ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಗುಳಿಗೆಗಳು...

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬ್ಲಾಗಿಲನು ತೆರೆದು...

`ಹಹಹಹ್ಹ, ಚೆನ್ನಾಗಿ ನಕ್ಕು ಬಿಡಿ'. ಹೀಗೆ ನಗುವಿನ ಕರೆ ನೀಡುತ್ತಲೇ ಮುಖ ತೋರಿಸುವ ಬ್ಲಾಗಿನ ಹೆಸರು- `ಹಾಸ್ಯ'.
ಏನಿದು ಹಾಸ್ಯ? ಬ್ಲಾಗಿಗ ಕೋಮಲ್‌ಕುಮಾರ್ ಅವರ ಮಾತುಗಳ ಸಾರಾಂಶವನ್ನು ಹೀಗೆ ಹಿಡಿದಿಡಬಹುದು: `ಒಂದು ಹಳ್ಳಿ. ಸೋಮಾರಿಗಳ ಒಂದು ಟೀಮ್. ಸಿದ್ದ, ಸೀನ, ಯಂಕ, ನಾಗ, ನಿಂಗ, ಸುಬ್ಬ... ಇವರಿಗೆ ರಾಜ್ಯದ, ದೇಶದ ರಾಜಕೀಯ ಬೇಕು. ಮನೆಗಳ ವಿಷಯ ಬೇಕು. ತಾವೇ ಗ್ರೇಟ್ ಎನ್ನುವಂತಹ ವ್ಯಕ್ತಿತ್ವ ಇವರದು. ಇವರ ತರಲೆಗಳೇ ಹಾಸ್ಯದ ಹೂರಣ'.

ಹಾಸ್ಯದ ಸ್ವರೂಪ ವಿವರಣೆಗೆ ನಿಲುಕುವುದು ಕಷ್ಟ. ಒಂದು ನಮೂನೆಯ ಮೂಲಕವೇ ಅದನ್ನು ಪರಿಚಯಿಸಬೇಕು. ಪ್ರಸ್ತುತ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ `ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ಆಧರಿಸಿದ, `ಕನ್ನಡದ ಕೋಟ್ಯಾಧಿಪತಿ ವಿಥ್ ಪುನೀತ್ ರಾಜ್' ಬರಹ ನೋಡಿ:

“ಏನ್ರಲಾ ಇಸ್ಯಾ ಅಂದ ಗೌಡಪ್ಪ. `ನೋಡ್ರೀ ಗೌಡ್ರೆ, ಯಾವ ಕೆಲಸಾನು ಮಾಡದೆ, ಅಂಗೇ ಒಂದು ಕೋಟಿ ರೂಪಾಯಿ ದುಡಿಬೋದು ಕಣ್ರೀ' ಅಂದ ಸುಬ್ಬ. `ಪ್ಲೇ ವಿನ್ನಾ', `ಅದು ಮುಚ್ಚುಹೋಗೈತೆ', `ಮೈಸೂರು ಲಕ್ಸ್ಮಿ ಲಾಟರಿನಾ', `ಅಲ್ಲಾರೀ', `ಮತ್ತೆ ರಾಜಕೀಯನಾ' ಅಂದ ಗೌಡಪ್ಪ. `ಅಲ್ಲಾರೀ ಕನ್ನಡದ ಕೋಟ್ಯಾಧಿಪತಿ ಅಂತಾ ಒಂದು ಕಾರ್ಯಕ್ರಮ ಐತೆ. ಅದ್ರಾಗೆ ಅವರು ಕೇಳೋ 15 ಪ್ರಸ್ನೆಗೆ ಉತ್ತರ ಹೇಳಿದರೆ 1 ಕೋಟಿ ಬತ್ತದೆ. ಅಂಗೇ ಟೀವಿಲ್ಲೂ ಫೇಮಸ್ ಆಗಬೋದು' ಅಂದ ತಂತಿ ಪಕಡು ಸೀತು. ಹೌದೇನ್ರಲಾ ಅಂದು ಹೋದೋನು, ಬಡ್ಡೆಐದ ಯಾವಾಗ ನೋಡಿದ್ರೂ ಅದೇ ಚಾನಲ್ ಹಾಕಿರುತ್ತಿದ್ದ. ಅವನು ಹೆಂಡ್ರು ಧಾರವಾಹಿ ನೋಡಬೇಕು ಅಂದ್ರೆ ಪಕ್ಕದ ಮನೆ ರಾಜಮ್ಮನ ಮನೆಗೆ ಹೋಗೋದು. ಪಕ್ಕದ ಮನೆ ರಾಜಮ್ಮ ಮುಂಡೇವಕ್ಕೆ ದರಿದ್ರ ಅನ್ನೋದು. ಕಡೆಗೂ ಗೌಡಪ್ಪ ಸೆಲೆಕ್ಟ್ ಆದ. `ರಾಜ್‌ಕುಮಾರ್ ನಟಿಸಿರೋ ಮೂರು ಚಿತ್ರಗಳನ್ನು ಹೇಳಿ' ಅಂತಾ ಪ್ರಸ್ನೆ ಕೇಳಿದ್ರಂತೆ. ಅದಕ್ಕೆ ಇವನು ಜೋಗಿ, ಅಪ್ಪು, ಮೈಲಾರಿ ಅಂತಾ ಕಳಿಸಿದ್ದ. ಮಗಂದು ಕಂಪ್ಯೂಟರ್ ಮಿಸ್ಟೇಕ್ ಆಗಿ ಸೆಲೆಕ್ಟ್ ಆಗಿದ್ದ.

ಸರಿ ಎಲ್ಲಾ ಗೌಡಪ್ಪನ ಜೊತೆ ಕಾರ್ಯಕ್ರಮಕ್ಕೆ ಹೋದ್ವಿ.
ಪುನೀತ್ : ಗೌಡ್ರೆ, ನೀವು ಹಾಟ್ ಸೀಟಲ್ಲಿ ಇದೀರಾ, ನಿಮಗೆ ಹೇಗೆ ಅನ್ಸುತ್ತೆ?
ಗೌಡ : ಮತ್ತೆ ತಣ್ಣಗೈತೆ.

ಪುನೀತ್ : ಅಯ್ಯೋ ಲೇ ನಿನ್ನ ಮಕ್ಕೆ, ಇಲ್ಲಿ ಎ.ಸಿ ಐತೆ. ಹಂಗಾಗಿ ತಣ್ಣಗೆ ಐತೆ. ಕೆಳಗೆ ಕೆಂಡ ಹಾಕಬೇಕ? ಕಂಪ್ಯೂಟರ್ ನೋಡಲೇ...
ಈಗ ನಿಮಗೆ ಮೊದಲನೇ ಪ್ರಸ್ನೆ. ಬೆಳಗ್ಗೆ ಕೆರೆತಾವ ಹೋಗಬೇಕಾದ್ರೆ ಚೊಂಬನ್ನ ಯಾವ ಕೈಯಲ್ಲಿ ಹಿಡಿದುಕೊಂಡಿರುತ್ತೀರಿ.
ಗೌಡಪ್ಪ : ಇದೊಳ್ಳೆ ಕತೆ ಆಯ್ತಲ್ಲಪ್ಪಾ, ಸಾ ಬಲಗೈನಾಗೆ ಬೀಡಿ, ಎಡಗೈನಾಗೆ ಚೊಂಬು ಸಾ. ಆದ್ರೂ ಡೌಟ್ ಐತೆ. ಆಡಿಯನ್ಸ್ ಪೋಲ್ ಸಾ.
ಪುನೀತ್ : ಓಕೆ ಆಡಿಯನ್ಸ್ ಸ್ಟಾರ್ಟ್
ಯಾರೂ ಏನೂ ಒತ್ತೇ ಇರಲಿಲ್ಲ. ಯಾಕೆ? `ಈ ನನ್ಮಗ ಕೆರೆತಾವ ಹೋಗೋದನ್ನ ನಾವೇನಾದ್ರೂ ನೋಡಿದ್ವಾ' ಅಂದ್ರು.
ಗೌಡಪ್ಪ : ಹೋಗ್ಲಿ ಬುಡಿ, ಸಾ ಎಡಗೈನಾಗೆ.
ಪುನೀತ್ : ಓಹ್, ರೈಟ್ ಆನ್ಸರ್. ಒಂದು ಸಾವಿರ ಗೆದ್ದಿದೀರಾ. ಈಗ ಮತ್ತೊಂದು ಪ್ರಶ್ನೆ- ನಿಮ್ಮೂರು ಮಹಿಳಾ ಅಧ್ಯಕ್ಸೆ ಬಸಮ್ಮ, ನಿಮಗೆ ಯಾವಾಗ ಐ ಲವ್ ಯು ಅಂದಿದ್ದು?
ಗೌಡಪ್ಪ : ಸಾ ನಮ್ಮ ಸೀನಪ್ಪನ ಹೆಣದ ಜೊತೆ ಮಸಾನಕ್ಕೆ ಹೋಗಬೇಕಾದ್ರೆ ಹೇಳಿದ್ದು ಸಾ...
ಪುನೀತ್ : ಓಹ್ ರೈಟ್ ಆನ್ಸರ್, ಈಗ 3 ಸಾವಿರಕ್ಕೆ- ನಿಮಗೆ ಎಷ್ಟು ಜನ ಹೆಂಡಂದಿರು?
ಗೌಡಪ್ಪ : ಸಾ ಇದಕ್ಕೆ ಪೋನ್ ಆಫ್ ಫ್ರೆಂಡ್ ಆಪ್ಸನ್ ಬೇಕು.
`ಲೇ, ನನಗೆ ಎಷ್ಟು ಜನಾ ಹೆಂಡ್ರು ಹೇಳೇ ಚನ್ನಿ'.
`ಅಯ್ಯೋ ನಿನ್ನ ಮಕ್ಕೆ ದೋಸೆ ಹುಯ್ಯಾ. ನೀನು ಯಾವ ಬೀದಿಗೆ ಹೋದ್ರೂ ಮಕ್ಕಳು ಅಪ್ಪಾ ಅಂತಾವೆ. ನಂಗೇನ್ಲಾ ಗೊತ್ತು'.
`ಸಾ, ಒಂದು 10 ಜನ'.
ಪುನೀತ್ : ಆರ್ ಯು ಸೂರ್.
ಗೌಡಪ್ಪ : ಹೌದು ಸಾ.
ಪುನೀತ್ : ಓಹ್ ರೈಟ್ ಆನ್ಸರ್. ಈಗ ನಾಲ್ಕನೇ ಪ್ರಸ್ನೆ....

***
ಕೋಮಲ್ ಅವರ ಹಾಸ್ಯದ ವಸ್ತು ವೈವಿಧ್ಯವಾಗಿದೆ. `ಪ್ರಾಣೇಶಾಚಾರ್ಯರ ಮಡಿ', `ವೃತ್ತಿ ವೈಷಮ್ಯ - ಬಕಿಟ್ಟು ಹಿಡಿಯೋದು', `ಚುನಾವಣೆಯಲ್ಲಿ ಗೌಡಪ್ಪ ಚೊಂಬೇಶ್ವರ', `ಗೌಡಪ್ಪ ಇನ್ ಎಲೆಕ್ಷನ್', `ಸಿಂಪಲ್ಲಾಗಿ ಒಂದು ಲವ್ ಸ್ಟೋರಿ', `ಯಾಪಿ ನ್ಯೂ ಇಯರ್ ಟು ಆಲ್', `ಅಯ್ಯೋ... ನಮ್ಮ ಟೂರ್ ಕತೆ ಯಾಕ್ ಕೇಳ್ತೀರಾ...', ಪ್ರೀತಿಗೆ ಕಾಮ ಮುಖ್ಯಾನಾ?', `ರಾಮಾಯಣದ ಪೆಸಲ್'.... ಈ ಶೀರ್ಷಿಕೆಗಳೇ ವಸ್ತು ವೈವಿಧ್ಯವನ್ನು ಸೂಚಿಸುವಂತಿವೆ.

ಬರಹಕ್ಕೆ ಪೂರಕವಾಗಿ ಲೇಖಕರು ರೇಖಾಚಿತ್ರಗಳನ್ನೂ ರಚಿಸಿದ್ದಾರೆ. ಈ ಪುಟ್ಟ ಪುಟ್ಟ ರೇಖಾಕೃತಿಗಳು ಬರಹದ ಖುಷಿಯನ್ನು ಹೆಚ್ಚಿಸುವಂತಿವೆ. ಸಾಹಿತ್ಯದಲ್ಲೂ ಸಮಾಜದಲ್ಲೂ ಅಪರೂಪ ಆಗುತ್ತಿರುವ, ಉತ್ಸವಗಳಿಗಷ್ಟೇ ಹಾಸ್ಯ ಸೀಮಿತ ಆಗುತ್ತಿರುವ ಹೊತ್ತು ಕೋಮಲ್‌ಕುಮಾರ್‌ರ ಬ್ಲಾಗ್ (komal1231.blogspot.in) ಬರಹಗಳು ಹಿತ ಎನ್ನಿಸುತ್ತವೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT