ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಿಸಲು ಬರುತ್ತಿದ್ದಾರೆ ಜಾನಿ ಲಿವರ್ ಪುತ್ರಿ

ಪಂಚರಂಗಿ
Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

`ಕಾಮಿಡಿ ಸರ್ಕಸ್ ಕೆ ಅಜೂಬೆ' ಎಂಬ ಕಾರ್ಯಕ್ರಮದ ಮೂಲಕ ತಂದೆ ಜಾನಿ ಲಿವರ್ ಅವರು ನಡೆದು ಬಂದ ಹಾಸ್ಯದ ಹಾದಿಯಲ್ಲೇ ಮಗಳು ಜೆಮೀ ಜೆ. ಅವರು ಹೆಜ್ಜೆ ಇಡುತ್ತಿದ್ದಾರೆ. ಸೋನಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಜುಲೈ 19ರಂದು ಜೆಮೀ ಜೆ. ಅವರ ಹಾಸ್ಯ ಕಾರ್ಯಕ್ರಮ ಪ್ರಸಾರವಾಗಲಿದೆ.

ತಂದೆಯ ಖ್ಯಾತಿ ಹಾಗೂ ಪ್ರಭಾವವನ್ನು ಎಲ್ಲಿಯೂ ಬಳಸದೆ ಸಾಮಾನ್ಯ ಸ್ಪರ್ಧಿಯಂತೆ ಆಡಿಷನ್ ಸಾಲಿನಲ್ಲಿ ನಿಂತು ಅವಕಾಶ ಗಿಟ್ಟಿಸಿಕೊಂಡ 25ರ ಹರೆಯದ ಜೆಮೀ ಅವರೇ ಹೇಳುವಂತೆ, `ನನ್ನ ಆಡಿಷನ್ ತೆಗೆದುಕೊಂಡ ಆಯ್ಕೆ ಸಮಿತಿಯು ನನ್ನ ಪ್ರತಿಭೆಯನ್ನು ಬಹುವಾಗಿ ಮೆಚ್ಚಿದರು. ಮೂರು ದಿನಗಳ ಕಾರ್ಯಾಗಾರಕ್ಕೆ ಬರುವಂತೆ ಸೂಚಿಸಿದರು.

ಈ ಮೂರು ದಿನಗಳಲ್ಲಿ ನನ್ನಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆ ದೊರಕಿತು. ಅಂತಿಮವಾಗಿ ನನ್ನನ್ನು ಅವರು ತೆರೆಯ ಮೇಲೆ ತರಲು ಒಪ್ಪಿಕೊಂಡರು. ಈ ಆಯ್ಕೆಗೂ ನನ್ನ ತಂದೆ ಜಾನಿ ಲಿವರ್ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು.

ಭಾರ್ತಿ ಸಿಂಗ್ ಹಾಗೂ ಕಪಿಲ್ ಶರ್ಮ ಅವರೊಂದಿಗೆ ಜೆಮೀ ಕೂಡಾ ಈ ಹಾಸ್ಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ತನ್ನ ಬದುಕಿನಲ್ಲಿ ಇದೊಂದು ದೊಡ್ಡ ಅವಕಾಶ ಎಂದು ಬಣ್ಣಿಸಿರುವ ಜೆಮೀ ಅವರು ಹಾಸ್ಯ ಲೋಕದ ಮೇರು ಪ್ರತಿಭೆಗಳೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ದೊಡ್ಡ ಸೌಭಾಗ್ಯ ಎಂದಿದ್ದಾರೆ.

ಮಾರುಕಟ್ಟೆ ಹಾಗೂ ಸಂವಹನ ವಿಷಯದಲ್ಲಿ ಲಂಡನ್‌ನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜೆಮೀ ಅವರು ಕಾಲೇಜು ದಿನಗಳಲ್ಲಿ ಸಾಕಷ್ಟು ನಾಟಕಗಳನ್ನು ಆಡಿದ್ದಾರಂತೆ. ಇವರು ವೇದಿಕೆ ಇರುವಷ್ಟು ಕ್ಷಣವೂ ಸಭಿಕರ ಮೊಗದಲ್ಲಿ ನಗು ಉಕ್ಕುತ್ತಿದ್ದುದನ್ನು ಸ್ವತಃ ಗಮನಿಸಿದ ಜೆಮೀ, ಓದಿದ ವಿಷಯದಲ್ಲಿ ಕೆಲಸ ಹುಡುಕುವ ಬದಲು ನನಗೆ ಸಂತೋಷ ಸಿಗುವ ಕೆಲಸ ಮಾಡುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ.

ಕೇವಲ ಹಾಸ್ಯ ಮಾತ್ರವಲ್ಲದ ಹಿಂದಿ ಚಿತ್ರರಂಗದ ಶ್ರೀದೇವಿ, ದೀಪಿಕಾ ಪಡುಕೋಣೆ ಅವರಂತ ಖ್ಯಾತ ನಾಮರ ಧ್ವನಿಯನ್ನೂ ನಕಲು ಮಾಡುವ ಸಾಮರ್ಥ್ಯ ಜೆಮೀ ಅವರದ್ದು. ಜತೆಗೆ ನಟರ ಧ್ವನಿ ಅನುಕರಣೆಯ ಪ್ರಯತ್ನವನ್ನೂ ನಡೆಸಿದ್ದಾರೆ. ಇದರ ಜತೆಯಲ್ಲಿ ಗಾಯಕರಾದ ಕೈಲಾಶ್ ಖೇರ್, ಬಪ್ಪಿ ಲಹಿರಿ ಅವರಂತೆಯೇ ಹಾಡುತ್ತಾರಂತೆ. ಇವೆಲ್ಲವಕ್ಕೂ ತಂದೆ ಜಾನಿ ಅವರ ಮಾರ್ಗದರ್ಶನವೇ ಕಾರಣ ಎಂದಿದ್ದಾರೆ.

ವೇದಿಕೆಯಲ್ಲಿ ನಮ್ಮ ಹಾವಭಾವ ಹೇಗಿರಬೇಕು? ಚುರುಕಾಗಿರುವುದು ಹೇಗೆ? ಜತೆಗೆ ನನ್ನ ಸಾಮರ್ಥ್ಯವನ್ನು ಗುರುತಿಸುವುದರೊಂದಿಗೆ ದೌರ್ಬಲ್ಯಗಳನ್ನು ಎತ್ತಿತೋರಿಸಿ ಅದನ್ನು ತಿದ್ದುಕೊಳ್ಳಲು ಸಹಕರಿಸಿದ್ದನ್ನು ಹೇಳಲು ಅವರು ಮರೆತಿಲ್ಲ.

ಅಂತರರಷ್ಟ್ರೀಯ ಮಟ್ಟದಲ್ಲಿ ಭಾರೀ ಜನಮನ್ನಣೆ ಗಳಿಸಿ ಒಪ್ರಾ ವಿನ್‌ಫ್ರೇ ಹಾಗೂ ಎಲೆನ್ ಡಿಜೆನೆರಸ್ ಅವರು ನಡೆಸಿಕೊಡುವ ಕಾರ್ಯಕ್ರಮಗಳಿಂದ ಪ್ರೇರೇಪಣೆಗೊಂಡ ಜೆಮೀ ಅವರು ಮುಂದೊಂದು ದಿನ ಅಂಥದ್ದೊಂದು ಸಂಪೂರ್ಣ ಹಾಸ್ಯಭರಿತ ಕಾರ್ಯಕ್ರಮ ನಡೆಸಿಕೊಡುವುದರ ಆ ಮೂಲಕ ಜನರಿಗೊಂದು ಸಂದೇಶ ನೀಡುವ ಇರಾದೆಯನ್ನು ಹೊಂದಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT