ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಸೂಚನೆ

Last Updated 7 ಫೆಬ್ರುವರಿ 2012, 7:20 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ವಿವೇಕಾನಂದ ನಗರ ಬಡಾವಣೆಯಲ್ಲಿ ನಿಯಮಾವಳಿ ಮೀರಿ ಹಂಚಿಕೆ ಮಾಡಿದ 107 ಬಿಡಿ ನಿವೇಶನಗಳ ಹಂಚಿಕೆ ಪತ್ರ ಹಾಗೂ ಕ್ರಯ ಪತ್ರಗಳನ್ನು ರದ್ದುಗೊಳಿಸಲು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಸೋಮವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ನಿಯಮಗಳನ್ನು ಉಲ್ಲಂಘಿಸಿ 107 ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಿದ ಅಂದಿನ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಉಪೇಂದ್ರ ನಾಯಕ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದರು.

ಕೆಎಎಸ್ (ಕಿರಿಯ ಶ್ರೇಣಿ) ಅಧಿಕಾರಿಯಾಗಿರುವ ನಾಯಕ್ ನಿವೃತ್ತಿ ಹೊಂದಿದ್ದರೂ ಅವರ ವಿರುದ್ಧ ವಿಚಾರಣೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಸೇವೆಗಳು) ಇಲಾಖೆಯು ಅನುಮತಿ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲದೆ, ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಜಾರಿಗೊಳಿಸುವ ಪ್ರಕ್ರಿಯೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಹೇಳಿದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಮಂಡ್ಯದ ಕೆರೆ ಅಂಗಳದಲ್ಲಿ ಅಭಿವೃದ್ಧಿಪಡಿಸಿರುವ ವಸತಿ ನಿವೇಶನಗಳ ಪೈಕಿ ಲಭ್ಯವಿದ್ದ 107 ಬಿಡಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 15 (ಬಿ) ಅನ್ವಯ ಸರ್ಕಾರದ ಪೂರ್ವಾನುಮತಿ ಪಡೆದಿಲ್ಲ.

ಅಲ್ಲದೆ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮ 1991ರ ನಿಯಮ 6 ಅನ್ನು ಉಲ್ಲಂಘನೆ ಮಾಡಿ ಇದೇ ನಿಯಮದಡಿ ಹೊರಡಿಸಲಾದ ಸರ್ಕಾರದ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಇದರಿಂದ 107 ಬಿಡಿ ನಿವೇಶನಗಳನ್ನು ಕಾನೂನು ಬಾಹಿರ ಹಾಗೂ ನಿಯಮ ಬಾಹಿರವಾಗಿ ಹಂಚಿಕೆ ಮಾಡಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ 2009ರ ಸೆಪ್ಟೆಂಬರ್ 8ರಂದು ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ನಿರ್ಣಯ, 2010ರ ಜನವರಿ 2ರಂದು ಕೈಗೊಂಡ ಉಪ ಸಮಿತಿ ಸಭೆಯ ನಡಾವಳಿ ಹಾಗೂ 2010ರ ಜನವರಿ 8ರಂದು ಸ್ಥಿರೀಕರಿಸಿದ ನಿರ್ಣಯಗಳನ್ನು ಸರ್ಕಾರ ರದ್ದುಪಡಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಈಗಾಗಲೇ ಮುಕ್ತಾಯಗೊಂಡಿರುವುದರಿಂದ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಈ ಹಿಂದೆ ನೇಮಿಸಲಾಗಿದ್ದ ಪ್ರಾಧಿಕಾರದ ಸದಸ್ಯರ ನೇಮಕಾತಿಯನ್ನು ಕೂಡ ರದ್ದುಪಡಿಸಲಾಗಿದೆ.
 
ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ. ಅಲ್ಲದೆ, ಪ್ರಾಧಿಕಾರದ ಅಧಿಕಾರಿ/ ನೌಕರರಿಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವಂತಹ ನಿವೇಶನ ಹಂಚಿಕೆ ಪತ್ರ ಹಾಗೂ ಕ್ರಯ ಪತ್ರಗಳನ್ನು ರದ್ದುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

107 ಬಿಡಿ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ ಕೆಎಎಸ್ (ಕಿರಿಯ ಶ್ರೇಣಿ) ಉಪೇಂದ್ರ ನಾಯಕ್ 2010ರ ಡಿಸೆಂಬರ್ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರೂ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇದೆ. ಅವರ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನಿಯಮಾನುಸಾರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT