ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯ ದಡದ ಮೇಲಿನ ಒಂದು ಊರಿನ ನೆನಪು

Last Updated 19 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಭಾಗ-1
ಬೆಳಗ್ಗೆ ಹನ್ನೊಂದರ ಸುಮಾರಿಗೆ ಪತ್ರ ಬಂತು. ಅದನ್ನು, ಅದರ ಲಕೋಟೆಯನ್ನು, ಮೂರ‌್ನಾಲ್ಕು ಬಾರಿ ಓದಿದೆ. ವೈಸ್‌ಛಾನ್ಸಲರ್ ಪಾವಟೆಯವರಿಗೆ ಅದನ್ನು ತೋರಿಸಲು ಆ ಸಂಜೆ ಅವರ ಮನೆಗೆ ಹೋದೆ. ಶ್ರೀಮತಿಯವರೊಡನೆ ಲಾನ್‌ನಲ್ಲಿ ಕುಳಿತಿದ್ದ ಅವರನ್ನು ಸಮೀಪಿಸಿದಾಗ, `ಏನು! ಏನು ಬೇಕಿತ್ತು?~ ಎಂದು ಒಂದೇ ಉಸಿರಿನಲ್ಲಿ ಕೇಳಿದರು.
 
ಹಾಗೆ ಮಾತನಾಡುತ್ತಿದ್ದುದು ಅವರ ಸ್ವಭಾವ. `ಏನು ಇಲ್ಲ, ಹೈಯರ್ ಸ್ಟಡೀಸ್‌ಗಾಗಿ ಕೇಂಬ್ರಿಜ್‌ಗೆ ಹೋಗಲು ನನಗೆ ಕಾಮನ್‌ವೆಲ್ತ್ ಫೆಲೋಷಿಪ್ ಸಿಕ್ಕಿದೆ, ತಮಗೆ ತಿಳಿಸಲು ಬಂದೆ~ ಎಂದೆ.

`ಏನು? ಕೇಂಬ್ರಿಜ್‌ಗಾ? ಎಲ್ಲಿದೆ ಪತ್ರ~ ಎಂದು ಅದನ್ನು ನನ್ನಿಂದ ಕಿತ್ತುಕೊಳ್ಳುವಂತೆ ತೆಗೆದುಕೊಂಡು, ಬಂಗಲೆಯೊಳಗೆ ಹೋಗಿ, ಕನ್ನಡಕ ಹಾಕಿಕೊಂಡು ಓದುತ್ತಾ ಮರಳಿ ಬಂದು, ನನ್ನನ್ನು ಮರೆತು, ಅವರ ಶ್ರೀಮತಿಗೆ ಹೇಳಿದರು.
 
`ನೋಡು! ಈತನಿಗೆ ಕೇಂಬ್ರಿಜ್‌ಗೆ ಹೋಗಲು ಫೆಲೋಷಿಪ್ ಸಿಕ್ಕಿದೆ~ ಎಂದು. ಮೌನವಾಗಿಯೇ ಒಮ್ಮೆ ನನ್ನನ್ನು, ಮತ್ತೊಮ್ಮೆ ಪಾವಟೆಯವರನ್ನು ನೋಡುತ್ತಾ ಅವರು ನಸುನಕ್ಕರು. `ಆ ಮತ್ತೆ? ನಿನ್ನ ಹೆಂಡತಿಯನ್ನು ಕರಕೊಂಡು ಹೋಗ್ತೀ ತಾನೆ? ನಾಳೆ ಆಫೀಸಿಗೆ ಬಾ. ಮಾತಾಡೋಣ~ ಎಂದರು.

ಮರುದಿನ ಅವರ ಆಫೀಸ್ ತಲುಪಿದಾಗ, ಅವರ ಪಿ.ಎ, `ಇಲ್ಲಿ ನಿಮ್ಮ ಫೈಲ್ ಇದೆ. ನಿಮಗೆ ರಜೆ ಮಂಜೂರಿ ಮಾಡುವ ಬಗ್ಗೆ ರಿಜಿಸ್ಟ್ರಾರ್‌ಗೆ ಸೂಚನೆ ಕೊಟ್ಟಿದ್ದಾರೆ. ನಿಮ್ಮ ಹೆಂಡತಿ ಮತ್ತು ಮಗಳ ಪ್ರವಾಸದ ಖರ್ಚಿಗೆ 5000 ರೂಪಾಯಿ ಬಡ್ಡಿರಹಿತ ಹಣ ಮಂಜೂರು ಮಾಡಿದ್ದಾರೆ, ನೀವು ಒಂದು ಫಾರ‌್ಮಲ್ ಅಪ್ಲಿಕೇಶನ್ ಕೊಟ್ಟು ಪ್ರಯಾಣದ ಸಿದ್ಧತೆ ಮಾಡಿಕೊಳ್ಳಬೇಕಂತೆ~ ಅಂದ. ಬೆಳಗ್ಗೆ 10ಕ್ಕೆ ಆಫೀಸ್‌ಗೆ ಬಂದಾಕ್ಷಣ ಅವರಿಷ್ಟು ಕೆಲಸ ಮಾಡಿದ್ದರು. ಇದು ಅವರ ಆಡಳಿತಾ ವೈಖರಿಯಾಗಿತ್ತು.

ಆ ಸಂಜೆ ಮನೆ ಸೇರಿದಾಗ ವಾತಾವರಣ ಬದಲಾಗಿತ್ತು. ಒಬ್ಬೊಬ್ಬರು ಒಂದೊಂದು ಬಗೆಯ ಜಂಜಾಟದಲ್ಲಿ ತೊಡಗಿಕೊಂಡಿದ್ದರು. ಅಮ್ಮ, ಮೊದಲು ನನ್ನ, ನನ್ನ ಹೆಂಡತಿಯ, ಮೂರು ವರ್ಷದ ಮಗಳ `ಲಿಂಗಪ್ಪ~ಗಳನ್ನು ಸೀಜ್‌ಮಾಡಿ ತಮ್ಮ ಕಬ್ಜಾ ತೆಗೆದುಕೊಂಡರು. `ನೀವು ಮರಳಿ ಬರುವವರೆಗೂ ನಾನಿವನ್ನು ಪೂಜೆ ಮಾಡ್ತೀನಿ~ ಎಂದರು. ನಮ್ಮ ಅತ್ತೆಯೂ ಹುಬ್ಬಳ್ಳಿಯಿಂದ ಬಂದಿದ್ದರು. ಅವರೊಡನೆ ಲಿಂಗನಮಠದ ವಯಸ್ಸಾದ ಸಂಬಂಧಿಯೊಬ್ಬಳಿದ್ದಳು.

ಮಗಳು ಇಂಗ್ಲೆಂಡಿಗೆ ಹೋಗುವು ದೆಂದರೇನು ಸಾಮಾನ್ಯವೇ? ಲಿಂಗನಮಠದ ಮುದುಕಿಗೆ ಇದ್ಯಾವುದೂ ಅರ್ಥವಾಗದಿದ್ದರೂ ಬೇಬಿ ಇಂಗ್ಲೆಂಡಿಗೆ ಹೋಗಿ `ಲೇಡಿ~ ಆಗಿ ಬರ್ತಾಳೆ ಅನ್ನುವ ಖಾತ್ರಿಯಿತ್ತು. `ಲೇಡಿ ಆಗೋದು ಅಂದ್ರೆ ಏನಬೇ, ಅತ್ತಿಗೆ ಈಗ ಏನಾಗ್ಯಾಳ~ ಅಂತ ನನ್ನ ತಂಗಿ ಕೇಳಿ ತಮಾಷೆ ಮಾಡಿದಳು.

`ಅದೇ ಲೇಡಿ! ಅಷ್ಟೂ ಗೊತ್ತಿಲ್ಲೇನು ನಿಂಗೆ. ತುಟಿ ಕೆಂಪು ಮಾಡಿಕೊಳ್ಳೋದು, ಬಾಡಿ ಹಾಕೊಳ್ಳೋದು, ವಾಚು ಕಟ್ಟೋದು, ಎತ್ತರದ ಹಿಂಬಡದ ಚಪ್ಲಿ ಮೆಟ್ಟೋದು, ಕೂದಲಾ ಕಟ್‌ಮಾಡಿಕೊಳ್ಳೋದು, ಹೌದಲ್ಲ?~ ಎಂದು ಮರುಪ್ರಶ್ನೆ ಹಾಕಿದಳು. ಕಾಮನ್‌ವೆಲ್ತ್ ಫೆಲೋಷಿಪ್ಪಿನ ಇಂಗ್ಲೆಂಡ್ ಪ್ರವಾಸದ ಸಂಭ್ರಮದ ಮೊದಲ ದಿನ ಹೀಗೆ ಕಳೆದಿತ್ತು.

ಅಂದಿನ ಇಂಗ್ಲೆಂಡ್ ಪ್ರಯಾಣವನ್ನು ಇಂದಿನವರು ಊಹಿಸಲೂ ಸಾಧ್ಯವಿಲ್ಲ. ಅಂದು, ಎಂದರೆ 1960ರ ದಶಕ; ಅಂದರೆ ವಿದೇಶಕ್ಕೆ ಹೋಗುವವರು ಸಮುದ್ರಯಾನ ಬಿಟ್ಟು ವಾಯುಯಾನ ಕೈಗೊಂಡಿದ್ದ ಸಂಧಿಕಾಲ.

ನಮ್ಮ ವಿಶ್ವವಿದ್ಯಾನಿಯದಿಂದ ಆ ಮುಂಚೆ ವಿದೇಶಕ್ಕೆ ಹೋದವರೆಲ್ಲ ಮೂರುವಾರಕ್ಕೂ ಮಿಕ್ಕಿ ಹಡಗಿನಲ್ಲಿ ಮಾಡಿದ್ದ ಪ್ರಯಾಣದ ಕತೆಗಳನ್ನು ಹೇಳುತ್ತಿದ್ದರು. ನಮ್ಮದಾದರೋ ರೈಲು-ವಿಮಾನ ಪ್ರಯಾಣ.

ಧಾರವಾಡದಿಂದ ಮುಂಬೈಗೆ ರೈಲು, ಮುಂಬೈಯಿಂದ ದೆಹಲಿ ಮೂಲಕ ಲಂಡನ್‌ಗೆ ಬಿಓಏಸಿಯಲ್ಲಿ ಹಾರಾಟ. ಯಾನದ ವಿಧಾನವೇನೋ ಬದಲಾಗಿತ್ತು ನಿಜ, ಆದರೆ ವಿದೇಶ ಪ್ರಯಾಣದ ಸಂಭ್ರಮ ಬದಲಾಗಿರಲಿಲ್ಲ.

ನನ್ನ ಹೆಂಡತಿಯ ಸೂಟ್‌ಕೇಸ್‌ನಲ್ಲಿ ಬಟ್ಟೆಬರಿಗಿಂತ ಖಾರದಪುಡಿ, ಗುರೆಳ್ಳುಪುಡಿ, ಉಪ್ಪಿನಕಾಯಿ, ಹಪ್ಪಳ, ಬೆಳ್ಳೊಳ್ಳಿಪುಡಿ, ಹುಣಸೇಹಣ್ಣು, ಅಡಕೇಪುಡಿ, ಒಂದೇ ಎರಡೇ. ಎಲ್ಲವನ್ನೂ ತುಂಬಲಾಗಿತ್ತು.

ಇನ್ನು ಅವಳ ಖಾಸಗೀ ವಸ್ತುಗಳನ್ನು ಅವಳೇ ಅಡಗಿಸಿಕೊಂಡಿದ್ದಳು. ಸಿಕ್ಕು ಬಿಡಿಸುವ ಬಾಚಣಿಕೆ, ಬಳೆ, ಕುಂಕುಮ, ಕಾಡಿಗೆ, ಸೀಗೇಕಾಯಿಪುಡಿ, ನಂಜನಗೂಡು ಟೂತ್‌ಪೌಡರ್, ಕೊಬ್ಬರಿಎಣ್ಣೆ, ಆನೆಕೊರೆ ಬಾಚಣಿಕೆ, ಊದಿನಕಡ್ಡಿ, ಧೂಪ, ದೇವರ ಫೋಟೋ, ರೊಟ್ಟಿಹಂಚು, ಲತ್ತೋಡಿ, ಯಾರಿಗೆ ಗೊತ್ತು, ಅಲ್ಲಿ ಯಾವುದು ಸಿಗುವುದೋ ಯಾವುದು ಸಿಗುವುದಿಲ್ಲವೋ! ಮೂರುವರ್ಷದ ಸಂಸಾರ ಬೇರೆ!

ಧಾರವಾಡದ ಸ್ಟೇಶನ್ ಮುಟ್ಟಿದ ರೈಲಿನ ಮೊದಲ ದರ್ಜೆ ಡಬ್ಬಿಯಲ್ಲಿ, ನಾನು ಅವಳು ಮತ್ತು ಪ್ರಿಯಾ ಕುಳಿತಾಗ (ಅದು ನಾವೆಲ್ಲಾ ಒಟ್ಟುಗೂಡಿ ಮಾಡಿದ ಮೊದಲ ದರ್ಜೆಯ ಮೊದಲ ಪ್ರವಾಸ) ಅರ್ಧ ಕಂಪಾರ್ಟ್‌ಮೆಂಟು ಹೂವಿನಹಾರ, ತುರಾಯಿ, ತಿನಿಸು, ಹಣ್ಣುಗಳಿಂದ ತುಂಬಿತು. ರೈಲು ಸ್ಟೇಶನ್ ಬಿಟ್ಟನಂತರ ನಾವು ಹಿಂತಿರುಗಿ ನೋಡಿದಾಗ ನೂರಾರು ಬೆನ್ನುಗಳ ಪ್ರದರ್ಶನ.
 
ನಮ್ಮನ್ನು ಕಳಿಸಲು ಬಂದವರೆಲ್ಲರೂ ನಮ್ಮಷ್ಟೇ ಸುಸ್ತಾಗಿ ಅಂತೂಇಂತೂ ಕಳಿಸುವ ಶಾಸ್ತ್ರ ಕೊನೆಗೆ ಮುಗಿಯಿತಲ್ಲ, ಎಂದು ಸಮಾಧಾನದ ಉಸಿರು ಬಿಟ್ಟಿರಬೇಕು! ರೈಲು ಆಳ್ನಾವರ ದಾಟಿದ ನಂತರ ನಮ್ಮ ಸೂಟ್‌ಕೇಸು ಚೀಲಗಳನ್ನೆಲ್ಲಾ ಮತ್ತೊಮ್ಮೆ ಹೊಂದಿಸಿಕೊಂಡು, ಬಾಡಲು ತೊಡಗಿದ್ದ ಮಲ್ಲಿಗೆ ಮಾಲೆಗಳನ್ನು ಒಂದೊಂದಾಗಿ ಹೊರಗೆ ಎಸೆದೆವು.
 
ನಮ್ಮ ಡಬ್ಬಿಯಲ್ಲಿ ಇನ್ನಿಬ್ಬರು ಅಪರಿಚಿತರು ಪ್ರಯಾಣಿಸುತ್ತಿದ್ದರು. ಅಲ್ಲಿಯವರೆಗೂ ಇದ್ದ ಗೌಜು ಮಾಯವಾಗಿ, ಡಬ್ಬಿಯೂ ಸ್ವಲ್ಪ ಸ್ವಚ್ಚವಾಗಿದ್ದಕ್ಕೆ ಅವರಿಗೂ ಖುಷಿಯಾಗಿರಬೇಕು. `ಮಮ್ಮೀ ಹಂಗ್ರೀ~ ಎಂದು ಪ್ರಿಯಾ ಹೇಳುವವರೆಗೂ ನಾವು ಆ ದಿನ ತಿಂದದ್ದು-ಉಂಡದ್ದು ಯಾವಾಗ ಎಂಬುದು ನೆನಪಿಗೆ ಬಂದಿರಲಿಲ್ಲ.

ಮುಂಬೈ ಬಿಟ್ಟು ವಿಮಾನ ದೆಹಲಿ ಮುಟ್ಟಿದಾಗ ಬೆಳಿಗ್ಗೆ 11 ಗಂಟೆ. ಬ್ರಿಟಿಷ್ ಕೌನ್ಸಿಲ್‌ನ ನೌಕರಿಯಲ್ಲಿದ್ದ ಭಾರತೀಯ ಸಿಬ್ಬಂದಿ ನಮ್ಮನ್ನು ಎದುರುಗೊಂಡು, ಒಂದು ಬಸ್ಸಿನಲ್ಲಿ ಕರೆದೊಯ್ದು, ಹೈಕಮಿಶನರ್ ಆಫೀಸಿನಲ್ಲಿ ಇಳಿಸಿತು.
 
ಸುಮಾರು 40 ಫೆಲೋಗಳು, ಅವರೊಡನಿದ್ದ ಮಡದಿ ಮಕ್ಕಳು, ಒಟ್ಟಾರೆ ನಮ್ಮ ಸಂಖ್ಯೆ ನೂರು ಮುಟ್ಟಿರಬೇಕು. ವೀಸಾ ನಿಯಮಗಳಾದ ನಂತರ, ದಾರಿ ಖರ್ಚಿಗಾಗಿ ಒಬ್ಬೊಬ್ಬರಿಗೆ ಮೂರು ಪೌಂಡ್ ವಿದೇಶಿ ವಿನಿಮಯದ ಪರವಾನಿಗೆ ಲಭಿಸಿತ್ತು.
 
14 ರೂಪಾಯಿಗೆ ಒಂದು ಪೌಂಡ್, ಮೂರೂವರೆ ರೂಪಾಯಿಗೆ ಒಂದು ಡಾಲರ್, ಆಗ. ನಾನು ಒಂಭತ್ತು ಪೌಂಡ್ ಖರೀದಿಸಿ, ಅದನ್ನು ಭದ್ರವಾಗಿ ನನ್ನ ಒಳ ಜೇಬಿನಲ್ಲಿಟ್ಟುಕೊಂಡೆ. ಲಂಡನ್ ಮುಟ್ಟುವವರೆಗೂ ನಮಗಿದ್ದ ಬಂಡವಾಳ ಇದಾಗಿತ್ತು.

ಇಸ್ರೇಲ್ ದೇಶದ ತೆಲ್‌ಅವೀವ್ ಮೂಲಕ ಲಂಡನ್ ತಲುಪುವ ದಾರಿಯನ್ನು ಬಿಓಏಸಿ ಪ್ಲೇನ್ ಹಿಡಿದಿತ್ತು. ರಾತ್ರಿ ಹನ್ನೊಂದು. ಬ್ರಿಟೀಷ್ ಕೌನ್ಸಿಲ್‌ನ ಇಬ್ಬರು ಭಾರತೀಯರು ನಮ್ಮಡನಿದ್ದರು. ಇಷ್ಟೊಂದು ದೊಡ್ಡ ಗುಂಪನ್ನು ಕರೆದೊಯ್ಯುತ್ತಿದ್ದ ಅವರಿಗೆ ಫ್ರೀ ಟಿಕೇಟು ಸಿಕ್ಕಿರಲು ಸಾಕು! ಪ್ಲೇನು ದೆಹಲಿ ಬಿಡುವುದಕ್ಕಿಂತ ಹತ್ತು ನಿಮಿಷಗಳ ಮುಂಚೆ ಅವರು ನಮ್ಮನ್ನೆಲ್ಲ ಸಂಪರ್ಕಿಸಿ `ನಿಮ್ಮಲ್ಲಿ ರೂಪಾಯಿಗಳಿದ್ದರೆ, ಅವನ್ನು ನಿಮ್ಮನಿಮ್ಮ ಮನೆಗಳಿಗೆ ವಾಪಾಸ್ಸು ಕಳಿಸಬೇಕಾಗುತ್ತದೆ.
 
ಈ ಲಕೋಟೆಯಲ್ಲಿ ಹಾಕಿ, ವಿಳಾಸ ಬರೆಯಿರಿ. ಅವನ್ನು ನಿಮ್ಮ ಮನೆಗಳಿಗೆ ಕಳಿಸಲಾಗುವುದು. ಚಿಲ್ಲರೆ ಇಡಬೇಡಿ. ಇದು ಗೊತ್ತಿರಲಿ, ಅನುಮತಿ ಇಲ್ಲದೆ ಬೇರೆ ಕರೆನ್ಸಿಯನ್ನು ವಿದೇಶಕ್ಕೆ ಕೊಂಡೊಯ್ಯುವುದು ಅಪರಾಧ~ ಎಂದು ಲಕೋಟೆಗಳನ್ನು ವಿತರಿಸಿದರು.

ನನ್ನ ಜೇಬಿನಲ್ಲಿ 312 ರೂಪಾಯಿಗಳಿದ್ದವು. ನನ್ನ ಹೆಂಡತಿಯ ಪರ್ಸಿನಲ್ಲಿ ಹತ್ತಾರು ರೂಪಾಯಿಗಳಿದ್ದವು. ಎಲ್ಲವನ್ನು ಲಕೋಟೆಯಲ್ಲಿ ಹಾಕಿ, ಉಗುಳಿನಿಂದ ಅಂಟಿಸಿ. ವಿಳಾಸ ಬರೆದು, ಅವರಿಗೆ ತಲುಪಿಸಿದೆವು. ಇದು ನನ್ನ ತಿಂಗಳ ಸಂಬಳಕ್ಕೆ ಸಮಾನ ಸಂಪತ್ತು. ನಾವು ದೆಹಲಿ ಬಿಡುವಾಗ 80 ರೂಪಾಯಿಗೆ ಒಂದು ತೊಲಿ ಬಂಗಾರ ಖರೀದಿಸಬಹುದಿತ್ತು. ದೆಹಲಿಯಿಂದ ಲಂಡನ್‌ಗೆ ನನ್ನ ಹೆಂಡತಿಯ ಟಿಕೆಟ್ 2,700, ನನ್ನ ಚಿಕ್ಕ ಮಗಳ ಟಿಕೆಟ್ 800 ರೂಪಾಯಿಗಳು.

ಎಲ್ಲಾ ಫೆಲೋಗಳು ಹೀಗೆ ಅಂಟಿಸಿಕೊಟ್ಟ ಲಕೋಟೆಗಳನ್ನೆಲ್ಲಾ ಸುರಕ್ಷಿತವಾಗಿ ಇಟ್ಟುಕೊಂಡವರು, ಅವನ್ನು ನಮ್ಮ ಮನೆಗಳಿಗೆ ಕಳಿಸುವುದನ್ನು ಹೇಗೋ ಕೊನೆಗೆ ಮರೆತುಬಿಟ್ಟರೆಂದು ಕಾಣುವುದು.
 
ಅವರು ಯಾರೋ ಅವರ ಹೆಸರೇನೋ ತಿಳಿಯದು. ಇಂಗ್ಲೆಂಡ್ ಮುಟ್ಟಿ, ಕೇಂಬ್ರಿಜ್‌ನಲ್ಲಿ ವಾಸಹೂಡಿದ ನಾಲ್ಕು ತಿಂಗಳ ನಂತರವೂ ಈ ಬಗ್ಗೆ ನನ್ನ ಹೆಂಡತಿ ನೆನಪಿಸುತ್ತಲೇ ಇದ್ದಳು. ಕೊನೆಗೆ ಇಂಗ್ಲೆಂಡಿನ ಮಬ್ಬು ಮಂಜು ದಿನವೊಂದರಂದು ಅದರ ನೆನಪು ಕರಗಿಹೋಯಿತು.

ಬ್ರಿಟಿಷ್ ಕೌನ್ಸಿಲ್ ಒಂದು ಕಟ್ಟುನಿಟ್ಟಾದ, ನಿಯಮ ಬದ್ಧವಾದ ಸಂಸ್ಥೆ - ಅದರ ತಳಕ್ಕೆ ತೂತು ಹಾಕಿತ್ತು, ಆ ಸಂಸ್ಥೆಯಲ್ಲಿ ಸೇರಿದ್ದ ಈ ಮಹಾನ್‌ದೇಶ ಭಾರತದ ಸಿಬ್ಬಂದಿ. ಅದೊಂದು ಕೆಟ್ಟ ನೆನಪು; ನಾಲ್ಕು ದಶಕ ಕಳೆದರೂ ಇನ್ನೂ ಕೊರೆಯುತ್ತಲೇ ಇರುವ ಜೀರುಂಡೆ.

ತೆಲ್‌ಅವೀವ್ ನಿಲ್ದಾಣದಲ್ಲಿ ಪ್ಲೇನ್ ಇಂಧನ ತುಂಬಿಕೊಳ್ಳುವಾಗ, ನಾವಿಬ್ಬರೂ ಕೆಳಗಿಳಿದೆವು. ಸುತ್ತಲೂ ಕತ್ತಲು. ಅಲ್ಲಲ್ಲಿ ಬೀಳುತ್ತಿದ್ದ ಫ್ಲಾಷ್ ಲೈಟಿನಲ್ಲಿ ಗನ್ ಹಿಡಿದು ನಿಂತಿದ್ದ ಯೋಧರ ದೃಶ್ಯ. ಏರ್‌ಪೋರ್ಟ್ ಎಂದರೆ ಒಂದು ತಗಡಿನ ಶೆಡ್ಡು, ಬಹುಶಃ 120x120 ಉದ್ದಳತೆ ಇರಬಹುದು.
 
ಹೊರಗಿನ ಕತ್ತಲು, ಕತ್ತಲಿನಲ್ಲಿ ಮಿಂಚಿದ ಗನ್‌ಮನ್, ತಗಡಿನ ಮನೆ - ಇವೆಲ್ಲಾ ನನ್ನ ಹೆಂಡತಿಯನ್ನು ತಲ್ಲಣಗೊಳಿಸಿದವು. `ಪ್ರಿಯಾ ಮಲಗಿರುವಳು, ನಾನು ವಾಪಸ್ಸು ಹೋಗುವೆ~ ಎಂದು ಆತಂಕದಿಂದ ಹೇಳುತ್ತಾ ನನ್ನೆಡೆ ನೋಡಿದಳು~.
 
ಹೆದರಬೇಡ, ಇಷ್ಟು ಜನರಿದ್ದಾರೆ, ಏನೂ ಆಗುವುದಿಲ್ಲ~ ಎಂದು ಭರವಸೆಕೊಟ್ಟರೂ ಅವಳಲ್ಲಿ ಯಾವ ಪರಿವರ್ತನೆಯೂ ಆಗಲಿಲ್ಲ. ತೆಲ್‌ಅವೀವ್‌ನಲ್ಲಿ ಆಗ ಏರ್‌ಪೋರ್ಟ್ ಇರಲಿಲ್ಲ. ಬರೀ ಒಂದು ತಗಡಿನ ಮನೆ ಇತ್ತು. ಇದೇ ಬಗೆಯ ಏರ್‌ಪೋರ್ಟ್ ದುಬೈಯಲ್ಲೂ ಇತ್ತೆಂದು ಆನಂತರ ತಿಳಿಯಿತು.

ಏರ್‌ಪೋರ್ಟ್‌ನಲ್ಲಿ ಏನನ್ನೂ ಖರೀದಿಸಲಾಗದಿದ್ದುದರಿಂದ ನನ್ನ ಜೇಬಿನಲ್ಲಿದ್ದ ಒಂಬತ್ತು ಪೌಂಡ್ ಹಾಗೆಯೇ ಉಳಿದದ್ದೊಂದು ಸಮಾಧಾನ ತರುವ ವಿಷಯವಾಗಿತ್ತು.
ಪ್ಲೇನ್ ತೆಲ್‌ಅವೀವ್ ಬಿಟ್ಟಾಗ ನನ್ನ ನಿದ್ದೆ ಹಾರಿತ್ತು. ಮಗುವಿನ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಪ್ರೇಮ ಸುಖ ನಿದ್ರೆಯಲ್ಲಿದ್ದಳು.

ಸ್ತಬ್ಧ ರಾತ್ರಿ. ಏಕತಾನ ರಾಗಮಾಡುತ್ತಾ ಸಾಗಿದ್ದ ವಿಮಾನ. ರೆಪ್ಪೆ ಮುಚ್ಚಿದರೂ ತೆರೆದುಕೊಂಡಿದ್ದ ಕಣ್ಣುಗಳು. ಮೂರುವರ್ಷ ಇಂಗ್ಲೆಂಡಿನಲ್ಲಿ ಕಳೆಯುವುದಕ್ಕಿಂತ ಮೂರು ವರ್ಷಾನಂತರ ಜೀವನದಲ್ಲಾಗಬಹುದಾದ ಮಾರ್ಪಾಟುಗಳನ್ನು ಕಂಡುಕೊಳ್ಳುವ ತವಕ.
 
ಈ ಹಿಂದೆ ನಮ್ಮ ವಿಶ್ವವಿದ್ಯಾಲಯದಿಂದ ವಿದೇಶಕ್ಕೆ ಹೋಗಿ ಬಂದವರ ನೆನಪನ್ನು ಮಾಡಿಕೊಳ್ಳುವ ಯತ್ನ. ಅವರಲ್ಲಿ ಯಾರಾದರೂ ಆಕ್ಸ್‌ಫರ್ಡ್‌ಗೆ-ಕೇಂಬ್ರಿಜ್‌ಗೆ ಹೋಗ್ದ್ದಿದರೆ? ಅವರ ನೆನಪೇಕೆ ಬರುತ್ತಿಲ್ಲ. ಇಲ್ಲವೇ, ನಾನೇ ಮೊದಲಿಗನೇ? ತಿಳಿಯದು. ಎಲ್ಲವೂ ಅಸ್ಪಷ್ಟ.

ಅಂದಿಗಾಗಲೇ ದಂತಕತೆಯಾಗಿದ್ದ ಮಹಾಗಣಿತಜ್ಞ ಮದ್ರಾಸಿನ ರಾಮಾನುಜಮ್ ಮತ್ತು ಸ್ಯಾನ್ಸ್‌ಕ್ರಿಟಿಸ್ಟ್ ಬಾಗಲಕೋಟೆಯ ನಂದೀಮಠರು ನೆನಪಿಗೆ ಬಂದರು. ಇಬ್ಬರೂ ಸಾಂಪ್ರದಾಯಸ್ಥರು. ತಮ್ಮ ಧರ್ಮವನ್ನು ರಕ್ಷಿಸಿಕೊಂಡೇ ಇಂಗ್ಲೆಂಡಿನಲ್ಲಿ ಬಾಳಿದವರು.
 
ಮತ್ತೊಂದು ಸಂಸ್ಕೃತಿಯೊಡನೆ ವ್ಯವಹರಿಸಬೇಕಾದ ಅವಶ್ಯಕತೆಯನ್ನೇ ಅವರು ಕಂಡಿರಲಿಲ್ಲ. ದಿನನಿತ್ಯ ಸ್ವಂತ ಅಡುಗೆ, ಕೊರೆಯುವ ಚಳಿಯಲ್ಲೂ ಸ್ನಾನ, ಪೂಜೆ. ತಮ್ಮ ಕ್ಷೇತ್ರ ಬಿಟ್ಟು ಬೇರೆಡೆ ಕದ್ದೂ ನೋಡಿದವರಲ್ಲ. ಚಳಿಯನ್ನು ಸಹಿಸದಾದಾಗ ಹಾಸಿಗೆಯನ್ನೇ ಹೊದ್ದು ಮಲಗಿ ಮುಲುಗಿದವರು. ಅವರಿದ್ದ ಕೋಣೆಗೆ ಕಿಟಕಿಗಳಿದ್ದವು ನಿಜ. ಆದರೆ ಅವುಗಳ ಪ್ರಯೋಜನ ಇರಲಿಲ್ಲ.

ತೆಗೆದರೆ ಮೈ ಕೊರೆಯುವ ಚಳಿಗಾಳಿ, ಅದು ಬೇಕೇ? ಕಿಟಕಿಯ ಆಚೆಗಿನ ಜಗತ್ತೇ ವಿಚಿತ್ರವಾದದ್ದು, ಅದನ್ನು ನೋಡುವ ಅವಶ್ಯಕತೆಯಾದರೂ ಏನು? ಪಬ್ಬು, ಥಿಯೇಟರ್, ಪಾರ್ಕ್, ಮ್ಯೂಸಿಯಂ, ಮ್ಯೂಸಿಕ್, ಈ ಮುಂತಾದವುಗಳಿಗೇನೂ ಕೊರತೆಯಿರಲಿಲ್ಲ.

ನಿಜ, ಆದರೆ ಅವುಗಳ ಅವಶ್ಯಕತೆ ಅವರಿಗಿರಲಿಲ್ಲ. ಹೈಡ್‌ಪಾರ್ಕ್, ಬಿಗ್‌ಬೆನ್, ಥೇಮ್ಸ ನದಿ, ಪಾರ‌್ಲಿಮೆಂಟ್, ಟ್ರಾಫಲ್ಗರ್‌ಸ್ಕೈರ್, ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್, ಈ ಮುಂತಾದವುಗಳ ಬಗ್ಗೆ ಕೇಳಿದ್ದರು.

ಇವುಗಳ ಬಗ್ಗೆ ಕುತೂಹಲವೂ ಇತ್ತು, ಆದರೆ ನೋಡಬೇಕೆಂಬ ಒತ್ತಡವಿರಲಿಲ್ಲ. ಇಂಗ್ಲೆಂಡಿನವರ  ಡೇಲೈಫು - ನೈಟುಲೈಫಿನ ಬಗ್ಗೆ ಯಾವ ಕುತೂಹಲವನ್ನೂ ತಾಳದ ಅಪರಂಜಿಗಳಂತೆ ದೇಶಕ್ಕೆ ಮರಳಿ ಬಂದಿದ್ದರು.

ಸಂಸ್ಕೃತದಲ್ಲಿ ಸಂಶೋಧನೆ ಮಾಡಿ ಲಂಡನ್ ಪಿಎಚ್.ಡಿ. ಪದವಿಯೊಡನೆ ಬಂದಿದ್ದ ನಂದೀಮಠರ ಬಗ್ಗೆ ನಮ್ಮ ಸಮಾಜ ಅಪಾರ ಗೌರವವನ್ನು ಹೊಂದಿತ್ತು. ಇದಕ್ಕೆ ಕಾರಣವೇನು ಗೊತ್ತೇ?
 
ಅಷ್ಟು ವರ್ಷಕಾಲ ಲಂಡನಿನಲ್ಲಿದ್ದರೂ ಅವರು ಒಂದು ಕೋಳಿತತ್ತಿಯನ್ನೂ ತಿಂದಿರಲಿಲ್ಲ, ಒಂದು ಲೋಟ ವೈನನ್ನೂ ಕುಡಿದಿರಲಿಲ್ಲ, ಎಂಬ ಅಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಇದು ಎಲ್ಲರ ನಾಲಿಗೆಯ ಮೇಲೂ ತೇಲಾಡುತ್ತಿತ್ತು. ಕೋಳಿ ತಿಂದು ವಿಸ್ಕಿ ಕುಡಿಯುತ್ತಿದ್ದ ಲಿಂಗಾಯತರೂ ಬ್ರಾಹ್ಮಣರೂ ಈ ಬಗ್ಗೆ ಅವರನ್ನು ಮೆಚ್ಚಿಕೊಂಡಿದ್ದರು.

ಇಂತಹ ಅಪರಂಜಿಯ ಮುಂದೆ ನಾನೂ ಒಬ್ಬ ಶಾಖಾಹಾರಿಯೇ? ಇಂಗ್ಲೆಂಡ್ ಪ್ರಯಾಣದ ಸುಳಿವೇ ಇಲ್ಲದಿದ್ದಾಗಲೇ ನಾನು ಕೋಳಿತತ್ತಿ ತಿನ್ನಲು ಶುರುಮಾಡಿದ್ದೆ. ಆರೋಗ್ಯದ ದೃಷ್ಟಿಯಲ್ಲಿ ಅದರ ಅವಶ್ಯಕತೆ ಇದ್ದ ನನ್ನ ಹೆಂಡತಿಗೂ ಹೇಳುತ್ತಾ ಬಂದಿದ್ದೆ.

ಕೆಲವು ವರ್ಷ ನನ್ನ ಸ್ನೇಹಿತನಾಗಿದ್ದ ಹಿರೇಮಲ್ಲೂರ ಈಶ್ವರನ್, ಬಾಗಲಕೋಟೆಯಲ್ಲಿ ನಂದೀಮಠರ ಶಿಷ್ಯನಾಗಿದ್ದುದನ್ನು ನೆನೆಪಿಸಿಕೊಂಡು, ಅವರ ಸಂಸ್ಕೃತ ಧಾಟಿಯ ಇಂಗ್ಲಿಷಿನ ಮಾದರಿಗಳನ್ನು ಆಗಾಗ ಉದಾಹರಿಸುತ್ತಲಿದ್ದರು.
 
`ಸರ್ದಾರ್~ ಜೋಕುಗಳಂತೆ ಇವೂ ಅರ್ಧ ಸತ್ಯ, ಅರ್ಧ ಮಿಥ್ಯ ಆಗಿರಲು ಸಾಧ್ಯ. ಆದರೆ ಇಂತಹ ಜೋಕುಗಳನ್ನು ಕೇಳಿ ಆನಂದಿಸದವರೇ ಇಲ್ಲ. ಅವರಲ್ಲಿ ನಾನೂ ಒಬ್ಬ.

ಒಮ್ಮೆ ಗುರುಗಳ ಮನೆಯ ಬಾಗಿಲನ್ನು ಎರಡು ಮೂರು ಬಾರಿ ತಟ್ಟಿದರೂ ಒಳಗಿನಿಂದ ಸ್ಪಂದನೆ ಬಾರದಿದ್ದುದರಿಂದ, ಗಟ್ಟಿಯಾಗಿ ಮತ್ತೊಮ್ಮೆ ಬಾಗಿಲು ತಟ್ಟಿ, `ಸ್ಸಾರ್~ ಎಂದು ದೊಡ್ಡಧ್ವನಿಯಲ್ಲಿ ಈಶ್ವರನ್ ಕೂಗಿದರಂತೆ. ಸ್ವಲ್ಪ ಸಮಯದ ನಂತರ ಒಳಗಿನಿಂದ `ವೇಟ್ಟು. ವೇಟ್ಟು. ಐಯ್ಯಾಮ್ಮ ಪ್ಯಾಂಟಿಂಗೂ, ಐ ಓಪನ್ ಸ್ಸೂನ್ನು~, ಎಂಬ ಧ್ವನಿ ಬಂತಂತೆ.
 
ಸದಾ ಕಚ್ಚೆಪಂಚೆ ರುಮಾಲುವಿನಲ್ಲಿರುತ್ತಿದ್ದ ಪ್ರೊಫೆಸರ್ ಒಮ್ಮಮ್ಮೆಯಾದರೂ ಪ್ಯಾಂಟ್ ಹಾಕಿಕೊಳ್ಳುವುದನ್ನು ಇಂಗ್ಲೆಂಡಿನಲ್ಲಿರುವಾಗಲೇ ಕಲಿತಿದ್ದರು ಎಂಬುದು ಈಶ್ವರನ್ ವಾದ. ಅಂದರೆ ಪಶ್ಚಿಮ ಸಂಸ್ಕೃತಿಯೊಡನೆ ಬಹಳವಲ್ಲದಿದ್ದರೂ ಸ್ವಲ್ಪವಾದರೂ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬುದಕ್ಕೆ ಇದು ಉದಾಹರಣೆಯಾಗಿತ್ತು.
 
ಇದು ಏನೇ ಇರಲಿ, ಲಂಡನ್ ವಿಶ್ವವಿದ್ಯಾಲಯದ ಪಿಎಚ್.ಡಿ.ಯೊಡನೆ ಬಂದಿದ್ದ ನಂದೀಮಠರು ಇಂಗ್ಲಿಷ್ ಭಾಷೆಯಲ್ಲೂ ಬರೆಯಬಲ್ಲವರಾಗಿದ್ದರೆಂಬುದಕ್ಕೆ ಅವರ `ಹ್ಯಾಂಡ್ ಬುಕ್ ಆಫ್ ವೀರಶೈವಿಜಂ~ ಸಾಕ್ಷಿಯಾಗಿತ್ತು. ಇದು ಅವರ ಮಹಾ ಪ್ರಬಂಧದ ಒಂದು ದೊಡ್ಡ ತುಣುಕು.

ಇವರನ್ನು ಬಿಟ್ಟರೆ, ಇಂಗ್ಲೆಂಡಿನಲ್ಲಿ ಅಭ್ಯಾಸ ಮಾಡಿದವರಲ್ಲಿ ಎದ್ದು ಕಾಣುವ ಉತ್ತರ ಕರ್ನಾಟಕದ ಇಬ್ಬರು ವ್ಯಕ್ತಿಗಳೆಂದರೆ, ಆಕ್ಸ್‌ಫರ್ಡ್‌ನಲ್ಲಿ ಓದಿದ ವಿ.ಕೆ. ಗೋಕಾಕರು ಮತ್ತು ಕೇಂಬ್ರಿಜ್‌ನಲ್ಲಿ ಓದಿದ ಡಿ.ಸಿ ಪಾವಟೆಯವರು.

ಇವರಿಬ್ಬರ ಕಾಲೇಜು ದಿನಗಳ ಬಗ್ಗೆ ತಿಳಿದವರಾರೂ ನನಗೆ ಪರಿಚಯವಾಗಿರಲಿಲ್ಲ. ಕಾರಣ ಆ ಬಗ್ಗೆ ನನಗೂ ಹೆಚ್ಚು ಗೊತ್ತಿಲ್ಲ. ಲೇಖಕರಾಗಿ ಗೋಕಾಕ್, ಆಡಳಿತಗಾರರಾಗಿ ಪಾವಟೆ ಹೇಗಿದ್ದರೆಂಬುದನ್ನು ನೋಡುವ ಅವಕಾಶ ಮಾತ್ರ ನನಗೆ ದೊರಕಿತ್ತು. ಗೋಕಾಕರ ಶಿಷ್ಯವರ್ಗ ಅಪಾರ. ಪಾವಟೆಯವರ ಅಭಿಮಾನಿ ವರ್ಗ ಅದಕ್ಕಿಂತ ಹೆಚ್ಚಿನದು.

`ಟ್ರೈಪೋಸ್~ನಲ್ಲಿ ಇವರಿಬ್ಬರೂ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಸ್ವಲ್ಪ ಮುಕ್ತ ವಾತಾವರಣದಲ್ಲಿಯೇ ದಿನಗಳನ್ನು ಕಳೆದಿದ್ದ ಇವರಿಗೆ ಸಂಪ್ರದಾಯಕ್ಕೆ ಅಂಟಿಕೊಂಡೇ ಜೀವನ ಕಳೆಯುವ ಅವಶ್ಯಕತೆ ಇರಲಿಲ್ಲವೇನೋ. ಆದರೆ ನಾನು ಕಂಡಾಗ ಇವರಿಬ್ಬರೂ ಮರಳಿ ಸಂಪ್ರದಾಯದೆಡೆಗೆ ವಾಲುತ್ತಿದ್ದರು.
 
ಪಾವಟೆಯವರು ಆಗಾಗ ವಿಭೂತಿ ಧರಿಸಿಯೇ ಸಭೆಗಳಿಗೆ ಬರುತ್ತಿದ್ದರು. ಗೋಕಾಕರು ಸಾಯಿಬಾಬಾ ಆಶ್ರಮ ಸೇರಿದ್ದರು. ಪಾವಟೆಯವರ ಬಗ್ಗೆ ನಮಗೆ ಆಗ ತಿಳಿದಿದ್ದ ಆದರೆ ಅರ್ಥವಾಗದ ವಿಶೇಷತೆ ಎಂದರೆ ಅವರ ಹೆಸರಿನೊಡನೆ ಸಾಮಾನ್ಯವಾಗಿ ಸೇರಿಸಲಾಗುತ್ತಿದ್ದ `ರ‌್ಯಾಂಗ್ಲರ್~ ಪದ.

ಅಂದಿನ ಉತ್ತರ ಕರ್ನಾಟಕದ ಸಮಾಜಕ್ಕೆ ಈ ಪದವನ್ನು ಪರಿಚಯಿಸಿದ್ದೇ ಅವರು. ಇದೇನು ಬಿರುದೋ, ಡಿಗ್ರಿಯೋ, ಎಂಬುದು ಬಹುತೇಕರಿಗೆ ಗೊತ್ತಿರಲಿಲ್ಲ, ಈಗಲೂ ಗೊತ್ತಿಲ್ಲ. ಅದನ್ನು ಸ್ವತಃ ಪಾವಟೆಯವರೇ ಬಳಸಿದ ಬಗ್ಗೆ ನನಗೆ ನೆನಪಿಲ್ಲ. 

(ಮುಂದುವರೆಯುವುದು)
ಸೌಜನ್ಯ: `ದೇಶಕಾಲ~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT