ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾದ ಮಹೆಜಾಬಿನ್ ಕನಸು

ನಾನೂ ಉದ್ಯಮಿ
Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಸ್ವಂತ ಉದ್ಯೋಗ ಮಾಡಿ ಒಂದಷ್ಟು ಜನಕ್ಕಾದರೂ ಕೆಲಸ ನೀಡಬೇಕೆಂಬ ಕನಸು ನನಗೆ ಮೊದಲಿನಿಂದಲೂ  ಇತ್ತು. ಆ ಆಸೆ ಈಡೇರಿ ಈಗ ಮೂರು ವರ್ಷ ಆಗಿದೆ'..... ಮಹೆಜಾಬಿನ್ ಎಂ.ಜಾಕೀರ್ ಶೇಖ್ ಅವರು ಹೀಗೆನ್ನುವಾಗ ಅವರ ಮೊಗದಲ್ಲಿ ಅಂದುಕೊಂಡದ್ದನ್ನು ಸಾಧಿಸಿದ ಖುಷಿಯ ಬೆಳಕು ಮಿನುಗುತ್ತಿತ್ತು.

ಹೊನ್ನಾವರ ತಾಲ್ಲೂಕಿನ `ಹೂವಿನಹಿತ್ತಿಲು' ಎಂಬ ಪುಟ್ಟ ಹಳ್ಳಿಯಲ್ಲಿ ಮಹೆಜಾಬಿನ್ ಅವರ ಕನಸಿನ ಉದ್ಯಮ `ಆಲ್ ಜಿಯಾದ್ ಕ್ಯಾಶ್ಯೂ ಇಂಡಸ್ಟ್ರೀಸ್' ತಲೆಎತ್ತಿ ಮೂರು ವರ್ಷಗಳೇ ಕಳೆದಿವೆ. ಕಣ್ಣು ಹಾಯಿಸಿದಷ್ಟೂ ಗೇರು ಬೀಜದ ಮರಗಳೇ ಕಾಣುವುದರ ನಡುವೆ ಒಂದಷ್ಟು ಜಾಗದಲ್ಲಿ ಕಾಂಪೌಂಡ್; ಗೇಟು ತೆರೆದು ಒಳಹೋದರೆ ಗೇರು ಸಂಸ್ಕರಣಾ ಘಟಕ. ಅದರ ಒಡತಿಯೇ ಮಹೆಜಾಬಿನ್.

ಅಲ್ಪಸಂಖ್ಯಾತ ಸಮುದಾಯದವರಾಗಿ ಜಾತಿಯ ಕಟ್ಟುಪಾಡು ಅವರ ಸಾಧನೆಗೆ ಅಡ್ಡಬರಲಿಲ್ಲ.  10ನೇ ತರಗತಿ ವರೆಗೆ ಓದಿದ ಮಹೆಜಾಬಿನ್, ಪತಿ ಜಾಕೀರ್ ಶೇಖ್ ಅವರ ಬೆಂಬಲದೊಂದಿಗೆ 2010ರಲ್ಲಿ ಈ ಗೇರು ಸಂಸ್ಕರಣಾ ಉದ್ಯಮ ಆರಂಭಿಸುವ ಮೊದಲು ಅವರು 15 ದಿನಗಳ ತರಬೇತಿಯನ್ನು ಕಾರವಾರದ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಆಶ್ರಯದಲ್ಲಿ ಪಡೆದಿದ್ದರು.

ಸ್ವಂತದ ಕಟ್ಟಡ ಇತ್ತು. ಜತೆಗೆ ಕೆನರಾ ಬ್ಯಾಂಕಿನಿಂದ ರೂ.25 ಲಕ್ಷ ಸಾಲ ಪಡೆದು ಆರಂಭಿಸಿದ ಉದ್ಯಮ ಇಂದು ಅವರನ್ನು ಯಶಸ್ವಿ ಮಾದರಿ ಮಹಿಳಾ ಉದ್ಯಮಿಯಾಗಿ ಗುರುತಿಸುವಂತೆ ಮಾಡಿದೆ. ಕಳೆದ ಮಾರ್ಚ್‌ನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ `ಚೇಂಬರ್ ಆಫ್ ಕಾಮರ್ಸ್'  ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಇದಕ್ಕೂ ಮೊದಲು ಕಾರವಾರದ ಜಿಲ್ಲಾ ಕೈಗಾರಿಕಾ ಕೇಂದ್ರವೂ ಮಹೇಜಾಬಿನ್ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿತ್ತು.

ಕಾರ್ಮಿಕರ ಸಮಸ್ಯೆ...
ಇತ್ತೀಚಿನ ವರ್ಷಗಳಲ್ಲಿ ಉದ್ಯಮಿಗಳು ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಕಾರ್ಮಿಕರದ್ದೇ ಆಗಿದೆ. ದಿನಗೂಲಿ ಕಾಮಿಕರು ಇಂದು ಕೆಲಸಕ್ಕೆ ಬಂದರೆ ನಾಳೆ ಬರುವುದೇ ಇಲ್ಲ. ಅದರಲ್ಲೂ ಇಲ್ಲಿ ಸುತ್ತಮುತ್ತ ಹತ್ತಾರು ಗೇರು ಸಂಸ್ಕರಣಾ ಕೇಂದ್ರಗಳೇ ಇರುವಾಗ ಎಲ್ಲಿ ಹೆಚ್ಚು ಕೂಲಿ ಕೊಡುತ್ತಾರೋ ಅಲ್ಲಿಗೆ ಕಾರ್ಮಿಕರು ಹೋಗುವುದು ಸಹಜ. ಇಂಥ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ ತಮ್ಮ ಉದ್ಯಮವನ್ನು ಬೆಳೆಸುತ್ತಾ ನಡೆದವರು ಮಹೇಜಾಬಿನ್.

ಹತ್ತಾರು ಕೈಗಳಿಗೆ ಕೆಲಸ ನೀಡುವ ಕನಸು ಹೊತ್ತಿದ್ದ ಮಹೇಜಾಬಿನ್ ಅವರಿಗೆ, ಅದನ್ನು ಸಾಕಾರಗೊಳಿಸಲು, ಕಾರ್ಮಿಕರನ್ನು ಆಕರ್ಷಿಸಲು ಉತ್ತಮ ಸಂಬಳ ನೀಡುವುದು ಅನಿವಾರ್ಯ ಎನಿಸಿತು. ಅದರ ಪರಿಣಾಮ ಇಂದು ಅವರ ಗೇರು ಸಂಸ್ಕರಣಾ ಘಟಕದಲ್ಲಿ ಒಬ್ಬ ಪುರುಷ ಮತ್ತು 50 ಮಂದಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ವರ್ಷವಿಡೀ ಇವರ ಗೋಡಂಬಿ ಸಂಸ್ಕರಣಾ ಘಟಕ ಚಾಲೂ ಇರುವುದರಿಂದ ಇಲ್ಲಿ ಬರುವ ಕೆಲಸಗಾರರಿಗೆ ವರ್ಷಪೂರ್ತಿ ಕೆಲಸ, ಕೈತುಂಬ ಸಂಬಳ ದುಡಿದುಕೊಳ್ಳುವ ಅವಕಾಶ ಇದ್ದೇ ಇದೆ. ಭಾನುವಾರ ಮಾತ್ರ ರಜೆ.

ಮಹೆಜಾಬಿನ್ ತಮ್ಮ ತೋಟದ ಗೇರು ಬೀಜಗಳೊಂದಿಗೆ ಸ್ಥಳೀಯವಾಗಿ ಕಚ್ಚಾಮಾಲು ಸಂಗ್ರಹಿಸುತ್ತಾರೆ. ಹೆಚ್ಚಿನ ಕಚ್ಚಾ ಮಾಲನ್ನು ಆಮದು ಮಾಡಿಕೊಳ್ಳುತ್ತಾರೆ. ಹೀಗೆ ಸಂಗ್ರಹಿಸಿಡಲಾದ ಬೀಜಗಳನ್ನು ಮೊದಲು ಬಿಸಿಲಲ್ಲಿ ಒಣಗಿಸಿ, ನಂತರ ಬಾಯ್ಲರ್‌ನಲ್ಲಿ ಕುದಿಸಿ ಅದನ್ನು ಕಟ್ ಮಾಡುತ್ತಾರೆ. ಬಾಯ್ಲರ್‌ನಲ್ಲಿ ಕುದಿಸುವುದನ್ನು ಬಿಟ್ಟರೆ ಘಟಕದಲ್ಲಿ ಎಲ್ಲ ಕಾಯಕ ಮಹಿಳಾ ಕಾರ್ಮಿಕರಿಂದಲೇ ನಡೆಯಲಿದೆ. ಸುಲಿದ ಬೀಜಗಳನ್ನು ಡ್ರೈಯರ್‌ನಲ್ಲಿಟ್ಟು ಒಂದು ದಿನದ ನಂತರ ಅದನ್ನು ಸ್ವಚ್ಚಗೊಳಿಸಲಾಗುತ್ತದೆ.

ನಂತರ ಅವುಗಳ ಬೇರ್ಪಡಿಸುವಿಕೆ. ಇಡೀ ಬೀಜ, ಅರ್ಧ ಬೀಜ, ಕಟ್ ಬೀಜ ಎಂದು ಗುಣಮಟ್ಟಕ್ಕನುಗುಣವಾಗಿ ಗ್ರೇಡಿಂಗ್ ಮಾಡಿ(ಪ್ರತ್ಯೇಕಿಸಿ) ಮತ್ತೆ ಡ್ರೈಯರ್‌ನಲ್ಲಿ ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಬೀಜದಲ್ಲಿನ ತೇವಾಂಶ, ಗೇರೆಣ್ಣೆಯ ಕಮಟು ವಾಸನೆ ದೂರವಾಗಲಿದೆ. ಬೀಜ ಸಂಸ್ಕರಣೆ ನಂತರ ತ್ಯಾಜ್ಯ ಎನಿಸಿಕೊಳ್ಳುವ ಚಿಪ್ಪುಗಳನ್ನು ಮಾತ್ರ ಎಣ್ಣೆ ತೆಗೆಯುವ ಘಟಕದವರಿಗೆ ನೀಡುತ್ತಾರೆ. ಲಾಭದಲ್ಲಿ ಅದರ ಪಾಲೂ ಸೇರಿಕೊಳ್ಳಲಿದೆ. ದಿನಕ್ಕೆ ಕನಿಷ್ಠವೆಂದರೂ ಎರಡು ಕ್ವಿಂಟಲ್ ಸಂಸ್ಕರಿತ ಗೇರು ಬೀಜ ಇಲ್ಲಿ ಸಿದ್ದಗೊಳ್ಳಲಿದೆ.

`ಏನಿಲ್ಲವೆಂದರೂ 5-6 ತಿಂಗಳ ಕಾಲ ಬೀಜಗಳು ಹಾಳಾಗದೇ ಇರುತ್ತವೆ. ಇಲ್ಲಿ ಸಂಸ್ಕರಣೆಗೊಂಡ ಗೇರುಬೀಜಗಳು ಮುಂಬೈ, ದೆಹಲಿ, ಗೋವಾ. ಗುಜರಾತ್‌ನಲ್ಲಿ ಉತ್ತಮ ಮಾರುಕಟ್ಟೆ ಹೊಂದಿವೆ. ಅದನ್ನು ಕೂಡ ಮಧ್ಯವರ್ತಿಗಳು ಬಂದು ಒಯ್ಯುವುದರಿಂದ ತಮಗೆ ಮಾರುಕಟ್ಟೆಯ ಸಮಸ್ಯೆಯೇನೂ ಎದುರಾಗಿಲ್ಲ' ಎನ್ನುತ್ತಾರೆ ಮಹೆಜಾಬಿನ್.

ವರ್ಷಕ್ಕೆ 80 ಟನ್ ಸಂಸ್ಕರಿತ ಬೀಜದ ವಹಿವಾಟು ಮಹೆಜಾಬಿನ್ ಅವರನ್ನು, ಅವರ ಉದ್ಯಮವನ್ನೂ ಯಶಸ್ಸಿನತ್ತ ಒಯ್ಯುತ್ತಿದೆ. ತಾನೂ ಒಬ್ಬ `ಸ್ವಂತ ಉದ್ಯಮದ ಒಡತಿ' ಎನ್ನುವುದಕ್ಕಿಂತಲೂ ಹತ್ತಾರು ಜನರ ಕೈಗಳಿಗೆ ಉದ್ಯೋಗ ನೀಡಿದ ತೃಪ್ತಿ ಮಹೆಜಾಬಿನ್ ಅವರದ್ದು. (ಮೊ: 99807 52904).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT