ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮನೆ ಸಾಲದ ಬಡ್ಡಿ ಮನ್ನಾ

Last Updated 10 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಪ್ರಕಟಿಸಿದ `ನನ್ನ ಮನೆ-ನನ್ನ ಸ್ವತ್ತು~ ಯೋಜನೆಯನ್ನು ಅನುಷ್ಠಾನ ಪ್ರಕ್ರಿಯೆಯಲ್ಲಿ ಆಶ್ರಯ ಸಹಿತ ಇತರೆ ಎಲ್ಲಾ ವಸತಿ ಯೋಜನೆಗಳ ಫಲಾನುಭವಿಗಳು ಸಾಲವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಬಡ್ಡಿಯನ್ನು ಪೂರ್ಣ ಮನ್ನಾ ಮಾಡುವ `ಹೊಸ ಆದೇಶ~ ಹೊರಬಿದ್ದಿದೆ. ತದನಂತರದಲ್ಲಿ ಮನೆಯೂ ಸರ್ಕಾರದ ಅಡಮಾನದಿಂದ ಮುಕ್ತಗೊಂಡು ಫಲಾನುಭವಿಗೆ ಅವರ ಮನೆ `ಸ್ವಂತ ಸ್ವತ್ತು~ ಆಗಲಿದೆ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್.ವಾಸುದೇವ ಪ್ರಸಾದ್ ಅವರು ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿ, ಜಿ.ಪಂ. ಸಿಇಒಗಳಿಗೆ ಆದೇಶ ಹೊರಡಿಸಿದ್ದಾರೆ. 2012ರ ಮಾರ್ಚ್ 31ರೊಳಗೆ ಸಾಲವನ್ನು ಪೂರ್ಣ ಪಾವತಿಸುವವರಿಗೆ `ಸಂಪೂರ್ಣ ಬಡ್ಡಿ ಮನ್ನಾ~ ಸೌಲಭ್ಯ ದೊರೆಯಲಿದೆ.

ಉಳಿದವರಿಗೆ ಮುಂದಿನ ಏಪ್ರಿಲ್‌ನಿಂದ ಈಗಿರುವ ಶೇ 11ರ ಬಡ್ಡಿಯೇ ಮುಂದುವರಿಯಲಿದೆ.
ಜನತಾ ಮನೆಗಳು, ಭಾಗ್ಯ ಮಂದಿರ, ನೆರಳಿನ ಭಾಗ್ಯ, ಗ್ರಾಮೀಣ ಆಶ್ರಯ, ನಗರ ಆಶ್ರಯ, ನಗರ ಅಂಬೇಡ್ಕರ್, ಇಂದಿರಾ ಆವಾಸ್, ಪಿಎಂಜಿವೈ, ಸಾಲ-ಸಹಾಯಧನ ಯೋಜನೆ, ವಿಶೇಷ ವರ್ಗದ ಯೋಜನೆಗಳ ಅಡಿಯಲ್ಲಿ ನಿವೇಶನ ಖರೀದಿಸಲು ಮತ್ತು ಮನೆ ನಿರ್ಮಿಸಿಕೊಳ್ಳಲು ಸಾಲ-ಸಹಾಯಧನ ಪಡೆದ ಫಲಾನುಭವಿಗಳಿಗೆ ಈ ಬಡ್ಡಿ ಮನ್ನಾ ಸೌಲಭ್ಯ ಅನ್ವಯವಾಗಲಿದೆ.

ಯೋಜನೆಯಂತೆ ಸಂಪೂರ್ಣ ಸಾಲ ಅಥವಾ ಭಾಗಶಃ ಸಾಲ ಮತ್ತು ಸಹಾಯಧನ ಪಡೆದು ಮನೆ ನಿರ್ಮಿಸಿಕೊಂಡವರು ಸಾಲವನ್ನು 2012ರ  ಮಾರ್ಚ್ 31ರೊಳಗೆ ಒಂದೇ ಕಂತಿನಲ್ಲಿ ಕಟ್ಟಿದರೆ ಬಡ್ಡಿ ಪೂರ್ಣ ಮನ್ನಾ. ಅವಧಿಗೆ ಮೊದಲೇ `ಮನೆಯನ್ನು ಸ್ವಂತ ಸ್ವತ್ತು~ ಎಂದಾಗಿಸಿಕೊಳ್ಳಲು ಬಯಸಿದವರಿಂದ ಮನೆ ನಿರ್ಮಾಣ ವೆಚ್ಚದ ಶೇ. 3ರಷ್ಟು ಶುಲ್ಕ ಮಾತ್ರ ಕಟ್ಟಿಸಿಕೊಂಡು ಅಡಮಾನದಿಂದ ಮುಕ್ತಗೊಳಿಸಲಾಗುತ್ತದೆ.

ಕೆಲವು ಫಲಾನುಭವಿಗಳು ಮನೆಯ ನಿವೇಶನ ಖರೀದಿಗೂ ಸಾಲ/ಸಹಾಯಧನ ಪಡೆದಿದ್ದು, ಅಂತಹವರು ನಿವೇಶನವನ್ನು ಅವಧಿಗೆ ಮೊದಲೇ ಅಡಮಾನದಿಂದ ಮುಕ್ತಗೊಳಿಸಿಕೊಳ್ಳಲು ಬಯಸಿದರೆ ಗ್ರಾಮೀಣ ಮತ್ತು ಪ.ಪಂ. ವ್ಯಾಪ್ತಿಯಲ್ಲಾದರೆ ರೂ. 3 ಸಾವಿರ, ಪುರಸಭೆ ವ್ಯಾಪ್ತಿ ರೂ. 5 ಸಾವಿರ, ನಗರಸಭೆ ವ್ಯಾಪ್ತಿ ರೂ. 10 ಸಾವಿರ ಹಾಗೂ ಮಹಾನಗರ ವ್ಯಾಪ್ತಿಯಲ್ಲಾದರೆ ರೂ. 15 ಸಾವಿರ ಪಾವತಿಸಿ ಅಡಮಾನದಲ್ಲಿರುವ ಮನೆಯನ್ನು ಮುಕ್ತಿಗೊಳಿಸಿಕೊಳ್ಳಬಹುದು.

ಕೆಲವು ಸಂದರ್ಭದಲ್ಲಿ ನಗರ ಆಶ್ರಯ ಯೋಜನೆಯನ್ನು ಗ್ರಾಮೀಣ ಭಾಗದಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಅಂಥ ಸಂದರ್ಭದಲ್ಲಿ ನಗರ ಆಶ್ರಯ ಯೋಜನೆಯಡಿ ನಿವೇಶನಕ್ಕೆ ನಿಗದಿಪಡಿಸಿದ ಶುಲ್ಕ ಕಟ್ಟಬೇಕಾಗುತ್ತದೆ.

ಪ್ರೋತ್ಸಾಹ ಧನ: ಈವರೆಗೆ ಸಾಲ ವಸೂಲಿ ಮಾಡುವ ಗ್ರಾ.ಪಂ. ಅಥವಾ ಸ್ಥಳೀಯ ಸಂಸ್ಥೆಗೆ ಶೇ. 25ರಷ್ಟು ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಅದನ್ನು ಹಿಂದಕ್ಕೆ ಪಡೆಯಲಾಗಿದ್ದು, ವಸೂಲಿಯ ಶೇ. 10ರಷ್ಟು ಪ್ರೋತ್ಸಾಹಧನ ನೀಡಲು ಸರ್ಕಾರ ಈಗ ನಿರ್ಧರಿಸಿದೆ. ಇತರೆ ಸಂಘ-ಸಂಸ್ಥೆಗಳೂ ಸಾಲ ವಸೂಲಿ ಮಾಡಬಹುದಾಗಿದ್ದು, ಗ್ರಾ.ಪಂ.ಗಳು ತಮಗೆ ಲಭಿಸುವ ಪ್ರೊತ್ಸಾಹಧನವನ್ನು ಇದಕ್ಕೆ ಬಳಸಿಕೊಳ್ಳಲು ಸಹ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.

ಮೊದಲಿಗರಿಗೆ ನಷ್ಟ: ಈಗಾಗಲೇ ಸಾಲ-ಬಡ್ಡಿ ಪಾವತಿಸಿದ ಫಲಾನುಭವಿಗಳಿಗೆ ಬಡ್ಡಿ ಹಣ ಹಿಂದಿರುಗಿಸಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

ವಸತಿಹೀನರಿಗೆ ಆಸರೆ ನೀಡುವುದು ಸರ್ಕಾರದ ಉದ್ದೇಶ. ಈಗಾಗಲೇ ಆಸರೆ ಪಡೆದುಕೊಂಡವರು ಶೀಘ್ರ ಸಾಲ ಮರುಪಾವತಿ ಮಾಡಿದ್ದೇ ಆದರೆ ಇನ್ನಷ್ಟು ಫಲಾನುಭವಿಗಳಿಗೆ ಸೂರಿನ ಭಾಗ್ಯ ದೊಡ್ಡ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ದ.ಕ. ಜಿ.ಪಂ. ಮೂಲಗಳು ತಿಳಿಸಿವೆ.

ದ.ಕ. 20 ಸಾವಿರ ಮಂದಿಗೆ ಲಾಭ
ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1993-94ರಿಂದ 2008-09ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ 43,548 ಮಂದಿ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ-ಪಂಗಡದವರು.

ಇವರು ಸಾಲ ಮರುಪಾವತಿಸುವಂತಿಲ್ಲ. ಉಳಿದ ಶೇ. 50ರಷ್ಟು ಮಂದಿಯನ್ನು ಗಣನೆಗೆ ತೆಗೆದಕೊಂಡರೆ ಹಾಗೂ ಸಾಲವನ್ನು ಪೂರ್ಣವಾಗಿ ಈವರೆಗೂ ಅವರು ಪಾವತಿಸಿಲ್ಲವಾದರೆ ಸರ್ಕಾರದ ಈ `ಬಡ್ಡಿ ಮನ್ನಾ~ ಯೋಜನೆಯ ಅನುಕೂಲ ಸುಮಾರು 20 ಸಾವಿರ ಮಂದಿಗೆ ದೊರೆಯಲಿದೆ ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT