ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದ ಸಾಂಸ್ಕೃತಿಕ ಸಮುಚ್ಚಯದ ಕನಸು

Last Updated 21 ಮೇ 2012, 5:35 IST
ಅಕ್ಷರ ಗಾತ್ರ

ಬಳ್ಳಾರಿ: ರಂಗಭೂಮಿ, ಸಂಗೀತ, ಜನಪದ ಕಲೆಗೆ ಹಾಗೂ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವ ಬಳ್ಳಾರಿ ಜಿಲ್ಲೆಯಲ್ಲಿ ಕಲಾವಿದರಿಗೆ ನೆರವಾಗಲಿ ಎಂಬ ಉದ್ದೇಶದಿಂದ 13 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಸಾಂಸ್ಕೃತಿಕ ಸಮುಚ್ಚಯದ ಉದ್ದೇಶ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಡೇರದೆ ಉಳಿದಿದೆ.

ಬಯಲು ರಂಗಮಂದಿರ, ಚಿತ್ರ ಕಲಾವಿದರ ಉತ್ಕೃಷ್ಟ ಕಲಾಕೃತಿಗಳ ಪ್ರದರ್ಶನಕ್ಕಾಗಿ ಕಲಾ ಗ್ಯಾಲರಿ, ಸಂಗೀತ ಮತ್ತು ಕಲಾ ಗ್ರಂಥಾಲಯ, ಅನೇಕ ವಿಷಯಗಳ ಕುರಿತು ಚರ್ಚಿಸಲೆಂದೇ ನಿರ್ಮಿಸಲಾಗಿರುವ ವಿಚಾರ ಸಂಕಿರಣ ಭವನ ಒಳಗೊಂಡಿರುವ ಈ ಸಮುಚ್ಛಯದ ನಿರ್ವಹಣೆಯನ್ನೇ ಮರೆತಿರುವ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕಲಾಸಕ್ತರಿಗೆ ಸೌಲಭ್ಯದ ಸದುಪಯೋಗ ದೊರೆಯದಂತಾಗಿದೆ.

ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಅನಂತಪುರ ರಸ್ತೆಯ ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲಿರುವ ಜಿಲ್ಲಾಧಿಕಾರಿ ನಿವಾಸಕ್ಕೆ ಸಂಬಂಧಿಸಿದ ಒಟ್ಟು ಎಂಟು ಎಕರೆ ಭೂಮಿಯನ್ನು ಸಾಂಸ್ಕೃತಿಕ ಸಮುಚ್ಛಯಕ್ಕಾಗಿ ಪಡೆದು, ಕೇಂದ್ರ ಸರ್ಕಾರದ 1.40 ಕೋಟಿ ಅನುದಾನದ ನೆರವಿನೊಂದಿಗೆ, ವಿಜಯನಗರದ ವೈಭವವನ್ನು ಸಾರುವ ಮಾದರಿಯಲ್ಲೇ ನಾಲ್ಕು ಬೃಹತ್ ಕಟ್ಟಡ ಹಾಗೂ ಕಂಪೌಂಡ್ ಕಟ್ಟಲಾಗಿದ್ದು,  ಸಮರ್ಪಕ ರಸ್ತೆ, ಸ್ವಚ್ಛತೆಯ ಕೊರತೆ, ಹಸಿರು ವಾತಾವರಣ ನಿರ್ಮಿಸುವಲ್ಲಿ ಕ್ರಮ ಕೈಗೊಳ್ಳದೆ ಕೈಬಿಡಲಾಗಿದೆ.

ನಗರದ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗಿದ್ದ ಜೋಳದರಾಶಿ ಡಾ.ದೊಡ್ಡನಗೌಡ ರಂಗಮಂದಿರದ ಉದ್ಘಾಟನೆಯ ದಿನದಂದೇ 1996ರಲ್ಲಿ ಸಾಂಸ್ಕೃತಿಕ ಸಮುಚ್ಛಯ ನಿರ್ಮಾಣಕ್ಕೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಶಂಕುಸ್ಥಾಪನೆ ನೆರವೇರಿಸಿದ್ದರು. ಮೂರು ವರ್ಷಗಳ ನಂತರ 1999ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಸಮುಚ್ಚಯ ಉದ್ಘಾಟಿಸಿದ್ದರು.

ಕಲಾ ಅಭ್ಯಾಸ, ತರಬೇತಿ ಮತ್ತು ಕಲಾ ಪ್ರದರ್ಶನಕ್ಕೆ ಒಂದೇ ಜಾಗೆಯಲ್ಲಿ ಅವಕಾಶ ದೊರೆಯಲಿ ಎಂಬ ಸದುದ್ದೇಶದಿಂದ ನಿರ್ಮಿಸಿರುವ ಈ ಸಮುಚ್ಚಯದಲ್ಲಿನ ಬಯಲು ರಂಗಮಂದಿರದಲ್ಲಿ ವರ್ಷಕ್ಕೆ ಮೂರರಿಂದ ನಾಲ್ಕು ನಾಟಕ, ಒಂದೆರಡು ವಿಚಾರ ಸಂಕಿರಣಗಳು ನಡೆಯುತ್ತಿದ್ದು, ಕಲಾ ತರಬೇತಿ, ಪ್ರದರ್ಶನಗಳಂತೂ ಇಲ್ಲವೇ ಇಲ್ಲ ಎಂಬಂತಾಗಿದೆ.

ರಾತ್ರಿ ವೇಳೆಯಲ್ಲೇ ಪ್ರದರ್ಶಿಸಲಾಗುವ ನಾಟಕಗಳ ವೀಕ್ಷಣೆಗೆ ನೆರವಾಗಲು ಸೂಕ್ತ ಬೆಳಕಿನ ವ್ಯವಸ್ಥೆಗೆ ವಿದ್ಯುದ್ದೀಪದ ಸೌಲಭ್ಯ ನೀಡದಿರುವುದು, ರಸ್ತೆಗಳನ್ನು ಅಭಿವೃದ್ಧಿಪಡಿಸದಿರುವುದರಿಂದ ಮಹಿಳೆಯರು, ಮಕ್ಕಳು ಸಮುಚ್ಚಯದೊಳಗೆ ಬರುವುದಕ್ಕೇ ಭಯಪಡುವಂತಾಗಿದೆ.

ಅನಾಥ ಕಲಾಕೃತಿಗಳು: ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಾಗಿರುವ ಸಂಗೀತ ಮತ್ತು ಕಲಾ ಗ್ರಂಥಾಲಯದೆದುರು ಶಿಗ್ಗಾಂವಿಯ ಕಲಾವಿದ ಸೊಲಬಕ್ಕನವರ್ ನಿರ್ಮಿಸಿರುವ ಗ್ರಾಮೀಣ ಪರಿಸರ ನೆನಪಿಸುವ ಸುಂದರ ಕಲಾಕೃತಿಗಳು ನಿರ್ವಹಣೆಯ ಕೊರತೆಯಿಂದಾಗಿ ಅನಾಥವಾಗಿದ್ದು, ರಾತ್ರಿ ವೇಳೆ ಈ ಜಾಗೆಗೆ ಬರುವವರು ಬೆಚ್ಚಿ ಬೀಳುವಂತೆ ಕಂಗೊಳಿಸುತ್ತಿವೆ.ಕಲಾಕೃತಿಗಳ ಸುತ್ತಲಿನ ತಂತಿ ಬೇಲಿಯೂ ಬಿದ್ದು ಹೋಗಿದ್ದು, ರಕ್ಷಣೆಯೇ ಇಲ್ಲದೆ ಸೊರಗಿವೆ.

ಹಸಿರೇ ಇಲ್ಲ: ನಿತ್ಯವೂ  ಬೆಳಿಗ್ಗೆ ನೂರಾರು ವಾಯು ವಿಹಾರಿ ಗಳ ತಾಣವಾಗಿರುವ ಈ ಸಮುಚ್ಚಯದಲ್ಲಿ ಹಸಿರನ್ನು ಬೆಳೆಸಲು ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ವಾಯು ವಿಹಾರಿಗಳಿಗೆ ತೀವ್ರ ಬೇಸರ ಉಂಟಾಗುತ್ತದೆ. ಎಷ್ಟೇ ಉದ್ಯಾನಗಳಿದ್ದರೂ ನಗರದ ಹೃದಯ ಭಾಗದಲ್ಲಿರುವ ಸಾಂಸ್ಕೃತಿಕ ಸಮುಚ್ಚಯಕ್ಕೆ ವಾಯುವಿಹಾರಕ್ಕೆ ಬರುವು ದೆಂದರೆ ಅನೇಕರಿಗೆ ಎಲ್ಲಿಲ್ಲದ ಸಂತಸ.

ಆದರೆ, ಇಲ್ಲಿನ ಪರಿಸರ ಜನರಲ್ಲಿ ತೀವ್ರ ಬೇಸರ ಮೂಡಿಸುತ್ತದೆ. ಸರ್ಕಾರ ಈ ಜಾಗೆಯಲ್ಲಿ ಹಸಿರು ಕಂಗೊಳಿಸುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ನಿತ್ಯವೂ ಆಗಮಿಸುವ ಪಟೇಲ್‌ನಗರದ ರಾಮಾಂಜಿನಿ ಕೋರುತ್ತಾರೆ.

ಸಮುಚ್ಚಯದ ಸುಂದರ ಕಂಪೌಂಡ್‌ಗಳ ಅಕ್ಕಪಕ್ಕದಲ್ಲಿ ಇರಿಸಲಾಗಿರುವ ಸೌಂಡ್ ಬಾಕ್ಸ್‌ಗಳ ಮೂಲಕ ಬೆಳಗಿನ ವೇಳೆ ತೇಲಿ ಬರುವ ವಾದ್ಯ ಸಂಗೀತವನ್ನು ಆಸ್ವಾದಿಸುವ ವಾಯು ವಿಹಾರಿಗಳಿಗೆ ಸುಸಜ್ಜಿತ ಕೂಡು ರಸ್ತೆಗಳನ್ನೂ, ಕಾರಂಜಿಗಳನ್ನೂ, ಆಮ್ಲಜನಕ ಹೊರಸೂಸುವ ಹಸಿರು ವಾತಾವರಣವನ್ನು ಕಲ್ಪಿಸಬೇಕು ಎಂದೂ ಅವರು ಆಗ್ರಹಿಸುತ್ತಾರೆ.

ಕಾಯಕಲ್ಪಕ್ಕೆ ಮನವಿ: ವಿಶಿಷ್ಟ ಮಾದರಿಯ ಬಯಲು ರಂಗಮಂದಿರಕ್ಕೆ ಧ್ವನಿ-ಬೆಳಕು ವ್ಯವಸ್ಥೆ, ಕಟ್ಟಡಗಳ ಅಲ್ಪಸ್ವಲ್ಪ ದುರಸ್ತಿಗೆ ಕ್ರಮ, ಸಮುಚ್ಚಯದ ಸುತ್ತ ಅಲಂಕಾರಿಕ ದೀಪಗಳ ಅಳವಡಿಕೆ, ನೀರಿನ ಸೌಲಭ್ಯ, ಹಸಿರು ಹುಲ್ಲು, ಗಿಡ, ಮರ ಬೆಳೆಸಲು ಅಗತ್ಯ ಸಿಬ್ಬಂದಿ ಒದಗಿಸುವಂತೆ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಸರ್ಕಾರ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ `ಪ್ರಜಾವಾಣಿ~ಗೆ ವಿವರಿಸಿದರು.

ಮಾಜಿ ಉಪ ಮುಖ್ಯಮಂತ್ರಿ, ದಿ. ಎಂ.ಪಿ. ಪ್ರಕಾಶ್ ಅವರ ಕನಸಿನ ಕೂಸಾಗಿರುವ ಸಾಂಸ್ಕೃತಿಕ ಸಮುಚ್ಚಯದ ಉದ್ದೇಶ ಈಡೇರಿಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ಸಾಂಸ್ಕೃತಿಕವಾಗಿ ಅಪಾರ ಕೊಡುಗೆ ನೀಡಿರುವ ಬಳ್ಳಾರಿಯ ಕಲಾವಿದರಿಗೆ ಸೂಕ್ತ ವೇದಿಕೆ ದೊರಕಿಸಿಕೊಡಲು ಮುಂದಾಗ ಬೇಕು ಎಂಬುದು ಕಲಾರಾಧಕರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT