ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವುದೋ ಅಳುವುದೋ...

ಚಿತ್ರ : ಛತ್ರಿಗಳು ಸಾರ್ ಛತ್ರಿಗಳು
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕರು : ಪವನ್ ಕಾರ್ತೀಕ್, ನಿರ್ದೇಶನ : ಎಸ್. ನಾರಾಯಣ್, ತಾರಾಗಣ : ಎಸ್. ನಾರಾಯಣ್, ರಮೇಶ್, ಮೋಹನ್, ಉಮಾಶ್ರೀ, ಶಿವರಾಂ, ಸಾಧು ಕೋಕಿಲ, ಸನಾತನಿ, ಮಾನಸಿ, ಸುಷ್ಮಾ ರಾಜ್, ಇತರರು.

`ಸಾಮೂಹಿಕ ಅತ್ಯಾಚಾರ'- ಇತ್ತೀಚೆಗೆ ಪತ್ರಿಕೆಗಳಲ್ಲಿ ಸಾಮಾನ್ಯ ಎನ್ನುವಂತಾಗಿರುವ ಶೀರ್ಷಿಕೆ. `ಛತ್ರಿಗಳು ಸಾರ್ ಛತ್ರಿಗಳು' ಸಿನಿಮಾಕ್ಕೂ ಇದು ಹೊಂದುವ ಶೀರ್ಷಿಕೆ. ಇಲ್ಲಿ ತೆರೆಯ ಮೇಲೆ ಅತ್ಯಾಚಾರ ನಡೆಯುವುದಿಲ್ಲ. ಸಿನಿಮಾ ನೋಡುವ ಸಹೃದಯರಿಗೇ ತಾವು ಶೋಷಣೆಗೆ ಒಳಗಾಗುತ್ತಿರುವ ಅನುಭವ ಆಗುತ್ತದೆ. ಕಲಾವಿದರು, ತಂತ್ರಜ್ಞರು ಒಟ್ಟಿಗೆ ಮುಗಿಬಿದ್ದರೆ ಅಮಾಯಕ ಪ್ರೇಕ್ಷಕರ ಗತಿಯಾದರೂ ಏನು? ಸಿನಿಮಾ ನೋಡಿದ ಪ್ರೇಕ್ಷಕರ ಮೊಗದ ಮೇಲೆ ನೋವಿನ, ವಿಷಾದದ ನಗು ಕಾಣಿಸುತ್ತದೆ. ಈ ಮೂಲಕ, `ಹಾಸ್ಯ ಚಿತ್ರ' ಎನ್ನುವ `ಛತ್ರಿಗಳು' ಸಿನಿಮಾದ ವಿಶೇಷಣ ಅರ್ಥಪೂರ್ಣ ಎನ್ನಿಸುತ್ತದೆ.

ಸಿನಿಮಾ ಸನ್ಯಾಸ ಕೈಬಿಟ್ಟ ನಂತರ ಎಸ್. ನಾರಾಯಣ್ ನಟಿಸಿ, ನಿರ್ದೇಶಿಸಿರುವ ಮೊದಲ ಚಿತ್ರವಿದು. ತಮ್ಮ ಪೂರ್ವಾಶ್ರಮಕ್ಕೆ ಕಾರಣರಾದ ಪ್ರೇಕ್ಷಕರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಅವರು `ಛತ್ರಿಗಳು' ಸಿನಿಮಾ ರೂಪಿಸಿದ್ದಾರೆ. `ನೋಡಲಾರೆ' ಎಂದು ಪ್ರೇಕ್ಷಕ ಕಣ್ಣು ಮುಚ್ಚಿಕೊಳ್ಳುವ ಅವಕಾಶವೂ ಇಲ್ಲಿಲ್ಲ. ಚಿತ್ರದಲ್ಲಿ ಮಾತುಗಳು ಮತ್ತು ಸಂಗೀತದ ಸದ್ದೇ ರತಿ ಕ್ರಿಯೆಯ ಅನುಭವವನ್ನು ನೋಡುಗನಿಗೆ ದಾಟಿಸುವಷ್ಟು ಪರಿಣಾಮಕಾರಿಯಾಗಿವೆ. ಇದೆಲ್ಲವನ್ನೂ ಹಾಸ್ಯದ ಹೆಸರಿನಲ್ಲಿ ಪ್ರೇಕ್ಷಕ ಒಪ್ಪಿಕೊಳ್ಳಬೇಕು!

`ಛತ್ರಿಗಳು' ಮೂವರು ಮೈಗಳ್ಳರ ಕಥೆ. ಸಂಪಾದನೆ ಇಲ್ಲದೆ ಹೋದರೂ, ಹುಡುಗಿಯರ ಕಾರಣದಿಂದಾಗಿ ದುಡ್ಡು ಸಂಪಾದಿಸಲು ಮುಂದಾಗುವ ತ್ರಿವಳಿಗಳ ಮಂಗಾಟವೇ ಚಿತ್ರದ ಕಥೆ. ಈ ಮಂಗಾಟ ಕೆಲವೊಮ್ಮೆ ಬಾಲಿಶವಾಗಿದೆ, ಹಲವು ಸಂದರ್ಭಗಳಲ್ಲಿ ಕೀಳು ಅಭಿರುಚಿಯದಾಗಿದೆ.

ನಾರಾಯಣ್, ರಮೇಶ್, ಮೋಹನ್ ಹಾಗೂ ಉಮಾಶ್ರೀ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಇಂಥ ಪಾತ್ರಗಳಲ್ಲಿ ನಟಿಸುವುದರಲ್ಲಿ ತಮ್ಮನ್ನು ಮೀರಿಸುವವರಿಲ್ಲ ಎನ್ನುವಂತಿದೆ ಅವರ ನಟನೆ. ಹೆಂಡತಿಯನ್ನು ತೃಪ್ತಿ ಪಡಿಸಲಾಗದ, ಆದರೆ ಹೆಂಡತಿಯ ಬಗ್ಗೆ ಅನುಮಾನ ಹೊಂದಿದ ಗಂಡನ ಪಾತ್ರದಲ್ಲಿ ಶಿವರಾಂ ನಟಿಸಿದ್ದಾರೆ. ಈ ಪಾತ್ರವನ್ನು ಅವರ ವೃತ್ತಿ ಜೀವನದ ಸ್ಮರಣೀಯ ಪಾತ್ರಗಳಲ್ಲೊಂದು ಎನ್ನಬಹುದೇನೊ? ಇದ್ದುದರಲ್ಲಿ ಸಾಧು ಕೋಕಿಲ ಅವರೇ ವಾಸಿ. ಅವರದು ಏನಿದ್ದರೂ ನೇರಾನೇರ.

ಕಥೆಗಾರರು ಮತ್ತು ನಿರ್ದೇಶಕರ ವಾಂಛೆಗಳಿಗೆ ಅನುಗುಣವಾಗಿ ಜಗದೀಶ್ ವಾಲಿ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಕೆಲಸ ಮಾಡಿವೆ. ಉಳಿದಂತೆ ತಾಂತ್ರಿಕ ಅಂಶಗಳ ಬಗ್ಗೆ ಉಲ್ಲೇಖಿಸಬಹುದಾದ ವಿಶೇಷವೇನೂ ಚಿತ್ರದಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT