ಸ್ವಚ್ಛತಾ ಕೆಲಸ ಮಾಡಿಸುತ್ತಿ­ರುವುದೇ ಇಷ್ಟೇಲ್ಲ ಸಮಸ್ಯೆಗೆ ಮೂಲ ಕಾರಣ ಎಂಬ ಆರೋಪ ನಗರಸಭೆ ಸದಸ್ಯರಿಂದಲೇ ಕೇಳಿಬರುತ್ತಿದೆ.

ನಗರದ ಜನತೆ ಕೇಳುತ್ತಿರುವುದು ಸ್ವಚ್ಛತೆ, ಉತ್ತಮ ರಸ್ತೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮತ್ತು ಬೀದಿ ದೀಪದ ವ್ಯವಸ್ಥೆ ಮಾತ್ರ. ಜನರ ಸಾಮಾನ್ಯ ಅಗತ್ಯಗಳನ್ನು ಸಮರ್ಪಕ­ವಾಗಿ ನಿರ್ವಹಿಸುವಲ್ಲಿ ಪ್ರಸ್ತುತ ನಗರಸಭೆ ಪ್ರಾರಂಭದಲ್ಲೇ ಎಡವತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT