ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಾಡಳಿತದಿಂದಲೇ ಕೆರೆಗೆ ವಿಷ ಪ್ರಾಷಾನ

Last Updated 17 ಮಾರ್ಚ್ 2011, 7:35 IST
ಅಕ್ಷರ ಗಾತ್ರ

 ತುಮಕೂರು: ಅಮೃತದ ಬಟ್ಟಲಾಗಬೇಕಿದ್ದ ಭೀಮಸಂದ್ರ ಕೆರೆ ಇಂದು ವಿಷದ ಬಟ್ಟಲು ಆಗಿದೆ. ಇಲ್ಲಿ ನೀರು ಕುಡಿದ ಒಂದೇ ಒಂದು ಪ್ರಾಣಿ ಮತ್ತು ಪಕ್ಷಿ ಆರೋಗ್ಯವಾಗಿ ಬದುಕುತ್ತವೆ ಎಂದು ದೃಢವಾಗಿ ಹೇಳುವ ವಿಶ್ವಾಸ ಯಾರಿಗೂ ಇಲ್ಲ. ಅಷ್ಟೇ ಅಲ್ಲ; ಇದೇ ನೀರು ಹೀರಿ ಬೆಳೆದ ಬೆಳೆಯೂ ಫಸಲು ಕೊಡುತ್ತಿಲ್ಲ, ಕಾಳು ಗಟ್ಟುವ ಹಂತದಲ್ಲೇ ಭತ್ತ ಉದುರಿ ಹೋದ ನಿದರ್ಶನವಿದೆ. ತೆಂಗು, ಅಡಿಕೆ ಕೂಡ ಫಸಲು ಕೈಚೆಲ್ಲಿವೆ. ಕೆರೆ ಕೆಳಭಾಗದ ಭೂಮಿ ಹೊಂದಿರುವ ರೈತರ ಬದುಕು ಚಿಂತಾಜನಕವಾಗಿದೆ. ಅಲ್ಲದೆ, ಸಾಂಕ್ರಾಮಿಕ ರೋಗ-ರುಚಿನ ಭೀತಿ, ಸೊಳ್ಳೆಗಳ ಕಾಟ, ದುರ್ವಾಸನೆಯಿಂದಾಗಿ ಭೀಮಸಂದ್ರ ಗ್ರಾಮದ ಜನತೆ ಊರು         ತೊರೆಯುವ ಪರಿಸ್ಥಿತಿ ಬಂದೊದಗಿದೆ.

ಮೂರ್ನಾಲ್ಕು ಬಾರಿ ಮೀನುಗಳ ಮಾರಣಹೋಮ ನಡೆದಿರುವ ನಿದರ್ಶನ ಇನ್ನೂ ಹಸಿರಾಗಿಯೇ ಇತ್ತು. ಇತ್ತೀಚೆಗಷ್ಟೇ ಈ ಕೆರೆಯ ನೀರು ಕುಡಿದ ನಾಲ್ಕು ಮೇಕೆಗಳು ಜೀವ ತೆತ್ತಿವೆ. ಒಳಚರಂಡಿ ನೀರು ಸಂಸ್ಕರಿಸದೆ ಕೆರೆಗೆ ಬಿಟ್ಟಿದ್ದು, ಕೆರೆಗೆ ವಿಷ ಪದಾರ್ಥಗಳು ನಿರಂತರವಾಗಿ ಬಂದು ಸೇರುತ್ತಿದೆ. ಕೆರೆ ನೀರು ನಂಬಿ ಕೃಷಿ ಮಾಡುವಂತೆಯೇ ಇಲ್ಲ. ಕೆರೆ ಸಂಪೂರ್ಣ ಮಲೀನವಾಗಿದೆ. ಈ ಸಂಗತಿ ಪಾಲಿಕೆ ಸಭೆಗಳಲ್ಲಿ ಆಗಾಗ ಚರ್ಚೆಯಾಗುತ್ತದೆ. ಫಲಿತಾಂಶ ಮಾತ್ರ ಶೂನ್ಯ ಎನ್ನುವುದು ಭೀಮಸಂದ್ರ ಗ್ರಾಮದ ರೈತರ ಅಳಲು.

ಸುಮಾರು 60 ಎಕರೆ ವಿಸ್ತೀರ್ಣದ ಕೆರೆಯಲ್ಲಿ 25 ಎಕರೆಯಷ್ಟು ಅರಣ್ಯ ಬೆಳೆಸಲು ಬಳಕೆಯಾಗಿದ್ದರೆ, ಇನ್ನಷ್ಟು ಕೆರೆ ಜಾಗ ಒತ್ತುವರಿಯಾಗಿದೆ. ಉಳಿದಿರುವ ಕೆರೆಯಂಗಳ ಕೊಳಚೆ ನೀರು ತುಂಬಿ, ಗಣೇಶ ಕಡ್ಡಿ (ಐಪೋಮಿಯಾ)ಯಿಂದ ಮುಚ್ಚಿಹೋಗಿದೆ. ಕೆರೆಯಲ್ಲಿ ತುಂಬಿ ತುಳುಕುತ್ತಿರುವ ನಗರದ ಕೊಳಚೆಯಿಂದಾಗಿ ಹಳ್ಳಿಯ ಜನರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಪಶು-ಪಕ್ಷಿಗಳಿಗೂ ಮೃತ್ಯು ಕೂಪವಾಗಿರುವ ಭೀಮಸಂದ್ರ ಕೆರೆ ತನ್ನನ್ನು ಪಾವನಗೊಳಿಸಿ ಎಂದು ರೋದಿಸುತ್ತಿರುವಂತಿದೆ.

ಏಳೆಂಟು ತಿಂಗಳ ಹಿಂದೆ ಗ್ರಾಮಕ್ಕೆ ಶಾಸಕ ಶಿವಣ್ಣ ಭೇಟಿ ನೀಡಿದ್ದಾಗ ರೈತರು ತಮ್ಮ ದುಃಸ್ಥಿತಿ ವಿವರಿಸಿದ್ದರು. ಕೆರೆಯಲ್ಲಿ ಕೊಳಚೆ ನೀರು ನಿಲ್ಲದಂತೆ ಕೆರೆ ಕೋಡಿ ಒಡೆದು ನೀರು ಖಾಲಿ ಮಾಡಿಸುವಂತೆ ಗ್ರಾಮದ ಜನತೆ ಅಳಲು ತೋಡಿಕೊಂಡಿದ್ದರು. ಶಾಸಕರ ಸೂಚನೆಯಂತೆ ಕೋಡಿ ಒಡೆಯಲಾಯಿತಾದರೂ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.

ಎರಡು ದಶಕಗಳ ಹಿಂದಿನವರೆಗೂ ಸುಸ್ಥಿತಿಯಲಿದ್ದ ಕೆರೆ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತಿತ್ತು. ಕೆರೆ ನೀರು ಆಶ್ರಯಿಸಿ ತಗ್ಗು ಪ್ರದೇಶದ ಗದ್ದೆಗಳಲ್ಲಿ ರೈತರು ಭತ್ತ ಬೆಳೆಯುತ್ತಿದ್ದರು. ಕೊಳವೆ ಬಾವಿ ಕೈಕೊಟ್ಟಾಗ ಕೆರೆ ನೀರನ್ನೇ ಗೃಹ ಬಳಕೆಗೆ ಬಳಸುತ್ತಿದ್ದ್ಕಖಿ. ಈಗ ಕೆರೆ ನೀರನ್ನು ಕೈ, ಕಾಲಿನಿಂದಲೂ ಸ್ಪರ್ಶಿಸುವಂತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಗಲೀಜು ನೀರು ಖಾಲಿ ಮಾಡಿಸಿ, ಹೇಮಾವತಿ ನೀರಿನಿಂದ ಕೆರೆ ತುಂಬಿಸಬೇಕು ಎಂದು ಜಿಲ್ಲಾಡಳಿತದ ಮುಂದೆ ಗ್ರಾಮಸ್ಥರು ಇಟ್ಟಿರುವ ಬೇಡಿಕೆ ಇಂದಿಗೂ ಈಡೇರಿಲ್ಲ. ಒಳಚರಂಡಿ ನೀರು ಶುದ್ಧೀಕರಣ ಘಟಕ ಸರಿಯಾಗಿ ಕಾರ್ಯನಿರ್ವಹಿಸದೆ, ಕೊಳಚೆ ನೀರು ನೇರವಾಗಿ ಕೆರೆ ಸೇರಿ ಪರಿಸರದ ಮೇಲೆ ಮತ್ತು ಜನಾರೋಗ್ಯದ ಮೇಲೆ ವಿಷಮ ಪರಿಣಾಮ ಬೀರಿದೆ.
(ಮುಂದುವರಿಯಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT