ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಂಡಾಯ ಮನೋಧರ್ಮ ಹೊರಗಿನವರಿಗೇ ಸಮಸ್ಯೆ

Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ತಮ್ಮ ‘ನಖಾಬ್’ ಕವನ ಸಂಕಲನದ ಮೂಲಕ  ಹಿಂದೂ - ಮುಸ್ಲಿಂ ಓದುಗ, ವಿಮರ್ಶಕರ ಗಮನಸೆಳೆದ ಕವಿ ಷಾಜಹಾನ. ತಮ್ಮ ಸಾಹಿತ್ಯದಲ್ಲಿ ಮಾತ್ರವಲ್ಲ, ಆಡುವ ಮಾತಿನಲ್ಲಿ ದಿಟ್ಟತನ ತೋರುವ ಈ ಕವಿಯು ಸಂಪೂರ್ಣವಾಗಿ ಮಹಿಳೆಯರ ಪರ ನಿಂತು ಮಾತನಾಡುತ್ತಾರೆ, ಬರೆಯುತ್ತಾರೆ.

ಅದರಲ್ಲಿಯೂ ಮುಸ್ಲಿಂ ಮಹಿಳೆಯರ ಪರವಾದ ಇವರ ಧ್ವನಿ ಎತ್ತರದ್ದು. ಹಲವು ವಿರೋಧಗಳ, ಅವಮಾನಗಳ ನಡುವೆಯೂ ಕುಗ್ಗದ ವ್ಯಕ್ತಿತ್ವ ಇವರದು. ಇಲ್ಲವೆಂದಿದ್ದರೆ ಇವರ ಎರಡನೇ ಕವನಸಂಕಲನ ‘ದರ್ದಿ’ (ನೊಂದವಳು) ಹೊರಬರುತ್ತಿರಲಿಲ್ಲ.


ಷಾಜಹಾನ ಉಚ್ಚವರ್ಗದ ಮುಸ್ಲಿಂ ಮಹಿಳೆಯಲ್ಲ. ಅದರಲ್ಲಿನ ನಿಮ್ನ ವರ್ಗಕ್ಕೆ ಸೇರಿದ ಪಿಂಜಾರಿ, ನೂರ್‌ಬಾಫೆ, ಕಾಶೋ, ಬೋರೇವಾಲೆ, ಫಕೀರ್, ಲಖಡೇವಾಲೆ, ಘೋಡೇವಾಲೆ, ಲೋಹರ್, ಘಂಟಫಕೀರ್, ಧೋಬೀ, ಮೇಥರ್... ಮುಂತಾದವುಗಳಲ್ಲಿ ಒಂದಾದ ದೂದೇಕುಲ (ಹತ್ತಿ ಹಿಂಜಿ ಹಾಸಿಗೆ ಹೊಲಿಯುವ ಕಾಯಕದ ಮುಸ್ಲಿಂ) ಹೆಣ್ಣು. ಈ ಬಗ್ಗೆ ಅಭಿಮಾನ ಪಡುವ ಈಕೆ ತನ್ನ ’ಲದ್ದಾಫ್ನಿ ’ಎಂಬ ಕವಿತೆಯಲ್ಲಿ ಹೇಳುವುದು ಹೀಗೆ:

ಎಲ್ಲರ ಎದುರಲ್ಲಿ ಈಗ ಅರಚುತ್ತೇನೆ
  ನೂರು ಬಾರಿ
ಹೌದು ನಾನು ಕೆಳಜಾತಿಯವಳು
ಕೆಳಜಾತಿಯವಳು ಆಗಿಯೇ ಇರುತ್ತೇನೆ.
ಒಳ್ಳೆಯ ಕತೆಗಾರ್ತಿ ಎನಿಸಿಕೊಂಡಿರುವ ಇವರು ಕತೆಗಾರ, ಕವಿಯೂ ಆಗಿರುವ ಸ್ಕೈಬಾಬ ಅವರೊಡಗೂಡಿ ‘ಅಲಾವಾ, ಚಾಂದ್‌ತಾರ’ ಎಂಬ ಕವನ ಸಂಕಲನಗಳನ್ನು ಸಂಪಾದಿಸಿರುವರು. ‘ತೆಲುಗಿನಲ್ಲಿ ಮುಸ್ಲಿಂವಾದ ಸಾಹಿತ್ಯ ’ಇವರ ಸಂಪ್ರಂಬಧ.
ರಂಗವಲ್ಲಿ ಮೆಮೋರಿಯಲ್ ಪ್ರಶಸ್ತಿ, ಸಂಸ್ಕೃತಿ ಪುರಸ್ಕಾರ(ದೆಹಲಿ), ರಂಗಿನೇನಿ ಪ್ರಶಸ್ತಿಗಳನ್ನು ಪಡೆದಿರುವರು. ೨೦೦೬ರಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಬುಕ್‌ಫೇರ್ ಮತ್ತು ೨೦೦೯ರಲ್ಲಿ ರಷ್ಯಾದ ಮಾಸ್ಕೋದಲ್ಲಿ ನಡೆದ ಬುಕ್‌ಫೇರ್‌ಗಳಲ್ಲಿ ಭಾಗವಹಿಸಿದ್ದಾರೆ. 
 
*ನಿಮ್ಮ ಬಾಲ್ಯ, ಕುಟುಂಬ, ವಿದ್ಯಾಭ್ಯಾಸ ಕುರಿತು ಹೇಳಿ...

ತಂದೆಯ ಉದ್ಯೋಗದ ಕಾರಣದಿಂದಾಗಿ ಊರಿಂದೂರಿಗೆ ವರ್ಗವಾಗುತ್ತಿತ್ತು. ಹಾಗಾಗಿ ಗೆಳತಿಯರಿಲ್ಲದೆ ಒಂಟಿಯಾಗಿರಬೇಕಾಗಿತ್ತು. ಆಗ ಪುಸ್ತಕಗಳನ್ನು ಓದುತ್ತಿದ್ದೆ. ನ್ಯೂಸ್ ಪೇಪರುಗಳಲ್ಲಿ ನನಗಿಷ್ಟವಾದುದನ್ನು ಹುಡುಕಿಕೊಂಡು ಓದುತ್ತಿದ್ದೆ. ಶಾಲಾ ಓದು ಮಾಮೂಲಿಯಾಗಿತ್ತು. ತೆಲುಗು ಮತ್ತು ವಿಜ್ಞಾನದಲ್ಲಿ ಹೆಚ್ಚಿನ ಅಂಕಗಳು ಬರುತ್ತಿದ್ದವು. ಆ ಎರಡು ವಿಷಯಗಳು ನನಗೆ ಇಷ್ಟವಾಗಿದ್ದವು. ಗಣಿತವೆಂದರೆ, ಇಂಗ್ಲಿಷ್ ಎಂದರೆ ಕಷ್ಟವೆನಿಸುತ್ತಿತ್ತು. ನನ್ನ ತಂದೆ ದಿಲಾವರ್, ತೆಲುಗಿನ ಪ್ರಸಿದ್ಧ ಕವಿ, ಕಥೆಗಾರ, ವಿಮರ್ಶಕ. ತೆಲುಗು ಉಪನ್ಯಾಸಕರಾಗಿ ನಿವೃತ್ತರಾಗಿದ್ದಾರೆ. ತಾಯಿ ಯಾಕೂಬ್ಬಿ. ಅಕ್ಕ ಷಂಷಾದ್ ಬೇಗಂ. ಅಣ್ಣ ಅಕ್ಬರ್. ಸ್ಕೈಬಾಬ ನನ್ನ ಸಹಚರ. ಇವರು ಖ್ಯಾತ ಕವಿ, ಕಥೆಗಾರ.

* ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಪ್ರವೇಶ ಯಾವಾಗ, ಹೇಗೆ ಆಯಿತು?
ನನ್ನ ಬಾಲ್ಯದಲ್ಲಿಯೇ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶವಾಯಿತು. ಏಳನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಬರೆದಿದ್ದೆ. ಆದರೆ ಅವನ್ನು ಬಹಳ ದಿನಗಳ ಕಾಲ ಯಾರಿಗೂ ತೋರಿಸಿದ್ದಿಲ್ಲ. ಒಮ್ಮೆ ಅವನ್ನು ನನ್ನ ಆಪಾ (ಅಕ್ಕ) ನೋಡಿ ಅಬ್ಬಾ (ತಂದೆ)ಗೆ ತೋರಿಸಿದಳು. ಅವರು ಚೆನ್ನಾಗಿವೆಯೆಂದು ಮೆಚ್ಚಿಕೊಂಡರು. ನನ್ನ ಮೊದಲ ಕವಿತೆ ‘ಎರೆ’. ನಂತರ ತುಂಬಾ ಬರೆದೆ. ಅನೇಕ ಕವಿತೆಗಳು ಸ್ಕೂಲ್ ಮ್ಯಾಗಜೈನ್‌ಗಳಲ್ಲಿ ಪ್ರಕಟವಾದವು. ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ‘ಅನಾಥೆ’ ಎಂಬ ಕವಿತೆ ಬರೆದೆ. ಅದು ಪ್ರಸಿದ್ಧ ಸಾಹಿತ್ಯ ಪತ್ರಿಕೆ ‘ಭಾರತಿ’ಯಲ್ಲಿ ಸ್ವೀಕೃತವಾಗಿತ್ತು. ಆದರೆ ಕವಿತೆ ಪ್ರಕಟವಾಗುವ ಮೊದಲೇ ಅದು ನಿಂತುಹೋಯಿತು. ನಂತರ ನಾನು ಬಹಳ ಕಾಲ ಮೌನವಾಗಿದ್ದೆ. ಮತ್ತೆ ನಾನು ಕಾವ್ಯದಲ್ಲಿ ಮಾತನಾಡಿದ್ದು ೧೯೯೭ರಲ್ಲಿ. ಮುಸ್ಲಿಂ ಮಹಿಳೆಯರನ್ನು ಕುರಿತು ಬರೆದ ಕವಿತೆಗಳೇ ನನ್ನ ನಿಜವಾದ ಅಸ್ತಿತ್ವವನ್ನು ತೋರುತ್ತವೆಂಬುದು ನನ್ನ ಭಾವನೆ.

*ತವರಿನಲ್ಲಿನ ನಿಮ್ಮ ದಿನಗಳು ಹೇಗಿದ್ದವು?
ತಾಯಿ ತಂದೆ ಪ್ರೀತಿಯಿಂದ ನೋಡುತ್ತಿದ್ದರು. ಸ್ವಯಂ ಲೇಖಕರಾದ ತಂದೆ ಪ್ರಗತಿವಾದಿಯಾದ್ದರಿಂದ ನನಗಾವ ಅಡ್ಡಿಯೂ ಇದ್ದುದಿಲ್ಲ. ಮಧ್ಯಮ ವರ್ಗದ ಕುಟುಂಬವಾದ್ದರಿಂದ ಹೊಟ್ಟೆ-ಬಟ್ಟೆಗೆ ಬರವಿರಲಿಲ್ಲ. ಆದರೆ ಅಕ್ಕ ಷಂಷಾದಳ ಗಂಡ ಎರಡು ಬಾರಿ ತಲಾಖ್ ಪತ್ರ ಕಳಿಸಿದ್ದರು. ಯಾಕೋ ಮೂರನೇಯದನ್ನು ಕಳಿಸಲಿಲ್ಲ. ಅವಳೊಂದಿಗೆ ಎಂಟು ವರ್ಷ ಸಂಸಾರ ನಡೆಸಿ ಬಿಟ್ಟುಬಿಟ್ಟ. ಅವಳ ವೇದನೆ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿತು. ನನ್ನ ಬಂಡಾಯ ಮನೋಧರ್ಮ ಮನೆಯವರಿಗೆ ಸಮಸ್ಯೆಯಲ್ಲ. ಹೊರಗಿನವರಿಗೆ ಮಾತ್ರ.

* ಹೊರಗಿನವರಿಗೆ ಹೇಗೆ?
ನನ್ನ ಕವಿತೆ, ಬರಹಗಳಲ್ಲಿನ ವಿಚಾರ ಅವರಿಗೆ ಪಥ್ಯವಲ್ಲ ಅದಕ್ಕೆ.

*ನಿಮ್ಮ ಬರವಣಿಗೆಯ ಹಿನ್ನೆಲೆ ಏನು?
ಸಮಾಜದಲ್ಲಿನ ಅಸಮಾನತೆ, ಮುಸ್ಲಿಂ ಮಹಿಳೆಯರ ಬಗ್ಗೆ ಪುರುಷರು ತೋರುವ ಅಸಮಾನತೆ, ಮುಸ್ಲಿಂ ಮತ್ತು ಹಿಂದೂಗಳ ನಡುವಿನ ಅಸಮಾನತೆ, ಬಡ ದೇಶಗಳ ಬಗ್ಗೆ ಶ್ರೀಮಂತ ರಾಷ್ಟ್ರಗಳು ಪ್ರದರ್ಶಿಸುವ ಅಸಮಾನತೆ, ಜಾತಿ ಧರ್ಮಗಳ ಹೆಸರಿನಲ್ಲಿ ಹೆಂಗಸರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಶೋಷಣೆ, ಭೇದಭಾವ.

*ಮುಸ್ಲಿಂ ಲೇಖಕಿಯರಿಗೂ ಇತರೆ ಲೇಖಕಿಯರಿಗೂ ಇರುವ ವ್ಯತ್ಯಾಸವೇನು?
ಮುಸ್ಲಿಂ ಸ್ತ್ರೀಯರು ಮುಸ್ಲಿಂ ಮಹಿಳೆಯರನ್ನು ಕುರಿತು ಬರೆಯುತ್ತಿದ್ದಾರೆ. ಹಾಗೆಯೆ ಇತರೆ ಮಹಿಳಾ ವರ್ಗದವರ ಬಗ್ಗೆಯೂ ಬರೆಯುತ್ತಿರುವರು. ಮುಸ್ಲಿಮೇತರ ಸ್ತ್ರೀವಾದಿ ಲೇಖಕಿಯರು ಮುಸ್ಲಿಂ ಮಹಿಳೆಯರನ್ನು ಕುರಿತು ಬರೆದುದು ಕಡಿಮೆ. ಆದರೆ ಅವರು ಎದುರಿಸುತ್ತಿರುವ ಶೋಷಣೆಗಿಂತಲೂ ಮುಸ್ಲಿಂ ಹೆಂಗಸರು ಹಿಂದೂವಾದಿಗಳಿಂದ, ಬ್ರಾಹ್ಮಣವಾದಿಗಳಿಂದ ಹೆಚ್ಚಿನ ಭೇದಭಾವವನ್ನು ಎದುರಿಸುತ್ತಿದ್ದಾರೆ.

*ನಿಮ್ಮ ಬರವಣಿಗೆಯ ಹಿನ್ನೆಲೆಯಲ್ಲಿ ತೆಲುಗು ಸ್ತ್ರೀವಾದ ಸಾಹಿತ್ಯವನ್ನು ನೀವು ಹೇಗೆ ವ್ಯಾಖ್ಯಾನಿಸುವಿರಿ?
ನಿಮ್ಮ ನಖಾಬ್ ಕವನ ಸಂಕಲನ ಪ್ರಕಟವಾದಾಗ
ಸ್ತ್ರೀವಾದಿ, ಇತರೆ ವಿಮರ್ಶಕರು ಹೇಗೆ ಸ್ಪಂದಿಸಿದರು?
ನಾನಾನು ತೆಲುಗು ಸ್ತ್ರೀವಾದಿ ರಚನೆಳಿಂದಲೂ  ಪ್ರೇರಿತಳಾಗಿದ್ದೇನೆ. ‘ನಖಾಬ್’ ಪ್ರಕಟವಾದಾಗ ಕೆಲವರು ಸ್ತ್ರೀವಾದಿ ವಿಮರ್ಶಕರು ಜೀರ್ಣಿಸಿಕೊಳ್ಳದೆ ಹೋದುದು ಆಶ್ಚರ್ಯವನ್ನುಂಟುಮಾಡಿತು. ಕವಿತೆಗಳಲ್ಲಿಯ ಉರ್ದು ನುಡಿಗಳನ್ನು ಆಕ್ಷೇಪಿಸಿದರು. ಉಳಿದ ವಿಮರ್ಶಕರು ಚೆನ್ನಾಗಿಯೇ ಸ್ಪಂದಿಸಿದರು. ಬುರಖಾ, ತಲಾಖ್‌ ಸೇರಿದಂತೆ ಬಹಳ ವಿಚಾರಗಳನ್ನು ನಖಾಬಿನಲ್ಲಿ ಪ್ರಸ್ತಾಪಿಸಿರುವೆ. ಆದರೆ ವಿಮರ್ಶಕರು ಅವನ್ನೇ ಮುಖ್ಯವಾಗಿಸಿಕೊಂಡರು.

*ಮುಸ್ಲಿಂ ಸ್ತ್ರೀವಾದಕ್ಕೂ ಮುಸ್ಲಿಮೇತರ ಸ್ತ್ರೀವಾದಕ್ಕೂ ವ್ಯತ್ಯಾಸವೇನಾದರು ಇದೆಯೆ? ಇದ್ದುದಾದರೆ ನೀವು  ಅದನ್ನು ಹೇಗೆ ವಿಶ್ಲೇಷಿಸುವಿರಿ?
ಮುಸ್ಲಿಂ ಮಹಿಳೆಯರು ತಮ್ಮ ಧರ್ಮದಲ್ಲಿರುವ ಲೋಪಗಳನ್ನು ಕುರಿತು ಬರೆದರು. ಮುಸ್ಲಿಮೇತರ ಸ್ತ್ರೀವಾದಿಗಳು ಧರ್ಮವನ್ನು ಕುರಿತು ಹೆಚ್ಚಿಗೆ ಬರೆಯಲಿಲ್ಲ. ಅವರು ಪಿತೃ ಪ್ರಾಧಾನ್ಯತೆಯ ಬಗ್ಗೆಯೇ ಹೆಚ್ಚಿಗೆ ಬರೆದರು. ಅದಕ್ಕೆ ಮೂಲವಾದ ಬ್ರಾಹ್ಮಣವಾದದ ಬಗ್ಗೆ ಬರೆಯುತ್ತಿಲ್ಲ. ಮುಸ್ಲಿಂ ಸ್ತ್ರೀಯರು ತಮ್ಮ ಸಾಹಿತ್ಯವನ್ನು ಸ್ತ್ರೀವಾದಿ ಎಂಬುದನ್ನು ಅಂಗೀಕರಿಸುತ್ತಿಲ್ಲ. ಸ್ತ್ರೀವಾದಿ ನೆಲೆಯಲ್ಲಿ ಮುಸ್ಲಿಂ ಮಹಿಳೆಯರನ್ನು ಕುರಿತು ಬರೆಯುವ ಪರಿಸ್ಥಿತಿ ಸದ್ಯದಲ್ಲಿ ಇಲ್ಲವೆಂಬುದು ನನ್ನ ಭಾವನೆ.

*ಮಹಿಳಾ ಸಾಹಿತ್ಯ, ಪುರುಷ ಸಾಹಿತ್ಯವೆಂದು ಬೇರ್ಪಡಿಸಿ ನೋಡುವ ಪದ್ಧತಿ ತೆಲುಗಿನಲ್ಲಿದೆಯೆ? ಇರುವುದಾದರೆ ಇದು ಅಗತ್ಯವೆ?
ತೆಲುಗಿನಲ್ಲಿ ಮಹಿಳಾ ಸಾಹಿತ್ಯ, ಪುರುಷ ಸಾಹಿತ್ಯವೆಂಬುದಿಲ್ಲ. ಸ್ತ್ರೀವಾದಿ ಸಾಹಿತ್ಯ, ಪುರುಷವಾದಿ ಸಾಹಿತ್ಯ ಎಂಬುದಿದೆ. ಮಹಿಳೆಯರು ಪೀಡಿತ ವರ್ಗದವರಾದುದರಿಂದ ಮಹಿಳಾ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ.

*ವರ್ತಮಾನದ ಹಿಂದೂ ಮುಸ್ಲಿಂ ಲೇಖಕರ ಜವಾಬ್ದಾರಿಯೇನು?
ಈ ಎರಡೂ ಧರ್ಮಕ್ಕೆ ಸೇರಿದವರಲ್ಲಿ ಜಾತಿ, ಧರ್ಮಗಳ ಬಗ್ಗೆ ಅರಿವುಂಟು ಮಾಡುವುದು. ತಪ್ಪು ಕಲ್ಪನೆಗಳನ್ನು, ಅನುಮಾನಗಳನ್ನು ನಿವಾರಿಸುವುದು, ಅಸಮಾನತೆಯನ್ನು ಕುರಿತು ಬರೆಯುವುದು.

*ಮುಸ್ಲಿಂ ಲೇಖಕಿಯಾಗಿ ನೀವು ಎದುರಿಸಿದ ಸಮಸ್ಯೆಗಳೇನಾದರು ಇದ್ದವೆ?
ನಾನು ಮುಸ್ಲಿಂ ಲೇಖಕಿಯಾಗಿ ಮಾಡಿದ ರಚನೆಗಳಲ್ಲಿ ತಲಾಖ್‌, ಬುರ್ಖಾ, ದೂದೇಕುಲ ಮಹಿಳೆಯರ ಸಮಸ್ಯೆಗಳಿವೆ. ಇವುಗಳಿಂದಾಗಿ ವಿರೋಧ ವ್ಯಕ್ತವಾಯಿತು.

*ಸಾಹಿತ್ಯ ರಚನೆಯಲ್ಲಿ ಸ್ತ್ರೀ ಭಾಷೆ ಅನ್ನುವುದಿದೆಯೆ? ಇದ್ದುದಾದರೆ ಅದರ ಸ್ವರೂಪವೇನು?
ಇರುತ್ತದೆ. ಅವರ ಸಮಸ್ಯೆಗಳು ಪ್ರತ್ಯೇಕವಾದವುಗಳಾದ್ದರಿಂದ ಅವು ಪ್ರತ್ಯೇಕವಾದ ಭಾಷೆಯಲ್ಲಿಯೇ ವ್ಯಕ್ತೀಕರಣಗೊಳ್ಳುತ್ತವೆ. ಎಷ್ಟೋ ಹೊಸ ಪದಗಳು, ನುಡಿಗಟ್ಟುಗಳು, ಹೊಸ ಡಿಕ್ಷನ್‌ಗಳನ್ನು ನಾವು ನೋಡಬಹುದು.

*ನಿಮ್ಮ ಕಥೆಗಳಲ್ಲಿ ಕವಿತೆಗಳಲ್ಲಿ ಇರುವಂತೆ ಉಳಿದ ಮುಸ್ಲಿಂ ಲೇಖಕರ ರಚನೆಗಳಲ್ಲಿ ಉರ್ದು ಶಬ್ದಗಳು ಹೆಚ್ಚಿಗೆ ಬಳಕೆಯಾಗುತ್ತಿವೆಯೇಕೆ? ಇದರಿಂದಾಗುವ ಪ್ರಯೋಜನವೇನು? ಇದು ಭಾಷೆಯ ಐಡೆಂಟಿಟಿಗಾಗಿಯೆ?
ಕಥೆಗಳಲ್ಲಿ, ಕವಿತೆಗಳಲ್ಲಿ ಉರ್ದು ಪದಗಳನ್ನು ಬಳಸುವುದು ಮುಸ್ಲಿಂವಾದಿ ಸಾಹಿತ್ಯದ ವಿಶೇಷತೆ. ಇದರಿಂದಾಗಿ ತೆಲುಗು ಮಾತನಾಡುವ ಮುಸ್ಲಿಮರಿಗೆ ತೆಲುಗು ಭಾಷೆ ಹತ್ತಿರವಾಗುತ್ತದೆ. ತೆಲುಗರಿಗೆ ಉರ್ದು ಪದಗಳು ಹತ್ತಿರವಾಗುತ್ತವೆ. ತೆಲುಗು - ಉರ್ದು ಬೆರೆತ ಸಂಕೃತಿಯನ್ನು ಇದು ಪ್ರತಿಬಿಂಬಿಸುತ್ತದೆ. ಉರ್ದು ಒಂದು ಭಾರತೀಯ ಭಾಷೆಯೆಂಬ ಪ್ರಜ್ಞೆಯನ್ನು ಮುಸ್ಲಿಂವಾದಿ ಲೇಖಕರು ನೆನಪಿಸುತ್ತಿದ್ದಾರೆ. ಬಹಳ ಮಂದಿ ಮುಸ್ಲಿಂ ಲೇಖಕರ ಮನೆಗಳಲ್ಲಿ ಉರ್ದು ಮಾತನಾಡುತ್ತಾರೆ. ಆದರೆ ಉರ್ದು ಲಿಪಿ ಬರುವುದಿಲ್ಲ. ಆದುದರಿಂದ ತೆಲುಗಿನಲ್ಲಿಯೇ ಉರ್ದು ಪದಗಳನ್ನು ಬಳಸಿ ತೆಲುಗು ಭಾಷೆಗೆ ಹೆಚ್ಚಿನ ಶೋಭೆ ತರುತ್ತಿದ್ದಾರೆ.

*ಶಿಕ್ಷಣ ಮಹಿಳೆಯರನ್ನು ರಕ್ಷಿಸುತ್ತದೆಯೆ ?
ರಕ್ಷಿಸುತ್ತದೆ. ಶಿಕ್ಷಣವಿಲ್ಲದೆ ಬಹಳಷ್ಟು ಮುಸ್ಲಿಮರು ಹಿಂದುಳಿದಿದ್ದಾರೆ. ಮುಖ್ಯವಾಗಿ ಮುಸ್ಲಿಂ ಮಹಿಳೆಯರ ಹಿಂದುಳಿಯುವಿಕೆಗೆ ಶಿಕ್ಷಣವಿಲ್ಲದಿರುವುದೂ ಒಂದು ಕಾರಣ. ಈ ದಿನಗಳಲ್ಲಿ ವಿದ್ಯಾವಂತರಾಗಿ ಗಂಡ, ಹೆಂಡತಿ ಉದ್ಯೋಗ ಮಾಡದ ಹೊರತು ಬದುಕಲಾರರು. ಹೀಗಿರುವಾಗ ಗಂಡಸೊಬ್ಬನೇ ಸಂಪಾದಿಸುವುದಾದರೆ ಸಂಸಾರ ನಡೆಯುವುದು ಕಷ್ಟ. ಶಿಕ್ಷಣದಿಂದ ಕೆಲಸ ಸಿಗುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ತಮ್ಮನ್ನು ವಂಚಿಸುವ ಗಂಡಸರೊಂದಿಗೆ ಹೋರಾಡುವ ನೈತಿಕ ಸ್ಥೈರ್ಯವನ್ನು ಶಿಕ್ಷಣದ ಮೂಲಕ ಪಡೆಯುವ ಅವಕಾಶವಿದೆ.  

*ಸಾಹಿತ್ಯ ನಿಮ್ಮನ್ನು ಹೇಗೆ ಸಾಂತ್ವನಗೊಳಿಸುತ್ತದೆ?
ಸಾಹಿತ್ಯ ನನ್ನನ್ನೆ ಅಲ್ಲ ಜಗತ್ತನ್ನೇ ಸಾಂತ್ವನಗೊಳಿಸುತ್ತದೆ. ನನ್ನ ಸುತ್ತಲಿನ ಸಮಸ್ಯೆಗಳಿಗೆ ಸಾಹಿತ್ಯದಿಂದಲೇ ಪರಿಹಾರ ದೊರೆಯುತ್ತಿತ್ತು. ಸಾಹಿತ್ಯವೇ ನನ್ನನ್ನು ಉಳಿಸಿದೆ. ಪ್ರಪಂಚದ ಅರಿವು ಮೂಡಿದೆ. ಮನಸ್ಸಿನಲ್ಲಿ ನೋವಿದ್ದಾಗ ಸಾಹಿತ್ಯವೆ ಸಂಗಾತಿ.

*ಕನ್ನಡ ಸಾಹಿತ್ಯದೊಂದಿನ ನಿಮ್ಮ ಪರಿಚಯ ಎಂಥದು? ಕನ್ನಡ ಕವಿತೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ತೆಲುಗಿಗೆ ಅನುವಾದಗೊಂಡ ಕನ್ನಡದ ಸಾರಾ ಅಬೂಬಕರ್‌ರ ‘ನಾದಿರಾ’ ಕಾದಂಬರಿಯನ್ನು ಓದಿದ್ದೇನೆ. ಅಷ್ಟಾಗಿ ಕವಿತೆಗಳನ್ನು ಓದಿಲ್ಲ. ಓದುತ್ತೇನೆ. 

*ಇಂದಿನ ತೆಲುಗು ಕಾವ್ಯದ ಬಗ್ಗೆ ನಿಮ್ಮ ಅಭಿಪ್ರಾಯ?
ಶತಮಾನಗಳಿಂದ ಸಾಗಿಬಂದ ಬ್ರಾಹ್ಮಣೀಯ ಸಾಹಿತ್ಯದ ನಂತರ ಕೆಲವು ದಶಕಗಳಿಂದ ದಲಿತರು, ಮುಸ್ಲಿಮರು, ಬಿ.ಸಿ.(ಹಿಂದುಳಿದ ವರ್ಗ)ಗಳು ಸಾಹಿತ್ಯ ಪ್ರವೇಶ ಮಾಡುತ್ತಿದ್ದಾರೆ. ಇಂದವರ ಕಾವ್ಯದಿಂದ ತೆಲುಗು ಸಾಹಿತ್ಯ ಸಾರಯುಕ್ತವಾಗಿದೆ. ಶಕ್ತ ಕಾವ್ಯ, ಕಥೆಗಳು ಸ್ತ್ರೀ, ದಲಿತ, ಮುಸ್ಲಿಂವಾದಗಳಿಂದ ಮೂಡಿಬಂದಿವೆ. 

*ನಿಮ್ಮ ಕವಿತೆಗಳು ಯಾವ ಯಾವ ಭಾಷೆಗಳಿಗೆ ಅನುವಾದಗೊಂಡಿವೆ?
ನನ್ನ ಕವಿತೆಗಳು ಇಂಗ್ಲಿಷ್, ಜರ್ಮನಿ, ಹಿಂದಿ, ಕನ್ನಡ ಭಾಷೆಗಳಿಗೆ ಅನುವಾದಗೊಂಡಿವೆ.

*ನೀವೆಂದಾದರು ಕರ್ನಾಟಕಕ್ಕೆ ಬಂದಿರುವಿರಾ? ಕನ್ನಡಿಗರನ್ನು ಕುರಿತ ನಿಮ್ಮ ಅಭಿಪ್ರಾಯವೇನು?
ಇಲ್ಲ. ಬರಬೇಕೆಂದಿದೆ. ಕನ್ನಡಿಗರು ನಮಗೆ ಸೋದರರೇ ಅಲ್ಲವೆ.

*ಹಿಂದಿನ ಮುಸ್ಲಿಂ ತೆಲುಗು ಲೇಖಕರ ಕೃತಿಗಳಲ್ಲಿ ಉರ್ದು ಪದಗಳ ಬಳಕೆ ಬಹಳ ಕಡಿಮೆ. ಈಗಿನವರ ರಚನೆಗಳಲ್ಲಿ ಅಧಿಕ. ಇದಕ್ಕೇನಾದರು ಕಾರಣಗಳುಂಟೆ?
ಇಂದಿನವರ ರಚನೆಗಳು ಅವರವರವೇ ಆಗಿವೆ. ಸ್ವಯಂ ಅಸ್ತಿತ್ವ ಕುರಿತು ಬರೆಯುವಾಗ ತಮ್ಮ ಭಾಷೆಯನ್ನು ಬಳಸುತ್ತಿದ್ದಾರೆ. ಆದುದರಿಂದಾಗಿ ಉರ್ದು ಪದಗಳು ಹೆಚ್ಚಿಗೆ ಕಂಡುಬರುತ್ತಿವೆ.

*ಮುಸ್ಲಿಂ ಕವಿಗಳಲ್ಲಿ ಚೆರಬಂಡರಾಜು, ಗದ್ದರ್, ವಂಗಪಂಡು ಪ್ರಸಾದ್ ಮೊದಲಾದವರಂತೆ ಹಾಡುಗಳನ್ನು ಬರೆವವರು ಇದ್ದಾರೆಯೆ?
ಹಾಡುಗಳನ್ನು ಬರೆಯುವವರು ಕಡಿಮೆ. ನಿಸಾರ್ ಎಂಬೊಬ್ಬ ವಾಗ್ಗೇಯಕಾರ ಹಾಡುಗಳನ್ನು ಬರೆದು ಹಾಡುತ್ತಿದ್ದಾರೆ.

*ನೀವು ಗಜಲ್‌ಗಳನ್ನೇಕೆ ಬರೆಯಲಿಲ್ಲ ? ಈ ತಲೆಮಾರಿನವರಲ್ಲಿ ಯಾರಾದರು ಬರೆಯುತ್ತಿದ್ದಾರೆಯೆ? ಒಳ್ಳೆಯ ಗಜಲುಗಳನ್ನು ಬರೆಯುತ್ತಿರುವವರು ಯಾರು ?
ಗಜಲ್‌ಗಳು ಚೆನ್ನಾಗಿ ನುಡಿಯುವುದು ಉರ್ದುವಿನಲ್ಲಿಯೇ. ನಮ್ಮ ತಲೆಮಾರಿನವರಿಗೆ ಉರ್ದು ಬಾರದಾಗಿ ನಾವೆಲ್ಲ ಗಜಲ್ ಬರೆಯುವ ಪ್ರಯತ್ನ ಮಾಡಲಿಲ್ಲ. ತೆಲಂಗಾಣದಲ್ಲಿ, ಮುಖ್ಯವಾಗಿ ಹೈದರಾಬಾದಿನಲ್ಲಿ ರಾಷ್ಟ್ರ ಖ್ಯಾತಿ ಪಡೆದ ಉರ್ದು ಕವಿಗಳಿದ್ದಾರೆ. ಅವರು ಅನೇಕ ಗಜಲ್‌ಗಳನ್ನು ಬರೆದಿರುವರು.

*ಮುಸ್ಲಿಂ ಕಾದಂಬರಿಕಾರರು ಯಾರು ? ಅವರು   ಕಥೆಗಾರರಿಗಿಂತ ಹೇಗೆ ಭಿನ್ನವಾಗಿ ಬರೆಯುತ್ತಾರೆ ?
ಮುಸ್ಲಿಂ ಕಾದಂಬರಿಕಾರರು ಕಡಿಮೆ. ಸಲೀ ಎಂಬುವವರು ಮುಸ್ಲಿಂ ಕಾದಂಬರಿಕಾರರು. ಮಹಮ್ಮದ್ ಖದೀರ್‌ಬಾಬು, ಸ್ಕೈಬಾಬ, ರಹಮತ್ತುಲ್ಲಾ, ವೇಂಪಲ್ಲಿ ಷರೀಫ್, ಅಲೀಯಂಥವರು ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಕಥೆಗಳು ಮುಸ್ಲಿಂ ಜೀವನದ ಹಿನ್ನೆಲೆಯಲ್ಲಿ ಗಟ್ಟಿ ಕಥೆಗಳಾಗಿವೆ. ಸಣ್ಣ ಕಥೆ ಭಿನ್ನ ವಸ್ತುಗಳಿಂದ ಕೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT