ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನದಿ ಜೋಡಣೆಯಿಂದ ಮಾತ್ರ ಪ್ರವಾಹ ತಡೆ'

Last Updated 1 ಜುಲೈ 2013, 6:32 IST
ಅಕ್ಷರ ಗಾತ್ರ

ಧಾರವಾಡ: `ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ದೇಶದ ಎಲ್ಲ ನದಿಗಳನ್ನು ಜೋಡಣೆ ಮಾಡುವ ಉದ್ದೇಶ ಹೊಂದಿದ್ದರು. ಒಂದು ವೇಳೆ ಎಲ್ಲ ನದಿಗಳ ಜೋಡಣೆಗೆ ಚಾಲನೆ ಸಿಕ್ಕಿದ್ದರೆ ಇಂದು ಉತ್ತರಾಖಂಡದಲ್ಲಿ ಆದ ಜಲಪ್ರವಾಹವನ್ನು ತಪ್ಪಿಸಬಹುದಿತ್ತು' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಇಲ್ಲಿಯ ರಪಾಟಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಘೋಷಣೆ, ಕಾರ್ಯಕರ್ತರ ಹಾಗೂ ಹಿತೈಷಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಎಲ್ಲ ನದಿಗಳ ಜೋಡಣೆ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದರೆ ಈ ದೇಶದ ಬರ ಪರಿಸ್ಥಿತಿಯನ್ನು ನಿವಾರಿಸಿ ಎಲ್ಲ ಕಡೆ ನೀರಾವರಿ ಯೋಜನೆಯನ್ನು ಜಾರಿಗೆ ತರಬಹುದಿತ್ತು. ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮಸ್ಯೆಗಳನ್ನು ಬಗೆಹರಿಸಿದ್ದರು. ಆದರೆ ಇಂದು ಕೇಂದ್ರದಲ್ಲಿ ಇರುವ ಸರ್ಕಾರದ ಆಡಳಿತದಿಂದಾಗಿ ಈ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ' ಎಂದು ಟೀಕಿಸಿದರು.

`ವಾಜಪೇಯಿ ಅವರಂತಹ ನಾಯಕ ಈ ದೇಶಕ್ಕೆ ಅತ್ಯವಶ್ಯವಾಗಿ ಬೇಕಾಗಿದ್ದಾರೆ. ಅಂಥವರ ಸಾಲಿನಲ್ಲಿ ಈಗ ನರೇಂದ್ರ ಮೋದಿ ಇದ್ದಾರೆ. ದೇಶದಲ್ಲಿ ಗುಜರಾತನ್ನು ಮಾದರಿ ರಾಜ್ಯವನ್ನಾಗಿ ಮಾಡಿರುವ ಮೋದಿ, ಈ ದೇಶದ ಪ್ರಧಾನಿಯಾದರೆ ಇಡೀ ದೇಶವನ್ನೇ ಅಭಿವೃದ್ಧಿಪಡಿಸುವುದರಲ್ಲಿ ಸಂದೇಹವಿಲ್ಲ. ಅಲ್ಲದೇ, ಇಂದು ರಾಷ್ಟ್ರದಲ್ಲಿ ಉದ್ಭವಿಸಿರುವ ಹಲವಾರು ಸಮಸ್ಯೆಗಳಿಗೆ ಮೋದಿ ಪರಿಹಾರವಾಗಲಿದ್ದಾರೆ. ಇಂದಿನ ನಮ್ಮ ರಾಷ್ಟ್ರದ ರಾಜಕಾರಣ ಶಿಸ್ತುಬದ್ಧವಾಗಿ ಇದ್ದಿದ್ದರೆ ಯೂರೋಪ್, ಅಮೆರಿಕ ಹಾಗೂ ಚೀನಾ ದೇಶಗಳಿಗಿಂತಲೂ ಬೆಳವಣಿಗೆ ಹೊಂದುತ್ತಿತ್ತು' ಎಂದರು.

`ಒಂದು ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲಬು ಆಗಿರುತ್ತಾರೆ. ಅಲ್ಲದೇ, ಅವರು ಸಂಘಟನೆಯ ಶಕ್ತಿ ಇದ್ದಂತೆ. ರಾಜಕಾರಣ ಹೊಲಸು ಎಂದು ತಿಳಿದುಕೊಂಡು ಹೊರಟರೆ ಅದು ಮತ್ತಷ್ಟು ಹೊಲಸಾಗಿ ಪರಿವರ್ತನೆ ಹೊಂದುತ್ತದೆ. ಅದನ್ನು ಶುದ್ಧೀಕರಣ ಮಾಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಇಳಿದು ರಾಜಕಾರಣವನ್ನು ಶುದ್ಧಗೊಳಿಸುವ ಕೆಲಸ ಮಾಡಬೇಕು' ಎಂದು ಶೆಟ್ಟರ್ ಹೇಳಿದರು.

`ಚಿಲ್ಲರೆ ವ್ಯಾಪಾರವನ್ನು ವಿದೇಶಿಯರಿಗೆ ವಹಿಸಿಕೊಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕೈ ಹಾಕಿದ್ದು, ಇದರಿಂದ ಕಿರಾಣಿ ವ್ಯಾಪಾರಸ್ಥರಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ' ಎಂದು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ, `ಹಿಂದೆಂದೂ ಆಗದಂತಹ ಆರ್ಥಿಕ ನಷ್ಟ ಇಂದು ಆಗಿದೆ. ಪೆಟ್ರೋಲ್, ಡೀಸೆಲ್‌ಗಳ ಬೆಲೆ ಏರಿಕೆಯಿಂದಾಗಿ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ರಾಷ್ಟ್ರದ ರಾಜಕಾರಣದಿಂದಾಗಿ ಈ ದೇಶದ ಭದ್ರತೆ ಛಿದ್ರವಾಗಿ ಹೋಗಿದೆ. ಚೀನಾ ದೇಶದವರು ನಮ್ಮ ದೇಶದ ಒಳಗೆ ನುಸುಳುತ್ತಿದ್ದರೂ ಈ ದೇಶದ ಪ್ರಧಾನಿ ಅವರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಇಂಥ ಯಾವ ಸಮಸ್ಯೆಗಳನ್ನೂ ಎದುರಿಸದ ನಿಶ್ಯಕ್ತ ಸರ್ಕಾರ ಕೇಂದ್ರದಲ್ಲಿ ಆಡಳಿತ ಮಾಡುತ್ತಿದೆ' ಎಂದು ಕಿಡಿ ಕಾರಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಸಿ.ಸವಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿದರು.  ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಪ್ರಕಾಶ ಗೋಡಬೋಲೆ, ಸಂಜಯ ಕಪಾಟಕರ, ಸುರೇಶ ಬೇದರೆ, ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ, ವೆಂಕಟೇಶ ಹುಬ್ಬಳ್ಳಿ, ಮಲ್ಲಿಕಾರ್ಜುನ ಸಾಹುಕಾರ, ದತ್ತಾ ಡೋರ್ಲೆ, ರಂಗಾಬದ್ದಿ ಮತ್ತಿತರರು ವೇದಿಕೆಯಲ್ಲಿದ್ದರು. ಮೋಹನ ರಾಮದುರ್ಗ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT