ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಮಗೆ ಸ್ವಂತ ಮನೆಯಿಲ್ಲ, ನೆಲವೂ ಇಲ್ಲ...'

ಅಲೆಮಾರಿ ಸಮುದಾಯಗಳ ಹಾಡು-ಪಾಡು
Last Updated 20 ಡಿಸೆಂಬರ್ 2012, 9:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ನಮಗೆ ಸ್ವಂತದ್ದು ಎಂದು ಹೇಳಿಕೊಳ್ಳಲು ಮನೆಗಳಿಲ್ಲ. ನಮ್ಮದು ಅಂತ ಹೇಳಿಕೊಳ್ಳಲು ಗಟ್ಟಿ ನೆಲವೂ ಇಲ್ಲ. ಒಂದೇ ಕಡೆ ನೆಲೆ ನಿಂತುಕೊಂಡರೆ, ಹೊಟ್ಟೆಗೇನು ಮಾಡಬೇಕೆಂದು ಚಿಂತೆ ಕಾಡುತ್ತದೆ.

ದುಡಿಮೆಗಾಗಿ ಊರೂರುಗಳನ್ನ ಅಲೆಯುತ್ತ ಹೋದರೆ, ಮಕ್ಕಳ ಪಾಲಣೆ-ಪೋಷಣೆ ಹೇಗೆ ಮಾಡಬೇಕೆಂದು ಆತಂಕ ಕಾಡುತ್ತದೆ. ಬದುಕಬೇಕು ಎಂಬ ಛಲ ಎನ್ನುವುದಕ್ಕಿಂತ ಅನಿವಾರ್ಯತೆಯಿದೆ. ಹೀಗಾಗಿಯೇ ನಾವು ಅಲೆಮಾರಿಗಳಾಗಿಯೇ ಉಳಿದಿದ್ದೇವೆ. ಬಹುಶಃ ನಾವು ಹೀಗೆಯೇ ಇರುತ್ತೇವೆ ಒಂದು ಹಂತದವರೆಗೆ....'     
 
`ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಒಂದು ದಿನ ಒಂದು ಹೊತ್ತಿನ ಊಟ ಮಾಡಬಹುದು. ಆದರೆ ಮಾರನೇ ದಿನ ಎರಡು ಹೊತ್ತಿನ ಊಟ ಖಂಡಿತ ಸಿಗುತ್ತದೆ' ಎಂಬ ನಂಬಿಕೆಯೊಂದಿಗೆ ಬದುಕು ಕಂಡುಕೊಳ್ಳಲು ಯತ್ನಿಸುತ್ತಿರುವವರು ಅನ್ಯಗ್ರಹದ ಜೀವಿಗಳಲ್ಲ ಅಥವಾ ದೂರ ವಿದೇಶದ ಜನರೂ ಅಲ್ಲ.

ಇವರು ಜಿಲ್ಲೆಯ ಕುಗ್ರಾಮಗಳಲ್ಲಿನ ಗುಡಿಸಲು ಮತ್ತು ಮುರುಕಲು ಮನೆಗಳಲ್ಲಿ ವಾಸವಿರುವ ಜನರು. ಅಲೆಮಾರಿ ಬುಡಕಟ್ಟು ಸಮುದಾಯದವರು ಎಂದು ಗುರುತಿಸಿಕೊಳ್ಳುವ ಅವರಿಗೆ ಈವರೆಗೆ ಸುಭದ್ರವಾದ ನೆಲೆಯಿಲ್ಲ.   
      
ಅನಾದಿಕಾಲದಿಂದಲೂ ಮಾಡಿಕೊಂಡು ಬರುತ್ತಿರುವ ಸಾಂಪದಾಯಿಕ ಕೆಲಸಕಾರ್ಯಗಳನ್ನು ಬಿಟ್ಟು ಈಗ ಕೂಲಿ ಮಾಡಿಕೊಂಡು ಬದುಕುತ್ತಿರುವ ಈ ಸಮುದಾಯಗಳ ಜನರಲ್ಲಿ ಆತಂಕ ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ತಮ್ಮದು ಯಾವ ಜಾತಿ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ಹೇಳಿಕೊಂಡರೂ ಸರ್ಕಾರಿ ದಾಖಲೆಪತ್ರಗಳಲ್ಲಿ ಆಯಾ ಜಾತಿ-ಜನಾಂಗಗಳ ಕುರಿತು ಮಾಹಿತಿ ಇಲ್ಲದಿರುವುದರಿಂದ ಆಘಾತಕ್ಕೆ ಒಳಗಾಗುತ್ತಾರೆ. ಅತ್ತ ಸಂಕಷ್ಟಗಳನ್ನು ಹೇಳಿಕೊಳ್ಳಲಾಗದೇ, ಇತ್ತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗದೇ ಪರಿತಪಿಸುತ್ತಿದ್ದಾರೆ.      
   
`ಜಿಲ್ಲೆಯಲ್ಲಿ ದೊಂಬರು, ಹಂದಿಜೋಗಿ, ಶಿಳ್ಳೆಕ್ಯಾತ, ಸಿಂದುಳ್ಳು ಸೇರಿದಂತೆ ಇತರ ಅಲೆಮಾರಿ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಅವಿದ್ಯಾವಂತರು. ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ಸೌಲಭ್ಯ ದೊರೆಯುತ್ತದೆ ಎಂಬುದರ ಬಗ್ಗೆ ಕನಿಷ್ಠ ಮಾಹಿತಿಯೂ ಅವರಿಗಿಲ್ಲ.

ಎದುರಿಸುತ್ತಿರುವ ಕಷ್ಟಗಳೆಲ್ಲವೂ ತಮ್ಮ ಹಣೆಬರಹ. ಇದನ್ನು ಯಾರಿಂದಲೂ ತಿದ್ದಲು ಎಂಬ ಭಾವನೆಯಲ್ಲೇ ಬದುಕುತ್ತಿದ್ದಾರೆ. ತಮ್ಮ ಜೀವನ ಇಷ್ಟಕ್ಕೆ ಸೀಮಿತ ಎಂಬುದನ್ನು ತಮ್ಮಷ್ಟಕ್ಕೆ ತಾವೇ ನಿರ್ಧರಿಸಿದ್ದಾರೆ' ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಡಾ.ಬಾಲಗುರುಮೂರ್ತಿ `ಪ್ರಜಾವಾಣಿ'ಗೆ ತಿಳಿಸಿದರು.  
            
`ಸಂಕೋಚ ಮತ್ತು ಆತಂಕದ ಸ್ವಭಾವ ಅವರಲ್ಲಿ ಮನೆ ಮಾಡಿರುವುದರಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ತಮ್ಮ ಬಗ್ಗೆ ಜನರು ಏನೆಂದುಕೊಳ್ಳುತ್ತಾರೋ ಮತ್ತು ತಮ್ಮಿಂದಾ ಯಾವುದಾದರೂ ತಪ್ಪು ಸಂಭವಿಸುವುದೋ ಎಂಬ ಭೀತಿ ಅವರಲ್ಲಿ ಸದಾ ಕಾಡುತ್ತಿರುತ್ತದೆ.

ಹೀಗಾಗಿಯೇ ಅವರು ತಮ್ಮ ಗುರುತು-ಪರಿಚಯವನ್ನು ನೀಡಲು ಹಿಂಜರಿಯುತ್ತಾರೆ. ನೂರಾರು ವರ್ಷಗಳಿಂದ ಅಲೆಮಾರಿ ಜನಾಂಗಗಳು ಹೀಗೆ ಬೆಳೆದುಕೊಂಡು ಬಂದಿದ್ದು, ಆ ಜನರಲ್ಲಿ ದಿಢೀರ್‌ನೇ ಬದಲಾವಣೆ ತರುವುದು ಕಷ್ಟ' ಎಂದು ಅವರು ತಿಳಿಸಿದರು.

`ಜಿಲ್ಲೆಯ ವಿವಿಧೆಡೆ ವಾಸವಿರುವ ಅಲೆಮಾರಿ ಸಮುದಾಯಗಳ ಜನರನ್ನು ಪತ್ತೆ ಮಾಡಿ, ಅವರಲ್ಲಿ ಸಂಘಟನಾ ಮನೋಭಾವ ಮೂಡಿಸುತ್ತಿದ್ದೇವೆ. ಆರಂಭದಲ್ಲಿ ಒಂದೆಡೆ ಸೇರಲು ಹಿಂಜರಿಕೆ ತೋರುತ್ತಿದ್ದವರು ಈಗ ಒಬ್ಬೊಬ್ಬರಾಗಿ ಬರತೊಡಗಿದ್ದಾರೆ. ಅಲೆಮಾರಿ ಸಮುದಾಯಗಳ ಜನರನ್ನು ಗುರುತಿಸುವಂತಹ ಮತ್ತು ಅವರಿಗೆ ಜೀವನೋಪಾಯ ಕಲ್ಪಿಸುವಂತಹ ಕಾರ್ಯ ಆಗಬೇಕಿದೆ.

ಈ ವಿಷಯವನ್ನು ಹಲವಾರು ಬಾರಿ ಗಮನಕ್ಕೆ ತಂದಿದ್ದೇವೆಯಾದರೂ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಕ್ರಮ ಕೈಗೊಳ್ಳಬೇಕಿದೆ' ಎಂದು ಸಂಘಟನೆಯ ಕಾರ್ಯದರ್ಶಿ ರಮೇಶ್ ತಿಳಿಸಿದರು. `ಅಲೆಮಾರಿ ಸಮುದಾಯಗಳ ಜನರಿಗೆ ವಸತಿ, ನಿವೇಶನ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸಿದ್ದೇವೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಜಿಲ್ಲಾಡಳಿತವು ಕ್ರಮ ತೆಗೆದುಕೊಂಡರೆ, ಹೆಚ್ಚು ಅನುಕೂಲವಾಗ್ತುದೆ' ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿರುವ ಅಲೆಮಾರಿಗಳು
ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮತ್ತು ಕುಗ್ರಾಮಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳಿವೆ. ಅವುಗಳಲ್ಲಿ ಕೆಲವಷ್ಟು ಬೆಳಕಿಗೆ ಬಂದಿವೆ. ಇನ್ನೂ ಕೆಲ ಅಲೆಮಾರಿ ಸಮುದಾಯಗಳು ಒಂದೆಡೆ ನೆಲೆ ನಿಲ್ಲದ ಕಾರಣ ಅವುಗಳ ಮಾಹಿತಿ ಮತ್ತು ಅಂಕಿ-ಅಂಶ ಲಭ್ಯವಾಗಿಲ್ಲ.

ಸದ್ಯಕ್ಕೆ ಜಿಲ್ಲೆಯಲ್ಲಿ ದೊಂದಬರು, ಹಂದಿಜೋಗಿ, ಶಿಳ್ಳೆಕ್ಯಾತ, ಗೊಂದಳಿ, ಹಕ್ಕಿಪಿಕ್ಕಿ, ಹೆಳವರು, ಲಂಬಾಣಿ, ಕೊರಚ, ದಕ್ಕಲಿಗರು, ಬುಡ್ಗಜಂಗಮ, ಸಿಂದೊಳ್ಳು, ಚೆನ್ನದಾಸರ್, ಬುಡಬುಡಿಕೆಯವರ ಅಲೆಮಾರಿ ಸಮುದಾಯಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT