ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವಿನಲ್ಲಿ ಪುಟ್ಟ ಒಪ್ಪಿಗೆ ಸಾಕು.... (ಒಲವಿನ ದಿನದ ವಿಶೇಷ)

Last Updated 14 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮತ್ತೇನೂ ಬೇಡ, ಏನನ್ನೂ ಬಯಸುವುದಿಲ್ಲ, ಒಂದು ಸಾಲಿನ ಮಾತೂ ಬೇಡ, ಮುಗುಳ್ನಗೆ ಯೊಂದಿಗೆ ಒಮ್ಮೆ ನೀನು ಒಪ್ಪಿಬಿಡು...

ಕಾಲೇಜಿಗೆ ಬರುವ ಕೆಲವರಿಗೆ, ಉದ್ಯಾನದಲ್ಲಿ ಕಾಯುತ್ತಿರುವವರಿಗೆ, ಬಸ್‌ಸ್ಟಾಪ್‌ನಲ್ಲಿ ಚಡಿ ಪಡಿಸುತ್ತಿ ರುವವರಿಗೆ...ಮನದಾಳದ ಈ ಮಾತನ್ನು ಹೇಳಲು ಒಂದು ಕ್ಷಣ ಸಿಕ್ಕರೆ ಸಾಕು. 

 ಮಾತಿಗೆ ತಕ್ಕಂತೆ ಬೇಡಿಕೆ ಈಡೇರಿ ದರಂತೂ ಜಗತ್ತನೇ ಗೆದ್ದಷ್ಟು ಸಂಭ್ರಮ. ವಾರಾಂತ್ಯ ಅಥವಾ ತಿಂಗಳಾಂತ್ಯದಲ್ಲಿ ಪರೀಕ್ಷೆಯಿದ್ದರೂ ಚಿಂತೆಯಿಲ್ಲ, ಕಾಲೇ ಜಿನ ಯುವಕ ಸಂಭ್ರಮಿಸುತ್ತಾನೆ. ಇಡೀ ದಿನ ಮನೆಯಲ್ಲಿ ಬಯ್ಯಿಸಿಕೊಂಡು ಖಿನ್ನತೆ ಆವರಿಸಿಕೊಂಡಿದ್ದರೂ ಯುವ ತಿಯ ಸಂತಸಕ್ಕೆ ಪಾರವೇ ಇರುವುದಿಲ್ಲ.

ನೌಕರಿ ಸಂದರ್ಶನಕ್ಕೆ ಬಸ್‌ಗಾಗಿ ಕಾಯುತ್ತಿರುವ ಆತನಂತೂ ಕೆಲಸವನ್ನು ಗಿಟ್ಟಿಸಿಕೊಂಡಂತೆ ಪುಳಕಿತನಾಗುತ್ತಾನೆ. ಮಂಗಳವಾರದ 24 ಗಂಟೆಯ ಪ್ರತಿ ಯೊಂದು ನಿಮಿಷ, ಪ್ರತಿಯೊಂದು ಕ್ಷಣ ಯುವಮನಸ್ಸು ಇಂತಹ ಅಪೂರ್ವ ಘಳಿಗೆ ಅನುಭವಿಸದೇ ಇರುವುದಿಲ್ಲ. ಕಾರಣ: ಫೆಬ್ರುವರಿ 14. ಒಲವಿನ ದಿನವೆಂದೇ ಆಚರಿಸುವ ಯುವ ಮನಸ್ಸುಗಳು ಈ ಒಂದು ದಿನದ ಆಗಮನಕ್ಕಾಗಿ ವರ್ಷಪೂರ್ತಿ ಕಾಯುತ್ತಾರೆ.

ಚಂದ್ರ ತರುತ್ತೇನೆಂದು ನಿನ್ನ ನಂಬಿಸಲ್ಲ, ಕಲ್ಪನೆಯ ಸಪ್ತ ಸಮುದ್ರ ದಾಚೆ ನಿನ್ನ ಕರೆದೊಯ್ಯಲ್ಲ,ಆದರೆ ಒಂದು ಮಾತಂತೂ ಸತ್ಯ, ನಿನ್ನ ಕಣ್ಣಂಚಿನಿಂದ ಹನಿ ನೀರು ಬರಲು ಬಿಡಲ್ಲ...

ಪ್ರೀತಿಯ ಕಾಳಜಿ ಮತ್ತು ಆಪ್ತತೆಯೇ ಅಂಥದ್ದು. ಸುಳ್ಳು ಹೇಳಿ ಮನಸ್ಸು ನೋಯಿಸಲು ಇಚ್ಛಿ ಸುವುದಿಲ್ಲ. ಹುಸಿ ಕಲ್ಪನಾಲೋಕದಲ್ಲಿ ವಿಹರಿಸಲು ಬಯ ಸುವುದಿಲ್ಲ. ಕ್ಷಣಕ್ಷಣವೂ ಅನಿರೀಕ್ಷಿತ ತಿರುವು ಪಡೆದುಕೊಳ್ಳುವ ವಾಸ್ತವ ಜಗತ್ತಿನಲ್ಲೇ ಉಳಿದುಕೊಂಡು ಎಲ್ಲವನ್ನೂ ದೃಢವಾಗಿ ಎದುರಿಸಲು ಪ್ರೀತಿಯು ಶಕ್ತಿ ತುಂಬುತ್ತದೆ. ಮಾನಸಿಕ ವಾಗಿ ದೃಢಗೊಳಿಸುವ ಪ್ರೀತಿ ಯು ಎಲ್ಲ ರೀತಿಯ ಸಂಕಟ-ಸಮಸ್ಯೆಗಳನ್ನು ತೊಡೆ ದುಹಾಕಿ ಮುನ್ನಡೆಯಲು ಪ್ರೇರೇಪಿ ಸುತ್ತದೆ. ಇಂತಹ ಸಂದರ್ಭದಲ್ಲಿ ನೋವು ಕಣ್ಮರೆಯಾಗಿ ನಲಿವು ಅನಾ ವರಣಗೊಳ್ಳುತ್ತದೆ. ಎಷ್ಟೇ ಕಷ್ಟ ವಾದರೂ ಚಿಂತೆಯಿಲ್ಲ, ತನ್ನೊಂದಿಗೆ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಕಳೆಯಲು ಬಯಸುವ ಆಪ್ತಸಂಗತಿಗೆ ಮಾತ್ರ ನೋವುಂಟು ಮಾಡಲು ಬಿಡು ವುದಿಲ್ಲ. ಕಣ್ಣಂಚಿನಿಂದ ಒಂದು ಹನಿ ನೀರು ಬಿದ್ದರೆ, ಪ್ರೀತಿಯ ವಿಶ್ವಾಸ ಒಂದು ಕ್ಷಣ ಹುಸಿಯಾದಂತೆ. ಇದಕ್ಕೆಂದೇ ಕಣ್ಣಂಚಿನಲ್ಲಿ ನೀರೂ ಸಹ ಕಾಣಿಸಿಗದಂತೆ ಒಲವು ಗಾಢವಾಗುತ್ತದೆ.

ಬಂಡೆಗಲ್ಲು ಮೇಲೆ ಬರೆದು ಹೆಸರು, ಸಮುದ್ರದ ಮರಳು ಮೂಡಿಸಿ ಅಕ್ಷರಗಳು, ಜಗತ್ತಿಗೆ ಸಾರಬೇಕಿಲ್ಲ ನಮ್ಮ ಪ್ರೀತಿ, ನಿನಗೆ-ನನಗೆ, ನನಗೆ- ನಿನಗೆ ಗೊತ್ತಿದ್ದರೆ ಸಾಕು...

ಪ್ರೀತಿ ಎಂದಿಗೂ ಪ್ರಚಾರಕ್ಕಾಗಿ ಹಾತೊರೆಯುವುದಿಲ್ಲ. ಕೂಗಿ ಕೂಗಿ ಹೇಳುವ ಅಗತ್ಯವೂ ಇರುವುದಿಲ್ಲ. ಒಂದೆರಡು ಹುಚ್ಚುಮನಸ್ಸುಗಳು ಬಂಡೆ ಗಲ್ಲುಗಳ ಮೇಲೆ ಹೆಸರು ಬರೆಯ ಬಹುದು. ಸಮುದ್ರದ ಮರಳಿನ ಮೇಲೆ ಬರೆದು ಪ್ರೀತಿ-ಪ್ರೇಮ ಶಾಶ್ವತ ಎಂದು ಹೇಳಬಹುದು. ಆದರೆ ಆ ಪ್ರೀತಿಯು ಕೋಟ್ಯಂತರ ಜನರು ಇರುವ ಜಗತ್ತಿಗೆ ಬೇಡ, ಇಬ್ಬರು ಮಾತ್ರವೇ ಇರುವ ಜಗತ್ತಿಗೆ ತಿಳಿಸಿದರೆ ಸಾಕು ಎಂಬ ಹಂಬಲ ಹಲವರದ್ದು.

ಇದರಿಂದಲೇ ಪ್ರೀತಿ ಎಲ್ಲಿ, ಯಾವಾಗ, ಹೇಗೆ ಚಿಗುರುತ್ತದೆ ಎಂಬುದು ಗೊತ್ತಾ ಗುವುದಿಲ್ಲ. ಒಂದು ವೇಳೆ ಚಿಗುರಿದರೂ ಎಲ್ಲಿ ನೆಲೆಸಿದೆ ಎಂಬುದರ ಬಗ್ಗೆ ಸುಳಿವು ಕೂಡ ಸಿಗುವುದಿಲ್ಲ.

ನಿನಗೆ ನಾನು-ನನಗೆ ನೀನು, ಬೇರೆಯವರೆಗೆ ಯಾಕೆ ತಿಳಿಸಬೇಕು. ಮನಸ್ಸಿನ ನಡುವಿನ ಸಂವಾದ, ಸಲ್ಲಾಪ, ಆಲಾಪ, ವಿಲಾಪ ಇಬ್ಬರಿಗೆ ತಿಳಿದರೆ ಸಾಕು, ಬೇರೆಯವರ ಪಾಲಿಗೆಲ್ಲ ಅದು ಗೋಜು.  ಪ್ರೀತಿಯು ಮೀನಿನ ಹೆಜ್ಜೆ ಯಂತೆ ಇರಬೇಕು, ಬೇರೆಯವರಿಗೆ ಹೆಜ್ಜೆಯ ಗುರುತು ಸಹ ಸಿಗಬಾರದು.

ಹೊಗಳುವುದು ನನಗೆ ತಿಳಿಯದು,
ಸುಳ್ಳು ಹೇಳಲು ನನಗೆ ಬಾರದು,
ನನ್ನ ಮಾತು ನೀರಿನಂತೆ ನಿರ್ಮಲ,
ನಿಶ್ಚಲ ಪ್ರೀತಿ ಅರಿತಿದ್ದು ನಿನ್ನಿಂದ...


ಪ್ರೀತಿಗೆ ಇದೆ ನೂರಾರು ವ್ಯಖ್ಯಾನ, ಸಾವಿರಾರು ಅರ್ಥ. ಪ್ರೀತಿ ಎಂಬುದು ಕೃತಕ ಎಂದು ವಿಜ್ಞಾನಿಗಳು ಪ್ರಯೋಗ ಗಳ ಮೂಲಕ ಸಾರಿ ಸಾರಿ ಹೇಳಿದರೆ, ಪ್ರೀತಿ ಸಹಜ-ಸುಂದರ ಎಂದು ಸಾಮಾ ಜಿಕ ತಜ್ಞರು ಅನಿಸಿಕೆ ವ್ಯಕ್ತ ಪಡಿಸುತ್ತಾರೆ.

ತತ್ವಜ್ಞಾನಿಗಳು, ಋಷಿಮುನಿ ಹೇಳುವ ಪ್ರೀತಿಯ ಆಧ್ಯಾತ್ಮವೇ ಬೇರೆ. ಪ್ರೀತಿಯ ಆಸರೆಯಲ್ಲಿ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂದು ಆಧುನಿಕ ಗುರುಗಳು ಬುದ್ಧಿಮಾತು ಹೇಳುತ್ತಾರೆ.  ಕುಟುಂಬ ಸದಸ್ಯರ ಪ್ರೀತಿ-ಮಮತೆ ಅನುಭಾವದಿಂದ ಬೆಳೆದ ನನಗೆ ಹೊಸ ಪ್ರೀತಿಯ ಪರಿಭಾಷೆ ತಿಳಿಸಿಕೊಟ್ಟಿದ್ದು ನೀನು. ನಿಶಕಲ್ಮಶ, ನಿರಾತಂಕ, ನಿರ್ಭಯ, ನಿರಂತರ ಪ್ರೀತಿಯ ಪಾಠ ವನ್ನು ಹೇಳಿಕೊಟ್ಟಿದ್ದು ನೀನು. ಅದ ಕ್ಕೆಂದೇ ಪ್ರೀತಿಯ ಅರ್ಥ ತಿಳಿಯಲು ನಾನು ಪದಕೋಶದ ಮೊರೆ ಹೋಗು ವುದಿಲ್ಲ. ಬೃಹದಾಕಾರದ ಪುಸ್ತಕಗಳನ್ನು ಹುಡುಕಿ ಹುಡುಕಿ ಓದುವುದಿಲ್ಲ. ನಿನ್ನ ಕ್ಷಣಮಾತ್ರದ ಉಪಸ್ಥಿತಿಯೇ ಸಾಕು, ನನ್ನ ಎದುರು ಪ್ರೀತಿ ಅರಳಿದಂತೆ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT