ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಾರಿ ನಾದದ ಅಲೆಯಲ್ಲಿ...

Last Updated 18 ಜನವರಿ 2012, 10:40 IST
ಅಕ್ಷರ ಗಾತ್ರ

ಮೈಸೂರು: ದೇಸಿಯ ಚರ್ಮವಾದ್ಯಗಳಾದ ತಮಟೆ, ನಗಾರಿಗಳ ನಿನಾದ ಕಲಾಮಂದಿರದ ಅಂಗಳದಲ್ಲಿ ಮಂಗಳವಾರ ಸಂಜೆ ಅಲೆ ಅಲೆಯಾಗಿ ತೇಲಿತು. ಸುಮಾರು 30 ನಿಮಿಷಗಳ ಕಾಲ 12 ಮಂದಿ ಕಲಾವಿದರು ತಮಟೆ ಮತ್ತು ನಗಾರಿಯಿಂದ ಬಗೆ ಬಗೆ ನಾದವನ್ನು ಹೊಮ್ಮಿಸಿ ನೆರೆದಿದ್ದ ನೂರಾರು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದುಕೊಂಡರು.

ಕಲಾವಿದರು ಕೋಲುಗಳನ್ನು ಕೈ ಬೆರಳುಗಳಿಂದ ಗಿರಗಿರನೆ ತಿರುಗಿಸುತ್ತಾ, ನೀಳವಾದ ತಲೆಗೂದಲನ್ನು ಗಾಳಿಯಲ್ಲಿ ಹಾರಾಡಿಸುತ್ತಾ ಮೈಮರೆತು ನಗಾರಿ ಬಾರಿಸುತ್ತಿದ್ದರೆ ಪ್ರೇಕ್ಷಕರು ಮಂತ್ರಮಗ್ನರಾಗಿ ಮಾಡಿತು. ಇವರ ಪ್ರದರ್ಶನ ಮುಗಿದಾಗ ಚಪ್ಪಾಳೆಗಳ ಸುರಿಮಳೆ ಆಯಿತು.

ನಗರದ ಪುಲಕೇಶಿರಸ್ತೆಯ ಮಂಜು ಮತ್ತು ತಂಡ ಪ್ರದರ್ಶನ ನಗಾರಿ ಪ್ರದರ್ಶನ ವನ್ನು ನೀಡಿತು. ಮಂಜು ಕುಟುಂಬದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲ ದಿಂದಲೂ ನಗಾರಿ ವಾದ್ಯ ನುಡಿಸುವುದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಈ ಪ್ರದರ್ಶನ ರಂಗಾಯಣ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ನಡೆಯಿತು.
ಇದಾದ ನಂತರ ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರು ಕುವೆಂಪು ಅವರು ಕಥನ ಕಾವ್ಯ `ನಾಗಿ~ ಬೀದಿ ನಾಟಕವನ್ನು ಪ್ರದರ್ಶಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಅವರ ಕಥೆ ಆಧಾರಿತ `ಮೌನಿ~ ನಾಟಕವನ್ನು ಬೆಂಗಳೂರಿನ ಪ್ರಯೋಗರಂಗದವರು ಕಲಾಮಂದಿರದಲ್ಲಿ ಪ್ರದರ್ಶಿಸಿದರು. ಕೆ.ವಿ.ನಾಗರಾಜಮೂರ್ತಿ ನಾಟಕವನ್ನು ನಿರ್ದೇಶಿಸಿದರು.

ಭೂಮಿಗೀತದಲ್ಲಿ ಕಾಶ್ಮೀರಿ ನಾಟಕ `ಸಾದಾ~ ಪ್ರದರ್ಶನಗೊಂಡಿತು. ಕಾಶ್ಮೀರದ ಅಮೆಚೂರ್ ಥಿಯೇಟರ್ ಗ್ರೂಪ್ ಕಲಾವಿದರು ಅಭಿನಯಿಸಿದರು. ರಾಮನ್ ರೈ ಕಥೆಯನ್ನು ಮುಸ್ತಾಖ್ ರಂಗರೂಪಕ್ಕೆ ತಂದು ನಿರ್ದೇಶಿಸಿದರು.
ವನರಂಗದಲ್ಲಿ ಬೆಂಗಳೂರಿನ ಧಾತು ತಂಡದವರು `ಭಕ್ತಪ್ರಹ್ಲಾದ~ ಗೊಂಬೆಯಾಟವನ್ನು ಪ್ರದರ್ಶಿಸಿದರು. ನಾಟಕಗಳು ಮತ್ತು ಬೊಂಬೆಯಾಟಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT