ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಿದೆ ಚುನಾವಣೆ ತಾಲೀಮು

Last Updated 7 ಡಿಸೆಂಬರ್ 2012, 6:33 IST
ಅಕ್ಷರ ಗಾತ್ರ

ತುಮಕೂರು: ವಿಧಾನಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ತಾಲೀಮು ಆರಂಭಿಸಿವೆ. ಈಚಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ಯಾವ ಸಮಯದಲ್ಲಾದರೂ ಚುನಾವಣೆ ಎದುರಾಗಬಹುದು ಎಂಬ ನಿರೀಕ್ಷೆಯಲ್ಲಿ ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಇದ್ದಾರೆ.

ರಾಜಕೀಯ ಪಕ್ಷಗಳು ಸಮಾವೇಶ ನಡೆಸಲು ತುಮಕೂರು ನಗರವನ್ನೇ ಕೇಂದ್ರೀಕರಿಸುತ್ತಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಜತೆಗೆ ರಾಜಕೀಯ `ಕೇಂದ್ರ ಬಿಂದು' ಆಗುವ ಸೂಚನೆಯೂ ಕಾಣುತ್ತಿದೆ. ಹಲವು ಕಾರಣಗಳಿಂದ ತುಮಕೂರು ಸುತ್ತ ರಾಜಕೀಯ ಗಿರಕಿ ಹೊಡೆಯುತ್ತಿದೆ.

ಜೆಡಿಎಸ್ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಸಮುದಾಯದ ಸಮಾವೇಶ ನಡೆಸುವ ಮೂಲಕ ಆ ವರ್ಗದ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿತು. ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ವಿಭಾಗ ಮಟ್ಟದ ಮುಸ್ಲಿಂರ ಸಮಾವೇಶ ನಡೆಸಿ ನಾವು ನಿಮ್ಮ ಜತೆಗೆ ಇದ್ದೇವೆ ಎಂಬುದನ್ನು ತೋರಿಸಿತು. ನೇಕಾರರ ಸಮಾವೇಶದ ನೆಪದಲ್ಲಿ ರಾಜಕೀಯ ಮುಖಂಡರನ್ನು ಕರೆಸಿ ಚುನಾವಣೆಗೆ ಮುನ್ನುಡಿ ಬರೆಯಲಾಯಿತು.

ಚುನಾವಣೆ ಸಮೀಪಿಸಿದಂತೆ ಜೆಡಿಎಸ್- ಕಾಂಗ್ರೆಸ್ ರಾಜಕೀಯ ಚಟುವಟಿಕೆ ಚುರುಗೊಳಿಸಿವೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ವಂತ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ತಮ್ಮ ಮುಂದಿನ `ಸ್ಥಾನ' ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲೇ ಪಕ್ಷ ಹಿನ್ನೆಡೆ ಕಂಡರೆ ಸಾಕಷ್ಟು ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ದೂರದೃಷ್ಟಿ ಹೆಚ್ಚು ಶ್ರಮ ವಹಿಸುವಂತೆ ಮಾಡಿದೆ. ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ, ಅಭಿಪ್ರಾಯ ಸಂಗ್ರಹಿಸಲು ಜಿಲ್ಲೆಗೆ ವೀಕ್ಷಕರು ಎರಡು ಬಾರಿ ಭೇಟಿ ನೀಡಿದ್ದಾರೆ.

`ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ' ಕಾರ್ಯಕ್ರಮದ ಮೂಲಕ ಗ್ರಾಮಾಂತರ ಪ್ರದೇಶದ ಜನರನ್ನು ತನ್ನತ್ತ ಸೆಳೆಯುವಲ್ಲಿ ನಿರತವಾಗಿದೆ. ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಬ್ಸಿಡಿ ಸಹಿತದ ಅಡುಗೆ ಅನಿಲದ ಮಿತಿಯನ್ನು ವರ್ಷಕ್ಕೆ 6 ಸಿಲಿಂಡರ್‌ಗೆ ಸೀಮಿತಗೊಳಿಸಿರುವುದು ತಲೆನೋವಾಗಿದೆ. ಕಾಂಗ್ರೆಸ್ ಮುಖಂಡರು ಹೋದಲ್ಲೆಲ್ಲ ಸಬ್ಸಿಡಿ ಸಿಲಿಂಡರ್ ಮಿತಿ ಹೆಚ್ಚಿಸುವಂತೆ ಸಾರ್ವಜನಿಕರು ಕೇಳುತ್ತಿರುವುದು ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ಪ್ರಯತ್ನಕ್ಕೆ ಕೇಂದ್ರದ ನಿರ್ಧಾರಗಳು ಸಮಸ್ಯೆಯಾಗಿ ಕಾಡುತ್ತಿವೆ.

ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಶಕ್ತಿಯನ್ನು ಮತ್ತಷ್ಟು ಗಟ್ಟಿ ಮಾಡುವ ಪ್ರಯತ್ನ ಆರಂಭಿಸಿದೆ. ಬೆಂಗಳೂರಿನಲ್ಲಿ ಪಕ್ಷ ನಡೆಸಿದ ಸಮಾವೇಶಗಳಿಗೆ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಕರೆದೊಯ್ದಿತ್ತು. ನಗರದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶಕ್ಕೂ ಹೆಚ್ಚು ಜನರನ್ನು ಕರೆತರುವ ಮೂಲಕ ದಲಿತ ಸಮುದಾಯದ ಮತ ಬ್ಯಾಂಕ್‌ಗೂ ಕೈಹಾಕಿದೆ. ಪಕ್ಷದಲ್ಲಿ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚುನಾವಣೆ ಸಮೀಪಿಸಿದಂತೆ ಗೊಂದಲ ಕಾಣಿಸಿಕೊಳ್ಳುವ ಲಕ್ಷಣ ಗೋಚರಿಸುತ್ತಿವೆ. ಟಿಕೆಟ್ ನೀಡುವುದು ಕೆಲ ಮಟ್ಟಿಗೆ ಸಮಸ್ಯೆಯಾಗಲಿದೆ. ಚುನಾವಣೆ ಯಾವ ಸಮಯದಲ್ಲಿ ಬಂದರೂ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ಆದರೆ ಬಿಜೆಪಿ ಗೊಂದಲದ ಗೂಡಾಗಿದೆ. ಪಕ್ಷದಲ್ಲಿ ಯಾರು ಉಳಿಯುತ್ತಾರೆ, ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿಗೆ ಯಾರೆಲ್ಲ ಹೋಗುತ್ತಾರೆ, ಬಿಜೆಪಿ ಹಿಂದಿನ ಶಕ್ತಿ, ಗಟ್ಟಿತನ ಉಳಿಸಿಕೊಳ್ಳುವುದೆ? ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್‌ನಿಂದ ಬಂದು ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಜಿ.ಎಸ್.ಬಸವರಾಜು ಪಕ್ಷದಿಂದ ಹೊರ ನಡೆದು ಕೆಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಕೆಜೆಪಿ ಮೂಲಕ ತಮ್ಮ ಪುತ್ರ ಜ್ಯೋತಿ ಗಣೇಶ್ ಅವರಿಗೆ ರಾಜಕೀಯ ವೇದಿಕೆ ಸಿದ್ಧಪಡಿಸಲು ಮುಂದಾಗಿದ್ದಾರೆ.

ಯಡಿಯೂರಪ್ಪ ಜತೆಗೆ ಗುರುತಿಸಿಕೊಂಡಿರುವ ಸಾಕಷ್ಟು ಮುಖಂಡರು, ಬಿಜೆಪಿ ನಗರಸಭೆ ಸದಸ್ಯರು ಕೆಜೆಪಿ ಹಿಂಬಾಲಿಸಲು ಸಮಯಕ್ಕಾಗಿ ಕಾಯುತ್ತಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ತಂದಿರುವ ಅವಿಶ್ವಾಸ ಸಭೆ ನಂತರ ಬಹುತೇಕ ಬಿಜೆಪಿ ಸದಸ್ಯರು ಕೆಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಆಪ್ತ ಬಳಗದಲ್ಲಿ ಒಬ್ಬರಾಗಿದ್ದ ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ಗೌಡ ಇನ್ನೂ ಯಾವೊಂದು ನಿರ್ಧಾರಕ್ಕೂ ಬರಲಾರದೆ ಗೊಂದಲದಲ್ಲಿ ಇದ್ದಾರೆ. ಯಡಿಯೂರಪ್ಪ ಹಿಂಬಾಲಿಸಿದರೆ ಮತದಾರರು ಗೆಲುವಿನ ದಡ ಸೇರಿಸುವರೆ? ಬಿಜೆಪಿಯಲ್ಲೇ ಉಳಿದರೆ ಅನುಕೂಲ ಆಗುವುದೆ? ಕಾಂಗ್ರೆಸ್ ಸೇರಿದರೆ ಸಹಕಾರಿಯಾಗುವುದೆ? ಎಂಬ ಗೊಂದಲ ಕಾಡುತ್ತಿದ್ದು, ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಹಾವೇರಿಯಲ್ಲಿ ಡಿ. 9ರಂದು ನಡೆಯುವ ಸಮಾವೇಶದ ನಂತರ ಒಂದು ನಿರ್ಧಾರಕ್ಕೆ ಬರಬಹುದು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಜೆಡಿಎಸ್, ಕಾಂಗ್ರೆಸ್‌ನಲ್ಲಿ ಹೆಚ್ಚಿನ ಬದಲಾವಣೆಗಳು ಕಾಣಿಸದಿದ್ದರೂ ಬಿಜೆಪಿಯಲ್ಲಿ ವಲಸೆ ಹೆಚ್ಚಲಿದೆ.
ಡಿ. 9ರ ಹಾವೇರಿ ಸಮಾವೇಶದ ನಂತರ ಜಿಲ್ಲೆಯಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳು ಗೋಚರಿಸಲಿವೆ. ಈ ಎಲ್ಲ ಬೆಳವಣಿಗೆಗಳು ಮುಂದಿನ ಚುನಾವಣೆ ಮೇಲೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT