ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ದೊಡ್ಡ ಕುರ್ಚಿ ಬೇಕಾಗಿದೆ!

Last Updated 19 ಅಕ್ಟೋಬರ್ 2012, 9:15 IST
ಅಕ್ಷರ ಗಾತ್ರ

ಮೈಸೂರು: “ನಮಗೆ ನೆಲ ಬೇಡ. ಕುರ್ಚಿ ಬೇಕು. ಅದೂ ದೊಡ್ಡ ಕುರ್ಚಿಯೇ ಬೇಕು. ಜಗತ್ತೆಲ್ಲಾ ಭಿಕ್ಷುಕರ ನಿಲಯ ವಾಗಿದೆ. ಕೈಯಲ್ಲಿ ಹಿಡಿದ ಭಿಕ್ಷಾ ಪಾತ್ರೆ ಯಲ್ಲ. ಎದೆಯಲ್ಲಿ ಹಿಡಿದ ಭಿಕ್ಷಾ ಪಾತ್ರೆ ತುಂಬುವುದೇ ಇಲ್ಲ. ಸಾವಿರ ಕೋಟಿ, ಲಕ್ಷ ಕೋಟಿ ರೂಪಾಯಿಗಳನ್ನು ಹಾಕಿ ದರೂ ಅದು ತುಂಬುತ್ತಲೇ ಇಲ್ಲ. ಒಂದು ಮಾತು ನಿಜ. ಕೈ, ಹೃದಯ ಸ್ವಚ್ಛ ಇದ್ದವರು ಕೊಟ್ಟರೆ ಮಾತ್ರ ಅದಕ್ಕೆ ಬೆಲೆ.”

ನಮ್ಮ ದೇಶದ ಜನರ ಆಸೆ ಬುರುಕತನಕ್ಕೆ ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಚಾಟಿ ಬೀಸಿದ್ದು ಹೀಗೆ.

ನಗರದ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಹಾ ವಿದ್ಯಾ ಗಣಪತಿ ದೇವಾಲಯದ ರಜತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನ ಮಾಲೆಯಲ್ಲಿ ಎರಡನೇ ದಿನವಾದ ಗುರುವಾರ ಕೂಡ ಅವರ ಮಾತು ಎಲ್ಲರನ್ನೂ ತಟ್ಟಿತು. ಅವರು ಹೇಳಿದ್ದು ಎಷ್ಟೆಲ್ಲಾ ಇತ್ತು. ಒಂದಿಷ್ಟು ಇಲ್ಲಿದೆ.

“ನಮ್ಮ ಮನೆಯಲ್ಲಿ ಜಗತ್ತಿನ ಎಲ್ಲ ವಸ್ತುಗಳೂ ಇವೆ. ಜಪಾನ್, ಚೀನಾ, ಅಮೆರಿಕದಿಂದ ತಂದ ವಸ್ತುಗಳು ಇವೆ. ಕೋಟ್ಯಂತರ ರೂಪಾಯಿಗಳ ವಸ್ತುಗಳು ನಮ್ಮ ಮನೆಯನ್ನು ತುಂಬಿಕೊಂಡಿದೆ. ಆದರೆ ಕೇವಲ ಒಂದು ಪೈಸೆ ಬೆಲೆಯ ಹಣತೆಯೇ ಇಲ್ಲ. ನಮ್ಮ ಮನೆ, ಬ್ಯಾಂಕ್ ಎಲ್ಲಾ ಶ್ರೀಮಂತವಾಗಿವೆ, ಆದರೆ ನಾವು ಮಾತ್ರ ಬಡವರಾಗಿಯೇ ಉಳಿದಿದ್ದೇವೆ”.

“ನನ್ನ ಸಾಮ್ರಾಜ್ಯ ನನ್ನ ಎದೆಯೊಳಗೇ ಇದೆ. ಅಲ್ಲಿ ತೃಪ್ತಿ ತುಂಬಿಕೊಂಡಿದೆ. ನಾನೊಬ್ಬ ರಾಜ. ಯಾವ ರಾಜನಿಗೂ ನಾನು ಕಡಿಮೆ ಅಲ್ಲ ಎಂದು ಶೇಕ್ಸ್‌ಪಿ ಯರ್ ಹೇಳುತ್ತಾನೆ. ತುಕಾರಾಂನಂತಹ ಬಡವರೂ ಕೂಡ ನನ್ನಂತಹ ಶ್ರೀಮಂತ ನಿಲ್ಲ ಎನ್ನುತ್ತಾನೆ. ಹೃದಯದಲ್ಲಿ ಜ್ಞಾನದ ಬೆಳಕು ಇದ್ದರೆ ತೃಪ್ತಿ ಇರುತ್ತದೆ. ಬದು ಕನ್ನು ಚೆಲ್ಲಾಡೋದಲ್ಲ. ಅರಳಿಸಬೇಕು”.

“ಅಲ್ಲಮ ಪ್ರಭು ಮಾತು ಜ್ಯೋತಿರ್ಲಿಂಗ ಎಂದರು. ಕರ್ನಾಟಕದ ಜ್ಞಾನೇಶ್ವರ ಎಂದೇ ಗುರುತಿಸಲಾದ ಚನ್ನಬಸವಣ್ಣ ಮಾತಿನಲ್ಲಿ ಬೆಳಕಿರಬೇಕು ಎಂದರು. ಮನದ ಮೈಲಿಗೆಯ ಕಳೆಯ ಲೆಂದು ಗೀತ ಮಾತೆಂಬ ಜ್ಯೋತಿಯನ್ನು ಹಚ್ಚಿಟ್ಟರು. ತಲೆಯಿಂದ ಹೃದಯಕ್ಕೆ ಬಂದು ಗೀತವಾದ ಮಾತುಗಳನ್ನು ಶರಣರು, ಋಷಿಗಳು ಆಡಿದರು. ಬುದ್ಧ ನಿಲ್ಲು ಎಂದಾಗ ಅಂಗುಲಿಮಾಲ ನಿಂತು ಬಿಟ್ಟ. ಬುದ್ಧನ ಮಾತಿಗೆ ಅಂತಹ ಶಕ್ತಿ ಇತ್ತು. ಕಾಡಿನಲ್ಲಿದ್ದ ಅಂಗುಲಿಮಾಲ ಮನಸ್ಸನ್ನು ನಿಲ್ಲಿಸಿಬಿಟ್ಟ. ನಾಡಿನಲ್ಲಿರುವ ನಮ್ಮ ಮನಸ್ಸುಗಳು ಹರಿದಾಡುತ್ತವೆ. ಯಾಕೆ ಹರಿ ದಾಡುತ್ತವೆ ಎನ್ನುವುದು ಪಕ್ಕಾ ನಮಗೆ ಗೊತ್ತಿರುವುದಿಲ್ಲ. ಮಾತಿನಲ್ಲಿ ಬೆಳಕಿದೆ. ಕೇವಲ ವಸ್ತುವನ್ನು ತೋರಿಸುವ ಬೆಳಕಲ್ಲ. ಸತ್ಯವನ್ನು ತೋರಿಸುವ ಬೆಳಕು ಅದು. ಸತ್ಯವನ್ನು ಅರಿಯುವುದು, ಸತ್ಯವನ್ನು ಪ್ರೀತಿಸು ವುದು ಮತ್ತು ಸತ್ಯವನ್ನು ಅನುಭವಿ ಸುವುದು ಮುಖ್ಯ.”

“ಪಕ್ಷಿಗಳು, ಪ್ರಾಣಿಗಳು ಬದುಕನ್ನು ಕಟ್ಟಿಕೊಳ್ಳುತ್ತವೆ. ನಾವೂ ಕೂಡ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಬದುಕಿನ ಭವ್ಯತೆ, ದಿವ್ಯತೆಯನ್ನು ಅನುಭವಿಸ ಬೇಕು. ಬಟ್ಟೆ, ಮುಖ ಎಷ್ಟೇ ಸುಂದರವಾಗಿದ್ದರೂ ಪ್ರಸನ್ನತೆ ಇರದಿದ್ದರೆ ಉಪಯೋಗವಿಲ್ಲ. ಬದುಕಿನಲ್ಲಿ ಪ್ರೇಮ ಇಲ್ಲದಿದ್ದರೆ ಎಷ್ಟೇ ಜ್ಞಾನವಿದ್ದರೂ ಆನಂದವನ್ನು ಅನುಭವಿಸಲಾಗದು.

ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಕೇಳುವುದೇ ಒಂದು ಆನಂದ. ಇನ್ನೂ 6 ದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಅವರ ಪ್ರವಚನ ಇರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT