ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೊಂದು ರಿಂಕ್ ಮಾಡ್ಕೊಡಿ ಪ್ಲೀಸ್

Last Updated 7 ಫೆಬ್ರುವರಿ 2011, 7:40 IST
ಅಕ್ಷರ ಗಾತ್ರ

ಹಾಸನ: ಅಂಕಲ್... ನಾವು ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಸ್ಕೇಟಿಂಗ್  ಮಾಡೋ ಮಕ್ಳು.

ನಾವೀಗ ಪಾರ್ಕ್ ಒಳಗಿನ ರಸ್ತೆ ಮೇಲೆಯೇ ಸ್ಕೇಟಿಂಗ್ ಮಾಡ್ತಿದೀವಿ. ಅದ್ಯಾಕೋ ಸರಿ ಹೋಗ್ತಾ ಇಲ್ಲ. ಅಲ್ಲೇ ಜನ ಓಡಾಡ್ತಾರೆ. ನಮ್ಮನ್ನೇ ದಿಟ್ಟಿಸಿ ನೋಡ್ತಾರೆ. ರಸ್ತೆಯೂ ಬೇಕಾದಷ್ಟು ಅಗಲ ಇಲ್ಲ. ಶನಿವಾರ- ಭಾನುವಾರ ತುಂಬ ಜನ ಓಡಾಡ್ತಾರೆ ನಮಗೆ ಜಾಗಾನೇ ಸಿಗಲ್ಲ. ಬಿದ್ರೆ ತುಂಬ ನೋವಾಗುತ್ತೆ, ಅದ್ಕೆ ನಿಮ್ಮಲ್ಲಿ ಒಂದು ವಿನಂತಿ.

ನಮಗೊಂದು ಸ್ಕೇಟಿಂಗ್ ರಿಂಕ್ ಮಾಡಿಸ್ಕೊಡಿ ಪ್ಲೀಸ್...
ನೀವೆಲ್ಲ ಸೇರ್ಕೊಂಡು ಈಚೆಗೆ ಹಾಸನದಲ್ಲಿ ಅತ್ಯುತ್ತಮ ಒಳಾಂಗಣ ಕ್ರೀಡಾಂಗಣ ಮಾಡಿದ್ರಿ, ವಾಲಿಬಾಲ್ ಆಡೋರಿಗೆ ಹೊರಗೆ ಒಳ್ಳೆ ಕೋರ್ಟ್,  ಹೊನಲು ಬೆಳಕಿನ ವ್ಯವಸ್ಥೆ ಮಾಡಿದ್ರಿ. ಸ್ವಿಮ್ಮಿಂಗ್‌ಪೂಲ್ ಮಾಡ್ಕೊಟ್ರಿ. ನೂರಾರು ಕೋಟಿ ರೂಪಾಯಿ ಸುರಿದು ಜಿಲ್ಲೆಗೆ ಹೆಮ್ಮೆ ಬರೋಹಂಗೆ ಮಾಡಿದ್ರಿ. ಹಾಕಿ ಗ್ರೌಂಡ್ ಸಹ ಮಾಡ್ತಾ ಇದೀರಂತೆ. ಹಾಗೆ ನಮಗೂ ಒಂದು ರಿಂಕ್ ಮಾಡಿಸಿಕೊಟ್ರೆ ನಾವೂ ಅದರೊಳಗೇ ಆಡ್ತಾ ಖಷಿ ಪಡ್ತೀವಿ. ನಮ್ಮಂಥ ಇನ್ನೂ ಎಷ್ಟೋ ಮಕ್ಳು ಬಂದು ಸ್ಕೇಟಿಂಗ್ ಕಲ್ತು ಖುಷಿಪಡ್ತಾರೆ. ಅಂದಹಾಗೆ ಒಳ್ಳೆ ರಿಂಕ್‌ಗೆ ಕೋಟಿ ಕೋಟಿ ರೂಪಾಯಿ ಖರ್ಚು ಬರಲ್ಲ, ಹತ್ತು-ಹದಿನೈದು ಲಕ್ಷ ರೂಪಾಯಿ ಇದ್ರೆ ಮಾಡ್ಬೋದು ಅಂತ ನಮ್ಮ ಟೀಚರ್ ಅಂದಿದ್ರು. ಒಂದು ವರ್ಷದಲ್ಲಿ ಅಂಥ ಒಳಾಂಗಣ ಕ್ರೀಡಾಂಗಣ ಕಟ್ಟಿದ್ರಲ್ಲ, ಅದೇ ಮನಸ್ಸು ಮಾಡಿದ್ರೆ ಮೂರ್ನಾಲ್ಕು ತಿಂಗಳಲ್ಲಿ ಮೈಸೂರಿನಲ್ಲಿದೆಯಲ್ಲ (ನಾವೂ ನೋಡಿಲ್ಲ) ಅಂಥ ರಿಂಕ್  ಮಾಡ್ಬಹುದು ಅಂತಾನೂ ಟೀಚರ್ ಹೇಳ್ತಿದ್ರು.

ನಿಮಗ್ಗೊತ್ತಾ ? ಈ ಮಹಾರಾಜಾ ಪಾರ್ಕ್‌ನಲ್ಲೇ ಸ್ಕೇಟಿಂಗ್ ಕಲಿತ ಪುಟ್ಟ ಮಗುವೊಂದು ಏಳೆಂಟು ತಿಂಗಳ ಹಿಂದೆ ಸ್ಕೇಟಿಂಗ್ ಮಾಡ್ತಾ ಹತ್ತು-ಹದಿನೈದು ಆಟೋಗಳ ಅಡಿಯಿಂದ ನುಸುಳಿ ಹೋಗಿತ್ತು. ಪೇಪರ್ನಲ್ಲಿ ನೀವೂ ಓದಿರಬಹುದು. ಇದೇನು ಸಣ್ಣ ವಿಚಾರಾನಾ ? ನಮ್ಮಲ್ಲಿ 20ಕ್ಕೂ ಹೆಚ್ಚು ಕಾರುಗಳಡಿಯಿಂದ ಹಾಗೇ ನುಸುಳಿ ಹೋಗುವ ಮಕ್ಕಳಿದ್ದಾರೆ. ಸ್ಕೇಟ್  ಮಾಡ್ತಾ, ಮಾಡ್ತಾ ಡ್ಯಾನ್ಸ್ ಮಾಡೋರಿದ್ದಾರೆ. ಆದ್ರೆ ಇದೆಲ್ಲ ಮಹಾರಾಜಾ ಪಾರ್ಕ್ ಡಾಂಬರ್ ರಸ್ತೆ ಮೇಲೆಯೇ ಮಾಡಬೇಕಾಗಿದೆ. ನಾವೇನೋ ಮಾಡ್ತೀವಿ.
 
ಆದ್ರೆ ಎಲ್ಲೂ ಸ್ಪರ್ಧೆಗೆ ಹೋಗೋಕೆ ಆಗಲ್ಲ. ಬೇರೆ ಜಿಲ್ಲೆ ಮಕ್ಕಳೆಲ್ಲ ರಿಂಕ್ ಒಳಗೆ ಚೆನ್ನಾಗಿ ಪ್ರಾಕ್ಟೀಸ್ ಮಾಡ್ಕೊಂಡು ಬಂದಿರ್ತಾರೆ. ನಮಗೆ ಅವರ ಜತೆ ಸ್ಪರ್ಧಿಸೋಕೂ ಆಗಲ್ಲ. ಇಲ್ಲಿ ಸುಮಾರು 40 ಮಕ್ಕಳು ಅಭ್ಯಾಸ ಮಾಡ್ತಿದೀವಿ. ಆದರೆ ಒಬ್ರಿಗೂ ಹೊರಗಡೆ ಚಾನ್ಸ್ ಸಿಗಲ್ಲ. ಯಾಕಂದ್ರೆ ರಿಂಕ್ ಇಲ್ದೆ ಸರಿಯಾಗಿ ಪ್ರಾಕ್ಟೀಸ್ ಆಗಲ್ಲ.

ಜಿಲ್ಲಾ ಕ್ರೀಡಾಂಗಣದ ಹತ್ತಿರವೇ ಸ್ಕೇಟಿಂಗ್ ರಿಂಕ್ ಮಾಡ್ತೀವಿ, ಬೇಕಾದಷ್ಟು ಹಣ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಈಚೆಗೆ ಹೆಳಿದ್ದನ್ನು ಪತ್ರಿಕೆಗಳಲ್ಲಿ ಓದಿದ್ದೆವು. ಜಾಗಾನೂ ಗೊತ್ತು ಮಾಡಿದ್ರಂತೆ. ಕೆಲಸ ಮಾತ್ರ ಆರಂಭವಾಗಿಲ್ಲ. ಯಾವಾಗ ಮಾಡ್ತೀರ ? ಅದಿರ್ಲಿ ನಗರಸಭೆಯವರೂ ಕೆಲವು ವರ್ಷಗಳಿಂದ ರಿಂಕ್‌ಗಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಾ ಬಂದಿದ್ದಾರೆ. ಆದರೆ ಬೇಕಾದಷ್ಟು ಜಾಗ ಸಿಕ್ಕಿಲ್ಲ ಅಂತ ಕಾಮಗಾರಿ ಆರಂಭಿಸಿಲ್ಲ ಅಂತಾರೆ ಹೌದೇ ?. ಇಡೀ ಹಾಸನದಲ್ಲಿ ಒಂದು ರಿಂಕ್‌ಗೆ ಬೇಕಾದಷ್ಟು ಜಾಗಾನೂ ಸಿಗಲ್ವಾ ?. ನೀವೆಲ್ಲ ಮನಸ್ಸು ಮಾಡಿದ್ರೆ ಜಾಗಾನೂ ಸಿಗುತ್ತೆ, ಒಂದೆರಡು ತಿಂಗಳಲ್ಲಿ ರಿಂಕ್ ಸಹ ನಿರ್ಮಾಣವಾಗುತ್ತೆ. ಇನ್ನೇನು ಮಳೆಗಾಲಕ್ಕೆ ಮೂರು ನಾಲ್ಕು ತಿಂಗಳಷ್ಟೇ ಉಳಿದಿದೆ. ಈಗಲೇ ಕೆಲಸ ಆರಂಭಿಸಿದ್ರೆ ಮಳೆ ಬರೋದ್ರೊಳಗೆ ರಿಂಕ್ ಸಿದ್ಧವಾಗುತ್ತೆ. ಮಹಾರಾಜಾ ಪಾರ್ಕ್‌ಅನ್ನು ವಾಕ್  ಮಾಡೋರಿಗೆ, ಸಂಜೆ ಮಕ್ಕಳೊಡನೆ ಬಂದು, ಸುತ್ತಾಡಿ ಖುಷಿಪಡೋರಿಗೆ ಬಿಟ್ಟು ಕೊಡ್ತೀವಿ. ಪ್ಲೀಸ್ ಒಂದು ರಿಂಕ್  ಮಾಡೋಕೆ ಮನಸ್ಸು ಮಾಡಿ.

ಇಂತಿ,

ಮಹಾರಾಜಾ ಪಾರ್ಕ್‌ನಲ್ಲಿ ಸ್ಕೇಟಿಂಗ್ ಮಾಡೋ ಪುಟಾಣಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT