ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಕಥೆ: ಮಾಟಗಾರ್ತಿ ದಾಕ್ಷಾಯಿಣಿ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ನಾನು ರಂಗಭೂಮಿಗೆ ಬಂದದ್ದು ಆಕಸ್ಮಿಕವಾಗಿ. ಆಗಿನ್ನೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದೆ. ಅಕ್ಕ ಶೈಲಜಾ ನೀನಾಸಂನಲ್ಲಿ ರಂಗ ತರಬೇತಿ ಪಡೆಯುತ್ತಿದ್ದಳು. ಆಕೆಯನ್ನು ನೋಡಲು ಹೋದಾಗ ಅಲ್ಲಿ ಪ್ರಾಂಶುಪಾಲರಾಗಿದ್ದವರು ಚಿದಂಬರರಾವ್ ಜಂಬೆ. ನನ್ನ ದನಿ ಮಾತಿನ ಶೈಲಿ ನೋಡಿ ಅವರು ನೀನಾಸಂ ಸೇರುವಂತೆ ಪ್ರೇರೇಪಿಸಿದರು. ಅಲ್ಲಿಂದ ಶುರುವಾಯಿತು ರಂಗಭೂಮಿಯ ಬಗೆಗಿನ ನನ್ನ ಕುತೂಹಲ.

ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ್, ಚಂದ್ರಶೇಖರ ಕಂಬಾರ, ಬಿ.ವಿ.ಕಾರಂತರಂತಹ ದೊಡ್ಡವರೆಲ್ಲಾ ಅಲ್ಲಿ ಸೇರುತ್ತಿದ್ದರು. ಅವರು ಮಾತಾಡೋದು ಆಗೆಲ್ಲಾ ಅರ್ಥವೇ ಆಗುತ್ತಿರಲಿಲ್ಲ! ಹೇಗೆ ಮಾತಾಡ್ತಾರಪ್ಪಾ ಅಂತ ನಿಬ್ಬೆರಗಾಗಿ ಕೇಳಿಸಿ ಕೊಳ್ತಾ ಇದ್ದೆ. ರಂಗ ತರಬೇತಿಯನ್ನೇನೊ ಪಡೆದೆ. ಆದರೆ `ನೀನಾಸಂ ತಿರುಗಾಟ~ದಲ್ಲಿ ಪಾಲ್ಗೊಳ್ಳಲಿಲ್ಲ. ಓದು ಮುಖ್ಯವಾಗಿತ್ತು. ಪಿಯುಸಿಗೆ ಸೇರಿದೆ.

ಒಂದು ದಿನ ಮನೆಯಲ್ಲಿದ್ದಾಗ ಜಂಬೆ ಪ್ರತ್ಯಕ್ಷ! ತಿರುಗಾಟದಲ್ಲಿ ಭಾಗವಹಿಸಬೇಕಿದ್ದ ನಟಿ ನಾಪತ್ತೆಯಾಗಿದ್ದರು. ಬಂದವರೇ ನೀನು ಅಭಿನಯಿಸಬೇಕು ಎಂದರು. ಇದ್ದದ್ದು ಕೇವಲ ಒಂದೂವರೆ ದಿನ. ಜಮಖಂಡಿಯಲ್ಲಿ ಪ್ರದರ್ಶನ ನಡೆಯುತ್ತಿತ್ತು. ಪಯಣಿಸುವಾಗ ನಿಂತಲ್ಲಿ ಕುಳಿತಲ್ಲಿ ಪಾತ್ರದ ಸಂಭಾಷಣೆಯನ್ನು ಓದಿಕೊಂಡೆ. ಹೀಗೆ `ಕನಕಾಗಮನ~ ನಾಟಕದಲ್ಲಿ ಕಾಣಿಸಿಕೊಂಡೆ. ನನ್ನನ್ನು ಕಟೆದು ಶಿಲ್ಪವಾಗಿಸಿದ್ದು ಜಂಬೆಯವರು.

ನಾಟಕ `ಯೂರಿಪಿಡಿಸ್~.  ಬಿ.ವಿ.ಕಾರಂತರು ಆಡಿಸುತ್ತಿದ್ದರು. ನನಗೆ ಡಬಲ್ ಕಾಸ್ಟಿಂಗ್ ಇಷ್ಟವಿರಲಿಲ್ಲ. ಅದನ್ನು ನೇರವಾಗಿ ಅವರಿಗೆ ಹೇಳಿದೆ. ಇಡೀ ಪಾತ್ರವನ್ನು ನನಗೇ ಒಪ್ಪಿಸಿದರು. ಮೂರು ಗಂಟೆಗಳ ಸುದೀರ್ಘ ನಾಟಕವದು. ನಾಟಕ ಆರಂಭವಾದಾಗ ಪ್ರವೇಶವಾಗುವ ನನ್ನ ಪಾತ್ರ ಕೊನೆಯವರೆಗೂ ಇರುತ್ತದೆ. ಅದೊಂದು ಸವಾಲಿನ ಪಾತ್ರವಾಗಿತ್ತು. ನಾನು ಸ್ವತಂತ್ರವಾಗಿ ಅಭಿನಯಸಿದ ನಾಟಕ `ಹಿಟ್ಟಿನ ಹುಂಜ~.

ತಿಪಟೂರಿನ `ಪ್ರೊಥಿಯೂ~ ನಾಟಕದ ನೇತೃತ್ವ ವಹಿಸಿತ್ತು. ರಂಗಕರ್ಮಿ ನಟರಾಜ ಹೊನ್ನವಳ್ಳಿ ನಾಟಕದ ನಿರ್ದೇಶಕರು. ನಾಟಕದಲ್ಲಿ ಅಭಿನಯಿಸಿದ್ದ ಅಚ್ಯುತಕುಮಾರ್, ಧರ್ಮೇಂದ್ರ ಅರಸ್ ಅವರಿಂದ ಕಲಿತಿದ್ದು ಅಪಾರ.ನೀನಾಸಂ ನಂತರ ಕೋಟಗಾನಹಳ್ಳಿ ರಾಮಯ್ಯ ಅವರ ಗರಡಿಯಲ್ಲಿ ಪಳಗಿದೆ. ನನ್ನನ್ನು ಹಾಡುಗಾರ್ತಿಯಾಗಿ ಅವರು ಗುರುತಿಸಿದರು. ಎರಡು ಕ್ಯಾಸೆಟ್‌ಗಳಿಗೆ ಹಾಡಿದೆ. ಎಸ್.ಆರ್.ರಾಮಕೃಷ್ಣ ಅವರು ಕರೆದು ಹಾಡಿಸಿದರು. ಆಗಿನ್ನೂ ಮೆಗಾ ಸೀರಿಯಲ್‌ಗಳು ಬಂದಿರಲಿಲ್ಲ.
 
ಡಾಕ್ಯುಮೆಂಟರಿಗಳಿಗಾಗಿ ನಟಿಸಿದೆ. ಹೀಗಿರುವಾಗ ಎಂ.ಎಸ್.ಸತ್ಯು ಅವರಂತಹ ದೊಡ್ಡ ನಿರ್ದೇಶಕರ ಜತೆಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಮಲ್ಲಿಕಾ ಎಂಬ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದೆ. ಸತ್ಯು ಅವರ `ಇಜ್ಜೋಡು~ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ದುಡಿದೆ. ಈ ವಯಸ್ಸಿಗೆ ಮುದುಕರಂತೆ ವರ್ತಿಸುವ ನಮಗೆ  ಹಳೆಯ ತಲೆಮಾರಿನ ಅವರ ಶ್ರಮ ನೋಡಿದರೆ ಜೀವನೋತ್ಸಾಹ ಉಕ್ಕುತ್ತದೆ.

ಪಿ.ಎನ್.ರಾಮಚಂದ್ರ ಅವರ `ಪುಟಾಣಿ ಪಾರ್ಟಿ~ ಚಿತ್ರದಲ್ಲಿ ಅಭಿನಯಿಸಿದೆ. ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ದೊರೆಯಿತು. ಇಷ್ಟಾದರೂ ರಂಗಭೂಮಿಯ ನಂಟು ಕೈ ತಪ್ಪಲಿಲ್ಲ. `ಚಿಣ್ಣರ ಮೇಳ~ ಕಾರ್ಯಕ್ರಮಗಳಿಗೆ ನಾಟಕಗಳನ್ನು ಮಾಡಿದೆ.

ಚಿತ್ರದುರ್ಗದಲ್ಲಿ 10 ವರ್ಷಗಳ ಕಾಲ ರಂಗಶಿಕ್ಷಕಿಯಾಗಿ ದುಡಿದೆ. ಆಗ ಲಂಡನ್‌ಗೆ ತೆರಳಲು ನೀನಾಸಂನಿಂದ ಆಹ್ವಾನ ಬಂತು. ಆದರೆ ವೀಸಾ, ಪಾಸ್‌ಪೋರ್ಟ್ ಎಂದರೇನು ಎಂದೇ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ತುಂಬಾ ಸಹಾಯ ಮಾಡಿದ್ದು ಸೌಭಾಗ್ಯ ಬಸವರಾಜನ್.
 
ಬೃಹನ್ಮಠದಿಂದ ಕೈದಿಗಳ ಮನ ಪರಿವರ್ತನೆ ಯೋಜನೆ ಹಮ್ಮಿಕೊಳ್ಳಲಾಗಿತ್ತು. ನಾನು ಜೈಲುಗಳಿಗೆ ಹೋಗಿ ನಾಟಕ ಆಡಿಸುವುದರಲ್ಲಿ ತೊಡಗಿದ್ದೆ. ಆಗ ಮದುವೆ ಆಗಿರಲಿಲ್ಲ.
ಮಕ್ಕಳಿರಲಿಲ್ಲ. ಭಯವಂತೂ ಮೊದಲೇ ಇರಲಿಲ್ಲ! ಅಂತಹ ಸಂದರ್ಭದಲ್ಲಿ ನಟರಾಜ ಹೊನ್ನವಳ್ಳಿ ನನ್ನ ಮದುವೆ ಬಗ್ಗೆ ಪ್ರಸ್ತಾಪ ಮಾಡಿದರು.
 
`ಪ್ರಕಾಶ್‌ಬಾಬು ಎಂಬ ಚಿತ್ರ ಕಲಾವಿದ ಬೆಂಗಳೂರಿನಲ್ಲಿ ಇದ್ದಾನೆ ಹೋಗಿ ಕಾಣು~ ಎಂದರು. ಬೆಂಗಳೂರಿಗೆ ಹೋದಾಗ ಪ್ರಕಾಶ್ ಒಳ್ಳೆಯ ಚಹಾ ಮಾಡಿಕೊಟ್ಟರು. ಹದಿನೈದೇ ದಿನದಲ್ಲಿ ನಮ್ಮ ಮದುವೆಯಾಯಿತು. ಪೋಷಕರೊಂದಿಗೆ ಸ್ವಲ್ಪ ಜಗಳವೂ ನಡೆಯಿತು.

ಮದುವೆಯಾಗಿ ಕೇವಲ ಎರಡೇ ದಿನ. ಆದರೆ ಪ್ರಕಾಶ್ ಯುನೆಸ್ಕೋ ಪ್ರಾಜೆಕ್ಟ್ ಹಿಡಿದು ಫಿನ್ಲೆಂಡ್‌ಗೆ ಹೊರಟಿದ್ದ. ನನಗೆ ಬೆಂಗಳೂರು ಬೇರೆ ಗೊತ್ತಿಲ್ಲ. ಫಿನ್ಲೆಂಡ್‌ನಲ್ಲಿದ್ದ ಪ್ರಕಾಶ್‌ಗೆ ದಿನಕ್ಕೆ ಮೂರು ಬಾರಿ ಕರೆ ಮಾಡುವುದು ಬಿಟ್ಟರೆ ಬೇರೇನೂ ಹೊಳೆಯುತ್ತಿರಲಿಲ್ಲ! ಆಗೆಲ್ಲಾ ಪ್ರಕಾಶ್ ವಿಶ್ವ ಸಿನಿಮಾಗಳನ್ನು ನೋಡುವಂತೆ ಪ್ರೇರೇಪಿಸುತ್ತಿದ್ದ. ಆವರೆಗೆ ಜಗ್ಗೇಶ್, ಕಾಶೀನಾಥ್ ಚಿತ್ರಗಳನ್ನೇ ನೋಡಿದ್ದ ನನಗೆ ಬೇರೆಯದೇ ಆದ ಸೃಜನಶೀಲ ಜಗತ್ತೊಂದು ಕಾಣಿಸಿತು.

`ಮಹಾಮಾಯಿ~ ಧಾರಾವಾಹಿಯಲ್ಲಿ ನಟಿಸುತ್ತಿದ್ದರೂ ಯಾಕೋ ಮನಸ್ಸು ರಂಗಭೂಮಿಯೆಡೆಗೇ ತುಡಿಯುತ್ತಿತ್ತು. ವೈದೇಹಿ ಅವರ ಮೂರು ಕಥೆಗಳನ್ನು ಆಧರಿಸಿದ `ಮಲ್ಲಿನಾಥನ ಧ್ಯಾನ~ ನಾಟಕದಲ್ಲಿ ಅಭಿನಯಿಸಿದೆ. ಒಬ್ಬಳೇ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ತುಂಬಾ ನೆರವಾದದ್ದು ಅರುಂಧತಿ ನಾಗ್. ಆಗಿನ್ನೂ `ರಂಗ ಶಂಕರ~ಕ್ಕೆ ಗುದ್ದಲಿ ಪೂಜೆ ನಡೆದಿತ್ತು. ಅವರಿದ್ದ ಸ್ಥಳಕ್ಕೇ ಹೋಗಿ ಅಭಿನಯಿಸುತ್ತಿದ್ದೆವು. ಇದರ ಜತೆಗೆ ಡಿಗ್ರಿ ಓದುತ್ತಿದ್ದೆ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪಡೆದದ್ದು ಇತ್ತೀಚೆಗೆ.

ಲೇಖಕಿಯರ ಕೃತಿಗಳನ್ನು ನಾಟಕ ಮಾಡಬೇಕೆಂಬ ತುಡಿತ ಒಳಗೊಳಗೆ ಬಹಳ ಇತ್ತು. ಸುಕನ್ಯಾ ಕನಾರಹಳ್ಳಿ ಅವರು ಅನುವಾದಿಸಿದ್ದ ಇಸ್ಮತ್ ಚುಗ್ತಾಯ್ ಅವರ `ಕೌದಿ~ ಕತೆಯನ್ನು ನಾಟಕ ಮಾಡಿದೆ. ಅದು ಸಲಿಂಗಕಾಮವನ್ನು ವಸ್ತುವಾಗಿ ಹೊಂದಿದ್ದ ಕತೆ. ಮುಂಬೈನಿಂದ ಪತ್ರಕರ್ತರೊಬ್ಬರು ಕರೆ ಮಾಡಿ `ನಿಮಗೆ ಜೀವ ಬೆದರಿಕೆ ಬರಲಿಲ್ಲವೇ?~ ಎಂದರು. `ಇಲ್ಲ ಕನ್ನಡದಲ್ಲಿ ಪ್ರಬುದ್ಧ ಪ್ರೇಕ್ಷಕರಿದ್ದಾರೆ~ ಎಂದು ಉತ್ತರಿಸಿದೆ.

ರಂಗಭೂಮಿ ಹಾಗೂ ಧಾರಾವಾಹಿ ಎರಡೂ ದೋಣಿಗಳಲ್ಲಿ ಹೆಜ್ಜೆ ಇಡುವುದು ಕಷ್ಟ. ರಂಗಭೂಮಿಯಲ್ಲಿ ಜೀವಂತಿಕೆ ಇದೆ. ಧಾರಾವಾಹಿ ಬದುಕು ನಡೆಸಲು ಅವಶ್ಯಕ. `ನಮ್ಮಮ್ಮ ಶಾರದೆ~ ಧಾರಾವಾಹಿಯಲ್ಲಿ ಗ್ಲಾಮರಸ್ ಪಾತ್ರವೊಂದರಲ್ಲಿ ನಟಿಸಿದೆ.

ಗ್ಲಾಮರಸ್ ಎನ್ನುವುದಕ್ಕಿಂತ ಹೆಚ್ಚಾಗಿ ಅದರಲ್ಲಿ ನಟನೆಗೆ ಹೆಚ್ಚು ಅವಕಾಶಗಳಿದ್ದವು. `ದೇವಿ~ ಧಾರಾವಾಹಿಯ ಪಾತ್ರವೂ ವಿಭಿನ್ನವಾದುದು. ನಾನು ನಟಿಸಿದ ಎಲ್ಲಾ ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರಗಳೇ ದೊರೆತ ತೃಪ್ತಿ ಇದೆ. ಅರುಂಧತಿ ಧಾರಾವಾಹಿಯಲ್ಲಿ ದಾಕ್ಷಾಯಿಣಿಯ ಪಾತ್ರ ಮಾಡಿದೆ. ಅದರಲ್ಲಿ ನಾನು ಮಾಟ ಮಾಡುವವಳು. ನಾವು ಬಾಡಿಗೆ ಮನೆಯಲ್ಲಿದ್ದಾಗ ಮನೆ ಮಾಲೀಕರಿಗೆ ಯಾರೋ `ನಿಮ್ಮ ಮನೆ ಬಾಡಿಗೆ ಇರುವವರು ಮಾಟ ಮಾಡ್ತಾರೆ ಅಲ್ವಾ~ ಎಂದು ಕೇಳಿದ್ದರು! ಅನೇಕರು ನನ್ನನ್ನು ಮಂತ್ರವಾದಿಯೆಂದೇ ಗುರುತಿಸುವುದು ತಮಾಷೆ ಅನ್ನಿಸುತ್ತದೆ.

ಬಿ.ವಿ.ಕಾರಂತರು `ಮೀಡಿಯಾ~ ನಾಟಕ ಮಾಡಿದರು. ಅದರಲ್ಲಿ ನನಗೂ ಒಂದು ಪಾತ್ರ. ನಾಟಕದ ಮೊದಲ ಪ್ರದರ್ಶನ ಆಗುವಾಗ ಅವರಿಂದ ಆಶೀರ್ವಾದ ಪಡೆಯಬೇಕು ಎಂಬ ಕಾತರ ಇತ್ತು. ಆದರೆ ಎಷ್ಟು ಹುಡುಕಿದರೂ ಕಾರಂತರು ಇಲ್ಲ. ನಾಟಕ ಶುರುವಾಯಿತು. ನೋಡುತ್ತೇನೆ. ಲೈಟ್ ರೂಮಿನಲ್ಲಿ ಕಾರಂತರು ಕುಳಿತಿದ್ದಾರೆ.
 
ಕಡೆಗೆ ಅವರಿಂದ ಆಲ್ ದಿ ಬೆಸ್ಟ್ ಹೇಳಿಸಿಕೊಂಡು ಪಾತ್ರ ಮಾಡಿದೆ. ನೀನಾಸಂನ ಕೆ.ವಿ.ಸುಬ್ಬಣ್ಣ, ಕೆ.ವಿ.ಅಕ್ಷರ, ವೆಂಕಟ್ರಮಣ ಐತಾಳ, ಮಹಾಬಲೇಶ್ವರ್ ತರಗತಿಗಳನ್ನು ನಡೆಸುತ್ತಿದ್ದರು. ಗುರುಗಳಾದ ಅವರನ್ನು ಎಷ್ಟು ನೆನೆದರೂ ಸಾಲದು. ಸತ್ಯ ಹೇಳಬೇಕು ಅಂದರೆ ನಾನೊಬ್ಬ ಕ್ರೀಡಾಪಟು ಆಗಬೇಕಿತ್ತು. ವಾಲಿಬಾಲ್ ನೆಚ್ಚಿನ ಆಟ. ಮೊದಲಿನಿಂದಲೂ ಕ್ರೀಡೆ ಎಂದರೆ ತುಂಬಾ ಪ್ರೀತಿ. ಆದರೆ ಅದರಲ್ಲಿ ತೊಡಗಿಕೊಳ್ಳುವುದಕ್ಕೆ ಆಗಲೇ ಇಲ್ಲ. ಆ ಬೇಸರ ಈಗಲೂ ಇದೆ.

ನನ್ನ ಗಂಡ ಧಾರಾವಾಹಿ ನೋಡಲ್ಲ. ಅವನಿಗೆ ನಾನು ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕು ಎನ್ನುವ ಹಂಬಲವೇ ಹೆಚ್ಚು. ಅವನು ನನ್ನ ಗುರು ಕೂಡ. ನನ್ನನ್ನು ಸದಾ ಅಪ್‌ಡೇ ಮಾಡುತ್ತಲೇ ಇರುತ್ತಾನೆ. ಮನೆಯಲ್ಲಿ ಆತ ನೋಡಿಕೊಳ್ಳುವ ರೀತಿಯೂ ಮನ ತಟ್ಟುತ್ತದೆ. ಮಗ ಚಾರ್ವಾಕ ಕೂಡ `ಧಾರಾವಾಹಿ ಬೇಡ ಮಕ್ಕಳಿಗೆ ಪಾಠ ಮಾಡು~ ಎನ್ನುತ್ತಾನೆ. ನನಗೂ ಹಾಗೇ ಅನ್ನಿಸಿದೆ. ಧಾರಾವಾಹಿಗಳಲ್ಲಿ ಆಕ್ಷನ್ ಕಟ್ ಮಧ್ಯೆ ಭಾವನೆಗಳು ತುಂಡಾಗುತ್ತಲೇ ಇರುತ್ತವೆ. ನಿರ್ದೇಶಕರು ನಿರ್ಮಾಪಕರೇ ಮುಖ್ಯವಾಗುತ್ತಾರೆ.

  ಆದರೆ ನಾಟಕಗಳನ್ನು ಆಯೋಜಿಸುವುದು ದೊಡ್ಡ ಕೆಲಸ, ಪಾತ್ರಧಾರಿಗಳನ್ನು ಹೊಂದಿಸುವುದರಲ್ಲಿಯೇ ಆಯಸ್ಸು ಮುಗಿದಿರುತ್ತದೆ, ಮೇಲಾಗಿ ಎಲ್ಲರೂ ಧಾರಾವಾಹಿಗಳಿಗೇ ಅಂಟಿಕೊಂಡಿದ್ದಾರೆ, ಮುಂದೆ ಏನಾಗುತ್ತದೆ ಅನ್ನುವುದನ್ನು ಕಾಲ ನಿರ್ಧರಿಸುತ್ತದೆ.

ನಮ್ಮ ಮನೆಯಲ್ಲಿ ನಾನೇ ಜೋರು. ದೊಡ್ಡ ಬಾಯಿ. ಅಕ್ಕ ಶೈಲಜಾ ತುಂಬಾ ಮೃದು. ಇನ್ನೊಬ್ಬ ಅಕ್ಕ ಪ್ರಶಾಂತಿ ಕೂಡ ಹಾಗೆಯೇ. ಅಕ್ಕಂದಿರಂತೆಯೇ ಭಾವಂದಿರು ಕೂಡ. ಪ್ರಕಾಶ ಸದಾ ಮೌನಿ, ಧ್ಯಾನಸ್ಥ. ಮನೆಯ ಹೊರಗೂ ನಾನೇ ಜೋರು. ರಂಗಭೂಮಿಯಲ್ಲಿ ಅಭಿನಯಿಸುವಾಗ ಶುದ್ಧ ತರಲೆ ಎಂದು ಅನ್ನಿಸಿಕೊಂಡದ್ದೂ ಇದೆ!
ನಿರೂಪಣೆ: ಡಿ.ಕೆ.ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT