ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ನಿರ್ಲಕ್ಷ್ಯ: ಪುಸ್ತಕಗಳಿಗೆ ದೂಳು

Last Updated 4 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ಶಿರಸಿ: ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ವಿತರಣೆಗೆಂದು ತಂದಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು, ವಾಚನಾಲಯ ಪುಸ್ತಕಗಳು ಆಡಳಿತ ಪ್ರಮುಖರ ನಿರ್ಲಕ್ಷ್ಯದಿಂದಾಗಿ ಒಂದೂವರೆ ವರ್ಷದಿಂದ ನಗರಸಭೆಯ ಕೊಠಡಿಯಲ್ಲಿ ದೂಳು ತಿನ್ನುತ್ತ ಬಿದ್ದುಕೊಂಡಿವೆ!

ನಗರಸಭೆಯ ಆಡಳಿತ ಬಿಜೆಪಿ ಪಕ್ಷದ ಸದಸ್ಯರು ಮತ್ತು ಪೌರಾಯುಕ್ತರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ. ಬುಧವಾರ ನಗರಸಭೆ ಸಾಮಾನ್ಯಸಭೆ ಕರೆಯಲಾಗಿತ್ತು. ಆಡಳಿತ ಪಕ್ಷದ ಸದಸ್ಯರು ಸಭೆಯ ಆರಂಭದಿಂದಲೇ ಎಸ್‌ಎಫ್‌ಸಿ ಯೋಜನೆ ಕಾಮಗಾರಿ ಟೆಂಡರ್ ಕರೆಯುವಲ್ಲಿ ಆಗುತ್ತಿರುವ ವಿಳಂಬ, ನಗರಸಭೆ ಕೊಠಡಿಯಲ್ಲಿ ವಿತರಣೆ ಮಾಡದೇ ಸಂಗ್ರಹಿಸಿಟ್ಟಿರುವ ಪಠ್ಯಗಳು ಸೇರಿದಂತೆ ಅನೇಕ ಸಂಗತಿಗಳ ಕುರಿತಂತೆ ನಗರಸಭೆಯಲ್ಲಿ ಅಧಿಕಾರಿಗಳಿಂದ ಆಗುತ್ತಿರುವ ಲೋಪಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

`ಇನ್ನು ನಮ್ಮ ಅಧಿಕಾರದ ಅವಧಿ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಎಲ್ಲ ಕಡೆಗಳಲ್ಲಿ ಎಸ್‌ಎಫ್‌ಸಿ ಕಾಮಗಾರಿ ಟೆಂಡರ್ ಕರೆದರೂ ಇಲ್ಲಿ ಮಾತ್ರ ಯಾಕೆ ವಿಳಂಬ ಆಗುತ್ತಿದೆ~ ಎಂದು ಸದಸ್ಯ ಅರುಣ ಕೋಡ್ಕಣಿ ಆಕ್ಷೇಪ ವ್ಯಕ್ತಪಡಿಸಿದರು.
 
`ರೂ.2.5ಕೋಟಿ ಮೊತ್ತದ ಕಾಮಗಾರಿ ಯೋಜನೆ ಸಿದ್ಧಪಡಿಸಲಾಗಿದ್ದು, ಅಧಿಕಾರಿ ವರ್ಗಾವಣೆಯಿಂದ ಕಾಮಗಾರಿ ಟೆಂಡರ್ ಕರೆಯಲು ವಿಳಂಬವಾಗಿದೆ. ನಿನ್ನೆಯಷ್ಟೇ ಡಿಜಿಟಲ್ ಕೀ ಬಂದಿದ್ದು, ಶೀಘ್ರ ಟೆಂಡರ್ ಕರೆಯುತ್ತೇವೆ~ ಎಂದು ಪೌರಾಯುಕ್ತ ಕೆ.ಬಿ.ವೀರಾಪುರ ಹೇಳಿದರು.

ಇನ್ನು 15 ದಿನಗಳ ಒಳಗಾಗಿ ಟೆಂಡರ್ ಕರೆಯಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ನಡುವೆ ಮಾತಿಗೆ ಆರಂಭಿಸಿದ ಸದಸ್ಯ ನಂದನ ಸಾಗರ `ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕಿದ್ದ ನೋಟ್‌ಬುಕ್, ಕಂಪಾಸ್, ಶಾಲಾ ಬ್ಯಾಗ್ ವಿತರಣೆ ಮಾಡದೆ ಹಾಗೆ ಇಡಲಾಗಿದೆ~ ಎಂದು ಆರೋಪಿಸಿದರು.

ಆಡಳಿತ ಪಕ್ಷದ ಬಹುತೇಕ ಎಲ್ಲ ಸದಸ್ಯರು ಎದ್ದು ನಿಂತು ಮಾತಿಗೆ ಆರಂಭಿಸಿದರೂ, ಪ್ರತಿ ಸಾಮಾನ್ಯಸಭೆಯಲ್ಲಿ ಮಾತಿನಲ್ಲಿ ಮುಂಚೂಣಿಯಲ್ಲಿರುತ್ತಿದ್ದ ವಿರೋಧ ಪಕ್ಷದ ಸದಸ್ಯರು ಮೌನವಹಿಸಿದ್ದರು. ನಂತರ ಸದಸ್ಯರ ಆಗ್ರಹದ ಮೇರೆಗೆ ಸಭೆಯನ್ನು ಮುಂದೂಡಲಾಯಿತು.

ನಗರಸಭೆ ಅಧ್ಯಕ್ಷ ರವಿ ಚಂದಾವರ ಸೇರಿದಂತೆ ಎಲ್ಲ ಸದಸ್ಯರು ನಗರಸಭೆ ಗೋಡಾನ್‌ನ ಬೀಗ ತೆಗೆಯಿಸಿ ಕೊಠಡಿಯಲ್ಲಿ ದೂಳು ಹಿಡಿದು ಬಿದ್ದಿರುವ ಪಟ್ಟಿ, ವಾಚನಾಲಯ ಪುಸ್ತಕ, ಸೋಲಾರ್ ದೀಪಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಚಂದಾವರ, `2010-11ನೇ ಸಾಲಿನ ಶೇಕಡಾ 22.75ರ ನಿಧಿ ಅಡಿಯಲ್ಲಿ ಪರಿಶಿಷ್ಠ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಪೂರೈಸಲು 28-02-2011ರಂದು ದರವಾರು ಕರೆಯಲಾಗಿತ್ತು. ಮಕ್ಕಳ ವಿತರಣೆಗೆ ಬಂದಿರುವ ನೋಟ್‌ಬುಕ್, ಕಂಪಾಸ್, ಶಾಲಾ ಬ್ಯಾಗ್, ವಾಚನಾಲಯ ಪುಸ್ತಕಗಳನ್ನು ಅಂದಿನ ಪೌರಾಯುಕ್ತರು ಎರಡೂವರೆ ವರ್ಷಗಳಿಂದ ಪರಿಶಿಷ್ಟರಿಗೆ ಪಾತ್ರೆ ವಿತರಣೆ ಮಾಡದೆ ಸುಮಾರು ರೂ.3ಲಕ್ಷ ಮೊತ್ತ ಬಾಕಿ ಇದೆ.

ನಗರಸಭೆಯಲ್ಲಿ ಪರಿಶಿಷ್ಠರ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯ ರಾಚಪ್ಪ ಜೋಗಳೇಕರ, ಆಡಳಿತ ಪಕ್ಷದ ಮಾದೇವ ಚಲವಾದಿ, ಹರೀಶ ಪಾಲೇಕರ ಆಕ್ಷೇಪಿಸಿದರು. ಎಲ್ಲ ವಿಷಯಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವದು ಎಂದು ಅಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT