ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ....

Last Updated 18 ಜನವರಿ 2012, 9:30 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಮಧ್ಯಮ ವರ್ಗದ ನಿವಾಸಿಗಳಿಗೆ ಸರ್ಕಾರಿ ದರದಲ್ಲಿ ನಿವೇಶನ ನೀಡಲು ನಗರಸಭೆ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಇದಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್, ನಗರದ ಐ.ಟಿ.ಐ ಹಿಂದೆ ಸುಮಾರು 3 ಎಕರೆ ಸರ್ಕಾರಿ ಜಾಗವಿದೆ. ಈಗ ಜಾಗವನ್ನು ಜಿಲ್ಲಾಡಳಿತದ ಮೂಲಕ ಪಡೆದುಕೊಂಡು, ಇಲ್ಲಿ ಲೇಔಟ್ ರಚಿಸಲಾಗುವುದು. ಪ್ರತಿಯೊಬ್ಬ ಫಲಾನುಭವಿಗೆ ಎರಡೂವರೆಯಿಂದ ಮೂರು ಸೆಂಟ್ ಜಾಗ ನೀಡುವ ಉದ್ದೇಶವಿದೆ ಎಂದು ಅವರು ವಿವರಣೆ ನೀಡಿದರು.

ಸದ್ಯ ಮಾರುಕಟ್ಟೆಯಲ್ಲಿ ಒಂದು ಸೆಂಟ್ ಜಾಗಕ್ಕೆ ಒಂಬತ್ತು ಲಕ್ಷ ರೂಪಾಯಿವರೆಗೆ ದರವಿದೆ. ಇದು ಸರ್ಕಾರಿ ದರದಲ್ಲಿ ಒಂದು ಸೆಂಟ್ ಜಾಗಕ್ಕೆ ಸರಾಸರಿ ಒಂದು ಲಕ್ಷ ರೂಪಾಯಿವರೆಗೆ ಆಗುವ ಅಂದಾಜು ಇದೆ. ದರ ನಿಗದಿಯನ್ನು ನಿಖರವಾಗಿ ಈಗಲೇ ಹೇಳುವುದು ಕಷ್ಟ. ಯೋಜನೆ ಅಂತಿಮ ರೂಪ ಪಡೆದ ನಂತರ ನಿವೇಶನ ದರದ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದು ಅವರು ನುಡಿದರು.

ಮಡಿಕೇರಿ ನಗರದಲ್ಲಿ ಇಂದು ನಿವೇಶನ ದರ ಮುಗಿಲುಮುಟ್ಟಿದೆ. ಇಂತಹ ಸಂದರ್ಭದಲ್ಲಿ ಬಡವರಿಗೆ ಅಲ್ಲ, ಮಧ್ಯಮ ವರ್ಗದ ಜನರಿಗೂ ಕೂಡ ನಿವೇಶನ ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಧ್ಯಮ ವರ್ಗದವರಿಗೆ ನಗರಸಭೆ ವತಿಯಿಂದ ನಿವೇಶನ ನೀಡಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿವೇಶನ ಪಡೆಯಲು ಯಾವುದೇ ಆದಾಯ ಮಿತಿಯನ್ನು ಅಳವಡಿಸಿಲ್ಲ. ಮಡಿಕೇರಿ ನಗರ ನಿವಾಸಿಯಾಗಿರುವವರು (ಕನಿಷ್ಠ 10 ವರ್ಷ), ನಿವೇಶನರಹಿತರು ಯಾರು ಬೇಕಾದರೂ ನಿವೇಶನ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಸ್ಪೀಕರ್ ಬೆಂಬಲ: ನನ್ನ ಈ ಆಲೋಚನೆ ಬಗ್ಗೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಸಹ ಒಪ್ಪಿಕೊಂಡಿದ್ದು, ಐ.ಟಿ.ಐ ಹಿಂದೆ ಇರುವ ಸರ್ಕಾರಿ ಜಾಗವನ್ನು ನಗರಸಭೆಗೆ ಹಸ್ತಾಂತರಿಸುವ ಸಂಬಂಧ ಸರ್ಕಾರದ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಂದಕುಮಾರ್ ತಿಳಿಸಿದರು.

ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ಪ್ರತಿಯನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ನಮ್ಮ ಈ ಯೋಜನೆಗೆ ಸರ್ಕಾರ ಒಪ್ಪಿ, ಜಾಗವನ್ನು ನಗರಸಭೆಗೆ ಹಸ್ತಾಂತರಿಸಿದರೆ ಮಡಿಕೇರಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ನಿವೇಶನ ಹಂಚಲಾಗುವುದು ಎಂದು ಅವರು ನುಡಿದರು.    

ಆಶ್ರಯ ಮನೆ; ಆದಾಯ ಮಿತಿ ಹೆಚ್ಚಿಸಲು ಒತ್ತಡ
ಆಶ್ರಯ ಯೋಜನೆಯಡಿ ಮನೆ ನೀಡಲು ವಿಧಿಸಿರುವ ಆದಾಯ ಮಿತಿಯನ್ನು (ರೂ 11,200 ವಾರ್ಷಿಕ) ಹೆಚ್ಚಿಸಬೇಕು. ಇಷ್ಟು ಕಡಿಮೆ ಕಡಿಮೆ ಆದಾಯ ಇರುವ ಯಾವ ವೃತ್ತಿಯೂ ಇಲ್ಲ ಹಾಗೂ ಇಷ್ಟು ಕಡಿಮೆ ಆದಾಯದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಸದಸ್ಯ ಮುನೀರ್ ಅಹ್ಮದ್ ಸಭೆಯ ಗಮನಕ್ಕೆ ತಂದರು.

ಪಕ್ಷಭೇದ ಮರೆತು ಎಲ್ಲ ಸದಸ್ಯರು ಇದಕ್ಕೆ ಬೆಂಬಲ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಅವರು, ಆದಾಯ ಮಿತಿಯನ್ನು ಹೆಚ್ಚಿಸುವಂತೆ ನಿರ್ಣಯ ಕೈಗೊಂಡು, ಠರಾವು ಪ್ರತಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದರು.

ಎಲ್ಲ ಸದಸ್ಯರ ವಿಶೇಷ ಸಭೆ ಕರೆದು ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಇದುವರೆಗೆ ಸುಮಾರು 6,000 ಅರ್ಜಿ ಬಂದಿವೆ. ಇವರಲ್ಲಿ ಬಹಳಷ್ಟು ಜನರು ನಿವೇಶನ ಹೊಂದಿದವರು, ಆದಾಯ ಹೆಚ್ಚಿದ್ದವರು (ಆದಾಯ ಮಿತಿ ವಾರ್ಷಿಕ- ರೂ 11,200) ಇದ್ದಾರೆ. ಇವರ ಅರ್ಜಿಗಳು ತಿರಸ್ಕೃತಗೊಳ್ಳಲಿವೆ. ಈ ಯೋಜನೆಯಡಿ ಕೇವಲ 600 ಜನರಿಗೆ ಮನೆ ನೀಡಲು ಅವಕಾಶ ಇದೆ ಎಂದರು.

ಜಾಹೀರಾತು ಫಲಕಕ್ಕೆ ಬಾಡಿಗೆ ನಿಗದಿ 
ರಾಜಾಸೀಟ್ ರಸ್ತೆಯಲ್ಲಿ ಅಳವಡಿಸಲಾಗಿರುವ ಜಾಹೀರಾತು ಫಲಕಗಳ ಸಂಸ್ಥೆಯ ಜೊತೆ ನಗರಸಭೆ ಹೊಸದಾಗಿ ಒಪ್ಪಂದ ಮಾಡಿಕೊಳ್ಳಬೇಕು. ಇದರಲ್ಲಿ 90 ಫಲಕಗಳ ಬದಲಾಗಿ, 50-60 ಫಲಕಗಳಿಗೆ ಮಾತ್ರ ಅವಕಾಶ ನೀಡಬೇಕು. ಇದರ ಜೊತೆಗೆ ಸೂಕ್ತ ಬಾಡಿಗೆ ವಿಧಿಸಬೇಕು ಎಂದು ಸದಸ್ಯ ಚುಮ್ಮಿ ದೇವಯ್ಯ ಒತ್ತಯಿಸಿದರು.

ಅಧ್ಯಕ್ಷ ನಂದಕುಮಾರ್ ಪ್ರತಿಕ್ರಿಯೆ ನೀಡಿ, ಫಲಕಗಳಿಗೆ ದರ ನಿಗದಿಪಡಿಸಲು ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿ ಫಲಕಗಳಿಗೆ ರೂ 300 ಬಾಡಿಗೆ ಪಡೆಯಲಾಗುವುದು ಹಾಗೂ ಫಲಕಗಳ ಸಂಖ್ಯೆಯನ್ನು 50ರಿಂದ 60ಕ್ಕೆ ಮಿತಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಪರವಾನಗಿ ಶುಲ್ಕ ಪರಿಷ್ಕರಣೆ
ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕಟ್ಟಡಗಳ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲು ಸಾಮಾನ್ಯ ಸಭೆ ಸಮ್ಮತಿಸಿತು. ಮಾಂಸದಂಗಡಿಗೆ ಚಿಕ್ಕನ್, ಮಟನ್ ಹಾಗೂ ಪೊರ್ಕ್ ಶಾಪ್‌ಗೆ (ಪ್ರತ್ಯೇಕವಾಗಿ) ರೂ 10,000. ಚಿಕ್ಕನ್ ಹಾಗೂ ಮಟನ್ ಎರಡೂ ಇರುವ ಅಂಗಡಿಗಳಿಗೆ ರೂ 15,000 ಮೂರು ರೀತಿಯ ಮಾಂಸದ ಅಂಗಡಿ ಹೊಂದಿರುವವರಿಗೆ ರೂ 20,000 ಶುಲ್ಕ ವಿಧಿಸಲಾಗಿದೆ. ಶೀಥಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಇರುವವರಿಗೆ ರೂ 5,000. ಇಂತಹ ಘಟಕಗಳಲ್ಲಿ ಅಕ್ರಮವಾಗಿ ಮಾಂಸ ಮಾರಾಟ ಮಾಡಿದರೆ ಅವರ ಪರವಾನಗಿ ರದ್ದುಗೊಳಿಸಲು ತೀರ್ಮಾನ. ಹೋಟೆಲ್‌ಗಳಿಗೆ ರೂ 1,000, 3,000 ಹಾಗೂ ರೂ, 5000ವರೆಗೆ ಶುಲ್ಕ. ದೊಡ್ಡ ಲಾಡ್ಜ್‌ಗಳಿಗೆ ರೂ 10,000. ಚಿಕ್ಕ ಲಾಡ್ಜ್‌ಗಳಿಗೆ ರೂ 5,000 ಪರವಾನಗಿ ಶುಲ್ಕ ವಿಧಿಸಲು ತೀರ್ಮಾನಿಸಲಾಯಿತು.

ಭೂ ಪರಿವರ್ತನೆ; ಆದಾಯಕ್ಕೆ ಕತ್ತರಿ
ನಗರಸಭೆ ವ್ಯಾಪ್ತಿಯ ಭೂ ಪರಿವರ್ತನೆಯನ್ನು ಮಾಡುವಾಗ ಕಂದಾಯ ಅಧಿಕಾರಿಗಳು ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುತ್ತಿಲ್ಲ. ಇದರಿಂದ ನಗರಸಭೆಯ ಆದಾಯ ಕತ್ತರಿ ಬೀಳುತ್ತಿದೆ ಎಂದು ಸದಸ್ಯ ಟಿ.ಎಂ. ಅಯ್ಯಪ್ಪ ಸಭೆಯ ಗಮನ ಸೆಳೆದರು.ಅಧ್ಯಕ್ಷ ನಂದಕುಮಾರ್ ಪ್ರತಿಕ್ರಿಯಿಸಿ, ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಮುಡಾ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಇನ್ನು ಮುಂದೆ ಭೂ ಪರಿವರ್ತನೆ ಮಾಡುವಾಗ ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವಂತೆ ತಿಳಿಸಲಾಗಿದೆ ಎಂದರು.

ಹೋಂ ಸ್ಟೇ- ನಗರಸಭೆ ಅನುಮತಿಯೂ ಕಡ್ಡಾಯ
ನಗರಸಭೆ ವ್ಯಾಪ್ತಿಯಲ್ಲಿ ಹೋಂ ಸ್ಟೇ ಆರಂಭಿಸುವಾಗ ನಗರಸಭೆಯಿಂದಲೂ ಅನುಮತಿ ಪಡೆಯಬೇಕು ಎನ್ನುವ ಮನವಿಗೆ ಪ್ರವಾಸೋದ್ಯಮ ಇಲಾಖೆಯು ಒಪ್ಪಿಕೊಂಡಿದೆ ಎಂದು ನಗರಸಭೆ ಆಯುಕ್ತ ಶಶಿಕುಮಾರ್ ತಿಳಿಸಿದರು.

ನಗರಸಭೆ ವತಿಯಿಂದ ನಿರಾಕ್ಷೇಪಣಾ ಪತ್ರ ನೀಡುವಾಗ ಯಾವಯಾವ ಷರತ್ತುಗಳನ್ನು ವಿಧಿಸಬೇಕು ಎಂದು ಸದಸ್ಯರಿಂದ ಮಾಹಿತಿ ಪಡೆದರು. ಸದಸ್ಯರು ಸೂಚಿಸಿದ ಷರತ್ತುಗಳು ಇಂತಿವೆ;

ನೆರೆಹೊರೆ ಮನೆಯವರಿಂದ ಹಾಗೂ ಸ್ಥಳೀಯ ನಗರಸಭೆ ಸದಸ್ಯರಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು.

ಐದು ಕೊಠಡಿಗಳಿಗಿಂತ ಹೆಚ್ಚು ಇರಬಾರದು, ಮನೆ ಮಾಲೀಕರೇ ಇದನ್ನು ನಿರ್ವಹಿಸಬೇಕು.

ಫೈರ್ ಕ್ಯಾಂಪ್, ಮಧ್ಯರಾತ್ರಿ ನಂತರ ಮ್ಯೂಸಿಕ್, ಟೇಪ್ ಬಳಕೆಗೆ ನಿಷೇಧ ಹೇರುವುದು

ವಾರ್ಷಿಕ ರೂ 5,000 ಶುಲ್ಕ ಸಂಗ್ರಹಿಸಲು ತೀರ್ಮಾನಿಸಲಾಯಿತು.

ಉಪಾಧ್ಯಕ್ಷೆ ರಂಪಾಟ
ಯಾವ ಸಭೆಯಲ್ಲೂ ತುಟಿಬಿಚ್ಚದ ಉಪಾಧ್ಯಕ್ಷೆ ವಸಂತ ಕೇಶವ ಅವರು ಇಂದಿನ ಸಭೆಯಲ್ಲಿ ತಮಗೆ ವಾಹನ ಸೌಲಭ್ಯ ನೀಡಬೇಕು ಎಂದು ಗಲಾಟೆ ಎಬ್ಬಿಸಿದ್ದು ವಿಶೇಷವಾಗಿತ್ತು.

ನನಗೆ ನಗರಸಭೆ ವತಿಯಿಂದ ಇದುವರೆಗೆ ವಾಹನವನ್ನು ನೀಡಿಲ್ಲ. ಸಭೆಗಳಿಗೆ ಅಥವಾ ಸ್ಥಳ ಪರಿಶೀಲನೆಗೆಂದು ಹೋಗಬೇಕಾದಾಗ ನನಗೆ ಸಾಕಷ್ಟು ತೊಂದರೆಯಾಗುತ್ತದೆ. ತಕ್ಷಣವೇ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಂದಕುಮಾರ್, ಉಪಾಧ್ಯಕ್ಷರಿಗೆ ವಾಹನ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

`ನಿಮ್ಮ ಬೇಡಿಕೆ ಈಡೇರದಿದ್ದಲ್ಲಿ ರಾಜೀನಾಮೆ ನೀಡಿ, ನಮ್ಮಂದಿಗೆ ಬನ್ನಿ~ ಎಂದು ವಸಂತ ಕೇಶವ ಅವರಿಗೆ ಹೇಳುವ ಮೂಲಕ ಸದಸ್ಯ ಚುಮ್ಮಿ ದೇವಯ್ಯ ಹಾಸ್ಯ ಚಟಾಕಿ ಹಾರಿಸಿದರು.

ಸ್ಥಾಯಿ ಸಮಿತಿ ರಚನೆ

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಡಳಿತ ಪಕ್ಷದ ಆರು ಸದಸ್ಯರು ಹಾಗೂ ವಿರೋಧ ಪಕ್ಷದ ಐದು ಜನ ಸದಸ್ಯರು ಸೇರಿದಂತೆ ಒಟ್ಟು 11 ಸದಸ್ಯರ ಸಮಿತಿ ಇದಾಗಿದೆ.

ಸದಸ್ಯರ ಪಟ್ಟಿ ಇಂತಿದೆ; ಅರುಣ್‌ಕುಮಾರ್, ಕೆ.ಎಸ್. ರಮೇಶ್, ಉಮೇಶ್ ಸುಬ್ರಮಣಿ, ರಾಣಿ ಮಾಚಯ್ಯ, ಚುಮ್ಮಿ ದೇವಯ್ಯ, ಅಬ್ದುಲ್ ರಜಾಕ್, ಟಿ.ಎಂ. ಅಯ್ಯಪ್ಪ, ಉನ್ನಿಕೃಷ್ಣ, ಕೆ.ಎಸ್. ಪ್ರಕಾಶ್, ಖತಿಜಾ ಹಾಗೂ ಚಿತ್ರಾ ದೇವರಾಜ್ ಆಯ್ಕೆಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT