ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರ ಮಕ್ಕಳ ಪ್ರಶ್ನೆಗಳು

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸೂರ್ಯ ಅದೇ ತಾನೆ ಹುಟ್ಟಿದ್ದ. ಹ್ರೆಹಾನ್ ಹಾಗೂ ಹೃದಾನ್ ಇಬ್ಬರೂ ಕಣ್ಣು ಹೊಸೆಯುತ್ತಾ ಹಾಸಿಗೆಯಿಂದ ಮೇಲೆದ್ದರು. `ಇಂದು ಏನು ವಿಶೇಷ~ ಎಂದು ಆ ಮಕ್ಕಳಿಬ್ಬರೂ ಅಮ್ಮ ಸುಸೇನ್ ಅವರನ್ನು ಕೇಳಲಾಗಿ, ಆ ತಾಯಿ `ಕೃಷ್ಣ ಜನ್ಮಾಷ್ಟಮಿ~ ಎಂದಷ್ಟೇ ಹೇಳಿದರು. ಅಂದು ಅಪ್ಪನ ಜೊತೆ ಮಕ್ಕಳು ಸಮಾರಂಭವೊಂದಕ್ಕೆ ಹೋಗುವುದೆಂದು ಹಿಂದಿನ ದಿನವೇ ನಿಗದಿಯಾಗಿತ್ತು.

ಹೃತಿಕ್ ಜಿಮ್‌ನಲ್ಲಿ ಬೆವರು ಬಸಿದು ಬಂದವರೇ ಹೊರಡಲು ಸಿದ್ಧರಾದರು. ಮಕ್ಕಳೂ ಅಷ್ಟು ಹೊತ್ತಿಗೆ ಚೆಂದ ಚೆಂದದ ಬಟ್ಟೆ ಹಾಕಿಕೊಂಡು ಬಂದರು. `ದಹಿ ಹಂಡಿ~ ಸಮಾರಂಭಕ್ಕೆ ಅಪ್ಪ-ಮಕ್ಕಳ ಸವಾರಿ ಹೊರಟಿತು.

`ಮಡಿಕೆಯಲ್ಲಿ ತುಂಬಿಸಿಟ್ಟ ಬೆಣ್ಣೆ. ಅದನ್ನು ಕ್ದ್ದದವನು ಕೃಷ್ಣ. ಶ್ರೀಕೃಷ್ಣ ಬಾಲಕನಾಗಿದ್ದಾಗ ತನ್ನನ್ನು ಸಾಕಿದ ಯಶೋದೆಗೆ ಗೊತ್ತಾಗದಂತೆ ಬೆಣ್ಣೆ ಕದಿಯುತ್ತಿದ್ದ. ಬೆಣ್ಣೆಯನ್ನು ಅವನಿಂದ ರಕ್ಷಿಸಿಡುವುದೇ ಆಗ ಕಷ್ಟವಿತ್ತು. ಅವನ ಬೆಣ್ಣೆ ಪ್ರೀತಿಯ ಬಗೆಗೆ ಅನೇಕ ಪದ್ಯಗಳು, ಹಾಡುಗಳು ಬಂದಿವೆ. ಕತೆಗಳೂ ಇವೆ. ಬೆಣ್ಣೆ ಯಾರಿಗೆ ತಾನೇ ಇಷ್ಟವಿಲ್ಲ ಅಲ್ಲವೇ...~ ಹೀಗೆಲ್ಲಾ ಮಕ್ಕಳಿಗೆ ಹೃತಿಕ್ ಹೇಳುತ್ತಾ ಹೋದರು.

ನಡುನಡುವೆ ಪ್ರಶ್ನೆಗಳೂ ನುಸುಳುತ್ತಿದ್ದವು. ಕೊನೆಗೆ ಹೃದಾನ್, `ಅಪ್ಪ ಕೃಷ್ಣ ಕೂಡ ಕ್ರಿಷ್ ತರಹಾನೇ ಇದ್ದನಾ~ ಎಂದು ಕೇಳಿಬಿಟ್ಟ. ಆಗ `ದಹಿ ಹಂಡಿ~ ಸಮಾರಂಭದಲ್ಲಿದ್ದವರಲ್ಲಿ ಗೊಳ್ಳನೆ ನಗು. ತಮ್ಮ ಮಕ್ಕಳಿಗೆಂದೇ `ಕ್ರಿಷ್~ ಅನಿಮೇಷನ್ ಚಿತ್ರ ಮಾಡಹೊರಟಿರುವ ಹೃತಿಕ್ ಇತ್ತೀಚೆಗೆ ಮನೆಯಲ್ಲಿ ಅದರ ಕುರಿತೇ ಮಾತನಾಡುತ್ತಿದ್ದಾರೆ.
 
ಹಾಗಾಗಿ, ಹೃದಾನ್ ಪ್ರಶ್ನೆ ಸಹಜವಾಗಿಯೇ ಇತ್ತು. ಮಗನ ಆ ಪ್ರಶ್ನೆಗೂ ತಾಳ್ಮೆಯಿಂದ ಉತ್ತರ ಕೊಟ್ಟ ಹೃತಿಕ್, ಕೃಷ್ಣನ ಇನ್ನಷ್ಟು ಕತೆಗಳನ್ನು ಹೇಳಿದರು. ಬಾಲ್ಯದಲ್ಲಿ ತಾವು ಬೆಣ್ಣೆ ಕದ್ದು ತಿಂದ ಘಟನೆಯನ್ನೂ ಬಣ್ಣಿಸಿದರು.

ಅಷ್ಟೆಲ್ಲಾ ಮಾತು ಮುಗಿದ ಮೇಲೆ `ಕೃಷ್ಣ ನನ್ನಂತಿದ್ದನಾ~ ಎಂದು ಹೃದಾನ್ ಇನ್ನೊಂದು ಪ್ರಶ್ನೆ ತೇಲಿಬಿಟ್ಟ. `ಕೃಷ್ಣನ ಬಣ್ಣ ಕಪ್ಪು. ಅವನು ನನ್ನಂತೆ, ನಿನ್ನಂತೆ ಇರಲಿಲ್ಲ~ ಎಂದು ಪ್ರಾಮಾಣಿಕವಾಗಿ ಅಪ್ಪ ಹೇಳಿದಾಗ ಮಗನಿಗೆ ಸಮಾಧಾನವಾಗಲಿಲ್ಲ. `ಫೋಟೊ, ಕ್ಯಾಲೆಂಡರ್‌ಗಳಲ್ಲಿ ಕೃಷ್ಣ ನೀಲಿ ಬಣ್ಣ ಇರುತ್ತಾನೆ. ಅವನು ಕಪ್ಪಗೇನೂ ಇರಲಿಲ್ಲ~ ಎಂದು ಹೃದಾನ್ ತನ್ನ ಗ್ರಹಿಕೆಯನ್ನು ಮುಂದಿಟ್ಟಾಗ ಅಲ್ಲಿದ್ದವರ ನಡುವೆ ಮತ್ತೊಮ್ಮೆ ನಗುವಿನ ಸಂಚಾರ.

ಸಮಾರಂಭ ಮುಗಿಸಿಕೊಂಡು ಮನೆಗೆ ಹೊರಟಾಗ ಕಾರ್‌ನಲ್ಲಿ ಅದೇ ಮಗ ಅಪ್ಪನನ್ನು ಕುರಿತು ಹೇಳಿದ: `ಅಪ್ಪ, ನಾನು ಫ್ರಿಜ್‌ನಲ್ಲಿರುವ ಬೆಣ್ಣೆ ಕದಿಯುತ್ತೇನೆ. ಅಮ್ಮನಿಗೆ ಹೇಳಬೇಡ. ಮುಂದೆ ನಾನೂ ಕೃಷ್ಣನಂತೆ ಫೇಮಸ್ ಆಗುವೆ~! ಹೃತಿಕ್ ಮಗುವಿನ ಆ ಮಾತು ಕೇಳಿ ನಸುನಕ್ಕು, ಕೆನ್ನೆಗೊಂದು ಮುತ್ತುಕೊಟ್ಟು, `ಹಾಗೇ ಆಗಲಿ ಕಂದ~ ಎಂದರು.
***

ಮಕ್ಕಳು ಮುಗ್ಧರೆಂಬುದಕ್ಕೆ ಇನ್ನೊಂದು ಉದಾಹರಣೆ- `ಓಹ್ ಮೈ ಗಾಡ್~ ಚಿತ್ರದ ಪ್ರಚಾರಕ್ಕೆಂದು ಆಯೋಜಿಸಲಾಗಿದ್ದ ಕಾರ್ಯಕ್ರಮ. ಅಬ್ಬರದ ಸಂಗೀತ ಕೇಳಿಬರುತ್ತಿದ್ದ ವಾತಾವರಣ. ಎತ್ತರಕ್ಕೆ ಬೆಳೆದಿರುವ ಅಕ್ಷಯ್ ಕುಮಾರ್ ಮಗ ಆರವ್ ಓಡೋಡಿ ಬಂದ. `ಅಪ್ಪ ಅಲ್ಲೊಬ್ಬರು ಆಂಟಿ ಕೇಳಿದರು, ನಿಮ್ಮ ತಾತ ಕಣ್ಮುಚ್ಚಿ ತಿಂಗಳಾಗಿದೆಯಷ್ಟೆ.

ಒಂದು ವರ್ಷ ಮೌನಾಚರಣೆಯಲ್ಲಿ ಇರಬೇಕು. ನೀವೆಲ್ಲಾ ಇಲ್ಲಿ ಅಬ್ಬರದ ವಾತಾವರಣದಲ್ಲಿ ಪಾರ್ಟಿ ಮಾಡುತ್ತಿದ್ದೀರಲ್ಲ ಅಂತ. ಹೌದೇನಪ್ಪಾ, ನಾವು ಮಾಡುತ್ತಿರುವುದು ತಪ್ಪಾ~ ಎಂದು ಕೇಳಿದ. ತಕ್ಷಣಕ್ಕೆ ಏನು ಹೇಳಬೇಕು ಎಂದು ಅಕ್ಷಯ್‌ಗೆ ತೋಚಲಿಲ್ಲ. ಆರವ್ ಸ್ವಲ್ಪ ದೂರದಲ್ಲಿದ್ದ ಅಮ್ಮ ಟ್ವಿಂಕಲ್ ಬಳಿಗೆ ಹೋದ. ಅಲ್ಲಿ ಕೇಳಿದ್ದೂ ಅದೇ ಪ್ರಶ್ನೆ. ಅದಕ್ಕೆ ಆ ತಾಯಿ ಕೊಟ್ಟ ಉತ್ತರ ಹೀಗಿತ್ತು:

`ನಾವು ಅಪ್ಪನ ಸಿನಿಮಾ ಸಮಾರಂಭಕ್ಕೆ ಬಂದಿದ್ದೇವೆ, ಮಗು. ಇದು ನಮ್ಮ ಮನೆ ಸಮಾರಂಭ ಅಲ್ಲ. ನಾವು ಮನೆಯಲ್ಲಿ ಹಬ್ಬ, ಪಾರ್ಟಿ ಮಾಡುವ ಹಾಗಿಲ್ಲ. ನಿನ್ನಜ್ಜ ರಾಜೇಶ್ ಖನ್ನಾ ಹೋಗಿಬಿಟ್ಟರಲ್ಲ. ಅದಕ್ಕೇ ಆ ಆಂಟಿ ಹಾಗೆ ಕೇಳಿದ್ದಾರೆ. ನಾವು ಅಪ್ಪನ ಸಿನಿಮಾ ಪ್ರೊಮೋಷನ್‌ಗೆ ಬಂದಿದ್ದೇವೆ ಅಷ್ಟೆ ಅಂತ ಅವರಿಗೆ ಹೇಳು~. ತನ್ನನ್ನು ಪ್ರಶ್ನೆ ಕೇಳಿದ ಆ ಆಂಟಿಗಾಗಿ ಆರವ್ ಹುಡುಕಾಡಿದ. ಆದರೆ, ಅವರು ಮತ್ತೆ ಅಲ್ಲಿ ಕಾಣಲೇ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT