ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ-ರಾಜಕಾರಣಿಯ ಕ್ರಿಕೆಟ್ ಪ್ರೀತಿ!

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

‘ಸಂಗಾ’ ಬಳಗಕ್ಕೆ ‘ಜಯತಿಲಕ’ವಿಟ್ಟು ಹರಸಿದ
ಕೊಲಂಬೊ:  ಅಂದದ ಕಣ್ಣಂಚಿನಲ್ಲಿ ಕ್ರಿಕೆಟ್ ಪ್ರೀತಿಯ ಮಿಂಚು. ‘ಓಹ್... ಇನ್ನೊಂದು ಪಂದ್ಯ; ಫೈನಲ್‌ನಲ್ಲಿ ಶ್ರೀಲಂಕಾ’ ಎಂದು ಹೇಳಿ ಫೋನು ರಿಂಗಣಿಸಿದ ಹಾಗೆ ಕಿಲಕಿಲ ನಕ್ಕಳು ಚೆಂದುಳ್ಳಿ ಚೆಲುವೆ. ಅವಳ ನಗುವಿನ ಅಲೆಗೆ ಪಕ್ಕದ ಮರದಲ್ಲಿದ್ದ ಕೋಗಿಲೆಯೂ ಸ್ಪಂದಿಸಿ ಕುಹೂ...ಕುಹೂ... ಎಂದಿತು. ಆಗ ಅಲ್ಲಿ ಆನಂದದಾಯಕ ವಾತಾವರಣ.

‘ಕ್ರಿಕೆಟ್ ನನಗೆ ಇಷ್ಟ’ ಎಂದು ಮಾತಿಗೆ ಮುನ್ನುಡಿ ಬರೆದ ಸಿಂಹಳೀಯರ ನಾಡಿನ ರೂಪದರ್ಶಿ, ನಟಿ, ಗಾಯಕಿ, ರಾಜಕಾರಣಿ... ಅನಾರ್ಕಲಿ ಆಕರ್ಷಾ ಜಯತಿಲಕ. ಗೊತ್ತು ಮಾಡಿದ ಹೊತ್ತಿಗೆ ಸರಿಯಾಗಿ ಮನೆಯ ಅಂಗಳದಲ್ಲಿನ ಲಾನ್‌ನಲ್ಲಿ ಚಹಾ ಕಪ್ ಜೋಡಿಸಿಟ್ಟು ಕಾಯ್ದಿದ್ದ ಈ ಬೆಡಗಿಯು ಭಾನುವಾರದ ಮುಂಜಾನೆ ಭಾರಿ ಸಂತಸದಲ್ಲಿದ್ದಳು. ಕಾರಣ ಅವಳ ನೆಚ್ಚಿನ ತಂಡವಾದ ಶ್ರೀಲಂಕಾ ಕ್ವಾರ್ಟರ್ ಫೈನಲ್ ಅಡೆತಡೆಯನ್ನು ಸುಲಭವಾಗಿ ದಾಟಿಕೊಂಡು ಸೆಮಿಫೈನಲ್ ತಲುಪಿಯಾಗಿತ್ತು.

‘ನೋಡಿದಿರಾ; ನಮ್ಮ ತಂಡ ಹೇಗೆ ಆಡುತ್ತದೆ? ಈ ಬಾರಿ ವಿಶ್ವಕಪ್ ಗೆಲುವು ಖಂಡಿತ’ ಎಂದು ಇಂಗ್ಲೆಂಡ್ ವಿರುದ್ಧ ಲಂಕಾ ಪಡೆಯು ಹತ್ತು ವಿಕೆಟ್‌ಗಳ ಅಂತರದಿಂದ ವಿಜಯ ಸಾಧಿಸಿದ ರೀತಿಯನ್ನು ಕೊಂಡಾಡಿದಳು. 1995-96ರ ಕ್ರಿಕೆಟ್ ಋತುವಿನಲ್ಲಿ ಅರ್ಜುನ ರಣತುಂಗ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಮೆರೆದಿದ್ದ ಸಿಂಹಳೀಯರು ಮತ್ತೆ ಚಾಂಪಿಯನ್ ಆಗುತ್ತಾರೆ ಎನ್ನುವುದು ಆಕರ್ಷಾ ಆಸೆ, ಆಶಯ, ಹಾರೈಕೆ.

ಭಾರತದ ನೆರೆಯ ದ್ವೀಪರಾಷ್ಟ್ರದ ಸೂಪರ್ ಸ್ಟಾರ್‌ಗಳ ಸಾಲಿನಲ್ಲಿ ನಿಂತಿರುವ ಆಕರ್ಷಾ ಜಯತಿಲಕ ತನ್ನ ಅಭಿಮಾನಿಗಳ ಮಟ್ಟಿಗೆ ಅನಾರ್ಕಲಿ. ಗ್ಲಾಮರ್ ಜಗತ್ತು ನೀಡಿದ ಹೆಸರಿದು. ಬಣ್ಣದ ಬದುಕಿನ ಜೊತೆಗೆ ರಾಜಕೀಯದ ನಂಟು ಕೂಡ ಬೆಳೆಸಿಕೊಂಡಿರುವ ಆಕರ್ಷಾ ಚುನಾವಣೆಗೆ ಸ್ಪರ್ಧಿಸುವ ಯೋಚನೆಯಲ್ಲಿಯೂ ಇದ್ದಾಳೆ. ವಿಶ್ವಕಪ್ ಕ್ರಿಕೆಟ್ ಕಾರಣಕ್ಕಾಗಿ ಸ್ಥಳೀಯ ಚುನಾವಣೆಗಳನ್ನು ಮುಂದೂಡಲಾಗಿದೆ. ಕ್ರಿಕೆಟ್ ಹಬ್ಬ ಮುಗಿದ ನಂತರ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳಲಿರುವ ಈ ನಟಿಮಣಿಗೆ ತಮ್ಮ ‘ಸಂಗಾ ನೇತೃತ್ವದ ತಂಡವು ಟ್ರೋಫಿಯನ್ನು ತೋಳಲ್ಲಿ ಅಪ್ಪಿಕೊಂಡು ಹಿಡಿಯಬೇಕು’ ಎನ್ನುವ ಕನಸು.

23 ವರ್ಷದ ಈ ನಟಿಯು ಉಪುಲ್ ತರಂಗ ಸೇರಿದಂತೆ ಕೆಲವು ಕ್ರಿಕೆಟಿಗರ ಜೊತೆಗೆ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆ. 2004ರಲ್ಲಿ ‘ಮಿಸ್ ಶ್ರೀಲಂಕಾ’ ಪಟ್ಟವನ್ನು ಪಡೆದಿದ್ದ ಆಕರ್ಷಾ ಜಯತಿಲಕ ಗಾಯಕಿಯೂ ಹೌದು. ‘ನನ್ನ ಯಾವುದೇ ವಿಡಿಯೋ-ಆಡಿಯೋ ಅಲ್ಬಂ ಬಿಡುಗಡೆ ಇರಲಿ; ಒಬ್ಬ ಕ್ರಿಕೆಟಿಗನನ್ನು ಸಮಾರಂಭಕ್ಕೆ ಖಂಡಿತ ಆಹ್ವಾನಿಸುತ್ತೇನೆ. ನನ್ನ ಇತ್ತೀಚಿನ ಅಲ್ಬಂ ಬಿಡುಗಡೆ ಮಾಡಿದ್ದು ತರಂಗ’ ಎಂದು ಇಷ್ಟಗಲ ಕಣ್ಣರಳಿಸಿ ಹೇಳಿದಳು.

ಯುನೈಟೆಡ್ ಪೀಪಲ್ಸ್ ಫ್ರೀಡಮ್ ಅಲೈನ್ಸ್(ಯುಪಿಎಫ್‌ಇ) ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತೆಳ್ಳಗೆ ಬೆಳ್ಳಗೆ ಇರುವ ತಾರೆಯು ರಾಜಕೀಯಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಆಟದ ಸುದ್ದಿಗಳನ್ನು ಓದಲು ಹಾಗೂ ನೋಡಲು ಇಷ್ಟಪಡುತ್ತಾಳೆ. ‘ಪ್ರತಿದಿನ ಮೊದಲು ನೋಡುವುದು ಸ್ಪೋರ್ಟ್ಸ್ ಪೇಜ್. ಎಲ್ಲಾ ಕ್ರಿಕೆಟ್ ಸುದ್ದಿಗಳನ್ನು ಓದಿದ ನಂತರ ಮೊದಲ ಪೇಜ್ ಕಡೆಗೆ ಗಮನ ಹರಿಸುತ್ತೇನೆ. ಐ ಲವ್ ಕ್ರಿಕೆಟ್...’ ಎಂದು ಹೇಳಿ ಚೆಂದದ ನಗೆಯಿಂದ ಮುಖವನ್ನು ಅಂದಗೊಳಿಸಿದಳು.

‘ಪಿಸು ಟ್ರೈಬಲ್’, ‘ಎಕಾ ಮಾಲಾಕಾ ಪೆಥಿ’, ‘ಒನ್ ಶಾಟ್’, ‘ಧನ ರೇನ್’, ‘ಹಿರಿ ಪಾಡಾ ವೆಸ್ಸಾ’, ‘ಸೊಂದುರು ವಸಂಥಯಾ’, ‘ಅಂಜಲಿಕಾ’, ‘ಥರುಕಾ ಮಲ್’, ‘ಸಿಕುರು ಹಾಥೆ’ ಮತ್ತು ‘ಸರ್ ಲಾಸ್ಟ್ ಚಾನ್ಸ್’ ಸೇರಿದಂತೆ ಅನೇಕ ಸಿಂಹಳೀಯ ಭಾಷೆಯ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ಚಲನಚಿತ್ರ ಪ್ರೇಮಿಗಳ ಮೆಚ್ಚಿನ ಅನಾರ್ಕಲಿ ‘ನಾನೊಂದು ಸಿನಿಮಾದಲ್ಲಿ ಕ್ರಿಕೆಟ್ ಆಡುವ ದೃಶ್ಯದಲ್ಲಿಯೂ ಅಭಿನಯಿಸಿದ್ದೇನೆ. ಅದು ಎಂದೂ ಮರೆಯಲಾಗದ ಕ್ಷಣ. ಸಂಪೂರ್ಣವಾಗಿ ಕ್ರಿಕೆಟ್ ಕೇಂದ್ರಿತವಾದ ಕಥೆಯಿರುವ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ’ ಎಂದು ತನ್ನ ಆಸೆಯನ್ನು ಬಿಚ್ಚಿಟ್ಟಳು.

ಹಲವಾರು ರೀತಿಯಲ್ಲಿ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವ ಆಕರ್ಷಾ ತನ್ನ ಮೊಬೈಲ್‌ನಲ್ಲಿ ಸಾಕಷ್ಟು ಕ್ರಿಕೆಟ್ ಪಂದ್ಯಗಳ ಕ್ಷಣಗಳನ್ನು ಸ್ಟೋರ್ ಮಾಡಿಟ್ಟುಕೊಂಡಿದ್ದಾಳೆ. ಕ್ರಿಕೆಟಿಗರ ಚಿತ್ರಗಳೂ ಸಾಕಷ್ಟಿವೆ. ಅವುಗಳಲ್ಲಿ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ದೋನಿ, ಯುವರಾಜ್ ಸಿಂಗ್ ಅವರ ಚ್ರಿಗಳೂ ಸೇರಿವೆ. ‘ಸಚಿನ್ ತೆಂಡೂಲ್ಕರ್ ಇಷ್ಟ’ ಎಂದು ಸ್ಪಷ್ಟವಾಗಿ ಹೇಳಿದರೂ ಅದರ ಹಿಂದೆಯೇ ‘ಯುವರಾಜ್ ಕ್ಯೂಟ್’ ಎಂದಾಗ ತುಂಟತನವು ಅಲ್ಲಿ ಎದ್ದು ಕಾಣಿಸಿತು.ಈ ಬಾರಿಯ ವಿಶ್ವಕಪ್ ಫೈನಲ್‌ನಲ್ಲಿ ಯಾವ ತಂಡಗಳು ಆಡುವುದನ್ನು ನೋಡಲು ಇಷ್ಟವೆಂದು ಕೇಳಿದರೆ ‘ಶ್ರೀಲಂಕಾ-ಭಾರತ’ ಎನ್ನುವ ಪ್ರತಿಕ್ರಿಯೆಯನ್ನು ಥಟ್ಟನೆ ನೀಡಿದಳು ಅನಾರ್ಕಲಿ ಆಕರ್ಷಾ ಜಯತಿಲಕ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT