ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ದೌರ್ಬಲ್ಯಗಳನ್ನು ತೋರಿಸಿ-ಮೋದಿ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ಮಹಿಳಾ ಘಟಕ ಆಯೋಜಿಸಿದ್ದ ಕಾರ್ಯಕ್ರಮವನ್ನು ಹೆಚ್ಚಾಗಿ ತಮ್ಮನ್ನು ಪ್ರಧಾನಿ ಸ್ಥಾನಕ್ಕೆ ಬಿಂಬಿಸಿಕೊಳ್ಳಲು ಬಳಸಿಕೊಂಡರು.

ಮಹಿಳಾ ಸಬಲೀಕರಣದ ಪರ ವಕಾಲತು ವಹಿಸಿದ ಮೋದಿ, ಇದೇ ಸಂದರ್ಭವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಹರಿಹಾಯಲು ಉಪಯೋಗಿಸಿಕೊಂಡರು. ನಾಲ್ಕು ದಿನಗಳ ಹಿಂದೆಯಷ್ಟೇ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ಕಾರ್ಯಕ್ರಮವನ್ನು ರಾಹುಲ್ ಗಾಂಧಿ, ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡ ಬೆನ್ನಲ್ಲೇ ಮೋದಿ ಎಫ್‌ಐಸಿಸಿಐ ವೇದಿಕೆಯನ್ನು ತಮ್ಮ ಉದ್ದೇಶಿತ ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡದ್ದು ವಿಶೇಷ.

`ಯಾವ ಮನುಷ್ಯನೂ ಪರಿಪೂರ್ಣನಲ್ಲ. ನನ್ನಲ್ಲೂ ಕೆಲ ದೌರ್ಬಲ್ಯಗಳಿರಬಹುದು. ಸಾಮಾಜಿಕ ಜಾಲತಾಣದ ಮೂಲಕ ಅವುಗಳನ್ನು ಗುರುತಿಸಿ ನನ್ನ ಗಮನಕ್ಕೆ ತರಬೇಕು' ಎಂದು ಮೋದಿ ಹೇಳಿದರು.

`ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ತನ್ನ ವಿಮರ್ಶೆ ಮಾಡಿಕೊಳ್ಳಲು ಸಾಧ್ಯವಿಲ್ಲ. `ನನ್ನಲ್ಲೂ ಕೆಲ ನ್ಯೂನತೆಗಳಿವೆ. ಅವುಗಳನ್ನು ಗುರುತಿಸಲು ನನ್ನಿಂದಾಗದು. ಆದರೆ, ಆ ಕೆಲಸ ನಿಮ್ಮಿಂದ ಆಗುತ್ತದೆ. ಅಂತಹ ಯಾವುದಾದರೂ ದೋಷ ಗುರುತಿಸಿದ್ದಲ್ಲಿ, ದಯವಿಟ್ಟು ಸಾಮಾಜಿಕ ಜಾಲತಾಣದ ಮೂಲಕ ಮನವರಿಕೆ ಮಾಡಿಕೊಡಿ. ಅದನ್ನು ನಾನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇನೆ' ಎಂದು ಅವರು ಕೋರಿದರು.

70 ನಿಮಿಷಗಳ ಸಂವಾದ ಕಾರ್ಯಕ್ರಮದಲ್ಲಿ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಂಬುದನ್ನು ಮೋದಿ ಎಲ್ಲೂ ಹೇಳಲಿಲ್ಲ. ಆದರೆ, ಅವರ ಭಾಷಣದುದ್ದಕ್ಕೂ ಕರತಾಡನ ಮುಗಿಲು ಮುಟ್ಟಿತ್ತು. ಈ ಮಧ್ಯೆ ಮಹಿಳೆಯೊಬ್ಬರು `ಒಂದುವೇಳೆ ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಏನು ಮಾಡುವಿರಿ' ಎಂದು ಕೇಳಿದಾಗ, `ಮಹಿಳೆಯರು ಮುಂಚೂಣಿಗೆ ಬಂದರೆ ಭಾರತ ಜಗತ್ತಿನಲ್ಲಿ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ' ಎಂದು ಮೋದಿ ಹಾರಿಕೆ ಉತ್ತರ ನೀಡಿದರು.

`ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀಸಲು ಕಲ್ಪಿಸುವ ಮಸೂದೆಯನ್ನು ಗುಜರಾತ್ ವಿಧಾನಸಭೆ ಅಂಗೀಕರಿಸಿದೆ. ಆದರೆ, ರಾಜ್ಯಪಾಲರಾದ ಕಮಲಾ ಬೇನಿವಾಲ್ ಅವರು ಮಸೂದೆಗೆ ಸಹಿ ಹಾಕದ ಕಾರಣ ಅದು ಕಾನೂನಾಗಿ ಜಾರಿಗೆ ಬಂದಿಲ್ಲ. ಮಹಿಳಾ ರಾಜ್ಯಪಾಲರಿದ್ದರೂ ಮಸೂದೆ ಕಾಯ್ದೆ ಆಗಿದಿರುವುದು ನಿಜಕ್ಕೂ ದುರದೃಷ್ಟಕರ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT