ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ತಿರುವು: ಹತ್ತು ತಿಂಗಳಲ್ಲಿ ಯೋಜನಾ ವರದಿ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಬಯಲು ಸೀಮೆ ಜಿಲ್ಲೆಗಳ ನೀರಿನ ಸಮಸ್ಯೆ ನೀಗಿಸಲು ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈಗಾಗಲೇ ಹರವನಹಳ್ಳಿ ವಿತರಣಾ ತೊಟ್ಟಿವರೆಗಿನ ಕಾಮಗಾರಿಯನ್ನು ಐದು ಪ್ಯಾಕೇಜ್ ಮಾಡಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಎನ್.ಎಚ್. ಶಿವಶಂಕರ ರೆಡ್ಡಿ ಮಂಡಿಸಿದ ಗಮನ ಸೆಳೆಯುವ ಸೂಚನೆ ಸಂಬಂಧ ನಡೆದ ಚರ್ಚೆಗೆ ಅವರು ಉತ್ತರಿಸಿದರು. ಪಶ್ಚಿಮವಾಹಿನಿ ನದಿಗಳು ಹರಿಯುವ ದೂರ ಚಿಕ್ಕದಾಗಿದ್ದು, ನೀರು ವ್ಯರ್ಥವಾಗಿ ಹರಿದು ಸಮುದ್ರದ ಪಾಲಾಗುತ್ತಿದೆ. ಈ ಪೋಲನ್ನು ತಪ್ಪಿಸಿ ಬಯಲು ಸೀಮೆಗೆ ಕಾಲುವೆಗಳ ಮೂಲಕ ನೀರು ಹರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

`ಪಶ್ಚಿಮ ಘಟ್ಟದ ನದಿಗಳಿಗೆ ತಿರುವು ನೀಡಿ, ನೀರು ಪಡೆಯಲು ಲೇಸರ್ ತಂತ್ರಜ್ಞಾನದಿಂದ ಸಮೀಕ್ಷಾ ಕಾರ್ಯ ಆರಂಭವಾಗಿದೆ. ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಅದಕ್ಕೆ 8-10 ತಿಂಗಳ ಕಾಲಾವಕಾಶ ಅಗತ್ಯವಿದೆ. ಡಿಪಿಆರ್ ತಯಾರಿಸುವ ಹೊಣೆಯನ್ನು ರೂ 10.02 ಕೋಟಿ ವೆಚ್ಚದಲ್ಲಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ' ಎಂದು ವಿವರಿಸಿದರು.

ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ನೀರಿನ ಸಮಸ್ಯೆ ಬಗೆಹರಿಸಲು ಎತ್ತಿನಹೊಳೆ ಯೋಜನೆ ಅಲ್ಪಾವಧಿ ಪರಿಹಾರವಾಗಿದ್ದು, ಜಿ.ಎಸ್. ಪರಮಶಿವಯ್ಯನವರ ವರದಿ ಅನುಷ್ಠಾನಕ್ಕೆ ತರುವ ಮೂಲಕ ದೀರ್ಘಾವಧಿ ಪರಿಹಾರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಮಾಹಿತಿ ನೀಡಿದರು.

`ಸರ್ಕಾರ ಉದ್ದೇಶಿಸಿದ ಎಲ್ಲ ನದಿ ತಿರುವಿನ ಯೋಜನೆಗಳು ಕಾರ್ಯಗತಗೊಂಡರೆ ನಿತ್ಯ 15 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಾಗಲಿದೆ. ಆದರೆ, ಈ ಯೋಜನೆಗಳು ಅನುಷ್ಠಾನಕ್ಕೆ ಬರಲು ಹತ್ತು ವರ್ಷಗಳಿಗೂ ಅಧಿಕ ಕಾಲಾವಕಾಶ ಬೇಕಿದೆ' ಎಂದು ಹೇಳಿದರು.

ಯೋಗೀಶ್ ಭಟ್ ಮಂಡಿಸಿದ ಮತ್ತೊಂದು ಗಮನ ಸೆಳೆಯುವ ಸೂಚನೆಗೆ ಸ್ಪಷ್ಟನೆ ನೀಡಿದ ಬೊಮ್ಮಾಯಿ, `ಕರಾವಳಿ ಜಿಲ್ಲೆಗಳಲ್ಲಿ 24 ನದಿಗಳು ಹರಿಯುತ್ತಿದ್ದು, ಎರಡು ವರ್ಷಗಳ ಅವಧಿಯಲ್ಲಿ 480 ಪುಟ್ಟ ಅಣೆಕಟ್ಟುಗಳನ್ನು ಕಟ್ಟಲು ತೀರ್ಮಾನಿಸಲಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT