ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಬಜೆಟ್: ಸುಂದರ ಹಾಸನವೇ ಜನರ ನಿರೀಕ್ಷೆ

Last Updated 23 ಜನವರಿ 2012, 5:25 IST
ಅಕ್ಷರ ಗಾತ್ರ

ಹಾಸನ: ಬಜೆಟ್ ಸಿದ್ಧಪಡಿಸುವುದನ್ನು ಸ್ಥಳೀಯ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದಂತೆಯೇ ಕಾಣುವುದಿಲ್ಲ. ನಮ್ಮ ನಗರಗಳನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ.  ಬಜೆಟ್‌ನಲ್ಲಿ ಉಲ್ಲೇಖವಾಗುವ ಅನೇಕ ಯೋಜನೆಗಳು ಅನುಷ್ಠಾನಗೊಳ್ಳುವುದೇ ಇಲ್ಲ. ಮಂಡನೆಯಾಗುವ ಆಯ-ವ್ಯಯಕ್ಕೂ ವಾಸ್ತವ ಸಾಧನೆಗೂ ಅಜಗಜಾಂತರವಿರುತ್ತದೆ.

ಹಾಸನ ನಗರಸಭೆ ಪ್ರತಿವರ್ಷ ಮಂಡಿಸುವ ಬಜೆಟ್‌ನಲ್ಲಿ ಶೇ 50ರಷ್ಟು ಸಾಧನೆಯೂ ಆಗುವುದಿಲ್ಲ ಎಂಬುದನ್ನು ಸದಸ್ಯರೇ ಒಪ್ಪಿಕೊಳ್ಳುತ್ತಾರೆ. ಬಜೆಟ್‌ನಲ್ಲಿ ಉಲ್ಲೇಖಿಸುವ ಎಲ್ಲ ಯೋಜನೆಗಳು ಜಾರಿಯಾದರೆ ಹಾಸನ ಯಾವತ್ತೋ ಸಕಲ ಸೌಲಭ್ಯಗಳಿರುವ ನಗರವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಇರುವ ಒಂದುಲಕ್ಷ ಜನರಿಗೂ ಕನಿಷ್ಟ ಮೂಲ ಸೌಲಭ್ಯಗಳನ್ನು ಒದಗಿಸಲೂ ಸಹ ನಗರಸಭೆಗೆ ಸಾಧ್ಯವಾಗಲಿಲ್ಲ.
 
ಪ್ರತಿವರ್ಷ ಬಜೆಟ್ ಪೂರ್ವದಲ್ಲಿ ಕರೆಯುವ ಹಿರಿಯ ನಾಗರಿಕರ ಸಭೆಯೂ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತದೆ. `ನಾವು ಕೊಟ್ಟ ಸಲಹೆಗಳನ್ನು ಸ್ವೀಕರಿಸುವ ಇಚ್ಛೆ ಇಲ್ಲದಿದ್ದರೆ ನಾವೇಕೆ ಸಭೆಗೆ ಬರಬೇಕು~ ಎಂದು ಕಾಳಜಿ ಇರುವವರು ದೂರ ಉಳಿಯುತ್ತಾರೆ. 2012-13 ನೇ ಸಾಲಿನ ಬಜೆಟ್ ಸಿದ್ಧತೆಗಾಗಿ ಕಳೆದ ವಾರ ಕರೆದಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಸಲಹೆಗಳಿಗಿಂತ ಹೆಚ್ಚಾಗಿ ದೂರುಗಳೇ ಬಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಗರದ ಜನರು ನಿಜವಾಗಿ ನಗರಸಭೆಯಿಂದ ನಿರೀಕ್ಷಿಸುವುದೇನು ? ಈ ಬಗ್ಗೆ ವಿವಿಧ ವರ್ಗದ ಜನರನ್ನು ಕೇಳಿದಾಗ ಅನೇಕ ಸಲಹೆಗಳನ್ನು ಜನರು ನೀಡಿದ್ದಾರೆ. ಅವರು ನೀಡಿರುವ ಸಲಹೆಗಳಲ್ಲಿ ಜಾರಿಮಾಡಲು ಅತಿ ಮುಖ್ಯ ಅನ್ನಿಸಿದವುಗಳನ್ನು ಮಾತ್ರ ಮುಂದಿಡುತ್ತಿದ್ದೇವೆ. ಸ್ವೀಕರಿಸುವುದು-ಬಿಡುವುದು ನಗರಸಭೆಗೆ ಬಿಟ್ಟ ವಿಚಾರ.
ಒಳ್ಳೆಯ ರಸ್ತೆಗಳನ್ನು ನಿರ್ಮಿಸಬೇಕು, ನೀರು ಸರಿಯಾಗಿ ನೀಡಬೇಕು, ಸ್ವಚ್ಛತೆಗೆ ಇನ್ನಷ್ಟು ಗಮನ ಕೊಡಬೇಕು ಎಂದು ನಗರದ ಎಲ್ಲ ವರ್ಗದ ಜನರು ಒತ್ತಾಯಿಸುತ್ತಾರೆ. ಬಹುಶಃ ಈ ಮೂರು ಬೇಡಿಕೆಗಳನ್ನು ಈಡೇರಿಸಿಬಿಟ್ಟರೆ ನಗರಸಭೆಯನ್ನು ಜನರು ಸದಾಕಾಲ ಸ್ಮರಿಸಬಹುದು.

ಸುಂದರವಾಗಲಿ ನಗರ: `ಇದು ಪ್ರವಾಸಿಗರ ಜಿಲ್ಲೆ. ಜಿಲ್ಲಾ ಕೇಂದ್ರವನ್ನು ಇನ್ನಷ್ಟು ಸುಂದರವಾಗುವಂತೆ ಮಾಡಬೇಕು~ ಎಂದು ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ರವಿಕುಮಾರ್  ನುಡಿಯುತ್ತಾರೆ.

`ನಗರದಲ್ಲಿ  ಅವ್ಯವಸ್ಥೆಯೇ ವ್ಯವಸ್ಥೆಯಾಗಿದೆ. ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಪಾರ್ಕಿಂಗ್ ಇಲ್ಲ. ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬಗಳಿವೆ. ಚರಂಡಿಗಳಿಲ್ಲ, ಫುಟ್‌ಪಾತ್‌ಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಬೇರೇನು ಮಾಡಲಿ-ಬಿಡಲಿ ನಗರವನ್ನು ಅಂದಗೊಳಿಸುವ ಸಲುವಾಗಿ ಹೆಚ್ಚು ಹಣ ಮೀಸಲಿಡಬೇಕು ಎಂಬುದು ರವಿಕುಮಾರ್ ವಾದ.

ಬೀದಿ ದೀಪಗಳ ಹಂಚಿಕೆ ಸರಿಯಾಗಿಲ್ಲ. ಕೆಲವು ಭಾಗದಲ್ಲಿ ಸಾಕಷ್ಟು ದೀಪಗಳಿವೆ ಇನ್ನೂ ಕೆಲವೆಡೆ ಜನ ಕತ್ತಲಲ್ಲೇ ಓಡಾಡಬೇಕು. ದೇವಿಗೆರೆ ಸುತ್ತಲಿನ ಮಾರ್ಕೆಟ್ ಪ್ರದೇಶವನ್ನು ತೆರವು ಮಾಡಿ ವರ್ಷ ಕಳೆದಿದೆ. ಅಲ್ಲಿ ಸುಸಜ್ಜಿತ ಪಾರ್ಕಿಂಗ್  ವ್ಯವಸ್ಥೆ ಆಗಲಿ. ಕನಿಷ್ಟ ನೂರಿನ್ನೂರು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ.
 
ಎನ್.ಆರ್. ವೃತ್ತದಿಂದ ತಣ್ಣೀರು ಹಳ್ಳದವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರುವುದಾದರೂ, ಜನ ಕಂದಾಯವನ್ನು ನಗರಸಭೆಗೆ ಕಟ್ಟುತ್ತಾರೆ. ಈ ರಸ್ತೆ ದುರಸ್ತಿಗೆ ಇಲಾಖೆ ಮೇಲೆ ಒತ್ತಡ ಹೇರಬೇಕು. ಇಲ್ಲೂ ಫುಟ್‌ಪಾತ್, ಪಾರ್ಕಿಂಗ್ ವ್ಯವಸ್ಥೆ ಬೇಕು. ನಗರದಲ್ಲಿ ನೇತಾಡುತ್ತಿರುವ ವಿದ್ಯುತ್  ಜಾಲಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ನಗರದೊಳಗೆ ಭೂಗತ ಕೇಬಲ್‌ಗಳ ಮೂಲಕ ವಿದ್ಯುತ್ ನೀಡಿದರೆ ನಗರದ ಅಂದ ಹೆಚ್ಚುತ್ತದೆ. ಜನರನ್ನು ಆಕರ್ಷಿಸುವಂಥ ಇನ್ನಷ್ಟು ಪಾರ್ಕ್‌ಗಳು ಬೇಕಾಗಿವೆ.

ಎನ್.ಆರ್.ವೃತ್ತ, ತಣ್ಣೀರುಹಳ್ಳ ಮುಂತಾದ ಕಡೆ ರಸ್ತೆ ದಾಟಲು ಮಕ್ಕಳು ಮಹಿಳೆಯರು ಪರದಾಡುತ್ತಾರೆ. ಅಲ್ಲಿ ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಿಸಲು ಒಂದಿಷ್ಟು ಹಣ ಮೀಸಲಿಡಬೇಕು. ನಗರದ ಹೊರವಲಯದಲ್ಲಿ ಟ್ರಕ್  ಟರ್ಮಿನಲ್ ನಿರ್ಮಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ಅದನ್ನು ಜಾರಿಮಾಡಬೇಕು~ ಎಂದು  ರವಿಕುಮಾರ್ ನುಡಿಯುತ್ತಾರೆ.

ಹಳೆಯ ಹಾಸನಕ್ಕೂ ಸೌಲಭ್ಯ ಬರಲಿ: `ಹಳೆಯ ಹಾಸನದಲ್ಲಿ ಜನ ಉಸಿರುಗಟ್ಟಿಸುವಂಥ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಒಂದೇ ಒಂದು ರಸ್ತೆ ಸರಿಯಾಗಿಲ್ಲ. ಬಡಾವಣೆಗಳ ರಸ್ತೆಗಳು ಮಾತ್ರವಲ್ಲ ರಾಜ್ಯ ಹೆದ್ದಾರಿಯಾಗಿರುವ ಹೊಸಲೈನ್ ರಸ್ತೆಯಲ್ಲೂ ಅತಿಕ್ರಮಣ ನಡೆದಿದೆ ಇದನ್ನು ತೆರವುಮಾಡಿ ಈ ಭಾಗದಲ್ಲೂ ಸೌಲಭ್ಯಗಳನ್ನು ಕಲ್ಪಿಸಬೇಕು~ ಎಂಬುದು ನಗರಸಭೆಯ ಮಾಜಿ ಅದಸ್ಯೆಯೂ ಆಗಿರುವ ಲೇಖಕಿ ಬಾನು ಮುಷ್ತಾಕ್ ಒತ್ತಾಯಿಸಿದ್ದಾರೆ.

`ಇಲ್ಲೇ ಪಕ್ಕದಲ್ಲಿ ಡಿಎಆರ್ ಮೈದಾನವಿದೆ ಭಾರಿ ವಾಹನಗಳು ಓಡಾಡುತ್ತವೆ. ಅವುಗಳಿಗೆ ಸೂಕ್ತ ರಸ್ತೆ ಇಲ್ಲ. ಹಳೆಯ ಹಾಸನಕ್ಕೆ ಸಂಪರ್ಕ ಕಲ್ಪಿಸುವ ವಾಣಿವಿಲಾಸ ಶಾಲೆಯ ಹಿಂಭಾಗ ಹಾಗೂ ಮುಂಭಾಗದ ರಸ್ತೆಗಳಲ್ಲಿ ಖಾಸಗಿ ವಾಹನಗಳು ನಿಂತಿರುತ್ತವೆ. ಎ.ವಿ.ಕೆ ಕಾಲೇಜಿನ ಮುಂಭಾಗದಲ್ಲೂ ಇದೇ ಸ್ಥಿತಿ. ಖಾಸಗಿ ಟೆಂಪೋಗಳು, ಟ್ಯಾಕ್ಸಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡದಿದ್ದೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಇದೆ.

`ನಗರದ ಜನಸಂಖ್ಯೆ ಈಚಿನ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಆದರೆ ಸೌಲಭ್ಯಗಳು ಸುಧಾರಿಸಿಲ್ಲ. 25ವರ್ಷ ಹಿಂದೆ ಇದ್ದ ಸೌಲಭ್ಯಗಳೇ ಈಗಲೂ ಇವೆ. ಇತರ ಕೆಲವು ನಗರಗಳಲ್ಲಿ ಮಾಡಿರುವಂತೆ ಸ್ವಚ್ಛತೆಗೆ ಸರ್ಕಾರೇತರ ಸಂಸ್ಥೆಗಳ ನೆರವು ಪಡೆದು ಸೂಕ್ತ ಯೋಜನೆ ರೂಪಿಸಬಹುದು.

ಶೌಚಾಲಯಗಳು ಬೇಕು:  `ನಗರದ ಪ್ರಮುಖ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು. ವಿಶೇಷವಾಗಿ ಮಹಿಳೆಯರಿಗಾಗಿಯೇ ಕೆಲವು ಸುಲಭ ಶೌಚಾಲಯಗಳನ್ನು ನಿರ್ಮಿಸಲು ಸ್ವಲ್ಪ ಹಣ ಮೀಸಲಿಡಬೇಕು~ ಎಂದು ಮಾನವೀಯ ಮಹಿಳಾ ಅಧ್ಯಯನ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಟಿ. ಜಯಶ್ರೀ ನುಡಿಯುತ್ತಾರೆ.

ವಿದ್ಯಾನಗರ ಭಾಗದಲ್ಲಿ ಅನೇಕ ಕಾಲೇಜುಗಳಿವೆ. ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಇತರ ಮಹಿಳೆಯರು ಶೌಚಾಲಯಗಳಿಲ್ಲದೆ ಸಂಕಷ್ಟ ಅನುಭವಿಸುವುದನ್ನು ನೋಡಿದ್ದೇವೆ. ವಿಶ್ರಾಂತಿ ಕೊಠಡಿಯೂ ಇರುವಂಥ ಒಂದೆರಡು ಶೌಚಾಲಯಗಳನ್ನಾದರೂ ನಗರಸಭೆ ನಿರ್ಮಿಸಬೇಕು. ಅನೇಕ ಬಡಾವಣೆಗಳಲ್ಲಿ ಕಸದ ತೊಟ್ಟಿಗಳೇ ಇಲ್ಲ. ಸಣ್ಣ ಪುಟ್ಟ ತೊಟ್ಟಿಗಳು ತುಂಬಿ ತುಳುಕುತ್ತವೆ. ಎಲ್ಲ ಬಡಾವಣೆಗಳಲ್ಲೂ ದೊಡ್ಡ ಗಾತ್ರದ ತೊಟ್ಟಿಗಳನ್ನು ಇಡಬೇಕು ಎಂಬುದು ಅವರ ಬೇಡಿಕೆ.

ತ್ಯಾಜ್ಯವಿಲೇವಾರಿ ಘಟಕ ಆಗಲಿ: `ನಗರದಲ್ಲಿ ಪ್ರಸಕ್ತ ಖಾಸಗಿ ಸಂಸ್ಥೆಯವರು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಪ್ರತಿ ಆಸ್ಪತ್ರೆಯವರು ತಿಂಗಳಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಶುಲ್ಕ ನೀಡುತ್ತಿದ್ದಾರೆ. ನಗರಸಭೆಯವರೇ ಇಂಥ ಘಟಕವೊಂದನ್ನು ಆರಂಭಿಸಿದರೆ ಆದಾಯವಾಗುತ್ತದೆ. ಜತೆಗೆ ನಗರದ ಇತರ ಕಸವನ್ನೂ ಅಲ್ಲೇ ವಿಲೇವಾರಿ ಮಾಡಬಹುದು. ಬಜೆಟ್ ಸಿದ್ಧಪಡಿಸುವಾಗ ಇದನ್ನೂ ಗಮನದಲ್ಲಿಡುವುದು ಒಳಿತು~ ಎಂಬುದು ವೈದ್ಯೆ ಡಾ. ಭಾರತಿ ರಾಜಶೇಖರ್ ಅಭಿಪ್ರಾಯ.

ನಗರದಲ್ಲಿ ರಸ್ತೆಬದಿಯಲ್ಲಿ ಊಟ- ತಿಂಡಿ ಮಾರಾಟ ನಡೆಯುತ್ತಿದೆ. ಈ ಪರಿಸರವನ್ನು ಶುಚಿಯಾಗಿಡಲು ಯೋಜನೆ ರೂಪಿಸಬೇಕು. ಜನರ ಆರೋಗ್ಯದ ದೃಷ್ಟಿಯಿಂದ ಇದು ಅತಿ ಮುಖ್ಯ. ಪ್ಲಾಸ್ಟಿಕ್  ನಿಷೇಧ ಮಾಡುವ ನಿಟ್ಟಿನಲ್ಲೂ ನಗರಸಭೆ ಯೋಚಿಸಬೇಕು ಎಂದು ಅವರು ನುಡಿಯುತ್ತಾರೆ.

ಹಾಸನದಲ್ಲಿ ಬಸ್ಸಿಗಾಗಿ ಕಾಯುವುದೇ ಅತ್ಯಂತ ಕೆಟ್ಟ ಅನುಭವ. ಎನ್.ಆರ್. ವೃತ್ತದಲ್ಲಿ ದಿನನಿತ್ಯ ಸಾವಿರಾರು ಜನರು ಬಿಸಿಲಿನಲ್ಲೇ ನಿಂತು ಒದ್ದಾಡುತ್ತಿದ್ದಾರೆ. ಈ ಸಮಸ್ಯೆ ಎಲ್ಲರಿಗೂ ತಿಳಿದದ್ದೇ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಎಲ್ಲ ಕಡೆ ಬಸ್ ನಿಲುಗಡೆಗೆ ಸೂಕ್ತ ಜಾಗ  ಹುಡುಕಿ, ಅಲ್ಲಿ ಬಿಸಿಲು ಮಳೆಯಿಂದ ರಕ್ಷಣೆ ಒದಗಿಸಲು ಸಣ್ಣ ಶೆಡ್ ನಿರ್ಮಿಸಲು ಯೋಜನೆ ರೂಪಿಸಬೇಕು. ಬಹುಶಹ ಇವಿಷ್ಟು ಹಾಸನದ ನಾಗರಿಕರ ಈಗಿನ ಪ್ರಮುಖ ಬೇಡಿಕೆಗಳು. ಬಜೆಟ್  ಸಿದ್ಧತೆಯಲ್ಲಿ ತೊಡಗಿರುವ ನಗರಸಭೆಯವರು ಈ ಕಡೆಗೂ ಗಮನಹರಿಸಬಹುದು ಎಂಬುದು ಜನರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT