ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಲ್ಲಿ ಕಿತ್ತಾಟ: ಬಡಾವಣೆಯಲ್ಲಿ ಶ್ವಾನ ಕಚ್ಚಾಟ!

Last Updated 10 ಅಕ್ಟೋಬರ್ 2011, 8:00 IST
ಅಕ್ಷರ ಗಾತ್ರ

ಚಾಮರಾಜನಗರ: ನಗರಸಭೆಯಲ್ಲಿ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳ ನಡುವೆ ಕಿತ್ತಾಟ ಶುರುವಾಗಿದ್ದರೆ ನಗರದ ಬಡಾವಣೆಗಳಲ್ಲಿ ಬೀದಿನಾಯಿಗಳ ಕಚ್ಚಾಟ ಆರಂಭವಾಗಿದೆ. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.

ಸಿದ್ಧಾರ್ಥ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಬೀದಿನಾಯಿಗಳಿಗೆ ಹೆದರಿ ಮಕ್ಕಳು ಹೊರಗೆ ಬರುತ್ತಿಲ್ಲ. ಪೋಷಕರು ಕೂಡ ಅಪ್ಪಿತಪ್ಪಿಯೂ ಅಂಗಡಿಗಳಿಗೆ ದಿನಸಿ ಸಾಮಗ್ರಿ ಖರೀದಿಗೆ ಚಿಣ್ಣರನ್ನು ಕಳುಹಿಸುತ್ತಿಲ್ಲ. ಅಕ್ಷರಶಃ ನಾಗರಿಕರು ನಾಯಿಗಳ ಆರ್ಭಟಕ್ಕೆ ಭಯಗೊಂಡಿದ್ದಾರೆ. ಆದರೆ, ನಗರಸಭೆ ಮಾತ್ರ ಬೀದಿನಾಯಿಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ.

ದ್ವಿಚಕ್ರವಾಹನ ಸವಾರರು ಕೂಡ ನಾಯಿಗಳ ಹಾವಳಿಗೆ ಹೆದರುವಂತಾಗಿದೆ. ಈ ಬಡಾವಣೆಗಳಿಗೆ ನಾಗರಿಕರು ಹೋಗಲು ಭಯದಿಂದ ಹಿಂದೇಟು ಹಾಕುತ್ತಾರೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಪಾಡುಹೇಳತೀರದು. ಭಾನುವಾರ ಬೆಳಿಗ್ಗೆ ಹೌಸಿಂಗ್ ಬೋರ್ಡ್‌ನಲ್ಲಿ ಬಿಡಾಡಿ ಕರುವೊಂದು ನಾಯಿಗಳ ಹಾವಳಿಗೆ ತುತ್ತಾಗಿ ತೀವ್ರ ಗಾಯಗೊಂಡಿದೆ.

ನಗರದ ವ್ಯಾಪ್ತಿ ತಳ್ಳುವಗಾಡಿಗಳಲ್ಲಿ ಕಬಾಬ್, ಫಿಶ್‌ಪ್ರೈ ಇತ್ಯಾದಿ ಮಾರಾಟ ನಡೆಯುತ್ತಿದೆ. ಈ ಅಂಗಡಿಗಳ ಬಳಿಯಲ್ಲಿ ನಾಯಿಗಳ ಉಪಟಳ ಹೆಚ್ಚಿದೆ. ಗಲಾಟೆ ಮಾಡಿ ಓಡಿಸಲು ಮುಂದಾದರೆ ತಿರುಗಿ ಬೀಳುತ್ತವೆ. ಕೊಂಚ ಎಚ್ಚರತಪ್ಪಿದರೆ ಕಚ್ಚಿಸಿಕೊಳ್ಳುವುದು ಗ್ಯಾರಂಟಿ. ಮಾಂಸದ ರುಚಿ ಹತ್ತಿಸಿಕೊಂಡಿರುವ ಬೀದಿನಾಯಿಗಳಿಂದಾಗಿ ನಾಗರಿಕರು ಭೀತಿಯಿಂದ ಸಂಚರಿಸುವಂತಾಗಿದೆ.

ನಗರಸಭೆಯ ದಾಖಲೆ ಪ್ರಕಾರ ನಗರದ ವ್ಯಾಪ್ತಿ 525 ಬೀದಿನಾಯಿ ಹಾಗೂ 279 ಸಾಕುನಾಯಿಗಳಿವೆ. ಹಲವು ವರ್ಷದಿಂದಲೂ ಈ ನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮಕೈಗೊಂಡಿಲ್ಲ. ಈಗ ಇವುಗಳ ಸಂಖ್ಯೆ ದುಪ್ಪಟ್ಟಾಗಿದೆ. ಸುಪ್ರೀಂ ಕೋರ್ಟ್ ಆದೇಶದನ್ವಯ ಬೀದಿನಾಯಿಯನ್ನು ಹತ್ಯೆ ಮಾಡುವುದು ಅಪರಾಧ. ಅವುಗಳನ್ನು ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಬಳಿಕ ಅವುಗಳಿರುವ ಸ್ಥಳದಲ್ಲೇ ಬಿಡಬೇಕಿರುವುದು ಕಡ್ಡಾಯ. ಶಸ್ತ್ರಚಿಕಿತ್ಸೆ ಮಾಡಿದರೆ ನಾಯಿಗಳ ರೋಷ ತಗ್ಗಲಿದೆ.

ಬೀದಿನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ ಮತ್ತು ರೋಗಪೀಡಿತ ನಾಯಿಗಳಿಗೆ ಚುಚ್ಚುಮದ್ದು ಹಾಕಿಸಬೇಕು. ಈ ಸಂಬಂಧ ಟೆಂಡರ್ ಕರೆದು ಕ್ರಮಕೈಗೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯ 2010ರ ಸೆಪ್ಟೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿತ್ತು. ಅದರನ್ವಯ ನಗರಸಭೆ ಕರೆದಿದ್ದ ಟೆಂಡರ್‌ಗೆ ಮೂರು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.

ಅಂತಿಮವಾಗಿ ಬೆಂಗಳೂರಿನ ಸಂಸ್ಥೆಯೊಂದು ಸಲ್ಲಿಸಿದ್ದ ಟೆಂಡರ್ ಅರ್ಜಿಯನ್ನು ನಗರಸಭೆ ಒಪ್ಪಿಕೊಂಡಿತು. ಇದಕ್ಕೆ ಸಾಮಾನ್ಯ ಸಭೆಯಲ್ಲೂ ಅನುಮೋದನೆ ನೀಡಲಾಗಿತ್ತು. ಈ ಸಂಸ್ಥೆಯು ಒಂದು ಗಂಡುನಾಯಿಯ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ 805 ರೂ ದರ ನಿಗದಿಪಡಿಸಿತ್ತು. ಹೆಣ್ಣುನಾಯಿಗೆ 820 ರೂ ದರ ನಿಗದಿಪಡಿಸಿದ್ದು, ಬೇರೆಡೆಗೆ ಸಾಗಿಸಲು 80 ರೂ ದರ ನಿಗದಿಪಡಿಸಿತ್ತು. ಆದರೆ, ಹಲವು ತಿಂಗಳು ಕಳೆದರೂ ನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ನಗರಸಭೆಯ ಕಸದಬುಟ್ಟಿ ಸೇರಿದೆ.

ಬೀದಿನಾಯಿ ಹಿಡಿದು ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡುವಂತಹ ಪರಿಣತರ ಕೊರತೆಯೂ ಇದೆ. ನಾಯಿ ಹಿಡಿಯಲು ತಮಿಳುನಾಡಿನಿಂದಲೇ ಪರಿಣತರನ್ನು ಕರೆಯಿಸಬೇಕಿದೆ. ಕೆಲವು ಸ್ವಯಸೇವಾ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವ ಬೀದಿನಾಯಿ ಹಿಡಿದು ಶಸ್ತ್ರಚಿಕಿತ್ಸೆ ನಡೆಸಿ ಅವುಗಳ ಆರೈಕೆ ಮಾಡುತ್ತಿರುವುದು ಉಂಟು. ಆದರೆ, ನಗರಸಭೆ ವ್ಯಾಪ್ತಿ ಅಂಥ ಸಂಸ್ಥೆಗಳಿಲ್ಲ.

`ಅಂಗಡಿಗಳಿಗೆ ಈಗ ಮಕ್ಕಳನ್ನು ಕಳುಹಿಸುತ್ತಿಲ್ಲ. ನಾಯಿಗಳು ಅಟ್ಟಿಸಿಕೊಂಡು ಬರುತ್ತಿವೆ. ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ. ಸಂಜೆ ವೇಳೆ ಹೊರಗೆ ಹೋಗಿ ಚಿಣ್ಣರು ಆಟವಾಡಲು ಭಯಪಡುತ್ತಾರೆ. ಕೂಡಲೇ, ಬೀದಿನಾಯಿಗಳ ಉಪಟಳಕ್ಕೆ ನಗರಸಭೆ ಆಡಳಿತ ಕ್ರಮಕೈಗೊಳ್ಳಬೇಕು~ ಎಂಬುದು ಗೃಹಿಣಿ ಶೋಭಾ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT