ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗಿಯೇ ಉಳಿದ ವರ್ತುಲ ರಸ್ತೆ

Last Updated 20 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಕಳೆದ ಕೆಲವು ತಿಂಗಳಿಂದ `ಹೊರ ವರ್ತುಲ ರಸ್ತೆ~ ನಿರ್ಮಾಣದ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ರೂಪು ರೇಷೆಗಳೂ ಸಿದ್ಧವಾಗಿದ್ದು, ಉದ್ದೇಶಿತ ರಸ್ತೆ ಬರುವ ಜಾಗದ ಸುತ್ತಮುತ್ತಲಿನ ರೈತರು ತಾವು ಕೋಟ್ಯಧಿಪತಿ ಗಳಾಗುವ ದಿನ ದೂರವಿಲ್ಲ ಎಂಬ ಕನಸು ಕಾಣಲು ಆರಂಭಿಸಿದ್ದಾರೆ.

ಹೊರ ವರ್ತುಲ ರಸ್ತೆ ಕನಸು ಏನಾಗುತ್ತದೋ ಗೊತ್ತಿಲ್ಲ, ಆದರೆ ಸುಮಾರು ಏಳು ವರ್ಷಗಳ ಹಿಂದೆ ಹಾಸನದ ಜನರು ಕಂಡಿದ್ದ ರಿಂಗ್ ರಸ್ತೆಯ ಕನಸು ಈಗ ಅನೇಕ ನಿವಾಸಿಗಳನ್ನು ಕೆಟ್ಟ ಕನಸಾಗಿ ಕಾಡುವಂತಾಗಿದೆ.
ಪಟ್ಟಣದ ಬಿ.ಎಂ ರಸ್ತೆಯ ಟ್ರಾಫಿಕ್ ಜಾಮ್‌ಗೆ ಸಿಲುಕದೆಯೇ ನೇರವಾಗಿ ಬೈಪಾಸ್‌ಗೆ ಹೋಗು ವುದು ಈ ರಿಂಗ್ ರಸ್ತೆಯ ಉದ್ದೇಶವಾಗಿತ್ತು.
 
9 ಕಿ.ಮೀ. ಉದ್ದದ ರಿಂಗ್ ರಸ್ತೆ ಡೇರಿ ವೃತ್ತದಿಂದ ಆರಂಭಿಸಿ ಸಾಲಗಾಮೆ ರಸ್ತೆಯನ್ನು ಸಂಪರ್ಕಿಸು ವವರೆಗೆ (3.18 ಕಿ.ಮೀ.) ಪೂರ್ಣಗೊಂಡಿದೆ. ಇಷ್ಟಾಗಿ ವರ್ಷಗಳೇ ಕಳೆದಿವೆ. ಅದರಾಚೆಗಿನ ಕಾಮಗಾರಿ ಯಾವಾಗ ನಡೆಯುತ್ತದೆ ಎಂದು ಕೇಳಿದರೆ ಉತ್ತರಿಸುವವರೇ ಇಲ್ಲದಂತಾಗಿದೆ.


ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆ ಯನ್ನು ಸಂಪರ್ಕಿಸಿ, ಅಲ್ಲಿಂದ ದೇವರಾಯಪಟ್ಟಣ ರಸ್ತೆಯನ್ನು ಸೇರುವುದು ಒಟ್ಟಾರೆ ಯೋಜನೆಯ ರೂಪ. ಆದರೆ ಸರ್ಕಾರ ಬದಲಾದಂತೆ ರಸ್ತೆಯ ಕಾಮಗಾರಿಯ ಗತಿಯೂ ಬದಲಾಯಿತು. ಕೆಲವು ವರ್ಷಗಳಿಂದ ಪೂರ್ಣವಾಗಿ ಸ್ಥಗಿತಗೊಂಡಿದೆ.

ಈ ನಾಲ್ಕು ಲೇನ್ ರಸ್ತೆಗಾಗಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಮೊತ್ತ ನೀಡಲು ವಿಳಂಬವಾದುದೇ ಕಾಮಗಾರಿ ಸ್ಥಗಿತ ಗೊಳ್ಳಲು ಕಾರಣ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ರಿಂಗ್ ರಸ್ತೆ ಸಾಲಗಾಮೆ ರಸ್ತೆಯನ್ನು ಸಂಪರ್ಕಿಸಿದೆ.
 

ಆದರೆ ಅಲ್ಲಿಂದ ಮುಂದೆ ಇರುವ ಕೆಲವು ರೈತರಿಗೆ ಪರಿಹಾರದ ಹಣ ನೀಡಿಲ್ಲ. ಹಣ ಕೈಸೇರುವವರೆಗೆ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ರೈತರು ಹಟ ಹಿಡಿದಿದ್ದಾರೆ. ಪರಿಹಾರದ ರೂಪದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ನೀಡಬೇಕಾಗಿದೆ. ಅಷ್ಟನ್ನು ನೀಡಿದರೆ ಒಂದು ವರ್ಷದೊಳಗೆ ಕಾಮಗಾರಿ ನಡೆಸಬಹುದು ಎಂದು ಅವರು ತಿಳಿಸುತ್ತಾರೆ. ಆದರೆ ವಿಳಂಬ ಮಾಡಿದ್ದರಿಂದಾಗಿ ಇಡೀ ಯೋಜನೆ ವೆಚ್ಚ ಮಾತ್ರ ಹಲವು ಪಟ್ಟು ಹೆಚ್ಚಿದೆ.

ಲೋಕೋಪಯೋಗಿ ಇಲಾಖೆಯವರು ಈಚೆಗೆ 1.5 ಕೋಟಿ ರೂಪಾಯಿ ಪರಿಹಾರ ಸೇರಿದಂತೆ 15.35 ಕೋಟಿ ರೂಪಾಯಿಯ ಪರಿಷ್ಕೃತ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ.
(ಮೂಲತಃ 8 ಕೋಟಿ ರೂಪಾಯಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು) ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರೂ ಪರಿಷತ್ತಿನಲ್ಲಿ ಪ್ರಶ್ನೆ ಎತ್ತಿದ್ದರಿಂದ ಯೋಜನೆ ಸ್ವಲ್ಪ ಚುರುಕು ಗೊಳ್ಳಬಹುದು ಎಂಬ ವಿಶ್ವಾಸ ಮೂಡಿದೆ.

ಕಸದ ತಿಪ್ಪೆಯಾಗಿದೆ
ಒಂದು ಯೋಜನೆ ಅರ್ಧಕ್ಕೇ ನಿಂತರೆ ಎಷ್ಟೆಲ್ಲ ಅನಾಹುತ ಆಗಬಹುದು ಎಂಬುದಕ್ಕೆ ಈ ರಿಂಗ್ ರಸ್ತೆ ಉದಾಹರಣೆಯಾಗುತ್ತಿದೆ.

ರಿಂಗ್ ರಸ್ತೆ ಬರುತ್ತದೆ ಎಂಬ ಕಾರಣಕ್ಕೇ ಈ ಭಾಗದಲ್ಲಿ ಸಾಕಷ್ಟು ಜನರು ನಿವೇಶನಗಳನ್ನು ಖರೀದಿಸಿದ್ದರು. ಭೂಮಿಯ ಬೆಲೆಯೂ ಗಗನಕ್ಕೇರಿತು. ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತಿದ್ದರಿಂದ ಈಗ ರಿಂಗ್ ರಸ್ತೆ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ. ಸಂಜೆ ವೇಳೆಯಲ್ಲಿ ಒಬ್ಬಂಟಿಯಾಗಿ ಓಡಾಡಲೂ ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ.


ಸರಗಳ್ಳತನ, ದರೋಡೆಯಂಥ ಹಲವು ಪ್ರಕರಣಗಳು ಈ ರಸ್ತೆಯಲ್ಲಿ ದಾಖಲಾಗಿದೆ. ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಿ ಎಂದು ಸ್ಥಳೀಯರೇ ಗೋಗರೆಯುವಂತಾಗಿದೆ. ಸಾಲ ದೆಂಬಂತೆ ಒಂದೆರಡು ವರ್ಷಗಳಿಂದ ಈ ರಿಂಗ್ ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿಯೇ ತುಂಬಿದೆ.


ಮಾಂಸದಂಗಡಿ ತ್ಯಾಜ್ಯ, ಹೋಟೆಲ್‌ಗಳ ತ್ಯಾಜ್ಯ, ಸತ್ತ ಪ್ರಾಣಿಗಳು ಎಲ್ಲವನ್ನೂ ತಂದು ಈ ರಸ್ತೆಯ ಇಕ್ಕೆಲಗಳಲ್ಲಿ ಸುರಿಯುವುದರಿಂದ ಅಕ್ಕಪಕ್ಕದ ನಿವಾಸಿಗಳು ದಿನವಿಡೀ ಕೆಟ್ಟ ವಾಸನೆ ಸೇವಿಸುವಂತಾಗಿದೆ.
ಇಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದವರು ಈಗ ಪಥ ಬದಲಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲೇ ಬೇಕಾಗಿದೆ.

15.35 ಕೋಟಿ ರೂಪಾಯಿ ಸರ್ಕಾರ ಮಂಜೂರು ಮಾಡಿದರೆ ವರ್ಷದೊಳಗೆ ರಸ್ತೆಯೇ ಸಿದ್ಧವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಸನದ ಜನತೆ ಹಾಗೂ ಜನಪ್ರತಿನಿಧಿಗಳು ಸ್ವಲ್ಪ ಒತ್ತಡ ಹೇರಿದರೆ ಇದೇನು ಮಹಾ ಕೆಲಸವಲ್ಲ. ಜನಪ್ರತಿನಿಧಿಗಳು ಸ್ಪಂದಿಸುವರೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT