ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನಾ ಮೋಹಿ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ನಟ ಗಣೇಶ್ ವೆಂಕಟರಾಮನ್ ಮೂಲತಃ ತಮಿಳಿನವರು. ಮುಂಬೈನಲ್ಲಿ ಹುಟ್ಟಿ ಬೆಳೆದು, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಮೊದಲ ಸ್ಥಾನ ಪಡೆದು ಸಾಫ್ಟ್‌ವೇರ್ ಎಂಜಿನಿಯರ್ ಆದವರು. ಡಿಂಪಲ್ ಕೆನ್ನೆಯ ಈ ಹುಡುಗನಿಗೆ ಸಿನಿಮಾ ಅಚ್ಚುಮೆಚ್ಚು.

ಎಂಜಿನಿಯರ್ ಕೆಲಸ ಬಿಟ್ಟು ಮಾಡೆಲಿಂಗ್‌ಗೆ ಕಾಲಿಟ್ಟ ಇವರಿಗೆ ಸಿನಿಮಾರಂಗ ಬೇಗ ಅವಕಾಶದ ಕದ ತೆರೆಯಿತು. ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿರುವ ನಟ ಗಣೇಶ್ ವೆಂಕಟರಾಮನ್ `ಚಂದ್ರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಬನ್ನಿ, ಅವರ ಮಾತುಗಳನ್ನು ಆಲಿಸೋಣ...

ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟಿದ್ದು ಹೇಗೆ?
ಕಾಲೇಜಿನಲ್ಲಿದ್ದಾಗಲೇ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ಅನುಭವವಿತ್ತು. ಆದರೆ ವೃತ್ತಿಪರ ರೂಪದರ್ಶಿಯಾಗಿರಲಿಲ್ಲ. ವೃತ್ತಿಗೆ ಸೇರಿ 2 ವರ್ಷವಾಗಿತ್ತು. ಇದೇ ಸಂದರ್ಭದಲ್ಲಿ ಮಿಸ್ಟರ್ ಇಂಡಿಯಾ ಗ್ಲಾಡ್‌ರಾಗ್ಸ್ ಮ್ಯಾನ್ ಹಂಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದೆ. ಮೊದಲ ಬಾರಿ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದಿದ್ದೇ ನನಗೆ ಪ್ರೇರಣೆ.

ನಟನೆಯೆಡೆಗೆ ಮನಸ್ಸು ಮಾಡಿದ್ದು ಯಾವಾಗ?
ಕಾಲೇಜು ದಿನಗಳಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ರೂಪದರ್ಶಿಯಾದ ನಂತರ ನಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆನಿಸಿತು. ಆದ್ದರಿಂದ ನಾಲ್ಕು ತಿಂಗಳು ನಾಟಕ ಕಾರ್ಯಾಗಾರದಲ್ಲಿ ಭಾಗವಹಿಸಿದೆ. ಅಲ್ಲಿಂದ ಕಿರುತೆರೆಗೆ ಕಾಲಿಟ್ಟೆ.

ಕಿರುತೆರೆ ಅನುಭವ ಹೇಗಿತ್ತು?
ಕಿರುತೆರೆಯಲ್ಲಿ ಎರಡು ವರ್ಷ ಕೆಲಸ ಮಾಡಿದೆ. ಸ್ಟಾರ್ ಪ್ಲಸ್‌ನಲ್ಲಿ `ಅಂತರಿಕ್ಷ್' ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. ಜಯಾ ಟೀವಿಯಲ್ಲಿ `ಮಾಯಾವಿ' ಎಂಬ 3ಡಿ ಧಾರಾವಾಹಿಯಲ್ಲಿ ಅಭಿನಯಿಸಿದ್ದು ಖುಷಿ ನೀಡಿತು. ಕಿರುತೆರೆ ಸಾಕಷ್ಟು ಅನುಭವಗಳನ್ನು ನನ್ನ ಬಗಲಿಗೆ ಹಾಕಿದೆ. ತಾಂತ್ರಿಕ ಕೆಲಸಗಳನ್ನು ಕಿರುತೆರೆಯಲ್ಲಿ ಕಲಿತದ್ದು ಹೆಚ್ಚು. ಕ್ಯಾಮೆರಾ ಎದುರಿಸುವುದು, ಸಂಭಾಷಣೆ ಹೀಗೆ ಎಲ್ಲಾ ವಿಷಯಗಳಿಗೂ ಕಿರುತೆರೆ ಅಡಿಪಾಯವಾಯಿತು.

ಸಿನಿಮಾ ರಂಗ ಪ್ರವೇಶಿಸಿದ್ದು ಹೇಗೆ?
ನನ್ನ ಮೊದಲ ಸಿನಿಮಾ ಹೈದ್ರಾಬಾದಿ ಉರ್ದು ಭಾಷೆಯ `ದಿ ಅಂಗ್ರೇಜಿ'. ತುಂಬಾ ಯಶಸ್ಸು ಕಂಡ ಚಿತ್ರವದು. ಅಭಿಮನ್ಯು ನಾನುಮ್, ಉನ್ನೈಪೊಲ್ ಒರುವನ್, ಪನಿತುಲಿ, ಕಂದಹಾರ್, ಡಮರುಗಂ, ಚಂದ್ರ ಸೇರಿದಂತೆ ಒಟ್ಟು 12 ತಮಿಳು, ತೆಲುಗು, ಮಲಯಾಳಂ. ಕನ್ನಡ, ಇನ್ನಿತರ ದ್ವಿಭಾಷಾ ಸಿನಿಮಾಗಳಲ್ಲಿ ನಟಿಸಿದ್ದೇನೆ.

ಮರೆಯಲಾರದ ಸಿನಿ ಅನುಭವ?
ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದೇನೆ. ಕಲಿಯುವುದು ಬೇಕಾದಷ್ಟಿದೆ. ಆದರೆ ಅಮಿತಾಬ್ ಬಚ್ಚನ್ ಅವರೊಂದಿಗೆ ಕಮಲಹಾಸನ್, ಪ್ರಕಾಶ್ ರೈ, ಮೋಹನ್‌ಲಾಲ್, ನಾಗಾರ್ಜುನ, ವೆಂಕಟೇಶ್ ಇಂಥ ಮೇರು ಪ್ರತಿಭೆಗಳೊಂದಿಗೆ ನಟಿಸಿರುವುದು ನನ್ನ ಪುಣ್ಯ ಎಂದೇ ಹೇಳಬೇಕು. ನನ್ನ ಬಗ್ಗೆ ನನಗೇ ಹೆಮ್ಮೆ ಎನಿಸಿದ ಕ್ಷಣಗಳಿವು.

ಕನ್ನಡ ಚಿತ್ರರಂಗ ಹೇಗೆನಿಸುತ್ತಿದೆ?
`ಚಂದ್ರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆ. ನಿರ್ದೇಶಕಿ ರೂಪಾ ಅಯ್ಯರ್ ಕತೆಯ ಬಗ್ಗೆ ಹೇಳಿದರು. ತುಂಬಾ ಇಷ್ಟವಾಯಿತು. ಪ್ರೀತಿಯ ನವಿರಾದ ಭಾವಗಳನ್ನು ಸಮಕಾಲೀನ ಶೈಲಿಗೆ ಒಗ್ಗಿಸಿ ಮೂಡಿಬಂದಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಜೊತೆಗೆ ನನ್ನ ಪಾತ್ರ ಕೂಡ. ಶ್ರೇಯಾ, ಪ್ರೇಮ್ ಅವರೊಂದಿಗೆ ನಟಿಸುತ್ತಿರುವುದು ವಿಭಿನ್ನ ಅನುಭವ. ಚಿತ್ರ ತಾಂತ್ರಿಕವಾಗಿ, ಕಾಸ್ಟ್ಯೂಮ್ಸಗಳಲ್ಲಿ, ಸಂಗೀತ, ಸಿನಿಮಾಟೊಗ್ರಫಿ  ಎಲ್ಲ ರೀತಿಯಿಂದಲೂ ಚೆನ್ನಾಗಿ ಮೂಡಿಬಂದಿದೆ.

ಫಿಟ್‌ನೆಸ್‌ಗೆ ಎಷ್ಟು ಪ್ರಾಮುಖ್ಯ ನೀಡುತ್ತೀರಾ?
ದೇಹವೇ ದೇಗುಲ ಎಂಬುದನ್ನು ನಂಬಿದವನು ನಾನು. ಅದರಲ್ಲೂ ಸಿನಿಮಾರಂಗದಲ್ಲಿದ್ದ ಮೇಲೆ ಫಿಟ್‌ನೆಸ್ ಕಾಯ್ದುಕೊಳ್ಳುವುದು ಕಡ್ಡಾಯ. ಆದ್ದರಿಂದ ನನ್ನ ದೇಹವನ್ನು ಗೌರವಿಸುತ್ತೇನೆ. ದೈಹಿಕವಾಗಿ ಆರೋಗ್ಯದಿಂದಿರಲು ಆರೋಗ್ಯಯುತ ಆಹಾರ ಸಾಕು. ಎಣ್ಣೆ ಪದಾರ್ಥ ಹೆಚ್ಚು  ಸೇವಿಸುವುದಿಲ್ಲ. ಯೋಗ ಅವಶ್ಯಕ. ದಿನಕ್ಕೆ ಎರಡು ಗಂಟೆ ವ್ಯಾಯಾಮ. ಇನ್ನು ಈ ಬಿಜಿ ಜೀವನದ ಮಧ್ಯೆ ಮನಶ್ಶಾಂತಿಗೆ ಕೆಲವು ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತೇನೆ. ಯೋಗದಲ್ಲಿ ಕೆಲವು ಆಸನಗಳನ್ನು ಅಭ್ಯಸಿಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ, ಇದ್ದುದರಲ್ಲಿ ತೃಪ್ತಿಯಿಂದಿರುವುದನ್ನು ಕಲಿತಿದ್ದೇನೆ.

ನಿಮ್ಮ ಕನಸಿನ ಪಾತ್ರ?
ಇಂಥದ್ದೇ ಪಾತ್ರ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮತ್ತೊಬ್ಬರ ಮೇಲೆ ಪ್ರಭಾವ ಬೀರುವಂಥ ಪಾತ್ರ ಮಾಡಬೇಕು, ಅದು ಯಾವುದೇ ಪಾತ್ರವಾದರೂ ಸರಿ. ನನ್ನ ಪಾತ್ರವನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಅದಕ್ಕೆ ತಕ್ಕಂತೆ ಹೋಂವರ್ಕ್ ಮಾಡುತ್ತೇನೆ. ಇದರಿಂದ ಅಭಿನಯ ಇನ್ನಷ್ಟು ಕಳೆಗಟ್ಟುತ್ತದೆ.

ನಿಮ್ಮ ರೋಲ್ ಮಾಡೆಲ್?
ಇಂಥ ವ್ಯಕ್ತಿ ಎಂದು ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅಮಿತಾಭ್ ಬಚ್ಚನ್ ವ್ಯಕ್ತಿಗತವಾಗಿ ಹಾಗೂ ಅಭಿನಯದಲ್ಲಿ ನನ್ನ ರೋಲ್ ಮಾಡೆಲ್.

ಮುಂದಿನ ಯೋಜನೆಗಳು?
ಸದ್ಯಕ್ಕೆ ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮುಂದೆ ಇನ್ನಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಬಯಕೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT