ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯ ದಡದ ಮೇಲಿನ ಒಂದು ಊರಿನ ನೆನಪು

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನನ್ನ ಕಾಲೇಜು ದಿನಗಳಲ್ಲಿ ಮೈಸೂರಿನಲ್ಲಿ ಕಂಡಷ್ಟು ಗಮ್ಮತ್ತಿನ ಮಿನಿ ಇಂಗ್ಲೆಂಡನ್ನು ಧಾರವಾಡದಲ್ಲಿ ನನಗೆ ಕಾಣಲಾಗಿರಲಿಲ್ಲ. ಇಲ್ಲಿ `ತ್ರೀಪೀಸ್~ ಸ್ಯೂಟು (ಅಂದರೆ ಒಂದೇ ಬಟ್ಟೆಯ/ಬಣ್ಣದ ಟ್ರೌಜರ್ಸ್‌, ವೆಸ್ಟ್ ಮತ್ತು ಕೋಟು) ಹಾಕಿಕೊಂಡವರು ಒಬ್ಬರೂ ಇರಲಿಲ್ಲ. ಧಾರವಾಡದ ಬುದ್ಧಿಜೀವಿಗಳ `ತ್ರೀಪೀಸ್~ ಸ್ಯೂಟೇ ಬೇರೆತರದ್ದಾಗಿತ್ತು.

ಅದು ಕರಿಟೊಪ್ಪಿಗೆ, ಕೊರಳಿನವರೆಗೂ ಏರಿದ್ದ ಗುಂಡಿಯ ಕೋಟು ಮತ್ತು ಪಂಚೆ. ಆಶ್ಚರ್ಯವೆಂದರೆ ಇಂಗ್ಲಿಷ್ ಡಿಪಾರ್ಟ್‌ಮೆಂಟಿನಲ್ಲೂ `ತ್ರೀಪೀಸ್~ ಸ್ಯೂಟ್ ಹಾಕಿಕೊಂಡು ಯಾರೂ ಬರುತ್ತಿರಲಿಲ್ಲ. ಬಹಳ ಎಂದರೆ ಚಳಿಗಾಲದಲ್ಲಿ ಕೋಟನ್ನು ಹಾಕುತ್ತಿದ್ದ ಕೆಲವರಿದ್ದರು.

 ಮೈಸೂರಿನ ಮಹಾರಾಜ ಕಾಲೇಜಿನಲ್ಲಾದರೋ ಇಂಗ್ಲೆಂಡ್‌ಗೆ ಹೋಗಿದ್ದ-ಹೋಗದಿದ್ದ ಇಂಗ್ಲಿಷ್ ಮೇಷ್ಟ್ರುಗಳೆಲ್ಲರೂ ಸಾಮಾನ್ಯವಾಗಿ ಮುಮ್ಮಡಿ, ಇಲ್ಲವೇ ಇಮ್ಮಡಿ ಸೂಟನ್ನು ತೊಟ್ಟುಕೊಳ್ಳದೆ ಕ್ಲಾಸಿಗೆ ಬರುತ್ತಲೇ ಇರಲಿಲ್ಲ.

ಆಗ ತಾನೇ ವಿದೇಶದಿಂದ ಮರಳಿಬಂದಿದ್ದ ಸಿ.ಡಿ. ನರಸಿಂಹಯ್ಯ, ಅಣ್ಣೇಗೌಡ, ಭರತರಾಜ ಸಿಂಗ್, ವೆಂಕಟಗಿರಿಗೌಡ, ನಿಕಮ್ ಇವರಲ್ಲಿ ಅಗ್ರಗಣ್ಯರಾಗಿದ್ದರು. ಕೆಲವರು ಫೆಲ್ಟ್ ಮತ್ತು ಬೌಲರ್ ಹ್ಯಾಟ್‌ಗಳನ್ನೂ ಆಗಾಗ ಹಾಕಿಕೊಳ್ಳುತ್ತಿದ್ದರು.

ಇವರನ್ನು ಅನುಕರಿಸಿಯೋ ಅಥವಾ ಹೀಗೆ ಡ್ರೆಸ್ ಮಾಡಿಕೊಳ್ಳದಿದ್ದರೆ ಇಂಗ್ಲಿಷ್ ಕಲಿಸಲು-ಕಲಿಯಲೂ ಸಾಧ್ಯವಿಲ್ಲವೇನೋ ಎಂಬಂತೆ ಆ ತಲೆಮಾರಿನ ಅಧ್ಯಾಪಕರಲ್ಲಿ ಹೆಚ್ಚಿನವರು `ಸ್ಯೂಟಿ~ನಲ್ಲಿಯೇ ಕಾಲೇಜಿಗೆ ಬರುತ್ತಿದ್ದರು ಮಾತ್ರವಲ್ಲ, ಅವರ ಆನರ್ಸ್‌ ಮತ್ತು ಎಂ.ಎ. ವಿದ್ಯಾರ್ಥಿಗಳೂ (ಅದರಲ್ಲೂ ಚಿಕ್ಕಮಗಳೂರು, ಕೊಡಗು ಮುಂತಾದ ಭಾಗಗಳಿಂದ ಬರುತ್ತಿದ್ದ ಕಾಫೀ-ಟೀ ಎಸ್ಟೇಟ್ ಮನೆತನದ ಮಕ್ಕಳು) ಕ್ಲಾಸಿಗೆ ಹಾಜರಿ ಹಾಕಿಸಿದ ದಿನವೇ `ಪಟ್ಟು ಬ್ರದರ್ಸ್‌~ ಅಥವಾ `ಎಕ್ಸೆಲ್ಸಿಯರ್~ ಎಂಬ ಹೆಸರಾಂತ ದರ್ಜಿಗಳ ಅಂಗಡಿಗಳಿಗೆ ಹೋಗಿ, ತ್ರೀಪೀಸ್ ಸ್ಯೂಟಿಗೆ ಆರ್ಡರ್ ಕೊಟ್ಟು ಬರುತ್ತಿದ್ದರು.ಸ್ಯೂಟ್ ಬಂದ ನಂತರ ಹಾಸ್ಟಲ್ ತುಂಬಾ ಅದರದ್ದೇ ಸುದ್ದಿ.

ಇದಕ್ಕೆ ನಾನೂ ಬಲಿಯಾಗಿದ್ದೆ. ಎರಡನೇ ಆನರ್ಸ್‌ ಮುಗಿಸುವುದರೊಳಗೆ ಒಂದು ಸ್ಯೂಟ್ ಹೊಲಿಸಿದ್ದೆ. ಆನರ್ಸ್‌ನಲ್ಲಿ ಪದಕಗಳ ಸಮೇತ ಡಿಗ್ರಿ ಪಡೆಯುವಾಗ ಮುಮ್ಮಡಿ ಬ್ಲೂ ಟ್ವೀಡ್ ಸ್ಯೂಟನ್ನು ಸಂಪಾದಿಸಿಕೊಂಡಿದ್ದೆ.

ಮಹಾರಾಜ ಕಾಲೇಜಿನಲ್ಲಿ ಹಂಗಾಮಿ ಅಧ್ಯಾಪಕನಾದೊಡನೆ ಮತ್ತೊಂದು ಸ್ಯೂಟ್ ಕೊಂಡಿದ್ದೆ. ಆದರೇನು, ವಾರದಲ್ಲಿ ಆರು ದಿವಸ ಪಾಠ ಮಾಡುವ ನನಗೆ ಮೂರೇ ಸ್ಯೂಟುಗಳಿದ್ದ ಬಗ್ಗೆ ಕೊರಗಿತ್ತು.

ಅಲ್ಲಿಂದ ಶುರುವಾದ ಈ ಹಂಬಲ ನನ್ನನ್ನು ಬಿಡದೆ ಧಾರವಾಡಕ್ಕೂ ಬೆನ್ನಟ್ಟಿ ಬಂದಿತ್ತು. ಇಲ್ಲಿಗೆ ಬಂದ ಮೇಲೆ ಐದಾರು ವರ್ಷ ನಾನು ತೊಡುತ್ತಿದ್ದ ದುಬಾರೀ ಸ್ಯೂಟುಗಳ ಬಗ್ಗೆ ನನ್ನ ಆ ತಲೆಮಾರಿನ ವಿದ್ಯಾರ್ಥಿಗಳು, ಈಗ ಬಹಳ ದೊಡ್ಡವರಾಗಿರುವವರು, ಸಿಕ್ಕಾಗ ಇನ್ನೂ ಅವನ್ನು ನೆನಸಿಕೊಳ್ಳುವರು, ನನಗೂ ನೆನಪಿಸಿಕೊಡುವರು.

ಸರಿಸುಮಾರು ನಮ್ಮ ಕಾಲದವರಲ್ಲಿ ಸ್ಯೂಟಿನೊಡನೆ ಸಂಪೂರ್ಣ ಐಡೆಂಟಿಫೈ ಮಾಡಿಕೊಂಡವರೆಂದರೆ ಡಾ. ಡಿ.ಎಂ. ನಂಜುಂಡಪ್ಪನವರು. ವಿದ್ಯಾರ್ಥಿಯಾಗಿದ್ದಾಗಿನಿಂದ ಮುಂದಿನ ಐವತ್ತು ವರ್ಷ ಕಾಲ ನಾನು ಅವರನ್ನು ನೋಡಿದ್ದು ಸ್ಯೂಟಿನಲ್ಲಿಯೇ.

ಅವರು ಸ್ಯೂಟ್ ತೊಡದೆ ಹೇಗೆ ರಾತ್ರಿ ಮಲಗುವರೋ ಎನ್ನುವ ಬಗ್ಗೆ ಆಗಾಗ ತುಂಟ ಚರ್ಚೆಯೂ ನಡೆಯುತ್ತಿತ್ತು.ತೆಲ್‌ಅವೀವ್ ಬಿಟ್ಟು ಎರಡು ಗಂಟೆಯಾಗಿರಬೇಕು.

ಆನಂತರ ಯಾವಾಗಲೋ ಮುಮ್ಮಡಿ ಸ್ಯೂಟಿನ ಗುಂಗಿನಲ್ಲಿಯೇ ನಾನು ಮಲಗಿಬಿಟ್ಟಿದ್ದೆ. ಸ್ಪಷ್ಟ ಸೂರ್ಯಕಿರಣಗಳಿಲ್ಲದ ಮುಂಜಾವಿನಲ್ಲಿ ವಿಮಾನ ಹೀತ್ರೋ ನಿಲ್ದಾಣದಲ್ಲಿ ಇಳಿದಿತ್ತು. ಲಂಡನ್ ನೆಲದ ಮೇಲೆ ನಿಂತಾಗ ಈ ಸಂಭ್ರಮದ ಯಾತ್ರೆಯ ಮೊದಲ ಅಧ್ಯಾಯ ಅಂತ್ಯಗೊಂಡಿತ್ತು.

ಲಂಡನ್ನಿನಲ್ಲಿ ಒಂದು ವಾರವಿದ್ದು, `ಓರಿಯಂಟೇಷನ್~ ಎಂಬ ತರಬೇತಿಯನ್ನು ಮುಗಿಸಿ, ಕೇಂಬ್ರಿಜ್‌ಗೆ ಸಾಗುತ್ತಿದ್ದ ರೈಲಿನ ಕಿಟಕಿಯ ಹೊರಗೆ ತೆಳು ಪರದೆಯಂತಹ ಮಬ್ಬು ಹವೆಯಲ್ಲಿ ಕಾಣಿಸಿಕೊಂಡು ಕರಗುತ್ತಿದ್ದ ಊರು-ಕೇರಿ, ಗುಡ್ಡ-ಕಾಡು, ಹೊಲ-ನೆಲವನ್ನು ನೋಡುತ್ತಾ ಮುಂದೆ ಸಾಗಿದ್ದೆವು.

ಕಂಪಾರ್ಟ್‌ಮೆಂಟಿನೊಳಗೆ ದೇವರ ಮೂರ್ತಿಗಳಂತೆ ಬಿಗುಮಾನದಿಂದ ತುಟಿ ಕದಲಿಸದೇ ಕುಳಿತಿದ್ದ, ಪತ್ರಿಕೆಗಳಿಂದ ತಮ್ಮ ಮುಖ ಮುಚ್ಚಿಕೊಂಡಿದ್ದ, ಪ್ರಯಾಣಿಕರ ಬೋಳುನೆತ್ತಿ ಇಲ್ಲವೆ ಬೌಲರ್ ಹ್ಯಾಟ್‌ಗಳು ಮಾತ್ರ ಕಾಣುತ್ತಿದ್ದವು.

ಒಂದಿಷ್ಟೂ ಗದ್ದಲವಿಲ್ಲದ ರೈಲಿನ ಡಬ್ಬಿಗಳು ಹೀಗೆ ಮೌನವಾಗಿ ಸಾಗಬಹುದೆಂಬುದನ್ನು ನಮಗೆ ಊಹಿಸಲೂ ಸಾಧ್ಯವಿರಲಿಲ್ಲ.

ನಾನು ಚರ್ಚಿಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೆ. ಸುಮಾರು ನಲ್ವತ್ತು ಎಕರೆ ವಿಸ್ತೀರ್ಣ ಪ್ರದೇಶದಲ್ಲಿರುವ ಈ ಕಾಲೇಜನ್ನು ಪ್ರಸಿದ್ಧ ಸ್ಟೇಟ್ಸ್‌ಮನ್ ಮತ್ತು ಲೇಖಕ ವಿನ್‌ಸ್ಟನ್ ಚರ್ಚಿಲ್ ಹೆಸರಿನಲ್ಲಿ 1960ರಲ್ಲಿ ಸ್ಥಾಪಿಸಲಾಗಿತ್ತು.

ಅಂದರೆ ನಾನು ಸೇರುವುದಕ್ಕಿಂತ ಏಳೇ ವರ್ಷಗಳ ಮುಂಚೆ. 13 ಶತಮಾನದಷ್ಟು ಪುರಾತನವಾದ ಕೇಂಬ್ರಿಜ್ ವಿಶ್ವವಿದ್ಯಾಲಯದ ಅತ್ಯಂತ ಮಾಡರ್ನ್ ಕಾಲೇಜು, `ದಿ ಬೆಸ್ಟ್ ಆಫ್ ದಿ ನ್ಯೂ~ ಎಂಬ ಕೀರ್ತಿಗೆ ಅದು ಪಾತ್ರವಾಗಿತ್ತು. ಅತ್ಯಾಧುನಿಕ ವಾಸ್ತುವಿನ್ಯಾಸ, ಈ ಕಾಲೇಜಿನ ವೈಶಿಷ್ಟ್ಯ.

ಅಂದಹಾಗೆ, ಕೇಂಬ್ರಿಜ್‌ನಲ್ಲಿ ಕಾಲೇಜುಗಳೆಂದರೆ ವಿದ್ಯಾರ್ಥಿನಿಲಯಗಳೇ ಹೊರತು ಪಾಠಶಾಲೆಗಳಲ್ಲ. ವಾಸಿಸುವ ಕೊಠಡಿ, ಊಟದ ಮನೆ, ಆಟದ ಮೈದಾನವನ್ನು ಮಾತ್ರ ಅವು ಒದಗಿಸುವುವು.

ನಮ್ಮ ಕಾಲದಲ್ಲಿ ಹುಡುಗ ಹುಡುಗಿಯರಿಗೆ ಬೇರೆ ಬೇರೆ ಕಾಲೇಜುಗಳಿರುತ್ತಿದ್ದವು, ಆಗ `ಆಲ್‌ಮೇಲ್~ ಕಾಲೇಜಾಗಿದ್ದ ಚರ್ಚಿಲ್ 1972ರಲ್ಲಿ, ಅಂದರೆ ನಾನು ಕಾಲೇಜು ಬಿಟ್ಟು ಎರಡು ವರ್ಷಗಳ ನಂತರ, ಕೋ ಎಜುಕೇಷನ್ ಕಾಲೇಜ್ ಆಗಿ ಪರಿವರ್ತನೆಗೊಂಡಿತ್ತು. ನಾನಿರುವಾಗಲೇ ಈ ಬಗ್ಗೆ ಗುಲ್ಲು ಗುಮಾನಿ ಇತ್ತು.

ಕೇಂಬ್ರಿಜ್‌ನ ಕಾಲೇಜುಗಳು ತಮ್ಮದೇ ಆದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುವ ವಾಡಿಕೆ ಇಟ್ಟುಕೊಂಡಿರುವುವು. ನಮ್ಮ ಕಾಲದಲ್ಲಿದ್ದ ಇಂತಹ ಒಂದು ಕಟ್ಟಳೆಯೆಂದರೆ ವಿದ್ಯಾರ್ಥಿಗಳ ಕೋಣೆಗೆ ಬರುವ ವಿದ್ಯಾರ್ಥಿನಿಯರು ಕಡ್ಡಾಯವಾಗಿ ರಾತ್ರಿ 11ಕ್ಕೆ ಅಲ್ಲಿಂದ ಹೊರಬೀಳಬೇಕೆಂಬುದು.

ಮದುವೆಯಾದವರಿಗೆ ಚರ್ಚಿಲ್ ಕ್ಯಾಂಪಸ್‌ನಲ್ಲಿ ಎರಡು ವಸತಿ ಸಮುಚ್ಛಯಗಳಿವೆ. ಒಂದು, ಮಕ್ಕಳೊಂದಿಗೆ ವಾಸಿಸಲು ಯೋಗ್ಯವಾದ  ಷೆಪ್ಪರ್ಡ್ ಫ್ಲ್ಯಾಟ್ಸ್, ಇನ್ನೊಂದು ಚಿಕ್ಕ ಸಂಸಾರಿಗಳಿಗೆ ಯೋಗ್ಯವಾದ `ಉಲ್ಫ್‌ಸನ್ ಫ್ಲ್ಯಾಟ್ಸ್~. ನಾನಿದ್ದದ್ದು 24ನೆಯ ಉಲ್ಫ್‌ಸನ್ ಫ್ಲ್ಯಾಟಿನಲ್ಲಿ.
 
ಇದರಲ್ಲಿ ಎರಡು ಬೆಡ್‌ರೂಂಗಳು, ಅಡುಗೆಮನೆ, ಒಂದು ಹಾಲ್, ಒಂದು ಚಿಕ್ಕ ಸ್ಟಡಿ ಇದ್ದವು. ಇಂತಹ ಒಟ್ಟಾರೆ ನಲ್ವತ್ತು ಫ್ಲ್ಯಾಟ್‌ಗಳು ಎರಡು ಅಂತಸ್ತಿನಲ್ಲಿ ಹಂಚಿಕೊಂಡಿದ್ದವು.
ಮೊದಲ ಎರಡು ತಿಂಗಳು ಈ ಕ್ಯಾಂಪಸ್‌ನಲ್ಲಿ ನಮಗೆ ಪರಿಚಯವಾದವರೇ ವಿರಳ.

ನಮ್ಮಂತೆ ಕೆಲವರು ಅದೇ ವರ್ಷ ಬಂದಿದ್ದರು; ಇನ್ನು ಕೆಲವರು ಒಂದೆರಡು ವರ್ಷ ಇಲ್ಲಿ ಕಳೆದಿದ್ದರು. ಇವರಲ್ಲಿ ಏಷಿಯಾ, ಆಫ್ರಿಕ ಮತ್ತು ಮಿಡ್ಲೀಸ್ಟ್ ನಿಂದ ಬಂದಿದ್ದ ಏಳೆಂಟು ಕುಟುಂಬಗಳಿದ್ದವು. ಉಳಿದವರೆಲ್ಲ ಬಿಳಿಯರು.

ಆದರೆ ಎಲ್ಲರ ಪಕ್ಕದ ಮನೆಯವರಲ್ಲಿ ಕನಿಷ್ಠ ಒಬ್ಬರು ಅಮೇರಿಕನ್ನರಾಗಿದ್ದರು. ಕೇಂಬ್ರಿಜ್‌ನಲ್ಲಿ ಇಂಡಿಯ, ಶ್ರೀಲಂಕಾ ಮತ್ತು ಪಾಕಿಸ್ತಾನದಿಂದ ಬಂದವರೆಲ್ಲ ಒಬ್ಬರನ್ನೊಬ್ಬರು ಗುರುತಿಸಿಕೊಂಡು ಸ್ನೇಹ ಸಂಬಂಧ ಬೆಳೆಸಿಕೊಳ್ಳುವುದು ವಾಡಿಕೆ.

ಯೂನಿವರ್ಸಿಟಿ ಲೈಬ್ರರಿಯಲ್ಲಿ, ಚರ್ಚಿಲ್ ಬಟ್ಟರಿ ಅಂದರೆ ಪಬ್‌ನಲ್ಲಿ, ಓರಿಯಂಟಲ್ ಫ್ಯಾಕಲ್ಟಿಯಲ್ಲಿ, ಕಂಡ ಕೆಲವರೊಡನೆ ನಮ್ಮ ಸಂಭಾಷಣೆ `ಹಲೋ~, `ನೈಸ್ ವೆದರ್~, `ಹೌ ಡು ಯು ಡು~, `ಫ್ರೀಜಿಂಗ್ ಕೋಲ್ಡ್~, `ಇಜಿಂಟ್ ಇಟ್~ ಎಂಬ ಪದಗಳೊಂದಿಗೆ ಆರಂಭಗೊಂಡು-ಅಂತ್ಯಗೊಳ್ಳುತ್ತಿತ್ತು.

ಸೀರೆ ಅಥವಾ ಸಲ್ವಾರ್ ಹಾಕಿದ್ದ ಮಹಿಳೆಯನ್ನು ಮಾರ್ಕೆಟ್ಟಿನಲ್ಲಿ ಕಂಡರೆ ನನ್ನ ಹೆಂಡತಿ ಅವರ ಬಳಿ ಹೋಗಿ ಅವರನ್ನು ಮಾತನಾಡಿಸುವ ಆತುರ ತೋರುತ್ತಿದ್ದಳು.

ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುತ್ತಿದ್ದರೆಂಬುದಕ್ಕಿಂತ ಯಾವ ಅಂಗಡಿಯಲ್ಲಿ ಯಾವ ವಸ್ತು ಕಡಿಮೆ ಬೆಲೆಗೆ ಯಾವಾಗ ದೊರೆಯುವುದು, ನಮಗೆ ಬೇಕಾದ ಮಸಾಲೆ, ಹಪ್ಪಳ, ಮೆಣಸಿನಕಾಯಿ, ಅಕ್ಕಿ, ಗೋಧಿಹಿಟ್ಟು, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ ಎಲ್ಲಿ ದೊರೆಯುವುವು ಎಂಬುದರ ಸುತ್ತ ಬಹುತೇಕ ಹೆಂಗಸರ ಕುತೂಹಲವಿರುತ್ತಿತ್ತು.

ಕರ್ನಾಟಕ, ಮಹಾರಾಷ್ಟ್ರದಿಂದ ಬಂದಿದ್ದ ಮೂರು ಕುಟುಂಬಗಳು ಮಾತ್ರ ಹೆಚ್ಚು ಸಲಿಗೆಯ ಸಂಪರ್ಕ ಬೆಳೆಸಿಕೊಂಡು ಆಗೊಮ್ಮೆ ಈಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು.

ವಾರಾಂತ್ಯದಲ್ಲಿ ಎಲ್ಲಿಯಾದರೂ, ಯಾರ ಮನೆಗಾದರೂ ಹೋಗಬೇಕಾದರೆ ಮಕ್ಕಳನ್ನು ಕರೆದೊಯ್ಯುವಂತಿರಲಿಲ್ಲ; ಹೀಗಾಗಿ ನಮ್ಮ ಮನೆಗಳಲ್ಲಿಯೇ ವಾರಾಂತ್ಯವನ್ನೂ ಕಳೆಯುವುದು ಅನಿವಾರ್ಯವಾಗಿತ್ತು.

ಕಾಲೇಜಿಗೆ ನಮ್ಮ ಹಾಜರಿ ಎಂದರೆ ವಾರಕ್ಕೊಮ್ಮೆ ಕಾಲೇಜಿನ ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುವುದು. ಆಗ ಕಡ್ಡಾಯವಾಗಿ ಸ್ಯೂಟು, ಕರಿಗೌನು, ಧರಿಸಬೇಕಾಗಿತ್ತು.

ಕೇಂಬ್ರಿಜ್‌ನಲ್ಲಿ ನಾನು ಮೊದಲು ಕೊಂಡದ್ದು ಈ ಗೌನನ್ನು. ಊಟಕ್ಕೆ ಹೋಗದಿದ್ದರೂ ಹಣಸಂದಾಯ ಮಾಡಬೇಕಾದುದರಿಂದ ಮತ್ತು ಅದಕ್ಕಾಗಿ ಏಳೆಂಟು ಪೌಂಡ್ ಕೊಟ್ಟು ಗೌನು ಖರೀದಿಸಿದ್ದುದರಿಂದ, ಇದನ್ನು ವಾರಕ್ಕೊಮ್ಮೆ ಹಾಕಿಕೊಂಡು ಊಟ ಮಾಡುವ ರಿಚುಯಲ್‌ಗೆ ಹೊಂದಿಕೊಂಡಿದ್ದೆ.

ಮೊದಮೊದಲು ಇದೊಂದು ಹೆಮ್ಮೆಯ ಗಳಿಗೆಯೂ ಎನಿಸಿತ್ತು - ಏಕೆಂದರೆ, ಅಂತಹ ಸಂದರ್ಭಗಳಲ್ಲಿ ಮಾತ್ರ `ಹೈ ಟೇಬಲ್~ (ಅಂದರೆ ಎತ್ತರದ ಸ್ಥಳದಲ್ಲಿ ಸಾಲಾಗಿ ಹಾಕಿದ್ದ ಟೇಬಲ್)ನಲ್ಲಿ ಕುಳಿತು ಊಟ ಮಾಡುವ ನಮ್ಮ ಮಾಸ್ಟರ್ (ವೈಸ್‌ಛಾನ್ಸಲರ್), ಹಿರಿಯ ಫ್ಯಾಕಲ್ಟಿ ಮತ್ತು ವಿಶೇಷ ಆಹ್ವಾನಿತರನ್ನು ನೋಡಬಹುದಾಗಿತ್ತು.

ಬಕ್ಕಿಂಗ್‌ಹ್ಯಾಮ್ ಅರಮನೆಯನ್ನು ಬಿಟ್ಟರೆ ಕೇಂಬ್ರಿಜ್ ಹೈ ಟೇಬಲ್‌ಗಳಲ್ಲಿಯ ಊಟವೇ ಇಂಗ್ಲೆಂಡಿನಲ್ಲಿ ಸಿಗುವ ಉತ್ಕೃಷ್ಟ ಊಟ ಎಂಬ ವದಂತಿ ಇತ್ತು. ವಿದ್ಯಾರ್ಥಿಗಳಿಗೆ ಸೂಪು, ಒಂದು ಕುದಿಸಿದ ಮಾಂಸದ ತುಂಡು, (ಅದರೊಡನೆ ಒಂದು ತರಕಾರಿ) ಡೆಸೆರ್ಟ್‌ ಬಡಿಸಲಾಗುತ್ತಿತ್ತು.

ಹೊಟ್ಟೆ ತುಂಬಾ ಊಟ ಎಂಬ ಮಾತೇ ಇರಲಿಲ್ಲ. ನಮ್ಮಡನೆ ಆಗಾಗ್ಗೆ ಬರುತ್ತಿದ್ದ ಕುವೈತ್ ಷೇಕ್‌ಗೆ ಇಷ್ಟು ಅಲ್ಪ ಊಟಮಾಡಿ ಇವರು ಹೇಗೆ ಬದುಕಿದ್ದಾರೆ - ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು.
 
`ಆಯ್ತು, ನನ್ನದಂತೂ ಶಾಸ್ತ್ರದ ಊಟ. ಈಗ ಮನೆಗೆ ಹೋಗಿ ನಿಜವಾದ ಊಟ ಮಾಡುವೆ~ ಎಂದು ಹೇಳಿ ಆತ ನಮ್ಮನ್ನೆಲ್ಲಾ ನಗಿಸುತ್ತಿದ್ದ.

ಕೆಲವು ಬಾರಿ ನಾವೂ ಮನೆಗೆ ಹೋಗಿ ಊಟ ಮಾಡುತ್ತಿದ್ದೆವು. ಯಾಕೆಂದರೆ ಖಾರ-ಹುಳಿ ಇಲ್ಲದ ಅಡುಗೆ, ಅನ್ನ ಮೊಸರು ಇಲ್ಲದ ಊಟ, ಊಟವೆಂದೆನಿಸುತ್ತಿರಲಿಲ್ಲ.

ಒಂದು ಮಬ್ಬು ಸಂಜೆ, ಲೇಕ್‌ಹ್ಯಾಂಪ್ಟನ್ ಕಾಲೇಜಿನಲ್ಲಿದ್ದ ಒಬ್ಬ ಬಂಗಾಳಿಯನ್ನು ಮತ್ತು ಅವರ ಸ್ನೇಹಿತನಾದ ಪಂಜಾಬಿಯನ್ನು ಪರಿಚಯಿಸಿಕೊಂಡೆ.

ಬಂಗಾಳಿ ಪುರಾತನ ಭಾರತೀಯ ನಾಣ್ಯಗಳ ಮೇಲೆ ಓರಿಯಂಟಲ್ ಫ್ಯಾಕಲ್ಟಿಯಲ್ಲಿ ಸಂಶೋಧನೆ ಮಾಡುತ್ತಿದ್ದ. ಕೇಂಬ್ರಿಜ್‌ಗೆ ಬಂದು ಒಂದು ವರ್ಷವಾಗಿತ್ತು. ಪಂಜಾಬಿ ಗಣಿತಶಾಸ್ತ್ರದಲ್ಲಿ ಪಿಎಚ್.ಡಿ. ಮಾಡುತ್ತಿದ್ದ.

ಈತ ಆಗಲೇ ಎರಡು ವರ್ಷ ಕಳೆದಿದ್ದ. ಲೈಬ್ರರಿಯಿಂದ ಚರ್ಚಿಲ್ ಕ್ಯಾಂಪಸ್ ಸುಮಾರು 25 ನಿಮಿಷದ ಕಾಲ್ನಡಿಗೆ ದಾರಿ. ತುಂಬಾ ಚಳಿ ಇತ್ತು. ನಾವೆಲ್ಲ ಸ್ವೆಟರ್, ಓವರ್‌ಕೋಟು, ಒಂದೊಂದು ಬಗೆಯ ಟೊಪ್ಪಿಗೆಗಳನ್ನು ಹಾಕಿಕೊಂಡು ಕೊರಳಿಗೆ ಮಫ್ಲರು ಸುತ್ತಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ.

ಚರ್ಚಿಲ್ `ಬಟ್ಟರಿ~ ಅಥವಾ ಪಬ್ ಸೇರಿದ ಕೂಡಲೇ ಅಲ್ಲಿಯ ಬೆಚ್ಚಗಿನ ವಾತಾವರಣದಲ್ಲಿ ಏನನ್ನಾದರೂ ಕುಡಿಯಬೇಕೆನಿಸಿತು.
 
ಅಲ್ಲಿಯವರೆಗೂ ನಾನು ವಿಸ್ಕಿ-ಬ್ರಾಂದಿ ಮುಟ್ಟಿರಲಿಲ್ಲ. ಬೀರು ಕುಡಿದಿದ್ದೆ. ಆ ಸಂಜೆ ಮೊದಲ ಬಾರಿಗೆ ನನಗೆ ಇಂಗ್ಲೆಂಡಿನಲ್ಲಿ ಸರ್ವೇಸಾಮಾನ್ಯವಾಗಿ ಸುಸಂಸ್ಕೃತರು ತೆಗೆದುಕೊಳ್ಳುತ್ತಿದ್ದ `ಷೆರ‌್ರಿ~ ಎಂಬ ವೈನನ್ನು ಪರಿಚಯಿಸಲಾಯಿತು.

ಪಂಜಾಬಿ ನೇರವಾಗಿ ಡಬಲ್ ವಿಸ್ಕಿ ಇಳಿಸಿ, ರಿಪೀಟ್ ಮಾಡಿ, ಅದರಲ್ಲಿ ಸೋಡಾ ಬೆರೆಸುತ್ತಿದ್ದ. ಬಂಗಾಲಿ ದೊಡ್ಡ ಬೀರ್ ಮಗ್ಗನ್ನು ಕೈಗೆತ್ತಿಕೊಂಡು ಗಂಭೀರವಾಗಿ ಕುಳಿತಿದ್ದ.

ಸ್ವಲ್ಪ ಮನಸ್ಸು ಹಗುರಾಗಿ, ದೇಹ ಬೆಚ್ಚಗಾಗಿ, ಮಾತು ಹೆಚ್ಚಾಗಿ, ಸಂಭ್ರಮಿಸುತ್ತಿರುವಾಗ ಪಂಜಾಬಿ ಉತ್ಸಾಹದಿಂದ `ನೀವು ಕೇಳಿರಬೇಕು, ಪಾಕಿಸ್ತಾನಿಗಳು ಈಗೆರಡು ತಿಂಗಳ ಹಿಂದೆ ಸೆಲೆಬ್ರೇಟ್ ಮಾಡಿದ ಸುದ್ದಿಯನ್ನು~ ಎಂದ.

ಇಲ್ಲಿಗೆ ಬಂದು ಎರಡೇ ತಿಂಗಳಾಗಿದ್ದ ನಾನು ತಲೆಯಲ್ಲಾಡಿಸಿದೆ. ಬೆಂಗಾಲೀ, `ಕೇಳಿದ್ದೀನಿ, ಆದರೆ ಹೆಚ್ಚಿನ ವಿವರ ತಿಳಿಯದು~ ಅಂದ. `ಇದು ನಿಜ, ರಾಜೀವ್ ಗಾಂಧಿ ಕಳೆದ ವರ್ಷ ಕಾಲೇಜಿನಿಂದ ಉಚ್ಚಾಟನೆಗೊಂಡಿದ್ದನ್ನು ಅವರು ಸೆಲೆಬ್ರೇಟ್ ಮಾಡಿದರು~, ಅಂದ.

`ಅಂದರೆ?~ ಎಂದು ನಾನೆಂದೆ, ಏನೂ ಅರ್ಥವಾಗದೆ. `ಅಂದರೆ ಸೆಂಟ್‌ಡೌನ್. ನಪಾಸಾದವರನ್ನು, ಗ್ರೇಡ್‌ಗಳಿಸದವರನ್ನು, ಪ್ರತಿವರ್ಷ ಇಲ್ಲಿನ ಕಾಲೇಜುಗಳು ನಿಷ್ಠುರವಾಗಿ ಹೊರಹಾಕುವುವು. ಪ್ರತಿವರ್ಷ ಕನಿಷ್ಠ 5% ವಿದ್ಯಾರ್ಥಿಗಳಿಗೆ ಇಂತಹ ಆತಂಕ ಕಾದಿರುತ್ತದೆ~ ಅಂದ. `ಇದರಲ್ಲಿ ಸೆಲೆಬ್ರೇಟ್ ಮಾಡುವುದೇನಿದೆ?~ ಎಂದೆ.

`ಆ ಹಿಂದಿನ ವರ್ಷ, ಪಾಕಿಸ್ತಾನದ ಜನರಲ್ ಅಯೂಬ್‌ಖಾನನ ಮಗನನ್ನು ಉಚ್ಚಾಟಿಸಲಾಗಿತ್ತು- ಆಗ ಇಂಡಿಯನ್ಸ್ ಸೆಲೆಬ್ರೇಟ್ ಮಾಡಿದ್ದರು, ಅದಕ್ಕೆ ಇದು ಪ್ರತೀಕಾರ~ ಎಂದ. ಇದೆಷ್ಟರ ಮಟ್ಟಿಗೆ ನಿಜವೋ ನನಗೆ ತಿಳಿಯದು.

ಗಾಂಧಿ ಸೋದರರಲ್ಲಿ ಅಷ್ಟೇನೂ ಸೂಕ್ಷ್ಮಬುದ್ಧಿಯವನೆನಿಸದ ಸಂಜಯ ಗಾಂಧಿ ಕೇಂಬ್ರಿಜ್‌ನ ಯಾವ ಕಾಲೇಜಿನಲ್ಲಿಯೂ ಪ್ರವೇಶ ಪಡೆದಿರಲಿಲ್ಲ. ಈತ ಆಟೋಮೊಬೈಲ್ ತರಬೇತಿ ಪಡೆಯಲು ಒಂದು ಪ್ರಸಿದ್ಧ ಕಂಪನಿಯಲ್ಲಿ ಅಪ್ರೈಂಟಿಸ್ ಆಗಿ ಸೇರಿದ್ದ.

ಐದು ಸಾವಿರ ರೂಪಾಯಿಗೆ ಮಾರುತಿ ಕಾರನ್ನು ಭಾರತೀಯರಿಗೆ ಒದಗಿಸುವುದಾಗಿ ಆತನು ಆನಂತರ ಘೋಷಿಸಿದ್ದನ್ನು ಮಾತ್ರ ನಾನು ಸ್ವತಃ ಕೇಳಿದ್ದೆ. ರಾಜೀವ್ ಗಾಂಧಿ 1962-65 ಅವಧಿಯಲ್ಲಿ ಟ್ರಿನಿಟಿ (ಅವರ ಅಜ್ಜ ಜವಹರ್‌ಲಾಲ್ ನೆಹರೂ ಇದ್ದ) ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ.

ಆದರೆ ಯಾವ ವರ್ಷವೂ ಪರೀಕ್ಷೆ ತೆಗೆದುಕೊಳ್ಳದ್ದರಿಂದ ಮೂರು ವರ್ಷದ ನಂತರ ಬರಿಗೈಯಲ್ಲಿ ಹೊರಬಿದ್ದಿದ್ದ.ಆದರೇನು? ಮುಂದೆ ಬಹು ದೊಡ್ಡ ರಾಷ್ಟ್ರಗಳಲ್ಲೊಂದಾದ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಚ್ಚುಮೆಚ್ಚಿನ ಪ್ರಧಾನಿಯಾಗಿ ಕೀರ್ತಿ ಗಳಿಸಿ ಹುತಾತ್ಮನಾದನು.

`ಟ್ರಿನಿಟಿ ಕಾಲೇಜಿನಲ್ಲಿ ಈಗಿನ ಸುದ್ದಿ ಎಂದರೆ ಪ್ರಿನ್ಸ್ ಚಾರ್ಲ್ಸ್ ಮೂರು ವರ್ಷ ಮುಗಿದ ನಂತರ ಡಿಗ್ರಿ ಪಡೆದುಕೊಳ್ಳುವನೋ ಅಥವಾ ಮಧ್ಯದಲ್ಲಿಯೇ ಕಾಲೇಜು ಬಿಡುವನೋ ಎಂಬುದು~ ಎಂದ ಪಂಜಾಬಿ.
(ಇನ್ನೂ ಇದೆ)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT