ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿಯರ ಬೇವು-ಬೆಲ್ಲ!

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸುಖವನ್ನು ಹೆಚ್ಚು ಅನುಭವಿಸಿ
ಹಬ್ಬವನ್ನು ಜೋರಾಗಿ ಆಚರಿಸುವುದಿಲ್ಲ. ಕಹಿ- ಸಿಹಿ ಸೇರುವ ಹಬ್ಬ ಇದು. ಸುಖ- ದುಃಖ ಬದುಕಿನಲ್ಲಿ ಸಾಮಾನ್ಯ. ಸಂತೋಷವನ್ನು ಹೆಚ್ಚಾಗಿ ಅನುಭವಿಸಿ ಕಷ್ಟವನ್ನು ದೂರ ಇಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ, ಅದಕ್ಕೆ ಬೇವು- ಬೆಲ್ಲ, ಸ್ವಲ್ಪ ಉಪ್ಪು ಖಾರ ಸೇರಿಸಿ, ಲಿಕ್ವಿಡ್ ಥರ ಮಾಡ್ಕೊಂಡು ತಿನ್ನುತ್ತೇವೆ. ತುಂಬಾ ಚೆನ್ನಾಗಿರುತ್ತದೆ.

ಬೇವಿನ ಎಳೆ ಎಲೆ ತುಂಬಾ ಇಷ್ಟ. ಎಳೆ ಬೇವಿನ ಎಲೆಯ ರಸ ಚೆನ್ನಾಗಿರುತ್ತದೆ. ಆದರೂ ನಾನು ಹಬ್ಬದ ಸಂದರ್ಭದಲ್ಲಿ ತಮಾಷೆ ಮಾಡುವುದಿದೆ. ಬೆಲ್ಲ ಹೆಚ್ಚು ಹಾಕಿ, ಬೇವು ಸ್ವಲ್ಪವೇ ಇಡಿ ಅಂತ. ಎಲ್ಲರೂ ಖುಷಿ ಆಗಿರಬೇಕು. ಭಗವಂತನಿಗೂ ಕೈಮುಗಿದು `ಸರ್ವೇ ಜನಾಃ ಸುಖಿನೋ ಭವಂತು' ಅಂತಲೇ ಕೇಳಿಕೊಳ್ಳುವುದು. ಜನವರಿ ಒಂದರಂದು ಹೊಸ ಹಬ್ಬ ಆಚರಣೆಯ ಪರಂಪರೆ ಬೆಳೆದುಬಿಟ್ಟಿದೆ. ಆದರೆ ನಮಗೆ ಇದು ಯುಗದ ಆದಿ. ಇದನ್ನು ಅತ್ಯಂತ ಖುಷಿಯಿಂದ ಆಚರಿಸಲೇಬೇಕು. ಎಲ್ಲವನ್ನೂ ಬಿಡುತ್ತಾ ಹೋದರೆ ಮುಂದೊಂದು ದಿನ ಯಾವ ಹಬ್ಬಗಳೂ ಉಳಿಯುವುದೇ ಇಲ್ಲ.
-ಜಯಂತಿ, ನಟಿ


ಜನರಿಗಾಗಿ ದುಡಿಯಲಿ

ಬೇವು-ಬೆಲ್ಲ, ಅಭ್ಯಂಜನ ಸ್ನಾನ ಮಾಮೂಲು. ಈ ಬಾರಿ ಸೊಸೆಯ ಅಣ್ಣನ ಮದುವೆ ಇದೆ. ಅವಳು ಅಲ್ಲಿ ಹೋಗುತ್ತಾಳೆ. ಮಗ ಶೂಟಿಂಗ್‌ನಲ್ಲಿದ್ದಾನೆ. ನನಗೊಬ್ಬಳಿಗಾಗಿ ಎಷ್ಟು ಮಾಡಿಕೊಳ್ಳಲಿ. ಸಂಪ್ರದಾಯವಾದ್ದರಿಂದ ಒಬ್ಬಟ್ಟು, ಪೂಜೆ ಎಲ್ಲ ಇದ್ದೇ ಇರುತ್ತದೆ. ಮೊದಲು ಹಿರಿಯರು ಪಂಚಾಂಗ ಶ್ರವಣ ಮಾಡುತ್ತಿದ್ದರು. ಈಗ ಹಿರಿಯರು ಯಾರೂ ಇಲ್ಲವಲ್ಲ.

ಮಾಂಸಾಹಾರದ ಊಟ ಇರುವುದರಿಂದ ಯುಗಾದಿ ಮರುದಿನ ಎಲ್ಲರೂ ಸೇರುತ್ತಾರೆ. ಯುಗಾದಿ ಹಬ್ಬ ಎಲ್ಲರಿಗೂ ಸಂತೋಷ ತರಲಿ. ರಾಜ್ಯಕ್ಕೆ, ರಾಜಕಾರಣಿಗಳಿಗೆ, ದೇಶಕ್ಕೆ ಒಳ್ಳೆಯದನ್ನು ಮಾಡಿ ಜನರಿಗಾಗಿ ದುಡಿಯುವ ಮನಸ್ಸು ಅವರಿಗೆ ಬರಲಿ. ಒಂದೊಂದು ರಾಜಕಾರಣಿಗಳ ಆಸ್ತಿ ನೂರು- ಸಾವಿರ ಕೋಟಿ. ಕೇಳಿದರೇ ಆಶ್ಚರ್ಯ ಆಗುತ್ತದೆ. ನಮಗೆ ಎಷ್ಟು ಬೇಕೋ ಅಷ್ಟರಲ್ಲೇ ಬದುಕುವುದನ್ನು ಕಲಿತುಕೊಳ್ಳಬೇಕು. ಒಂದಿಬ್ಬರು ಪ್ರಾಮಾಣಿಕರಾಗಿದ್ದರೆ ದೇಶ ಉದ್ಧಾರವಾಗುತ್ತದಾ? ಎಲ್ಲರೂ ಪ್ರಾಮಾಣಿಕರಾಗುವ ಬುದ್ಧಿಯನ್ನು ದೇವರು ಕರುಣಿಸಲಿ.
-ಗಿರಿಜಾ ಲೋಕೇಶ್, ನಟಿ

ಇದು ದೊಡ್ಡವರ ಹಬ್ಬ

ಯುಗಾದಿ ಇದು ಹೊಸವರ್ಷದ ಸೂಚನೆ. ನಮ್ಮ ಮನೆಯಲ್ಲಿ ಇದಕ್ಕೆ `ದೊಡ್ಡವರ ಹಬ್ಬ' ಎಂದು ಕರೆಯುತ್ತೇವೆ. ಸತ್ತ ಹಿರಿಯರಿಗೆ ಪಂಚೆ, ಸೀರೆ, ಒಬ್ಬಟ್ಟು ಇಡುವುದು ಬೆಳೆಸಿಕೊಂಡು ಬಂದ ಸಂಪ್ರದಾಯ. ಯುಗಾದಿಯ ದಿನ ಬೇವು- ಬೆಲ್ಲ ತಿಂದು ಸಂಭ್ರಮ ಪಡುವುದೇ ಒಂದು ಖುಷಿ. ಇಲ್ಲಿಯ ತನಕ ಒಂದು ವರ್ಷವೂ ಯುಗಾದಿ ಹಬ್ಬವನ್ನು ತಪ್ಪಿಸಿಕೊಂಡಿಲ್ಲ. ಮನೆಯವರ ಜತೆ ಸೇರಿ ಹಬ್ಬವನ್ನು ಆಚರಿಸುವುದೇ ಸಂಭ್ರಮ. ನನಗೆ ಒಬ್ಬಟ್ಟು ಮಾಡಲು ಬರುವುದಿಲ್ಲ. ಅಕ್ಕ ಮಾಡಿಕೊಡುತ್ತಾಳೆ. ನಾವು ಅದನ್ನು ತಿಂದು ಖುಷಿ ಪಡುತ್ತೇವೆ. ಬೇವು-ಬೆಲ್ಲ ಸಿದ್ಧ ಮಾಡಿ, ಪೂಜೆಮಾಡುವ ಕೆಲಸ ನನ್ನದು.

ಬೇವನ್ನೇ ಹೆಚ್ಚು ತಿನ್ನಲು ಇಷ್ಟಪಡುತ್ತೇನೆ. ಕಹಿ ತಿಂದರೆ ಜೀವನದಲ್ಲಿ ಕಷ್ಟವನ್ನು ಎದುರಿಸುವ ಶಕ್ತಿ ಜಾಸ್ತಿ ಬರುತ್ತದೆ ಎಂಬುದು ನನ್ನ ಅಭಿಪ್ರಾಯ. ಕಹಿ ಕೂಡ ದೇಹಕ್ಕೆ ಒಳ್ಳೆಯದು.

ಹಿಂದೆ ಬಾಲ್ಯದಲ್ಲಿ ಇರುವ ಸಂಭ್ರಮ ಈಗ ಕಾಣಿಸುತ್ತಿಲ್ಲ. ಅಮ್ಮ ಅಡುಗೆ ಮಾಡುತ್ತಿದ್ದರು. ಮಕ್ಕಳೆಲ್ಲಾ ಕೂಡಿ ತಿಂದು, ನಲಿದು ಖುಷಿಪಡುತ್ತಿದ್ದೆವು.  ಮಾಡಿಟ್ಟ ಹೂರಣವನ್ನು ಖಾಲಿ ಮಾಡುತ್ತಿದ್ದೆವು. ಅಮ್ಮ `ಖಾಲಿ ಮಾಡಬೇಡಿ' ಎಂದು ಹಿತವಾಗಿ ಬೈದು ನಗುತ್ತಿದ್ದರು.

ಈಗ ಒಬ್ಬಟ್ಟು ಮಾರುಕಟ್ಟೆಯಲ್ಲಿ ಸಿಗುತ್ತದೆ. ನಮಗೆಷ್ಟು ಬೇಕೋ ಹೋಗಿ ತೆಗೆದುಕೊಂಡು ಬಂದರೆ ಹಬ್ಬ ಮುಗಿಯಿತು. ಹಿಂದಿನ ಆಚರಣೆಗಳನ್ನು ಕಿರಿಯರು ಮರೆಯಬಾರದು. ಮನೆಯಲ್ಲಿನ ಹಿರಿಯವರು ತಿಳಿ ಹೇಳಬೇಕು.
-ಪದ್ಮಾ ವಾಸಂತಿ, ನಟಿ.



ಎಲ್ಲರೂ ಸೇರಿ ಮಾಡುವ ಹಬ್ಬ

ಯುಗಾದಿಯೇ ಹೊಸ ವರ್ಷ. ಸಹೋದರ ಸಹೋದರಿಯರೆಲ್ಲಾ ಅಮ್ಮನ ಮನೆಯಲ್ಲಿ ಒಟ್ಟಾಗಿ ಸೇರಿ ಹಬ್ಬ ಆಚರಿಸುತ್ತೇವೆ. ಒಬ್ಬಟ್ಟು ಮಾಡುತ್ತೇವೆ. ಒಬ್ಬಟ್ಟು ಸಾರು ನನಗೆ ತುಂಬಾ ಇಷ್ಟ. ದೇವರಿಗೆ ಪೂಜೆ ಮಾಡಿ ಎಲ್ಲರೂ ಸೇರಿ ಊಟ ಮಾಡುತ್ತೇವೆ. ಸಂಜೆ ಮುತ್ತೈದೆಯರಿಗೆ ಅರಿಷಿನ ಕುಂಕುಮ ಹಚ್ಚುತ್ತೇವೆ.

ಹಬ್ಬವನ್ನು ಹೀಗೆಯೇ ಮಾಡಬೇಕು ಎಂಬ ಸಂಪ್ರದಾಯ ಇದೆ. ಅದೇ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದೇವೆ. ಮುಂದೆಯೂ ಹೀಗೆಯೇ ಇರುತ್ತದೆ. ಸಂಬಂಧಿಕರೆಲ್ಲಾ ಸೇರಿ ಮಾಡುವ ವರ್ಷದ ಮೊದಲ ಹಬ್ಬ ಇದು. ಹೀಗಾಗಿ ಖುಷಿ ಜಾಸ್ತಿ.
-ಭವ್ಯಾ, ನಟಿ.




ಹಬ್ಬದ ರಜಾ, ಮಜಾ

ಹೊಸತನವನ್ನು ತರುವುದೇ ಯುಗಾದಿ. ಶೂಟಿಂಗ್‌ಗೆ ರಜೆ ಇರುವುದರಿಂದ ಮನೆಯವರೊಂದಿಗೆ ಕಾಲ ಕಳೆಯುತ್ತೇವೆ. ಹೊಸ ಬಟ್ಟೆ ಹಾಕಿಕೊಂಡು ಓಡಾಡುವುದೇ ಒಂದು ರೀತಿಯ ಹೊಸತನ.

ಯುಗಾದಿ ಬಂದಾಗ ನನಗೆ ನೆನಪಾಗುವುದು ಬಾಲ್ಯ. ಎಷ್ಟು ಖುಷಿಯಿತ್ತು ಆಗ. ಅಮ್ಮ ಬಗೆಬಗೆಯ ಅಡುಗೆ ಮಾಡಿ ಬಡಿಸುತ್ತಿದ್ದರು. ಆಗ ಅಮ್ಮನ ಅಡುಗೆ ತಿಂದು ಬೆಳೆದಿದ್ದೆ. ಈಗ ನಾನೇ ಒಬ್ಬಟ್ಟು ಮಾಡಬೇಕು. ಚಿಕ್ಕವರಿರುವಾಗ ಅಜ್ಜಿ, ಅಜ್ಜನ ಮನೆಗೆ ಹೋಗುತ್ತಿದ್ದೆವು. ಶಾಲೆಗಳಿಗೆ ರಜೆ ಇರುವುದರಿಂದ ಅಜ್ಜಿ-ಅಜ್ಜನ ಮನೆಯಲ್ಲಿ ಮಕ್ಕಳೇ ತುಂಬಿಕೊಳ್ಳುತ್ತಿದ್ದರು. ಎಲ್ಲರೊಂದಿಗೆ ಆಟವಾಡುತ್ತಾ ಹಬ್ಬದ ಸಂಭ್ರಮ ಸವಿಯುತ್ತಿದ್ದೆವು.
-ಪವಿತ್ರಾ ಲೋಕೇಶ್, ನಟಿ



ಮಗನ ಜತೆ ಹಬ್ಬ
ನಮಗೆ ಹೊಸ ವರ್ಷವೆಂದರೆ ಯುಗಾದಿ. ಬೇವು- ಬೆಲ್ಲ ಹಂಚಿ ಖುಷಿ ಪಡುತ್ತೇವೆ. ಮನೆಯಲ್ಲಿ ಹಬ್ಬದಡುಗೆ ಮಾಡುತ್ತೇವೆ. ಕೆಲಸದ ಜಂಜಡದಿಂದ ಮುಕ್ತಿ.

ನಾವು ಚಿಕ್ಕವರಿರುವಾಗ ಯಾವುದೇ ಜವಾಬ್ದಾರಿಗಳು ಇರುತ್ತಿರಲಿಲ್ಲ.  ಹಬ್ಬದ ಆಚರಣೆಗೆ ಅಜ್ಜಿ, ಅಜ್ಜನಮನೆಗೆ ಹೋಗುತ್ತಿದ್ದೆವು. ಹೊಸಬಟ್ಟೆ ಹಾಕಿಕೊಂಡು, ಸಿಹಿತಿಂದು ಓಡಾಡುವುದೇ ಖುಷಿಯ ಸಂಗತಿಯಾಗಿತ್ತು.

ಈ ಬಾರಿಯ ಯುಗಾದಿಯ ಸಂಭ್ರಮಕ್ಕೆ ನನ್ನ ಮಗ ಕೂಡ ಜತೆಯಾಗಿದ್ದಾನೆ. ಅವನಿಗೆ ಇದು ಮೊದಲ ಯುಗಾದಿ.
-ತಾರಾ ಅನೂರಾಧ, ನಟಿ



ವ್ಯಾಪಾರವೇ ಹಬ್ಬ...
ವರ್ಷದಾರಂಭ, ಬೇವು ಬೆಲ್ಲ ತಿಂದು ದುಃಖ ಸಂತೋಷವನ್ನು ಸಮನಾಗಿ ಹಂಚಿಕೊಳ್ಳುವ ಸುಕಾಲ. ಅದೇ ಯುಗದ ಆದಿ ಯುಗಾದಿ. ಕೆಲಸಗಳ ಜಂಜಾಟದಲ್ಲಿ ಹೊಸ ವರ್ಷದ ಹಬ್ಬವೂ ಕೆಲವರ ಕಣ್ಣಲ್ಲಷ್ಟೇ ಹಾದು ಹೋಗುತ್ತದೆ.

ರಜಾ ಇಲ್ಲ, ವ್ಯಾಪಾರ ಇದೆ

`ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡ್ತೀವಿ. ಮಾವಿನ ಎಲೆಯ ತೋರಣ ಈ ಹಬ್ಬದ ವಿಶೇಷ. ಚಿಕ್ಕವಿರುವಾಗ ಹಳ್ಳಿಯಲ್ಲಿದ್ವಿ. ಎಲ್ಲ ಸೇರಿ ಹಬ್ಬವನ್ನು ಚೆನ್ನಾಗಿ ಮಾಡ್ತಿದ್ವಿ. ಈಗ ಕೆಲಸ ಇರತ್ತಲ್ಲ. ಅದೂ ಅಲ್ಲದೆ ಯುಗಾದಿ ಹಬ್ಬಕ್ಕೆ ಎಲ್ಲರಿಗೂ ರಜೆ. ಸೆಕೆ ಬೇರೆ ಇದೆ. ಹೀಗಾಗಿ ಸಂಜೆ ಸಮಯಕ್ಕೆ ಹೊರಗಡೆ ಬರೋರು ಜಾಸ್ತಿ. ನಮ್ಮ ವ್ಯಾಪಾರವೂ ಚೆನ್ನಾಗಿ ಆಗುತ್ತದೆ. ಯುಗಾದಿ ಇರಲಿ ಯಾವುದೇ ಹಬ್ಬ ಇರಲಿ. ನಾವು ರಜಾ ತಗೊಂಡು ಮಜಾ ಮಾಡಕ್ಕಾಗಲ್ಲವಲ್ಲ. ವ್ಯಾಪಾರ ಇರುತ್ತದೆ. ನಮ್ಮ ಹಬ್ಬ ಎಂದುಕೊಂಡು ಕೈಲಾದಷ್ಟು ಖುಷಿಯಿಂದ ಆಚರಣೆ ಮಾಡುತ್ತೇವಷ್ಟೇ' ಎನ್ನುತ್ತಾರೆ 17 ವರ್ಷದಿಂದ ರುಚಿರುಚಿಯಾದ ಚಾಟ್ ಉಣಬಡಿಸುತ್ತಿರುವ ಪಾನೀಪುರಿ ಅಂಗಡಿ ರಾಜು.


`ಹಬ್ಬ ಶ್ರೀಮಂತರಿಗೆ'
`ಏನವ್ವ... ಹಬ್ಬ ಜೋರು ಹ್ಯಾಂಗ್ ಮಾಡೋದು. ಕೂಲಿ ಮಾಡಿ ಊಟ ಮಾಡೋರು ನಾವು. ಆದಿನ ದುಡಿದದ್ದು ಅಂದೇ ಮುಗಿದು ಹೋಗುತ್ತದೆ. ಹಬ್ಬ, ಒಬ್ಬಟ್ಟು, ಸಿಹಿತಿಂಡಿ ಎಲ್ಲಾ ಶ್ರೀಮಂತರಿಗೆ ಮಾತ್ರ. ಮುಸ್ಲಿಂರಿಗಾದ್ರೆ ಎರಡೇ ಹಬ್ಬ. ನಾವು ಹಿಂದುಗಳಿಗೆ ದಿನವೂ ಹಬ್ಬ ಅಲ್ಲವೇನವ್ವ... ದೊಡ್ಡಮೆಣಸು, ನುಗ್ಗೆಕಾಯಿ ಕೆ.ಜಿಗೆ 20 ತಗೊಳ್ರವ್ವ. ಯುಗಾದಿ ಆಫರ‌್ರು. ವ್ಯಾಪಾರ ಚೆನ್ನಾಗಾದ್ರಷ್ಟೇ ನಮಗೆ ಹಬ್ಬ' ಎನ್ನುತ್ತಾ ವ್ಯಾಪಾರದಲ್ಲಿ ನಿರತರಾದರು ತರಕಾರಿ ವ್ಯಾಪಾರಿ ಸಿಂಗು.


ಹಳ್ಳಿ ಹಬ್ಬ ಚೆಂದ

`ಬೆಳಿಗ್ಗೆ ಎದ್ದು ಮನೆಮುಂದೆ ಸಾರ್ಸಿ ಚೊಕ್ಕ ಮಾಡ್ತೀವಿ. ದೇವರನ್ನು ತೊಳೆದು ಪೂಜಿಸ್ತೀವಿ. ಎಣ್ಣೆ ಹಚ್ಕೊಂಡು ಬಿಸಿ ನೀರಿ ಸ್ನಾನ ಮಾಡ್ತೀವಿ. ಒಬ್ಬಟ್ಟು ಮುಂತಾದ ವಿಶೇಷ ಅಡುಗೆ ಮಾಡುವುದು ಈ ಹಬ್ಬದ ಬೋನಸ್. ಈಗೆಲ್ಲದರ ಬೆಲೆ ದುಬಾರಿ ಆಗಿದೆ. ಮೊದಲಿನಷ್ಟು ಚೆನ್ನಾಗಿ ಹಬ್ಬ ಆಚರಿಸೋಕೆ ಆಗಲ್ಲ. ಊರಲ್ಲಾದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಗಂಡಸರು ಹೊಲಕ್ಕೆ ಹೋಗಲ್ಲ. ಚೌಕಾಬಾರ್ ಆಟ ಆಡ್ಕಂಡು ಕೂತ್ಕೊತಾರೆ. ಬೆಂಗಳೂರಿಗೆ ಬಂದಿದೀವಿ. ಕೆಲಸ ಮಾಡಲೇ ಬೇಕು. ಒಬ್ಬಟ್ಟು ಮಾಡುತ್ತಾ ಕುಳಿತುಕೊಳ್ಳುವಷ್ಟು ಸಮಯ ಇಲ್ಲಿ ಯಾರಿಗೂ ಇಲ್ಲ. ಅಂಗಡಿಯಲ್ಲಿ ಸಿಗುತ್ತೆ. ಅದನ್ನೇ ಖರೀದಿಸಿ ಹಬ್ಬ ಮಾಡುವವರು ಹೆಚ್ಚು' ಎನ್ನುತ್ತಾರೆ ಹಾಪ್‌ಕಾಮ್ಸ ಅಂಗಡಿಯ ಬೋರೇಗೌಡ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT