ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ನಿದ್ರೆ ನಿನಗೆ ಗೊತ್ತೇನಮ್ಮೋ?

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಮ್ಮಾ, ನಿನ್ನ ಹೊಟ್ಟೆಯಿಂದ ನಾನು ಹೊರಬಂದು ಇವತ್ತಿಗೆ 10 ದಿನ. ನಿನ್ನಂತೆ ನಾನೀಗ ಹಗಲು ಎಚ್ಚರ, ರಾತ್ರಿ ನಿದ್ರೆ ಮಾಡುತ್ತಿಲ್ಲ. ಬದಲಾಗಿ ಹಗಲೆಲ್ಲಾ ನಿದ್ರೆ ಮಾಡಿ, ರಾತ್ರಿ ಆಟವಾಡುತ್ತೇನೆ. ಇದು ನಿನಗೆ ತೊಂದ್ರೆ ಅಲ್ಲವೇ? ಸಾರಿ ಮಮ್ಮಿ, ಇದು ನನ್ನ ತಪ್ಪಲ್ಲ.

ಏಕೆಂದರೆ ನಾನು ನಿನ್ನ ಹೊಟ್ಟೆಯಲ್ಲಿದ್ದಾಗ, ಹಗಲಿನಲ್ಲಿ ನೀನು ಓಡಾಡುತ್ತಿರುವುದು ನನಗೆ ಜೋಕಾಲಿ ತೂಗಿದಂತಾಗಿ ನಿದ್ರೆ ಬರುತ್ತಿತ್ತು. ನಾನು ನಿದ್ರೆ ಮಾಡುತ್ತಿದ್ದುದರಿಂದ ಅದು ನನಗೆ ರಾತ್ರಿ ಆಗುತ್ತಿತ್ತು. ಆದರೆ ನೀನು ರಾತ್ರಿ ಮಲಗಿದ್ದಾಗ ಈ ಜೋಕಾಲಿ ನಿಂತು ಹೋಗಿ, ನಾನು ಎಚ್ಚರವಾಗುತ್ತಿದ್ದೆ ಮತ್ತು ನನಗೆ ಅದು ಹಗಲು ಆಗುತ್ತಿತ್ತು. ನಿನ್ನ ಹೊಟ್ಟೆಯಿಂದ ಹೊರಗೆ ಬಂದಾದ ಮೇಲೂ ಈ ರೂಢಿ ಮುಂದುವರೆಸಿದ್ದೇನೆ. ಗಾಬರಿ ಬೇಡ. ಇನ್ನು ನಾಲ್ಕು ವಾರ ಬಹಳೆಂದರೆ ಮೂರು ತಿಂಗಳಲ್ಲಿ ದೊಡ್ಡವರಂತೆ ನನಗೆ ಹಗಲು ಎಚ್ಚರ, ರಾತ್ರಿ ನಿದ್ದೆಯ ರೂಢಿಯಾಗುತ್ತದೆ. 

ರಾತ್ರಿ ನಿದ್ರೆ ಪ್ರಯೋಜನ
ಅಮ್ಮಾ ಎಳೆ ಮಗು ರಾತ್ರಿ ಹೆಚ್ಚು ನಿದ್ರೆ ಮಾಡುವುದರಿಂದ ಕೆಲವು ಪ್ರಯೋಜನಗಳಿವೆಯಂತೆ. ಇವು ನಿನಗೆ ಗೊತ್ತೇ? ಎಳೆ ಕಂದಮ್ಮ ರಾತ್ರಿ ಹೆಚ್ಚು ಹೊತ್ತು ನಿದ್ರೆ ಮಾಡಿದರೆ ಎಲ್ಲ ರೀತಿಯಿಂದ ಚೆನ್ನಾಗಿ ಬೆಳೆಯುತ್ತಾರಂತೆ. 

ಹಗಲಿನಲ್ಲಿ ನಾನು ನೋಡಿದ್ದು, ಕೇಳಿದ್ದು ನಂಗೆ ಎಲ್ಲವೂ ಹೊಸದು. ಪುಟಾಣಿಯಾದ ನನಗೆ ಇವುಗಳನ್ನು ಬೇಗ ನೆನಪಿಟ್ಟುಕೊಳ್ಳಲು ಆಗುವದಿಲ್ಲ. ಆದರೆ ಪ್ರಶಾಂತ ರಾತ್ರಿ
ನಿದ್ರೆಯಿಂದ ನೆನಪಿಟ್ಟುಕೊಳ್ಳಲು ಸಾಧ್ಯವಂತೆ. ಇದು ಹೇಗೆಂದರೆ ನಿನಗೆ ಗೊತ್ತಿದ್ದಂಗೆ ಹಗಲಿನಲ್ಲಿನ  ಎಲ್ಲ ಅನುಭವಗಳನ್ನು ನನ್ನ ರಾತ್ರಿ ನಿದ್ರೆಯಲ್ಲಿ ಅರಗಿಸಿಕೊಂಡು ಮೆದುಳಿನಲ್ಲಿ ಇಟ್ಟುಕೊಳ್ಳುತ್ತೇನೆ. ಇದರಿಂದ ನಾನು ಹೆಚ್ಚು ಜಾಣನಾಗುತ್ತೇನಂತೆ.

ನಾನು ರಾತ್ರಿ ನಿದ್ರೆ ಮಾಡುವುದರಿಂದ ನಮ್ಮಿಬ್ಬರಿಗೂ ಅಪ್ಪ, ಅಜ್ಜ ಅಜ್ಜಿಗೂ ಒಳ್ಳೇದು. ಯಾಕೆ ಗೊತ್ತಾ? ನಾನು ರಾತ್ರಿ ನಿದ್ರೆ ಹೋದರೆ ಮನೆಯವರೆಲ್ಲರೂ ನಿರಾತಂಕವಾಗಿ ರಾತ್ರಿ ನಿದ್ರೆ ಮಾಡ್ತಾರೆ. ಇದರಿಂದಾಗಿ ಹಗಲಿನಲ್ಲಿ ಇವರೆಲ್ಲಾ ಫ್ರೆಶ್. ಹೀಗೆ ನಾನು ಯಾರ ನಿದ್ರೆ ಕೆಡಿಸುವುದಿಲ್ಲವಾದ್ದರಿಂದ ನನ್ನ ನಿನ್ನ, ಮನೆಯ ಎಲ್ಲರ ಮಧ್ಯ ಪ್ರೀತಿ, ಬಾಂಧವ್ಯ ಜಾಸ್ತಿ ಆಗುತ್ತೆ. ನಾನು ರಾತ್ರಿ ಪೂರ್ಣ ನಿದ್ರೆ ಮಾಡುವುದರಿಂದ, ಹಗಲಿನಲ್ಲಿ ಹೆಚ್ಚು ಅಳುವುದಿಲ್ಲ. ಹೀಗಾಗಿ ನಾನು ಎಲ್ಲರಿಗೂ  ಸ್ವೀಟ್ ಬೇಬಿ.

ಅಮ್ಮಾ ಇಲ್ಲಿ ಕೇಳು, ನಾನು ರಾತ್ರಿ ಶಾಂತ ನಿದ್ರೆ ಮಾಡಿದರೆ ನನಗೆ ಯಾವ ಕಾಯಿಲೆ ಬರೋದಿಲ್ಲವಂತೆ. ರಾತ್ರಿ ನಿದ್ರೆಯಲ್ಲಿ ನನ್ನ ಮೆದುಳು ಬೇಗ ಬೆಳೆಯುತ್ತದೆ. ಮೊದಲಿನ ಆರು ತಿಂಗಳಲ್ಲಿ ನನ್ನ ಮೆದುಳಿನ ಬಹಳಷ್ಟು ಬೆಳವಣಿಗೆ ಅಗುತ್ತೆ.

ಅಮ್ಮಾ, ಇಲ್ಲಿ ಕೇಳು. ನಾನೀಗ ಪ್ರತಿ 2-4 ಗಂಟೆಗೊಮ್ಮೆ ಎಚ್ಚರವಾಗುತ್ತಿದ್ದೇನೆ. ನಿದ್ರೆಯಲ್ಲಿ ಒಂದೊಂದು ಸಲ ಅಳು, ನಗು, ಹೆದರಿದಂತೆ ಮಾಡುತ್ತೇನೆ. ಇವೆಲ್ಲಾ ನಾರ್ಮಲ್. ಭಯ ಬೇಡ. ಇವು ನನ್ನ ಆರೋಗ್ಯಕ್ಕೆ ಒಳ್ಳೆಯವು. ಇದರಿಂದ ನನ್ನ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಇವು ಬೇಕು ಅಮ್ಮಾ, ನಿನ್ನ ಜೊತೆ ಮಾತನಾಡುತ್ತಿದ್ದಂತೆ ನನ್ನ ರಾತ್ರಿ ನಿದ್ರೆ ಸಮಯ ಬಂತು. ಸುಮ್ಮನೆ ನಿನ್ನ ತೊಡೆ ಮೇಲೆ ಮಲಗಿಸುವ ಮುಂಚೆ ಸ್ನಾನ ಮಾಡಿಸು. ಬಟ್ಟೆ ಬದಲಾಯಿಸು. ನಂತರ ಜೋಗುಳ ಕೇಳಿಸು. ನಿನಗೆ ಹಾಡು ಬರದಿದ್ದರೆ ನಿನ್ನ ಮೊಬೈಲ್, ಲ್ಯಾಪ್‌ಟಾಪ್‌ದಲ್ಲಿನ ಮೃದು ಹಾಡು ಕೇಳಿಸು. ನನಗೆ ಕಡಿಮೆ ಬೆಳಕು ಇಷ್ಟ. ಇವೆಲ್ಲಾ ನೀನು ಮಾಡಿದರೆ ನಿದ್ರೆ ಸಮಯವಾಯಿತೆಂದು ನಾನು ನೆನಪಿಸಿಕೊಂಡು ಬೇಗ ನಿದ್ರೆ ಹೋಗ್ತೇನೆ. ಇಲ್ಲವಾದರೆ ರಾತ್ರಿಯೆಲ್ಲಾ ನಿನ್ನ ಕಾಡ್ತಾ ಇರ‌್ತೀನಿ.

ಅಪ್ಪಾ ಬೇಕು
ಅಮ್ಮಾ, ನನ್ನ ರಾತ್ರಿ ನಿದ್ರೆಗಾಗಿ ನೀನೊಬ್ಬಳೇ ತೊಂದ್ರೆ ತಗೋಬೇಡ. ಅಪ್ಪನ ಸಹಾಯ ಕೇಳು.

ಅಪ್ಪ ನನ್ನ ಹತ್ತಿರವಿದ್ದರೆ ನನಗೆ ಬಹಳ ಇಷ್ಟ. ಎದೆ ಹಾಲು ಉಣಿಸುವುದನ್ನು ಬಿಟ್ಟು, ಅಪ್ಪ ನನ್ನ ಎಲ್ಲ ಕಾಳಜಿ ಮಾಡಬಲ್ಲ. ಒಂದು ರಾತ್ರಿ ಅಮ್ಮ, ಮರುರಾತ್ರಿ ಅಪ್ಪ ನನ್ನ ಹತ್ತಿರವಿದ್ದರೆ ಬೇಗ ಮಲಗುತ್ತೇನೆ. ದಣಿದ ನಿನಗೂ ಆರಾಮ.

ಇವು ಬೇಡ,ನಿದ್ರೆ ಕೆಡಿಸುತ್ತವೆ
ಪ್ಲಾಸ್ಟಿಕ್ ಚೆಡ್ಡಿ ನನಗೆ ಸರಿ ಆಗೋಲ್ಲ. ಇದರಿಂದ ಸೂಸೂ, ಪೊಟಿ ಜಾಗ ಕೆಂಪಗಾಗಿ ನಿದ್ರೆ ಮಾಡೋಕ್ಕಾಗೋಲ್ಲ, ಈ ಕೆಂಪನ್ನು ಸರಿ ಮಾಡೋಕೆ ನೀನು ಕಷ್ಟಪಟ್ಟಿದ್ದು ನನಗೆ ಗೊತ್ತು. ಈ ಕಷ್ಟ ನನಗೂ ನಿನಗೂ ಬೇಡ. ಆದ್ದರಿಂದ ಕಾಟನ್ ಚೆಡ್ಡಿ ತೊಡಿಸು.

ಅಮ್ಮಾ, ಕುಕ್ಕರ್ ಶಬ್ದ, ನೆಲದ ಮೇಲೆ ಮೇಜು, ಕುರ್ಚಿ ಎಳೆದಾಡಿದರೆ, ನಾಯಿ ಬೊಗಳಿದರೆ, ತಂಬಾಕು ಬೆಳ್ಳುಳ್ಳಿ, ಈರುಳ್ಳಿ ವಗ್ಗರಣೆ ವಾಸನೆಯಿಂದ ನನ್ನ ನಿದ್ರೆ ಕೆಡುತ್ತದೆ. ನಾನು ನಿದ್ರೆಯಲ್ಲಿದ್ದಾಗ ಇವು ಬೇಡ. ನಿನ್ನ ಎದೆಗೆ ಅಪ್ಪಿಕೊಂಡು ನಿನ್ನ ಎದೆಬಡಿತ, ಉಸಿರಾಟದ ಧ್ವನಿ ಕೇಳಿಸು. ಇದರಿಂದ ನನಗೆ ನಿದ್ರೆ ಬರುತ್ತದೆ. 

ಗುಡ್ ನೈಟ್ ಮಾ...
(ಲೇಖಕರು ಮಕ್ಕಳ ತಜ್ಞರು: 94485 79390)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT