ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದು ಭಾವದ ಮಾತು

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ನನ್ನ ಊರು ಹಾಸನ ಹತ್ತಿರವಿದೆ. ಶಂಖ ಎಂದು ಅದರ ಹೆಸರು. ತಾತ (ಅಮ್ಮನ ತಂದೆ) ಮೇಷ್ಟರಾಗಿದ್ದರು. ಅವರಿಗೆ ಅವಾರ್ಡುಗಳೂ ಸಂದಿದ್ದವು. ಅವರೇ ನನಗೆ ಮಾದರಿ. ಆಡಿದರೆ ಮೇಷ್ಟರಂತೆ ಮಾತನಾಡಬೇಕೆಂಬ ಸಂಕಲ್ಪ.

ಮೊದಲಿನಿಂದಲೂ ಆಡುವ ಮಾತಿಗೆ ಮೇಷ್ಟರ ಧಾಟಿ ಇರಬೇಕು ಎಂದುಕೊಂಡವನು ನಾನು. ಅದೇ ವೃತ್ತಿ ಹಿಡಿಯುವ ಬಯಕೆಯೂ ಇತ್ತು. ಆದರೆ, ಅದಾಗಲಿಲ್ಲ. ಮಾತಿನ ಕುರಿತ ಧೋರಣೆಯಂತೂ ಬದಲಾಗಲಿಲ್ಲವೆನ್ನಿ.

ನನ್ನ್ಲ್ಲಲಿ ಮಾತು ಹೇಗೆ ಹುಟ್ಟಿತು ಎನ್ನುವುದನ್ನು ನೆನಪಿಸಿಕೊಳ್ಳುವುದು ಕಷ್ಟ. ಆದರೆ, ವ್ಯಂಗ್ಯ ಎಲ್ಲಿ ಹುಟ್ಟಿತು ಎಂಬುದನ್ನು ಖಾತರಿಯಾಗಿ ಹೇಳಬಲ್ಲೆ. ಸುಳ್ಳಾಡುವವರು, ನಟಿಸುವವರು ಒಂದಿಲ್ಲೊಂದು ಬಗೆಯಲ್ಲಿ ನಮ್ಮನ್ನು ಎದುರಾಗುತ್ತಲೇ ಇರುತ್ತಾರೆ. ಅವರು ಸುಳ್ಳಾಡುತ್ತಿದ್ದಾರೆಂಬುದು ನಮಗೆ ಗೊತ್ತಿರುತ್ತದೆ. ಅಂಥ ಜನರನ್ನು ಕಂಡೇ ನನ್ನಲ್ಲಿ ಒಂದು ಬಗೆಯ ಸಿಟ್ಟು ಹುಟ್ಟಿದ್ದು. ಅದರ ಮಾತಿನ ರೂಪವೇ ವ್ಯಂಗ್ಯ.

ಸೋಗುಹಾಕುವವರು, ಸುಮ್ಮಸುಮ್ಮನೆ ಏನೇನನ್ನೋ ನಟಿಸುವವರು ಅರೆಬೆಂದ ಕಾಳುಗಳಾಗಿರುತ್ತಾರೆ. ನನ್ನ ಬದುಕಿನಲ್ಲಿ ಅಂಥವರ ವಿರುದ್ಧ ನಾನು ಕೂಡಿಟ್ಟ ಮಾತುಗಳಿಗೆ ಲೆಕ್ಕವಿಲ್ಲ. ಅವೆಲ್ಲವೂ ಅವಕಾಶ ಸಿಕ್ಕಾಗ ಹೊಮ್ಮುತ್ತವಷ್ಟೆ.

`ಅನಾವರಣ~ ಧಾರಾವಾಹಿ ನೋಡಿದವರು ಸ್ತ್ರೀಪಾತ್ರಗಳಲ್ಲಿ ನಾನು ಹೇಳುವ ಮಾತುಗಳ ಬಗ್ಗೆ ಆಸಕ್ತಿಯಿಂದ ಕೇಳಿದರು. ಪುರುಷನಾಗಿ ಆ ಮಾತುಗಳನ್ನು ಬರೆದದ್ದು ಹೇಗೆ ಎಂಬುದು ಅನೇಕರ ಪ್ರಶ್ನೆ. ಅದಕ್ಕೆ ಮೂಲ ಕಾರಣ ನನ್ನ ಅಮ್ಮ. ಆಕೆ ತನ್ನ ಕಣ್ಣುಗಳಲ್ಲೇ ಎಲ್ಲವನ್ನೂ ಹೇಳುತ್ತಿದ್ದಳು. ಅವಳನ್ನು ನೋಡಿದರೆ, ಏನು ಹೇಳುತ್ತಿದ್ದಾಳೆ ಎಂಬುದು ಥಟ್ಟನೆ ಅರ್ಥವಾಗುತ್ತಿತ್ತು.

ಭೂಮಿಯ ಸಹನಾಶಕ್ತಿ ಕಂಡಾಗಲೆಲ್ಲಾ ಅದನ್ನು ಹೆಣ್ಣಿಗೆ ಹೋಲಿಸುವ ಉಪಮೆ ಕಣ್ಣಮುಂದೆ ಬರುತ್ತದೆ. ಗಂಡಸು ಬೇಗ `ರುಟೀನಿಗೆ~ ಬಿದ್ದುಬಿಡುತ್ತಾನೆ. ಹೆಣ್ಣು ಹಾಗಲ್ಲ. ತನಗಿಷ್ಟವಿಲ್ಲದ ಮಾತು ಕಿವಿಮೇಲೆ ಬಿದ್ದರೆ ಗಂಡು ಮನೆಯಿಂದ ಹೊರನಡೆಯುತ್ತಾನೆ. ಹೆಣ್ಣು ಹಾಗೆ ಮಾಡುವುದಿಲ್ಲ. ಇದ್ದಲ್ಲೇ ಎಲ್ಲವನ್ನೂ ಎದುರಿಸುತ್ತಾಳೆ.

ಮನೆಯಿಂದ ಹೊರನಡೆಯುವುದು ಗಂಡಿನ ಜಾಯಮಾನವಾದರೆ, ಎಲ್ಲಿ ಹೋದರೂ ರಾತ್ರಿ ಮನೆಗೇ ಬರುವ ಸಹಜವಾದ ಬುದ್ಧಿ ನಮ್ಮ ಸಮಾಜದ ಹೆಣ್ಣಿಗೆ ಇದೆ. ಇಲ್ಲಿನ ಮಧ್ಯಮವರ್ಗದ ಹೆಣ್ಣುಮಕ್ಕಳು ಎದುರಿಸುವ ಅಗಾಧವಾದ ಶಕ್ತಿ ಕಂಡು ನಾನು ನಿಬ್ಬೆರಗಾಗಿದ್ದೇನೆ. ಹಾಗಾಗಿ ರುಟೀನನ್ನು ಮೀರಿದ ಸಂಗತಿಗಳೆಲ್ಲವನ್ನೂ ಹೆಣ್ಣಿನಿಂದಲೇ ಹೇಳಿಸುವುದು ನನ್ನಿಂದ ಸಾಧ್ಯವಾದದ್ದು.

ಮಾಧ್ಯಮಕ್ಕೆ ನಾವು ಮಾತು ಬರೆಯುವಾಗ ಸಹಜತೆಯ ನೆಪದಲ್ಲಿ ಮಾಮೂಲಿ ಔಪಚಾರಿಕ ಮಾತನ್ನಷ್ಟೇ ಬರೆಯುತ್ತೇವೆ. ನನಗದು ಬೇಕಿರಲಿಲ್ಲ. ಭಾವದ ಬಗ್ಗೆ ನಾನು ಮಾತನಾಡಬೇಕಿತ್ತು. ಅದಕ್ಕೆ ಬೇಕಾದ ಭಾಷೆ ಬೇರೆಯೇ ಹೌದು. ಯಾಕೆಂದರೆ, ಅದನ್ನು ನಾವು ನಿತ್ಯದ ಬದುಕಿನಲ್ಲಿ ಆಡುವುದೇ ಇಲ್ಲ. ನೋವನ್ನು ಕೂಡ ಹೇಳಿಕೊಳ್ಳದೆ ಒಳಗೊಳಗೇ ನುಂಗಿಕೊಂಡು ಬಿಡುತ್ತೇವೆ.

ನಾನು ಆ ಭಾವಕ್ಕೆಲ್ಲಾ ಆಡದೇ ಮರೆತ ಮಾತನ್ನು ಕೊಟ್ಟೆ. ಅದು ಕೆಲವರಿಗೆ ಕಷ್ಟದ ಮಾತು ಎನ್ನಿಸಿತು. ಕಪಾಳಕ್ಕೆ ಹೊಡೆಯುವುದನ್ನು ತೋರಿಸದೆ, ಹೊಡೆಯುವಷ್ಟೇ ತೀವ್ರವಾದ ಮಾತಿನ ಏಟು ಕೊಡುವುದು ನನ್ನ ಧಾಟಿ. `ಅನಾವರಣ~ದಲ್ಲಿ ಸಾಕಷ್ಟು ಮಟ್ಟಿಗೆ ಅದು ಯಶಸ್ವಿಯಾಯಿತು.

ರವೀಂದ್ರನಾಥ ಟ್ಯಾಗೋರರ ಬರವಣಿಗೆಯಲ್ಲಿ ಮೂಡಿದ ಸ್ತ್ರೀ ಪಾತ್ರಗಳು, ಅನಕೃ ಕಾದಂಬರಿಗಳಿಂದಲೂ ನಾನು ಪ್ರಭಾವಿತನಾಗಿದ್ದೇನೆ. ಅದಕ್ಕೇ ಇಂಥ ಮಾತುಗಳು ಹೊಮ್ಮುತ್ತಿವೆ. ಆದರೆ, ಈ ಮಾತು ಆಡುವುದು, ಬರೆಯುವುದು ಸಲೀಸಲ್ಲ. ಆದಷ್ಟೂ ಕಾಲ ಅಂಥ ಮಾತುಗಳು ತುಂಬಾ ಮುಖ್ಯ ಅನ್ನುವುದೇ ನನ್ನ ಭಾವನೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT