ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಗೆ ಆರ್ಥಿಕ ಮುಗ್ಗಟ್ಟು!

Last Updated 6 ಜನವರಿ 2012, 11:00 IST
ಅಕ್ಷರ ಗಾತ್ರ

ಚಾಮರಾಜನಗರ: ನಿಗದಿತವಾಗಿ ನಗರಸಭೆಗೆ ತೆರಿಗೆ ಪಾವತಿಸುವ ಮಂದಿಯೇ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಸಂಗತಿ ಬಯಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕರ ನೀಡಿದರೂ ನೀರು ಮಾತ್ರ ಪೂರೈಕೆಯಾಗುತ್ತಿಲ್ಲ!

ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಯಿತು. ಅಧಿಕಾರಿಗಳ ತಾರತಮ್ಯ ನೀತಿ ವಿರುದ್ಧ ಸದಸ್ಯರು ಕೆಂಡಾಮಂಡಲ ವಾದರು. ತೆರಿಗೆ ನೀಡದಿರುವ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ `ನಗರಸಭೆ ಆರ್ಥಿಕ ಮುಗ್ಗಟ್ಟಿನ ಸ್ಥಿತಿ ಎದುರಿಸುತ್ತಿದೆ~ ಎಂದು ತಣ್ಣಗೆ ಪ್ರತಿಕ್ರಿಯಿಸಿದರು.

ಕಂದಾಯ, ನೀರಿನ ತೆರಿಗೆ, ಮಳಿಗೆಗಳ ಬಾಡಿಗೆ ಸೇರಿದಂತೆ ನಗರಸಭೆಗೆ ಸೇರಿದ ಆಸ್ತಿಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡುವಲ್ಲಿ ಹಿಂದೇಟು ಹಾಕಿದ್ದು, ಆದಾಯ ಕ್ರೋಡೀಕರಣದಲ್ಲಿ ಹಿನ್ನಡೆಯಾಗಿರುವ ಅಂಶ ಪೌರಾಯುಕ್ತರ ಹೇಳಿಕೆಯಿಂದ ಬಟಾಬಯಲಾಯಿತು. 

ಸದಸ್ಯ ಲಿಂಗರಾಜು ಮಾತನಾಡಿ, `ನನ್ನ                   ವಾರ್ಡ್‌ನಲ್ಲಿ ತಿಂಗಳಿಗೆ ಸುಮಾರು 40 ಸಾವಿರ ರೂ ನೀರಿನ ತೆರಿಗೆ ಪಾವತಿಸಲಾಗುತ್ತಿದೆ. ಆದರೆ, ವಾರ್ಡ್‌ಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ ಅಕ್ರಮ ನಲ್ಲಿ ಸಂಪರ್ಕಗಳಿವೆ. ಪತ್ತೆಹಚ್ಚಿ ತೆರವುಗೊಳಿಸಿಲ್ಲ. ಕರ ನೀಡುವ ಮಂದಿಗೆ ತಾರತಮ್ಯ ಮಾಡಲಾಗುತ್ತಿದೆ~ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎಸ್. ನಂಜುಂಡಸ್ವಾಮಿ, `ನೀರಿನ ಸಮಸ್ಯೆ ತಲೆದೋರಿದಾಗ ವಿದ್ಯುತ್ ಸಮಸ್ಯೆಯತ್ತ ಬೊಟ್ಟು ಮಾಡಲಾಗುತಿತ್ತು. ಈಗ ಆ ಸಮಸ್ಯೆ ಇಲ್ಲ. ಆದರೆ, ಕೆಲವು ವಾರ್ಡ್‌ಗಳಿಗೆ ಉತ್ತಮವಾಗಿ ನೀರು ಪೂರೈಸಲಾಗುತ್ತಿಲ್ಲ. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ನೀರು ಪೂರೈಕೆಯ ಮೋಟಾರ್ ಬದಲಾವಣೆಗೆ ಕ್ರಮಕೈಗೊಳ್ಳಬೇಕು~ ಎಂದು ಸಲಹೆ ಮುಂದಿಟ್ಟರು.

`ದಿನನಿತ್ಯ ಕನಿಷ್ಠ ಅರ್ಧಗಂಟೆಯೂ ನೀರು ಪೂರೈಕೆ ಮಾಡದಿದ್ದರೆ ನಗರಸಭೆಗೆ ಬೀಗ ಹಾಕುವುದು ಉತ್ತಮ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲವೆಂದು ಪೌರಾಯುಕ್ತರು ಹೇಳುತ್ತಾರೆ. ಆದಾಯ ಮೂಲ ಹೆಚ್ಚಿಸಿಕೊಳ್ಳದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಬಾಕಿ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಜತೆಗೆ, ನಗರದ ವ್ಯಾಪ್ತಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌ಬೋರ್ಡ್‌ಗಳಿಗೂ ಶುಲ್ಕ ನಿಗದಿಪಡಿಸಬೇಕು. ಇದರಿಂದ ನಗರಸಭೆಗೆ ಆದಾಯ ಬರಲಿದೆ~ ಎಂದು ಸದಸ್ಯ ಸುರೇಶನಾಯಕ ಹೇಳಿದರು.

ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, `ಜಿಲ್ಲಾ ಕೇಂದ್ರಕ್ಕೆ ಪೂರೈಕೆಯಾಗುತ್ತಿರುವ ಕೊಳವೆಮಾರ್ಗದ ಮೂಲಕವೇ ಹಳ್ಳಿಗಳಿಗೂ ನೀರು ಪೂರೈಕೆಯಾಗುತ್ತಿದೆ. ಇದರಿಂದ ಜಿಲ್ಲಾ ಕೇಂದ್ರದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ನಗರಕ್ಕೆ ಪ್ರತ್ಯೇಕ ಕೊಳವೆಮಾರ್ಗ ನಿರ್ಮಿಸುವ ಸಂಬಂಧ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಹೊಸ ಮೋಟಾರ್ ಖರೀದಿಸಲು ಕ್ರಮಕೈಗೊಳ್ಳಲಾಗುವುದು~ ಎಂದು ಸಭೆಗೆ ತಿಳಿಸಿದರು.
ಅಧ್ಯಕ್ಷೆ ಭಾಗ್ಯಮ್ಮ ಸಭೆಯ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಸೆಲ್ವಿಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT