ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮನೆ ಹೀಗಿರಬೇಕು

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗೃಹಿಣಿ ಸ್ವಂತ ಗೃಹ ಕನಸು

`ಎರಡಂತಸ್ತಿನ ಮನೆ~
ಮಂಗಳೂರಿನಿಂದ ಮದುವೆಯಾಗಿ ಸಿಲಿಕಾನ್ ಸಿಟಿಗೆ ಬಂದವಳು ನಾನು. ಪತಿ ವೃತ್ತಿಯಲ್ಲಿ ಎಂಜಿನಿಯರ್. ಮನೆಯೊಂದನ್ನು ಲೀಸ್‌ಗೆ ಪಡೆದಿದ್ದರು. 3 ವರ್ಷದ ಮಟ್ಟಿಗೆ ಯೋಜನೆ ಇಲ್ಲದಿದ್ದರೂ ನಮ್ಮದೇ ಆಗಿರುವ ಮನೆ ಹೊಂದಬೇಕು ಎಂಬ ಆಸೆ ಪ್ರತಿದಿನವೂ ಒಂದಿಲ್ಲೊಂದು ರೂಪದಲ್ಲಿ ಕಣ್ಣ ಮುಂದೆ ಬರುತ್ತಿತ್ತು. ಸಾಕಷ್ಟು ಬಾರಿ ಪತಿಯ ಬಳಿಯೂ ಈ ವಿಷಯ ಪ್ರಸ್ತಾಪಿಸಿದ್ದೆ~.

`ಮನೆ ನನ್ನವರ ಕಚೇರಿಗೆ ಸಮೀಪದಲ್ಲಿಯೇ ಇರಬೇಕು ಎಂಬುದು ಪ್ರಥಮ ಆದ್ಯತೆ. ವೈಟ್‌ಫೀಲ್ಡ್ ಸುತ್ತಮುತ್ತ ಸಿಕ್ಕರೆ ಅನುಕೂಲ. 30x40 ಸೈಟ್ ಆದರೂ ಪರವಾಗಿಲ್ಲ. ಎರಡಂತಸ್ತಿನದ್ದಾಗಿರಬೇಕು. ಎಂಜಿನಿಯರ್ ಜತೆ ನಾನೂ ಕೈಜೋಡಿಸಿ ವಿನ್ಯಾಸ ಮಾಡಬೇಕು. ವಾಸ್ತು ವಿಷಯಗಳಲ್ಲಿ ರಾಜಿ ಇಲ್ಲ. ಅದರ ಒಳಿತು-ಕೆಡುಕು ಯೋಚಿಸಿಯೇ ಮನೆ ನಿರ್ಮಿಸುವುದು~.

`ಕೆಳ ಅಂತಸ್ತಿನ ಎರಡು ರೂಮುಗಳಲ್ಲಿ ಒಂದು ನಮಗೆ, ಇನ್ನೊಂದು ಮನೆಗೆ ಬರುವ ಅತಿಥಿಗಳಿಗೆ. ಮಹಡಿ ಮೇಲೆಯೂ ಎರಡು ಬೆಡ್‌ರೂಮ್ ಇದ್ದರೆ ಮಕ್ಕಳಿಗಾಗುತ್ತದೆ. ಹಜಾರ ಚಿಕ್ಕದಾದರೂ ಪರವಾಗಿಲ್ಲ, ಅಡುಗೆ ಮನೆ ವಿಶಾಲವಾಗಿರಬೇಕು. ಅಲ್ಲೇ ಡೈನಿಂಗ್ ಟೇಬಲ್ ಇಟ್ಟು ಆರು ಮಂದಿ ಕೂತು ಊಟ ಮಾಡುವಂತಿರಬೇಕು.  

 ಎರಡು ಶೌಚಾಲಯಗಳಿದ್ದರೆ ಒಂದು ವೆಸ್ಟರ್ನ್ ಪದ್ಧತಿಯಲ್ಲಿರಬೇಕು, ಇನ್ನೊಂದು ಭಾರತೀಯ ಪ್ರಕಾರದ್ದು. ಊರಿನಿಂದ ನಮ್ಮ ಕುಟುಂಬಸ್ಥರು ಬಂದರೆ ಖಂಡಿತಾ ಅವರು ವಿದೇಶಿ ಶೌಚಾಲಯ ಬಳಸರು~! ಎಲ್ಲಾ ವಿಷಯಗಳನ್ನೂ ಪತಿಯೊಂದಿಗೆ ಚರ್ಚಿಸಿದ್ದೇನೆ. ನನ್ನ ಕನಸಿಗೆ ಅವರ ಪ್ರೇರಣೆಯಂತೂ ಇದ್ದೇ ಇದೆ. ಸೂಕ್ತ ಜಾಗದ ಹುಡುಕಾಟದಲ್ಲಿದ್ದೇವೆ. ಶೀಘ್ರದಲ್ಲಿ ಕನಸು ನನಸಾಗುತ್ತದೆಂಬ ನಿರೀಕ್ಷೆಯಿದೆ~.
-ಹರ್ಷಿಣಿ, ಗೃಹಿಣಿ
 

`ಕನಸಾಗೇ ಉಳಿಯುವುದೇ?~
`ಸಿಲಿಕಾನ್ ಸಿಟಿಯಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವ ನನ್ನ ಕನಸು ಹಾಗೇ ಉಳಿಯುತ್ತದೇನೋ ಎಂಬ ಭಯ ಕಾಡುತ್ತಿದೆ. ಕಳೆದ 25 ವರ್ಷಗಳಿಂದ ಮೂರು ಬಾರಿ ಬಾಡಿಗೆ ಮನೆ ಬದಲಾಯಿಸಿದ್ದೇವೆ. ಹಾಸನದಿಂದ ಮದುವೆಯಾಗಿ ಬಂದ ಹೊಸತರಲ್ಲಿ ಬೆಂಗಳೂರು ಇಷ್ಟು ಬೆಳೆದಿರಲಿಲ್ಲ. ನಾವು ಈಗಿರುವ ನಾಗರಭಾವಿ ಬೆಂಗಳೂರಿನ ಭಾಗವಾಗಿರಲಿಲ್ಲ. ಆಗ ಬಾಡಿಗೆ ಮನೆಯೇ ಆರಾಮದಾಯಕವಾಗಿತ್ತು. ಸ್ವಂತ ಮನೆ ಬೇಕು ಎನಿಸುತ್ತಿರಲಿಲ್ಲ. ಈಗ ಬೇಕು ಎನಿಸಿದರೂ ಕೊಳ್ಳಲಾಗುತ್ತಿಲ್ಲ~.

`ಕನಿಷ್ಠ ಮೂರು ಬೆಡ್ ರೂಂಗಳ ಮನೆ ಬೇಕು. ನಾವು ಬದುಕಿದಂತೆ ಮಗ ಸೊಸೆ, ಮೊಮ್ಮಕ್ಕಳು ಒಂದೇ ಕೊಠಡಿ ಹಂಚಿಕೊಳ್ಳಲು ಈಗ ಸಾಧ್ಯವಿಲ್ಲವಲ್ಲ. ಟೀವಿ ರೂಂ ವಿಶಾಲವಾಗಿರಬೇಕು. ದೇವರ ಕೋಣೆ ಅದಕ್ಕೆ ಅಂಟಿಕೊಂಡಿರಬೇಕು. ಹಬ್ಬ-ಪೂಜೆ ದಿನಗಳಲ್ಲಿ ಹಾಲ್‌ನಲ್ಲಿ ಕುಳಿತೇ ಪೂಜೆ ವೀಕ್ಷಿಸುವಂತಿರಬೇಕು.
 
ಹತ್ತು ಮಂದಿ ಮಲಗುವಷ್ಟು ಜಾಗವೂ ಅಲ್ಲಿರಬೇಕು. ಅಡುಗೆ ಮನೆ ಚಿಕ್ಕದಾದರೂ ಪರವಾಗಿಲ್ಲ. ಅಡುಗೆ ಮಾಡುವವರು ಆರಾಮವಾಗಿ ನಿಂತು ಕೆಲಸ ಮಾಡುವಷ್ಟು ಜಾಗವಿದ್ದರೂ ಸಾಕು. 

 `ಮನೆ ಡ್ಯೂಪ್ಲೆಕ್ಸ್ ಮಾದರಿಯಲ್ಲಿದ್ದರೆ ಅನುಕೂಲ. ಒಳಗಿನಿಂದಲೇ ಮೇಲೆ ಹತ್ತಬಹುದು. ಹೊರಗಿನಿಂದ ಮನೆ ಚಿಕ್ಕದಾಗಿ ಕಂಡರೂ ಓಳಗೆ ಸಾಕಷ್ಟು ಜಾಗ ಸಿಗುತ್ತದಲ್ಲಾ. ಅಲಂಕಾರಕ್ಕೆ ಹೆಚ್ಚು ಒತ್ತು ಕೊಡುವವಳು ನಾನು. ಹಾಗಾಗಿ ಮನೆಯೊಳಗೇ ಉದ್ಯಾನ ಸೃಷ್ಟಿಸಿಕೊಳ್ಳುತ್ತೇನೆ. 

 ಅದಕ್ಕೆಲ್ಲಾ ಸಾಕಷ್ಟು ಜಾಗ ಇರಬೇಕು. ದೊಡ್ಡ ಮನೆ ಕಟ್ಟುವ ಮೊದಲು ಸ್ವಚ್ಛವಾಗಿ ಇಟ್ಟುಕೊಳ್ಳಬಹುದೇ ಎಂದು ಎರಡು ಬಾರಿ ಯೋಚಿಸಿಬೇಕು. ಕಡಿಮೆ ಖರ್ಚಿನಲ್ಲಿ ಉತ್ತಮ ವಿನ್ಯಾಸದ ಮನೆ ಕಟ್ಟಬೇಕು ನೋಡಿ~...
- ಯಶೋಧಾ, ಗೃಹಿಣಿ
 

`ತುಳಸಿಕಟ್ಟೆ. ಪುಟ್ಟ ಉದ್ಯಾನ~

`ನನ್ನ ಕನಸಿನ ಮನೆಗೆ ಇತ್ತೀಚೆಗಷ್ಟೇ ರೆಕ್ಕೆ ಪುಕ್ಕ ಬಲಿತಿದೆ. ಕೊನೆಗೂ ಸೈಟ್ ಸಿಕ್ಕಿದೆ. ಕಟ್ಟಡ ಕಾರ್ಯ ಆರಂಭವಾಗಿದೆ. ಆರ್ಕಿಟೆಕ್ಟ್ ಎಂಜಿನಿಯರ್ ಕಟ್ಟಡದ ನೀಲನಕ್ಷೆ ತಯಾರಿಸಿದ್ದರೂ ನಾನೇ ಮುಂದೆ ನಿಂತು ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಮನೆಯ್ಲ್ಲಲಿ ದೇವರ ಕೋಣೆ ಅಂದವಾಗಿ, ವಿಶಾಲವಾಗಿ ಇರಬೇಕು ಎಂಬುದು ನನ್ನಾಸೆ. ಪತಿಯ ಒತ್ತಾಸೆಯೂ ಅದಕ್ಕೆ ಇದೆಯೆನ್ನಿ~.

`ಅಂಗಳದಲ್ಲೇ ಒಂದು ತುಳಸಿಕಟ್ಟೆ. ಅದರ ಮುಂದೆ ಪುಟ್ಟ ಉದ್ಯಾನ. ಸದಾ ಕೆಂಗುಲಾಬಿ ಅಲ್ಲಿ ಅರಳಬೇಕು. ಔಷಧ ಸಸ್ಯಗಳಿಗೂ ಅಲ್ಲಿ ಜಾಗವಿರಬೇಕು. ಪೇರಳೆ, ಸಪೋಟ, ಪಪ್ಪಾಯಿ, ದಾಳಿಂಬೆ ಗಿಡಗಳು, ಹರಿವೆ ಸೊಪ್ಪು, ಟೊಮೆಟೊ ಗಿಡ ನೆಡುವಷ್ಟಾದರೂ ಜಾಗ ಬೇಕು. ಇಡೀ ಜೀವನದಲ್ಲಿ ಸ್ವಂತ ಮನೆ ಕಟ್ಟಿಸುವುದು ಒಂದೇ ಬಾರಿಯಲ್ಲವೇ?~ 
`ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮಾತಿನ ನಿಜಾಂಶ ಈಗ ಅರಿವಾಗುತ್ತಿದೆ. 

 ಕಾರ್ಮಿಕರನ್ನು ಹೊಂದಿಸುವ ಕಷ್ಟವನ್ನಂತೂ ಕೇಳುವುದೇ ಬೇಡ. ಎರಡು ದಿನ ಬಂದರೆ ನಾಲ್ಕು ದಿನ ಕಣ್ಮರೆಯಾಗುತ್ತಾರೆ. ಆ ವಿಷಯದಲ್ಲಿ ಕಂಟ್ರಾಕ್ಟರ್ ಜತೆಯಲ್ಲೂ ಜಗಳವಾಡಿದ್ದೆ.  `ಗೋಡೆಗೆ ಇಟ್ಟಿಗೆ ಬದಲಿಗೆ ಜಲ್ಲಿ, ಕಬ್ಬಿಣ, ಸಿಮೆಂಟ್, ಮರಳು ಮಿಶ್ರಣದ ಮೌಲ್ಡೆಡ್ ಸ್ಲ್ಯಾಬ್ ಬಳಸುತ್ತಿದ್ದೇವೆ. ಇದರಿಂದ ಹಣವೂ ಉಳಿಯುತ್ತದೆ.

ತಾರಸಿಯ ಮೇಲೆ ಹಂಚು ಹಾಕುವ ಮೂಲಕ ನಗರದಲ್ಲಿ ಹಳ್ಳಿ ಮನೆ ನಿರ್ಮಿಸಿಕೊಳ್ಳಬೇಕೆಂಬುದು ನನ್ನ ಆಸೆ. ನಾನೂ ಉದ್ಯೋಗಕ್ಕೆ ತೆರಳುವುದರಿಂದ ಮನೆ ಕಟ್ಟುವ ಪ್ರತಿ ಹಂತವನ್ನೂ ಗಮನಿಸಲಾಗುತ್ತಿಲ್ಲ. ಪ್ರತಿನಿತ್ಯ ಒಮ್ಮೆಯಾದರೂ ಸೈಟ್‌ಗೆ ಭೇಟಿ ನೀಡುತ್ತೇನೆ, ಆಗಿರುವ ಕೆಲಸಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತೇನೆ~.
-ಜ್ಯೋತಿ, ಗೃಹಿಣಿ

`ಅಪಾರ್ಟ್‌ಮೆಂಟ್ ಆಪ್ತವಾಗಿದೆ!~
`ಸ್ವಂತ ಮನೆ ಹೊಂದಬೇಕೆಂದು ಅಲೆದಾಡಿದ ದಿನಗಳು ಅಷ್ಟಿಷ್ಟಲ್ಲ. ಕೊನೆಗೂ ಅದು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಅಪಾರ್ಟ್‌ಮೆಂಟ್‌ವೊಂದರ ಮೂರನೇ ಮಹಡಿಯಲ್ಲಿರುವ ನಾಲ್ಕು ಮನೆಗಳ ಪೈಕಿ ಒಂದನ್ನು ಕೊಂಡುಕೊಂಡೆವು.    ಅದೃಷ್ಟವಶಾತ್ ನಾವು ಕೊಳ್ಳುವಾಗ ಅದಿನ್ನೂ ನಿರ್ಮಾಣ ಹಂತದಲ್ಲಿತ್ತು. ಅವರ ವಾಸ್ತುಪದ್ಧತಿಯನ್ನು ತುಸು ಬದಲಾಯಿಸಿ ನಮಗೆ ಬೇಕಾದಂತೆ ಕಟ್ಟಿಕೊಳ್ಳಲು ಇದು ನೆರವಾಯಿತು~.

`ಮನೆಯೊಳಗೆ ಧಾರಾಳವಾಗಿ ಗಾಳಿ ಬರಬೇಕು, ಸಾಧ್ಯವಾದಷ್ಟು ಸ್ವಚ್ಛಂದವಾಗಿರಬೇಕು ಎಂಬ ಕಾರಣಕ್ಕೆ ಬಾಲ್ಕನಿಗೆ ಗ್ಲಾಸ್ ಹಾಕಿಸಿದೆ. ಮುಂಜಾನೆ ಹಾಗೂ ಸಂಜೆ ವೇಳೆ ಕಿಟಕಿ ತೆರೆದಿಟ್ಟರೆ, ಮನೆಯೊಳಗೇ ತಂಪಾದ ಗಾಳಿ ಬಂದು     `ಹಾಯ್~ ಎನಿಸುತ್ತದೆ. ನೆಲದಿಂದ ಹಾಕಲು ಆಯೋಜಿಸಿದ್ದ ಗ್ಲಾಸ್‌ಗಳನ್ನು ಮೂರಡಿ ಎತ್ತರಕ್ಕೆ ಏರಿಸಿದ್ದರಿಂದ ಮನೆ ಮಕ್ಕಳು ಕಾಲು ಜಾರಿ ಬೀಳುವ ಪ್ರಮೇಯವೂ ಇಲ್ಲ~.

`ಅವರ ಯೋಜನೆ ಪ್ರಕಾರ ಬಚ್ಚಲು ಕೋಣೆ ಸಣ್ಣದಿತ್ತು. ಬಾತ್ ರೂಂನಲ್ಲಿ ಕುಳಿತು ಮಗುವನ್ನು ಸ್ನಾನ ಮಾಡಿಸುವಷ್ಟು ಜಾಗ ಬೇಕು ಎಂಬ ಕಾರಣಕ್ಕೆ ಸಣ್ಣದಾಗಿದ್ದ ಅವರ ಯೋಜನೆಯಲ್ಲಿ ತುಸು ಬದಲಾವಣೆ ತಂದು ಅದನ್ನು ತುಸು ದೊಡ್ಡದಾಗಿಸಿದೆವು.  ಬೆಡ್ ರೂಂ ಕಿಟಕಿಯಿಂದ ನೋಡಿದರೆ ನನ್ನ ಹೂತೋಟ ಕಾಣಿಸಬೇಕು, ಅಲ್ಲಿ ಬೆಳೆದ ಗುಲಾಬಿ ಹೂವುಗಳು ಕಿಟಕಿಯ ಮೂಲಕ ಒಳಗೆ ಇಣುಕಬೇಕು ಎಂದುಕೊಂಡಿದ್ದೆ.

ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕನೇ ಮಹಡಿಯ ಮನೆ ಸಿಕ್ಕಿದ್ದರಿಂದ ಆ ಕನಸೂ ನನಸಾಗಲಿಲ್ಲ. ಮಕ್ಕಳಿಗಾಗಿ ಮನೆಯ ಒಂದು ಗೋಡೆಯನ್ನು ಬೋರ್ಡ್‌ನಂತೆ ಇರಿಸಿದ್ದೇನೆ. ಅವರಿಗೆ ತರಗತಿಯಲ್ಲಿಯಂತೆ ಮನೆ ಪಾಠ ಹೇಳಿಕೊಡಲು, ಇಲ್ಲವೇ ಬರೆದು ಕಲಿಯಲು ನೆರವಾಗಲೆಂದೇ ಬಿಳಿ ಹಲಗೆ ಹಾಕಿಸಿದ್ದೇವೆ~. ಒಟ್ಟಿನಲ್ಲಿ ನಮಗೆ ಬೇಕಾದ ಸ್ಥಳದಲ್ಲಿ ಪೂರ್ತಿಯಾಗಿ ನಮ್ಮಿಷ್ಟದಂತೆ ಅಲ್ಲವಾದರೂ ಒಂದಷ್ಟು ಕನಸುಗಳನ್ನು ಈ ಮನೆ ನನಸು ಮಾಡಿದೆ~.
-ವಿದ್ಯಾ ರಾಧಾಕೃಷ್ಣ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT