ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಕಾಲು ಎಳೆಯಬಲ್ಲಿರಾ?

ಅಂತರ್ಯುದ್ಧ
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಒಬ್ಬನ ಹತ್ತಿರ ಎರಡು ನಾಯಿಗಳಿದ್ದವು. ಅವುಗಳನ್ನು ಅವನು ಕಾದಾಟದಲ್ಲಿ ಚೆನ್ನಾಗಿ ಪಳಗಿಸಿದ್ದ. ಪ್ರತಿ ಭಾನುವಾರ ಊರಿನ ಬೇರೆ ಬೇರೆ ನಾಯಿಗಳೊಡನೆ ಇವುಗಳನ್ನು ಕಾದಾಟಕ್ಕೆ ಬಿಟ್ಟು ಹಣ ಸಂಪಾದಿಸುತ್ತಿದ್ದ. ಪ್ರತಿ ಸಲವೂ ಇವನ ನಾಯಿಗಳೇ ಗೆಲ್ಲುತ್ತಿದ್ದವು. ಜನರಿಗೆ ಈ ಕಾದಾಟ ಬಹಳ ಖುಷಿ ಕೊಡುತ್ತಿತ್ತು.

ಜನ ಭಾನುವಾರಕ್ಕಾಗಿ ಕಾಯು­ತ್ತಿದ್ದರು. ಆದರೆ ಹೆಚ್ಚಿನ ಖುಷಿ ಕೊಡು­ತ್ತಿದ್ದುದು ಕೊನೆಯಲ್ಲಿ ಆ ಎರಡು ನಾಯಿಗಳ ನಡುವೆ ನಡೆಯುತ್ತಿದ್ದ ಕಾದಾಟ. ಅಲ್ಲಿ ಸೇರುತ್ತಿದ್ದವರು ಎರಡೂ ನಾಯಿಗಳ ಮೇಲೆ ಪಂದ್ಯ ಕಟ್ಟುತ್ತಿದ್ದರು. ಆದರೆ ನಾಯಿಯ ಯಜಮಾನ ಯಾವ ನಾಯಿಯ ಮೇಲೆ ಪಂದ್ಯ ಕಟ್ಟುತ್ತಿದ್ದನೋ ಅದೇ ನಾಯಿ ಗೆಲ್ಲುತ್ತಿತ್ತು. ಇದರ ಗುಟ್ಟು ಜನರಿಗೆ ಅರ್ಥವಾಗಲಿಲ್ಲ. ಈ ಬಗ್ಗೆ ಜನ ಒಮ್ಮೆ ಅವನನ್ನೇ ಪ್ರಶ್ನಿಸಿದರು. ಅದಕ್ಕೆ ಅವನ ಸ್ಪಷ್ಟವಾದ ಉತ್ತರ ಹೀಗಿತ್ತು `ನಾನು ಯಾವ ನಾಯಿಯ ಮೇಲೆ ಪಂದ್ಯ ಕಟ್ಟುತ್ತೇನೋ ಆ ನಾಯಿಯನ್ನು ಮಾತ್ರ ಗಮನಿಸುತ್ತೇನೆ. ಇನ್ನೊಂದು ನಾಯಿಯತ್ತ ನನ್ನ ದೃಷ್ಟಿ­ಯನ್ನು ಹರಿಸುವುದೇ ಇಲ್ಲ. ನನ್ನ ಸಕಾ­ರಾತ್ಮಕ ದೃಷ್ಟಿಯ ಪ್ರಬಲ ಶಕ್ತಿಯೇ ಆ ನಾಯಿಯನ್ನು ಗೆಲ್ಲಿಸುತ್ತದೆ'.

ಅದೇ ರೀತಿ ನಮ್ಮ ಮನಸ್ಸಿನಲ್ಲೂ ಎರಡು ನಾಯಿಗಳಿವೆ; ಒಂದು ಸಕಾರಾತ್ಮಕ ನಾಯಿ, ಇನ್ನೊಂದು ನಕಾರಾತ್ಮಕ ನಾಯಿ. ನಾವು ಯಾವುದನ್ನು ಪ್ರೋತ್ಸಾಹಿಸುತ್ತೇವೋ ಅದು ಗೆಲ್ಲುತ್ತದೆ. ಉತ್ತಮ ಪುಸ್ತಕ­ಗಳು, ಒಳ್ಳೆಯ ಟಿ.ವಿ. ಕಾರ್ಯಕ್ರಮ­ಗಳು, ಸದಭಿರುಚಿಯ ಸಿನಿಮಾಗಳನ್ನು ನೋಡುವುದರಿಂದ ನಮ್ಮ ಮನಸ್ಸಿನಲ್ಲಿ­ರುವ ಸಕಾರಾತ್ಮಕ ನಾಯಿಯನ್ನು ಹೆಚ್ಚು ಸಚೇತನಗೊಳಿಸಬಹುದು. ನಮ್ಮಲ್ಲಿರುವ ಕೆಲವು ನಕಾರಾತ್ಮಕ ಸಂಗತಿಗಳು ಹೀಗಿವೆ:

1. ಭಯೋತ್ಪಾದನೆಯನ್ನು ನಿಲ್ಲಿಸಿ. ಭಯೋತ್ಪಾದನೆ ಮತ್ತು ನಿಲ್ಲಿಸಿ ಇವೆರಡೂ ನಕಾರಾತ್ಮಕ.
2. ಮಾದಕ ವಸ್ತುಗಳನ್ನು ಪ್ರತಿರೋಧಿಸಿ-. ಮಾದಕ ವಸ್ತು ಮತ್ತು ಪ್ರತಿರೋಧಿಸಿ ಎರಡೂ ನಕಾರಾತ್ಮಕ.
3. ನನಗೆ ಕೊಲೆಸ್ಟ್ರಾಲ್ ಬಂದು ಸಾಯಬಾರದು-. ಕೊಲೆಸ್ಟ್ರಾಲ್, ಸಾಯಬಾರದು ಇವೂ ನಕಾರಾತ್ಮಕ.                         
4. ನೀನು ಸರಿಯಾಗಿ ಓದದಿದ್ದರೆ ಕತ್ತೆ ಕಾಯಬೇಕಾಗುತ್ತದೆ- ಓದದಿದ್ದರೆ, ಕತ್ತೆ ಕಾಯುವುದು ಸಹ ನಕಾರಾತ್ಮಕ.
ಹೀಗೆ ಸಾವಿರಾರು ಉದಾಹರಣೆ­ಗಳನ್ನು ಕೊಡಬಹುದು. ನಾವು ಮನಸ್ಸಿನಲ್ಲಿ ಎರಡೆರಡು ನಕಾರಾತ್ಮಕ ನಾಯಿಗಳನ್ನು ಸಾಕುತ್ತಿದ್ದೇವೆ. ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆ ಬಂದಾಗ ನಿಮ್ಮ ಇಷ್ಟ ದೇವರ ಹೆಸರನ್ನು ಉದ್ಗರಿಸಿ. ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ನಿಮಗೆ ತಿಳಿದಿರುವ ಸಕಾರಾತ್ಮಕ ಮನೋಭಾವದ ವ್ಯಕ್ತಿಯನ್ನು ನೆನೆದು, ಅವರ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ನಿಮ್ಮ ಎಲ್ಲ ನಕಾರಾತ್ಮಕ ಯೋಚನೆಗಳೂ ದೂರಾಗುತ್ತವೆ. ಇದಕ್ಕೆ ವಿರುದ್ಧವಾಗಿ ನಕಾರಾತ್ಮಕ ಯೋಚನೆಗಳಿಗೆ ಗೊಬ್ಬರ ಹಾಕಿ ಬೆಳೆಸುವುದು ಬೇಡ.

ಮೇಲಿನ ನಕಾರಾತ್ಮಕ ಸಂಗತಿಗಳಿಗೆ ಬದಲಾಗಿ ನಾವು ಹೇಳಬೇಕಾದ ಸಕಾರಾತ್ಮಕ ಅಂಶ ಹೀಗಿರಬೇಕು:
1. ಪ್ರಪಂಚದಲ್ಲಿ ಶಾಂತಿ ನೆಲೆಸಲಿ.
2. ಎಲ್ಲರೂ ಉತ್ತಮ ಅಭ್ಯಾಸಗಳನ್ನು ಹೊಂದಿದ್ದಾರೆ.
3. ನಾನು ಆರೋಗ್ಯದಿಂದ 100 ವರ್ಷ ಬಾಳುತ್ತೇನೆ.
4. ನೀನು ಚೆನ್ನಾಗಿ ಓದಿದರೆ ಉತ್ತಮ ಕೆಲಸ ಸಿಗುತ್ತದೆ.
ನಾನು ಯಾವಾಗಲೂ ಪ್ರಾರ್ಥನೆ ಮಾಡುವಾಗ ನನಗೆ ಕೆಟ್ಟದ್ದನ್ನು ಮಾಡಿ­ದವರಿಗೂ ಸೇರಿ ಹೀಗೆ ಪ್ರಾರ್ಥಿಸು­ತ್ತೇನೆ: ‘ದೇವರೇ, ಎಲ್ಲರಿಗೂ, ಎಲ್ಲ ರೀತಿಯಲ್ಲೂ, ಎಲ್ಲ ಸಮಯದಲ್ಲೂ ಒಳ್ಳೆಯದನ್ನೇ ಮಾಡು'. ಆದ್ದರಿಂದಲೇ ನನಗೆ ಹೆಚ್ಚಿನ ಸಮಯ ಒಳ್ಳೆಯದೇ ಆಗು­ತ್ತದೆ. ಯಾರೂ ನನ್ನ ಕಾಲೆ­ಳೆ­ಯಲು ಸಾಧ್ಯವಿಲ್ಲ. ಅಷ್ಟೇ ಏಕೆ, ಪ್ರಪಂಚ­ದ 700 ಕೋಟಿ ಜನ ಕಾಲೆಳೆ­ಯಲು ಯತ್ನಿಸಿದರೂ ಸಾಧ್ಯ­ವಾಗು­­ವು­ದಿಲ್ಲ. ಏಕೆಂದರೆ ನಾನು ಅಷ್ಟು ಸಕಾರಾ­ತ್ಮಕ. ನಕಾರಾತ್ಮಕತೆ ಹತ್ತಿರ ಸುಳಿ­ಯಲೂ ನಾನು ಬಿಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT