ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡನಹಳ್ಳಿಗೆ ಮರದ ದಿಮ್ಮಿಯೇ ಸೇತುವೆ!

Last Updated 29 ಜೂನ್ 2011, 9:40 IST
ಅಕ್ಷರ ಗಾತ್ರ

ಸಕಲೇಶಪುರ: ಜೀವ ಕೈಯಲ್ಲಿ ಇಟ್ಟುಕೊಂಡು ಮರದ ಮೆಟ್ಟಿನ (ಹಲಗೆ) ಮೇಲೆ ಮೆಲ್ಲಗೆ ಹೆಜ್ಜೆ ಇಡುತ್ತ ಹೊಳೆ ದಾಟುವ ನರಕ ಯಾತನೆಯನ್ನು  ತಾಲ್ಲೂಕಿನ ಕೆಲವು ಹಳ್ಳಿಗಳ ಜನರು ನಿತ್ಯವೂ ಅನುಭವಿಸುತ್ತಿದ್ದಾರೆ.ತಾಲ್ಲೂಕಿನ ನೂದರಹಳ್ಳಿ, ನಡನಹಳ್ಳಿ ಹಾಗೂ ಈ ಭಾಗದ ಗ್ರಾಮಗಳ ಗ್ರಾಮಸ್ಥರು ಹಲವು ವರ್ಷಗಳಿಂದ ಹೊಳೆ ದಾಟಲು ಹರಸಾಹಸ ಪಡುತ್ತಿದ್ದಾರೆ. 

ಈ ಗ್ರಾಮಗಳು ತಾಲ್ಲೂಕಿನ ಪಶ್ಚಿಮಘಟ್ಟದ ಅಂಚಿನಲ್ಲೇನೂ ಇಲ್ಲ, ತಾಲ್ಲೂಕು ಕೇಂದ್ರದಿಂದ ಕೇವಲ 20 ಕಿ.ಮೀ. ವ್ಯಾಪ್ತಿಯ ಒಳಗೆ ಇವೆ. ನಡನಹಳ್ಳಿ ಹಾಗೂ ನೂದರಹಳ್ಳಿ ಈ ಎರಡೂ ಗ್ರಾಮಗಳ ಮಧ್ಯದಲ್ಲಿ ಹರಿಯುವ ಕೇರಿ ಹಳ್ಳಕ್ಕೆ ಅದು ಹುಟ್ಟುವ ಕ್ಯಾನಹಳ್ಳಿಯಿಂದ, ಸೇರುವ ಕೆಂಪು ಹೋಳೆ ವರೆಗೂ ಎಲ್ಲಿಯೂ ಸಹ ಒಂದೇ ಒಂದು ಸೇತುವೆ ಇಲ್ಲ. ಈ ಹಳ್ಳಕ್ಕೆ ಸೇತುವೆಯ ಅಗತ್ಯ ಮೇಲಿನ ಎರಡು ಗ್ರಾಮಗಳ ಗ್ರಾಮಸ್ಥರಿಗೆ ಮಾತ್ರ ಸೀಮಿತವಲ್ಲ.

ನದಿಯ ಪಶ್ಚಿಮ ದಿಕ್ಕಿನಲ್ಲಿ ಇರುವ ನೂದರಹಳ್ಳಿ ಆಲುವಳ್ಳಿ ಕಡಗರವಳ್ಳಿ, ಕ್ಯಾನಹಳ್ಳಿ, ಬುಗುಡಹಳ್ಳಿ, ನದಿಯ ಪೂರ್ವ ದಿಕ್ಕಿನಲ್ಲಿ ಇರುವ ಬೊಮ್ಮನಕೆರೆ, ನಡನಹಳ್ಳಿ, ಹೆತ್ತೂರು, ಶುಕ್ರವಾರಸಂತೆ, ಕರಡಿಗಾಲ, ವಳಲಹಳ್ಳಿ ಹೀಗೆ ಇನ್ನೂ ಹಲವು ಗ್ರಾಮಗಳ ಜನರಿಗೂ ಅಗತ್ಯವಾಗಿದೆ. ಕೇರಿ ಹಳ್ಳಕ್ಕೆ ಸೇತುವೆ ಇಲ್ಲದೆ ಇರುವುದರಿಂದ ಕೇವಲ ಅರ್ಧ ಕಿಲೋಮೀಟರ್,  ಒಂದು ಕಿ.ಮೀ. ಅಂತರದಲ್ಲಿ ಇರುವ ಗ್ರಾಮಗಳ ನಡುವೆ ತಲತಲಾಂತರದಿಂದ ಸಂಪರ್ಕ ಕಡಿತಗೊಂಡಿದೆ.

ಹಳ್ಳಕ್ಕೆ ಒಂದು ಸೇತುವೆ ಮಾಡಿಕೊಡಿ ಎಂದು ಮೂರು ದಶಕಗಳಿಂದಲೂ ಸಹ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಪ್ರತಿ ವಿಧಾನಸಭಾ ಚುನಾವಣೆ, ಜಿ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಗೆದ್ದ 6 ತಿಂಗಳಲ್ಲಿ ನಿಮ್ಮೂರಿಗೆ ಸೇತುವೆ ಮಾಡಿಕೊಡುತ್ತೇವೆ ಎಂದು             ಭರವಸೆ ನೀಡಿ ಹೋಗುತ್ತಾರೆ. ಆದರೆ ಅದು ಈಡೇರಿಯೇ ಇಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಜನಪ್ರತಿನಿಧಿಗಳಿಂದ ಸೇತುವೆ ಕೆಲಸ ಆಗುತ್ತದೆ ಎಂಬ ವಿಶ್ವಾಸ ಕಳೆದುಕೊಂಡಿರುವ ಗ್ರಾಮಸ್ಥರೇ, ಶ್ರಮ ವಹಿಸಿ ಒಂದೂವರೆ ಅಡಿ ಅಗಲದ ಮರದ ಮೆಟ್ಟು ನಿರ್ಮಿಸಿಕೊಂಡಿದ್ದಾರೆ. ಈ ಮೆಟ್ಟಿನಲ್ಲಿ ಮಕ್ಕಳು, ವಯಸ್ಸಾದವರು, ಮಹಿಳೆಯರು ನದಿ ದಾಟುವುದು ಒಂದು ದೊಡ್ಡ ಸಾಹಸವೇ ಸರಿ,
ಈ ಮೆಟ್ಟಿನಲ್ಲಿ ಹಳ್ಳ ದಾಟುತ್ತಿದ್ದ ಸಂದರ್ಭದಲ್ಲಿ ನೂದರಹಳ್ಳಿ ಗ್ರಾಮದ ಪಾರ್ವತಮ್ಮ, ನಡನಹಳ್ಳಿಯ ರಾಜು ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿದೆ. ಹಿಂದೆ ಇನ್ನೂ ಹಲವರು ಇಂತಹ ಘಟನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ನಿತ್ಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಒಂದು ಕೈಯಲ್ಲಿ ಕೊಡೆ, ಮತ್ತೊಂದು ಕೈಯಲ್ಲಿ ಮೇಟ್ಟಿನ ಹಗ್ಗ ಹಿಡಿದು ತುಂಬಿ ಹರಿಯುವ ಹಳ್ಳ ದಾಟುವುದನ್ನು ವಿವರಿಸುವುದಕ್ಕೆ ಭಯವಾಗುತ್ತದೆ  ಎಂದು ನೂದರಹಳ್ಳಿ ಗ್ರಾಮದ ಚಂದ್ರಶೇಖರ್ ಹೇಳುತ್ತಾರೆ.

ಇಲ್ಲಿಗೊಂದು ಸೇತುವೆ ನಿರ್ಮಿಸಲು ಹಳ್ಳಕ್ಕೆ ಇನ್ನೆಷ್ಟು ಜನರ ಬಲಿಯಾಗಬೇಕೋ ಗೊತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT