ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಲ್ಲಿ ನಿವೇಶನದ ಗದ್ದಲ

Last Updated 5 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಮಟ್ಟದ ಪತ್ರಿಕೆಯೊಂದಕ್ಕೆ 30್ಡ100 ಅಳತೆಯ ನಿವೇಶನ ನೀಡುವ ವಿಚಾರ ಬರುತ್ತಿದ್ದಂತೆ ಭಾರಿ ಗದ್ದಲ ನಡೆದು, ಸಾಮಾನ್ಯ ಸಭೆಯನ್ನು ಏಕಾಏಕಿ ಮುಕ್ತಾಯಗೊಳಿಸಿದ ಘಟನೆ ಗುರುವಾರ ಹಾಸನ ನಗರಸಭೆಯಲ್ಲಿ ನಡೆದಿದೆ.

ಬೆಳಿಗ್ಗೆಯಿಂದಲೇ ಸಭೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಿ ವಾದ-ವಿವಾದಗಳು ನಡೆದವು. ಸಭೆ ಮುಕ್ತಾಯದ ಹಂತಕ್ಕೆ ಬಂದಾಗ ಸದಸ್ಯ ಯಶವಂತ್ (ಕಾಂಗ್ರೆಸ್) `ಪತ್ರಿಕೆಯ ಕಡೆಯಿಂದ ನಿವೇಶನಕ್ಕೆ ಬೇಡಿಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕು~ ಎಂದರು. ಆದರೆ ಅವರು ಮಾತು ಪೂರ್ಣಗೊಳಿಸುವುದಕ್ಕೂ ಮೊದಲೇ ವ್ಯಗ್ರರಾದ ಅಧ್ಯಕ್ಷ ಸಿ.ಆರ್. ಶಂಕರ್, `ಈ ಬಗ್ಗೆ ಸಭೆಯಲ್ಲಿ ಚರ್ಚಿಸಲು ಅವಕಾಶ ಕೊಡಲ್ಲ, ಮುಂದಿನ ಸಭೆಯಲ್ಲಿ ಆ ವಿಷಯ ಬಂದಾಗ ಚರ್ಚಿಸಿ ತೀರ್ಮಾನಿಸೋಣ~ ಎಂದರು.

ಸದಸ್ಯರಾದ ಅನಿಲ್ ಕುಮಾರ್, ಸುರೇಶ್ ಕುಮಾರ್ ಮುಂತಾದವರೂ ಮಾತನಾಡಿ, `ನಿವೇಶನ ನೀಡಬೇಕೇ ಬೇಡವೇ ಎಂಬ ಬಗ್ಗೆ ಆಮೇಲೆ ತೀರ್ಮಾನಿಸೋಣ, ಈ ವಿಷಯ ಚರ್ಚೆಗೆ ಎತ್ತಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆಯಾದರೂ ಮಾತನಾಡಬಹುದಲ್ಲ ಎಂದರೂ ಶಂಕರ್ ಒಪ್ಪಲಿಲ್ಲ. `ಈ ವಿಚಾರದ ಬಗ್ಗೆ ಚರ್ಚೆ ಬೇಡ, ಮುಂದಿನ ಸಭೆಯಲ್ಲಿ ವಿಷಯ ಪಟ್ಟಿಯಲ್ಲಿ ಬಂದಾಗ ನೋಡೋಣ~ ಎಂದರು.

ಈ ಸಂದರ್ಭದಲ್ಲಿ ಸ್ವಲ್ಪ ವಾದ ವಿವಾದ ನಡೆದು ಮೊದಲ ಬಾರಿಗೆ ಶಂಕರ್ ಸಭೆಯನ್ನು ಐದು ನಿಮಿಷಗಳ ಕಾಲ ಮುಂದೂಡಿದರು. ನಂತರ ಕೊನೆಗೆ ಸಭೆಯನ್ನು ಮುಕ್ತಾಯಗೊಳಿಸಿದ್ದೇನೆ ಎಂದು ಘೋಷಿಸಿ ಸಭೆಗೆ ಮಂಗಳ ಹಾಡಿದರು. ಅಧ್ಯಕ್ಷರ ಅಪ್ಪಣೆಯ ಮೇರೆಗೆ ಎಂದು ವಿಷಯ ಪಟ್ಟಿಯಲ್ಲಿ ನಮೂದಾಗಿದ್ದ ಕೆಲವು ವಿಚಾರಗಳ ಬಗ್ಗೆ ಚರ್ಚಿಸದೆಯೇ ಸಭೆ ಅಂತ್ಯಗೊಂಡಿತು.

ಸರ್ವಾನುಮತ: ಬಹುಮತದ ವಿಚಾರ ಈ ಬಾರಿಯೂ ಚರ್ಚೆಗೆ ಬಂತು. ಎಂದಿನಂತೆ ಪ್ರಸನ್ನ ಕುಮಾರ್ (ಬಿಜೆಪಿ) ಅವರೇ ಕೆಲವು ವಿಚಾರಗಳ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಮೂದಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಗರದ ವಿವಿಧ ಭಾಗಗಳಲ್ಲಿ ಹಿಂದೆ ನಿರ್ಮಿಸಿದ್ದ ಮತ್ತು ಸುಸ್ಥಿರವಾಗಿರುವ ಚರಂಡಿಗಳನ್ನು ಒಡೆದು ಕಾಂಕ್ರೀಟ್ ಚರಂಡಿ ನಿರ್ಮಿಸುತ್ತಿರುವ ಬಗ್ಗೆ ಸದಸ್ಯ ಕೆ.ಟಿ. ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್ ಕರೆದಿದ್ದರೂ ಕಡಿಮೆ ಬಿಡ್ ಮಾಡಿದವರಿಗೆ ಟೆಂಡರ್ ನೀಡದೆ ಈಗ ನಿರ್ವಹಣೆ ಮಾಡುತ್ತಿರುವವರನ್ನೇ ಮುಂದುವರಿಸಲು ಕಾರಣವೇನು? ಎಂದು ಯಶವಂತ್  ಪ್ರಶ್ನಿಸಿ   ದರು. ಈಗಿರುವವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಅವರಿಗೇ ಕೊಡಲು ಎಲ್ಲರೂ ತೀರ್ಮಾನಿಸಿದ್ದೇವೆ ಎಂದು ಶಂಕರ್ ತಿಳಿಸಿದರು.

`ಮಧ್ಯವರ್ತಿಗಳಿಗೆ ಮಣೆ ಬೇಡ~

ನಗರಸಭೆಯಲ್ಲಿ ಮಧ್ಯವರ್ತಿಗಳು ಅಧಿಕಾರಿಗಳ ಪಕ್ಕದಲ್ಲೇ ಕುಳಿತು ಕೆಲಸ ಮಾಡುತ್ತಿರುವ ಬಗ್ಗೆ ಭಾರಿ ಚರ್ಚೆ ನಡೆಯಿತು.

ಈ ವಿಚಾರ ಎತ್ತಿದ ಸದಸ್ಯ ಬಂಗಾರಿ ಮಂಜು (ಬಿಜೆಪಿ), `ಜನನ, ಮರಣ ಪ್ರಮಾಣಪತ್ರಗಳನ್ನು ನೀಡಲೂ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಮಧ್ಯವರ್ತಿಗಳೇ ಬಂದು ಎಲ್ಲ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಿಬ್ಬಂದಿ ಅವರಿಗೆ ಆಸನ ಕೊಡುತ್ತಾರೆ. ನಾವು ಬಂದರೆ ಅವರ ಮುಂದೆ ನಿಂತುಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಮಂಜು ಮೇಲೆಯೇ ಆರೋಪ ಹೊರಿಸಿದ ಅಧ್ಯಕ್ಷ ಶಂಕರ್, `ಬಡ ನಿರುದ್ಯೋಗಿ ಮಹಿಳೆ, ಇಲ್ಲಿ ಅರ್ಜಿ ಬರೆದುಕೊಂಡಿರಲಿ ಅಂತ ನೀವೇ ಕರೆತಂದು ಒಬ್ಬ ಮಹಿಳೆಗೆ ಇಲ್ಲಿ ಅವಕಾಶ ಕೊಟ್ಟಿದ್ದೀರಿ~ ಎಂದರು. ಸಭೆಯಲ್ಲಿದ್ದ ಕೆಲ ಅಧಿಕಾರಿಗಳೂ ಇದೇ ಆರೋಪ ಮಾಡಿದ್ದು, ಭಾರಿ ಚರ್ಚೆಗೆ ನಾಂದಿಯಾಯಿತು. 

ಕೊನೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಂಕರ್, `ಮಧ್ಯವರ್ತಿಗಳನ್ನು ಕಚೇರಿಯೊಳಗೆ ಬಿಡಬೇಡಿ. ಅಂಥ ಕಾರ್ಯ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಜತೆಗೆ ಸದಸ್ಯರಿಗೆ ಗೌರವ ಕೊಡುವುದನ್ನೂ ಕಲಿಯಿರಿ ಎಂದರು. ಉಪಾಧ್ಯಕ್ಷೆ ಶ್ರೀವಿದ್ಯಾ, ಆಯುಕ್ತ ನಾಗಭೂಷಣ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT