ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಜೀವನ ಸಾರ್ಥಕವಾಯಿತು: ವಜಾಹತ್

Last Updated 20 ಡಿಸೆಂಬರ್ 2012, 9:15 IST
ಅಕ್ಷರ ಗಾತ್ರ

ಸುರಪುರ: ಲೋಕಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371ನೇ (ಜೆ) ಕಲಂ ಅಂಗೀಕಾರವಾಗಿದ್ದು ನನ್ನ ಜೀವನದ ಪರಮೋಚ್ಛ ಆನಂದದ ಕ್ಷಣ ಎಂದು ಎರಡು ದಶಕಗಳಿಗೂ ಹೆಚ್ಚು ಕಾಲ ಈ ಬಗ್ಗೆ ಹೋರಾಟದಲ್ಲಿ ಸಕ್ರಿಯರಾಗಿದ್ದ ಉಸ್ತಾದ್ ವಜಾಹತ್ ಹುಸೇನ್ ಭಾವುಕರಾಗಿ ನುಡಿದರು.

1990ರ ಸಮಯ. ವಿಶ್ವನಾಥರೆಡ್ಡಿ ಮುದ್ನಾಳ ನನ್ನನ್ನು ಹತ್ತಿರ ಕರೆದು ಹೋರಾಟದಲ್ಲಿ ಧುಮುಕುವಂತೆ ಸಲಹೆ ನೀಡಿದ್ದರು. ಹೈ-ಕ ಭಾಗದ ಸಮಸ್ಯೆಗಳ ಬಗ್ಗೆ ಸಂಪೂರ್ಣ ವಿವರಿಸಿದ್ದರು. 371 ನೇ ಕಲಂ ಜಾರಿಯಿಂದ ಮಾತ್ರ ಈ ಭಾಗದ ಅಭಿವೃದ್ಧಿ ಎಂದು ಒತ್ತಿ ಹೇಳಿದ್ದರು. ಆಗ ನಾನು ಬಿ.ಎ. ಪ್ರಥಮ ವರ್ಷದಲ್ಲಿ ಓದುತ್ತಿದ್ದೆ. ಓದನ್ನು ಅರ್ಧಕ್ಕೆ ನಿಲ್ಲಿಸಿ ಹೋರಾಟದಲ್ಲಿ ಸಕ್ರಿಯವಾದೆ ಎಂದು ಮೆಲುಕು ಹಾಕಿದರು.

90ರಲ್ಲಿ ನಾನು ಹೋರಾಟ ಸಮಿತಿಯ ಯುವ ವಿಭಾಗದ ತಾಲ್ಲೂಕು ಉಪಾಧ್ಯಕ್ಷನಾಗಿದ್ದೆ. ಎರಡು ವರ್ಷಗಳ ನಂತರ ಅಧ್ಯಕ್ಷನಾದೆ. ಆಗ ಹೋರಾಟಕ್ಕೆ ತಾಲ್ಲೂಕಿನಲ್ಲಿ ಹೇಳಿಕೊಳ್ಳುವಂತ ಬೆಂಬಲ ವಿರಲಿಲ್ಲ. ನಾನೇ ಸ್ವತಃ ಹೋರಾಟದ ಬಗ್ಗೆ ಏರ್ಪಡಿಸಲಾದ ಕಾರ್ಯಕ್ರಮಗಳ ಬಗ್ಗೆ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದೆ ಎಂದು ವಿವರಿಸಿದರು.

ಕ್ರಮೇಣ ಸಂಘಟನೆ ಬಲವಾಗತೊಡಗಿತು. ಅಷ್ಟರಲ್ಲಿ ವಿಶ್ವನಾಥರೆಡ್ಡಿ ಮುದ್ನಾಳ ನಿಧನರಾದರು. ನಂತರ ನೇತೃತ್ವ ವಹಿಸಿದ ವೈಜನಾಥ ಪಾಟೀಲ ಹೋರಾಟಕ್ಕೆ ಚುರುಕು ಮುಟ್ಟಿಸಿದರು. ನನ್ನನ್ನು ತಾಲ್ಲೂಕು ಅಧ್ಯಕ್ಷನನ್ನಾಗಿ ಮಾಡಿ ಹೆಚ್ಚಿನ ಜವಾಬ್ದಾರಿ ವಹಿಸಿದರು. ಶಾಲಾ, ಕಾಲೇಜುಗಳಲ್ಲಿ ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ 371ನೇ ಕಲಂ ಬಗ್ಗೆ ಸ್ನೇಹಿತರೊಂದಿಗೆ ಜಾಗ್ರತೆ ಮೂಡಿಸಿದೆವು ಎಂದು ಹೇಳಿದರು.

ನನ್ನ ಚಟುವಟಿಕೆ ನೋಡಿ ಕೆಲ ಜನರು ಹಾಸ್ಯ ಮಾಡಿದ್ದೂ ಉಂಟು. ನಾನು ಎಲ್ಲಿಯಾದರೂ ಕಂಡರೆ 371ನೇ ಕಲಂ ಎಂದು ಗೇಲಿ ಮಾಡಿದ್ದೂ ಇದೆ. ಇದಕ್ಕೆಲ್ಲ ಸೊಪ್ಪು ಹಾಕದೆ ನಾನು ಹೋರಾಟದಲ್ಲಿ ತೊಡಗಿದೆ. ಅನೇಕ ಬಾರಿ ಬಂದ್ ನಂತಹ ಕಾರ್ಯಕ್ರಮ ಮಾಡಿದೆ.

ಡೆವಿಡ್ ಸಿಮಿಯೋನ್, ವೈಜನಾಥ ಪಾಟೀಲ, ಸಮದ್ ಸಿದ್ದಿಕಿಯಂತಹ ಧುರೀಣರು ನಮ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದರು.

ನನ್ನ ತೊಡಗುವಿಕೆ ಗುರುತಿಸಿ ವೈಜನಾಥ ಪಾಟೀಲ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಕಾರಣಾಂತರಗಳಿಂದ ಕಳೆದ ವರ್ಷ ಹೋರಾಟ ಸಮಿತಿಯೊಂದಿಗೆ ಸಂಬಂಧ ಕಡೆದುಕೊಂಡಿದ್ದೆ.

ಆದರೂ ಸ್ವತಃ ಹೋರಾಟ ಮಾಡುತ್ತಿದ್ದೆ. ಇಂದು ಹೈ-ಕ ಭಾಗದ ಜನರಿಗೆ ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ನನ್ನ ಭವಿಷ್ಯ ಹಾಳಾದರೂ ನನ್ನ ಜನರ ಭವಿಷ್ಯ ಉಜ್ವಲವಾಗಿದ್ದು ನನಗೆ ಖುಷಿ ತಂದಿದೆ. ಇಂದು ನನ್ನ ಜೀವನ ಸಾರ್ಥಕವಾಯಿತು. ಒಬ್ಬ ಹೋರಾಟಗಾರನಿಗೆ ಇದಕ್ಕಿಂತ ಸಂಭ್ರಮದ ದಿನ ಬೇರೊಂದಿಲ್ಲ ಎಂದು ಹೇಳುವಾಗಿ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT