ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಗುಮ್ಮಟಕ್ಕೂ ಬೇಡವೇ ತಾಜ್ ಮೆರುಗು?...

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತಾಜ್‌ಮಹಲ್ ಮತ್ತು ಗೋಲಗುಮ್ಮಟ. ಒಂದು ಪ್ರೇಮ ಸೌಧ; ಇನ್ನೊಂದು ಅದ್ಭುತ ವಾಸ್ತು ವೈಭವ. ಎರಡರಲ್ಲೂ ಇರುವುದು ಸಮಾಧಿಗಳೇ. ಇವೆರಡನ್ನೂ ನಿರ್ಮಿಸಿದ್ದು ಮುಸ್ಲಿಂ ಅರಸರು. ಬಾಹ್ಯ ಸೌಂದರ್ಯದಿಂದ ತಾಜ್‌ಮಹಲ್ ಗಮನ ಸೆಳೆದರೆ, ಪಿಸುಗುಟ್ಟುವ ಗ್ಯಾಲರಿ ಗೋಲಗುಮ್ಮಟದ ಪ್ರಮುಖ ಆಕರ್ಷಣೆ.

ಸುಮಾರು 2400 ಕಿ.ಮೀ. ಅಂತರದಲ್ಲಿರುವ ಇವೆರಡೂ ಸ್ಮಾರಕಗಳ ಉಸ್ತುವಾರಿ ಹೊಣೆಯನ್ನು ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ನೋಡಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 250 ಕಿ.ಮೀ. ಅಂತರದಲ್ಲಿರುವ ತಾಜ್‌ಮಹಲ್ ಪ್ರಖ್ಯಾತಿ ಪಡೆದರೆ, ಸರಿಯಾದ ರೈಲು ಸೌಕರ್ಯವೂ ಇಲ್ಲದ ವಿಜಾಪುರ ಗೋಲಗುಮ್ಮಟ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರುವುದು ಹೋಗಲಿ ಯುನೆಸ್ಕೋದ ಗಮನ ಸೆಳೆಯುವಲ್ಲಿಯೂ ವಿಫಲವಾಗಿದೆ.

ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿ ಬಂದ ನಂತರ ನಮ್ಮ ಗೋಲಗುಮ್ಮಟದಲ್ಲೊಂದು ಸುತ್ತು ಹಾಕಿದಾಗ ಕಂಡ ಸಾಮ್ಯತೆ- ವ್ಯತ್ಯಾಸ ಇಲ್ಲಿದೆ...

ಬನ್ನಿ, ತಾಜ್‌ನಲ್ಲೊಂದು ಸುತ್ತು ಹಾಕಿಬರೋಣ.
ಇದು ತಾಜ್‌ಮಹಲ್!
ತಾಜ್‌ಮಹಲ್, ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ನೆಚ್ಚಿನ ಪತ್ನಿ ಮಮ್ತಾಜ್‌ಳ ನೆನಪಿಗಾಗಿ ಕಟ್ಟಿಸಿದ ಸ್ಮಾರಕ. ತಾಜ್‌ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣ. ಪರ್ಷಿಯನ್, ಭಾರತೀಯ ಮತ್ತು ಮುಸ್ಲಿಂ ವಾಸ್ತು ಶೈಲಿಗಳ ಸಮ್ಮಿಶ್ರಣದಂತಿದೆ. ಮೊಘಲ್ ವಾಸ್ತು ಶೈಲಿಗೆ ಉತ್ತಮ ಉದಾಹರಣೆ ಹೌದು.

1632ರಲ್ಲಿ ಆರಂಭಗೊಂಡ ಈ ಸ್ಮಾರಕ ನಿರ್ಮಾಣಕ್ಕೆ ತಗುಲಿದ ಅವಧಿ 22 ವರ್ಷ. ಅದರ ಸಂಕೇತವಾಗಿ ತಾಜ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ತಲಾ 11 ಚಿಕ್ಕ ಗುಮ್ಮಟಗಳನ್ನು ಸ್ಥಾಪಿಸಲಾಗಿದೆ. ಆ ಕಾಲದಲ್ಲಿ ಈ ಸ್ಮಾರಕ ನಿರ್ಮಾಣಕ್ಕೆ ಸುಮಾರು 19 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆಯಂತೆ.

ಮಹಲ್ ಸುಮಾರು 35 ಮೀಟರ್ ಎತ್ತರವಿದೆ. ಒಳಗಡೆ ಷಹಜಹಾನ್ ಮತ್ತು ಮಮ್ತಾಜ್‌ಳ ಸಮಾಧಿಗಳಿವೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿದ್ದು, ಮೇಲೆ ಸಮಾಧಿಗಳ ಮಾದರಿಗಳಿವೆ.
ಮಹಲ್‌ನ ಹೊರಭಾಗದಲ್ಲಿ ಸುಮಾರು 40 ಮೀಟರ್‌ಗಳಿಗಿಂತ ಹೆಚ್ಚು ಎತ್ತರದ ಮಿನಾರ್‌ಗಳನ್ನು ಸ್ಥಾಪಿಸಲಾಗಿದೆ. ಮಿನಾರ್‌ಗಳನ್ನು ಮಹಲ್‌ನಿಂದ ಸ್ವಲ್ಪ ಹೊರಕ್ಕೆ ವಾಲಿದಂತೆ ನಿರ್ಮಿಸಲಾಗಿದೆ. ಒಂದು ವೇಳೆ ಈ ಮಿನಾರ್‌ಗಳು ಕುಸಿದರೆ ಅದರಿಂದ ಗೋಪುರಕ್ಕೆ ಯಾವುದೇ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಹೀಗೆ ನಿರ್ಮಿಸಲಾಗಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್ ಹೊರ ನೋಟಕ್ಕೆ ಕಾಣುವುದೇ ಇಲ್ಲ. ಮೂರು ದಿಕ್ಕುಗಳಲ್ಲಿ ಮೂರು ಗೇಟ್‌ಗಳು, ಹಿಂಬದಿ ಯಮುನಾ ನದಿ. ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಗಿಡ- ಮರಗಳು. ತಾಜ್‌ಗೆ ದಿನದ 24 ಗಂಟೆಗಳ ಕಾಲವೂ ಸಶಸ್ತ್ರ ಪಡೆಯ ಬಿಗಿ ಕಾವಲು. ಮೂರ‌್ನಾಲ್ಕು ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್‌ಗಲ್ಲಿ ಹಾಯ್ದು `ರಕ್ಷಣಾ ಕೋಟೆ~ಯನ್ನು ದಾಟಿ ಗೇಟ್‌ಗಳ ಮೂಲಕ ಒಳ ಹೊಕ್ಕ ನಂತರವೇ ಗೋಚರಿಸುತ್ತದೆ ಮಿನುಗುವ ತಾಜ್.

ಬಡ, ಮಧ್ಯಮ ಹಾಗೂ ವಿಐಪಿ ಎಂಬ ಮೂರು ಗೇಟ್‌ಗಳಿದ್ದು, ಪ್ರವೇಶ ದರವೂ ಭಿನ್ನ. ತಾಜ್‌ಮಹಲ್‌ನೊಳಗೆ ಕ್ಯಾಮೆರಾ, ವಿಡಿಯೊ ಕ್ಯಾಮೆರಾ ತೆಗೆದುಕೊಂಡು ಹೋಗಬಹುದು. ಅದಕ್ಕೆ ಶುಲ್ಕವಿಲ್ಲ. ಆದರೆ, ವಿಡಿಯೊ ಕ್ಯಾಮೆರಾ ಬಳಕೆಗೆ ಪ್ರವೇಶ ದ್ವಾರವೇ ಗಡಿ. ಅದರಾಚೆ ಅದರ ಬಳಕೆಗೆ ನಿರ್ಬಂಧ. ಸ್ಮಾರಕದ ಒಳಗಡೆ ಛಾಯಾಚಿತ್ರ ತೆಗೆಯುವಂತಿಲ್ಲ.

ತಾಜ್‌ಮಹಲ್ ಎದುರು ನಿಮ್ಮ ಭಾವಚಿತ್ರ ಕ್ಲಿಕ್ಕಿಸಲು 350ಕ್ಕೂ ಹೆಚ್ಚು ಛಾಯಾಗ್ರಾಹಕರು ನಿಂತಿರುತ್ತಾರೆ. ಯಾವ ಸೈಜ್‌ಗೆ ಎಷ್ಟು ಹಣ ನೀಡಬೇಕು ಎಂಬ ದರಪಟ್ಟಿ ಅಲ್ಲಿದೆ. ನೀವು ತಾಜ್ ವೀಕ್ಷಿಸಿ ಹೊರಬರುವಷ್ಟರಲ್ಲಿ ನಿಮ್ಮ ಫೋಟೊಗಳು ಪ್ರಿಂಟ್ ಆಗಿ ಸಿದ್ಧಗೊಂಡಿರುತ್ತವೆ.

ತಾಜ್ ಮಹಲ್ ಸ್ಮಾರಕದ ಒಳಗಡೆ, ಆವರಣದಲ್ಲಿ ನೀರಿನ ಬಾಟಲ್, ಯಾವುದೇ ತಿಂಡಿ- ತಿನಿಸು, ಪಾನ್- ಗುಟಕಾ, ಬೀಡಿ- ಸಿಗರೇಟ್, ಬಬಲ್‌ಗಮ್... ಹೀಗೆ ಯಾವುದೇ ವಸ್ತುಗಳನ್ನು ಒಯ್ಯಲು ಅವಕಾಶವಿಲ್ಲ. ನೆತ್ತಿ ಸುಡುವ ಬಿಸಿಲಿನಲ್ಲಿ ಬಾಯಾರಿಕೆ ತಣಿಸಿಕೊಳ್ಳಲು ಆವರಣದಲ್ಲಿರುವ ಒಂದು ನೀರಿನ ಅರವಟ್ಟಿಗೆಯೇ ಆಸರೆ. ನಿತ್ಯ ಸರಾಸರಿ 5 ಸಾವಿರ ಪ್ರವಾಸಿಗರು ಬಂದು ಹೋಗುವ ಈ ಸ್ಮಾರಕದ ಆವರಣದಲ್ಲಿ ಒಂದು ಕ್ಯಾಂಟೀನ್ ಸಹ ಇಲ್ಲ. `ಸ್ಮಾರಕವನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಸೌಂದರ್ಯವನ್ನು ಕಾಪಾಡಿಕೊಳ್ಳಲು ಈ ಬಿಗಿ ಕ್ರಮ~ ಎನ್ನುತ್ತಾರೆ ಅಲ್ಲಿಯ ಅಧಿಕಾರಿಗಳು!

ಸ್ಮಾರಕದ ಗೋಡೆಗಳ ಮೇಲೆ ಯಾರೂ ಪೆನ್ನಿನಿಂದ ಗೀಚಿದ, ಎಲ್ಲೆಂದರಲ್ಲಿ ಕಸ ಚೆಲ್ಲಾಡಿದ, ಮೂಲೆಗಳಲ್ಲಿ ಉಗುಳಿದ ಗುರುತುಗಳು ಕಾಣಸಿಗುವುದಿಲ್ಲ. ಸುಂದರ ತಾಜ್ ಮಹಲ್‌ಗೆ ಈ ಸ್ವಚ್ಛ ಪರಿಸರ ಮತ್ತಷ್ಟು ಮೆರುಗು ನೀಡಿದೆ.

ಹುಣ್ಣಿಮೆಯ ಚಂದಿರನ ಬೆಳಕಿನಲ್ಲಿ ಕಂಗೊಳಿಸುವ ತಾಜ್‌ಮಹಲ್‌ನ್ನು ಪ್ರತ್ಯಕ್ಷವಾಗಿ ವೀಕ್ಷಿಸುವ ವ್ಯವಸ್ಥೆಯೂ ಉಂಟು. ಶುಕ್ರವಾರ ಮತ್ತು ರಮ್ಜಾನ್ ತಿಂಗಳನ್ನು ಹೊರತುಪಡಿಸಿ ಹುಣ್ಣಿಮೆ ಹಾಗೂ ಹುಣ್ಣಿಮೆ ನಂತರದ ಎರಡು ದಿನ ತಾಜ್‌ಮಹಲ್‌ನ್ನು ರಾತ್ರಿ ಚಂದಿರನ ಬೆಳಕಿನಲ್ಲಿ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಹೊರಗಡೆಯಿಂದ ಮುಖ್ಯ ಗೇಟ್‌ವರೆಗಿನ ಸುಮಾರು 300 ಮೀಟರ್ ಕ್ರಮಿಸಲು ಎಲೆಕ್ಟ್ರಿಕ್ ವಾಹನ, ಒಂಟಿಗಳ ಗಾಡಿ, ಸೈಕಲ್ ರಿಕ್ಷಾಗಳಿವೆ. ಇಷ್ಟೊಂದು ಸುಂದರವಾಗಿರುವ, ಜನರೂ ಸುಂದರವಾಗಿಟ್ಟುಕೊಂಡಿರುವ ತಾಜ್‌ಅನ್ನು ಯುನೆಸ್ಕೋ 1983ರಲ್ಲಿ ವಿಶ್ವ ಪರಂಪರೆ ತಾಣವಾಗಿ ಗುರುತಿಸಿದೆ.

`ಗೋಳು~ಗುಮ್ಮಟ
ಬನ್ನಿ, ಇನ್ನು ನಮ್ಮ ಗೋಲಗುಮ್ಮಟಕ್ಕೆ ಹೋಗಿ ಬರೋಣ.
ವಿಜಾಪುರ ನಗರ ವಿಸ್ಮಯಕಾರಿ; ಚೇತೋಹಾರಿ. ಅದ್ಭುತ ರಮ್ಯ ಕಲ್ಪನೆಯ ಗೋಲಗುಮ್ಮಟ ಪ್ರಪಂಚದ ಅಚ್ಚರಿ. ಎರಡನೆ ಇಬ್ರಾಹಿಂ ಆದಿಲ್‌ಶಾಹನ ಮಗ ಮೊಹ್ಮದ ಆದಿಲ್‌ಶಾಹನ ಸಮಾಧಿ ಸ್ಥಳವಾದ ಗೋಲಗುಮ್ಮಟ (ಕ್ರಿ.ಶ.1656) ಹಿಂದೂ- ಇಸ್ಲಾಂ ಶೈಲಿಯ ಉತ್ಕೃಷ್ಟ ಸ್ಮಾರಕ. ಧ್ವನಿ ಸಂಯೋಜನೆ, ವಾಸ್ತು ತಂತ್ರಜ್ಞಾನ ಹಾಗೂ ಸೌಂದರ್ಯ ತತ್ವಗಳ ಕಲಾತ್ಮಕ ಸಂಯೋಜನೆಯಿಂದ ರೂಪುಗೊಂಡು ಉನ್ನತ ವೇದಿಕೆ ಮೇಲೆ ನಿರ್ಮಾಣಗೊಂಡಿದೆ. ಇಲ್ಲಿರುವ `ಪಿಸುಗುಟ್ಟುವ ಹಜಾರ~ ದಿಂದಾಗಿ ಪ್ರಪಂಚದ ವಾಸ್ತು ನಿರ್ಮಿತಿಗಳಲ್ಲಿಯೇ ಒಂದು ಅದ್ಭುತವೆನಿಸಿದೆ.

ಗೋಲಗುಮ್ಮಟವು 205 ಅಡಿ ಉದ್ದ, 205 ಅಡಿ ಅಗಲ, 200ಅಡಿ ಎತ್ತರವಿದೆ. 125 ಅಡಿ ವ್ಯಾಸದ ಗುಮ್ಮಟ ಹೊಂದಿರುವ ಇದು ಪ್ರಪಂಚದ ಬಹುದೊಡ್ಡ ಗುಮ್ಮಟ. ಪರಸ್ಪರ ವಿರುದ್ಧ ದಿಕ್ಕಿನಲ್ಲಿಯ ಒಂದು ಪಿಸು ಮಾತು, ಗಡಿಯಾರದ ಟಿಕ್‌ಟಿಕ್ ಶಬ್ದವೂ ಇನ್ನೊಂದು ಬದಿಗೆ ಸ್ಪಷ್ಟವಾಗಿ ಕೇಳುವಂತೆ; ಇಲ್ಲಿಯ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿಸುವಂತೆ ನಿರ್ಮಿಸಲಾಗಿದೆ.
ಗುಮ್ಮಟ ಎತ್ತರವಾಗಿರುವುದರಿಂದ ವಿಜಾಪುರ ಪ್ರವೇಶಿಸುವ ಮುನ್ನವೇ ಅದು ಗೋಚರಿಸುತ್ತದೆ. ಪ್ರವೇಶ ಶುಲ್ಕದ ಜೊತೆಗೆ ಕ್ಯಾಮೆರಾಗೂ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಭದ್ರತೆ ಅಷ್ಟಕ್ಕಷ್ಟೆ. ನಡೆಯುತ್ತ ಹೋಗಿ ಗೋಲಗುಮ್ಮಟ ಆವರಣದೊಳಗೆ ಪ್ರವೇಶಿಸಿ, ಆ ನಂತರ ಎತ್ತರವಾಗಿರುವ ಮೆಟ್ಟಿಲುಗಳನ್ನು ಏರಿ ಪಿಸುಗುಟ್ಟುವ ಗ್ಯಾಲರಿಯಲ್ಲಿ ಪ್ರವೇಶಿಸುತ್ತಿದ್ದಂತೆ ಕರ್ಕಶ ದನಿ ಕಿವಿಗೆ ಅಪ್ಪಳಿಸುತ್ತದೆ.

ಎಲೆ- ಅಡಿಕೆ, ಗುಟಕಾ ಅಗೆದು ಎಲ್ಲೆಂದರಲ್ಲಿ ಉಗುಳಿರುವುದು, ಆಧುನಿಕ ಲೈಲಾ- ಮಜನುಗಳು ಎಲ್ಲೆಂದರಲ್ಲಿ ಮನಸ್ಸಿಗೆ ಬಂದಂತೆ ಏನೇನೋ ಗೀಚಿರುವುದು, ಗ್ಯಾಲರಿ ಪಿಸುಗುಟ್ಟುತ್ತದೆ ಎಂಬ ಕಾರಣಕ್ಕೆ ಗಂಟಲು ಹರಿಯುವಂತೆ ಕಿರುಚುವುದು. `ಕಕ್ಕಸು ಕಲಾವಿದರು~ ಗೋಡೆಗಳಲ್ಲಿ ಬಿಡಿಸಿದ ಅಶ್ಲೀಲ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಉದ್ಯಾನದಲ್ಲಿ ಕುಳಿತು ಊಟ- ಉಪಹಾರ ಸೇವಿಸಿ ಮುಸುರೆ, ಪ್ಲಾಸ್ಟಿಕ್- ಕಾಗದಗಳನ್ನು ಅಲ್ಲಿಯೇ ಎಸೆಯುವುದು, ನೀರಿನ ಬಾಟಲ್‌ನಲ್ಲಿ ಮದ್ಯ ತುಂಬಿಕೊಂಡು ಹೋಗಿ ಉದ್ಯಾನದ ನೆರಳಿನಲ್ಲಿ ಹೀರುವುದು ಸಾಮಾನ್ಯ ಎಂಬಂತಾಗಿದೆ.

ನಮ್ಮ ಗೋಲಗುಮ್ಮಟಕ್ಕೆ ಎಂಥ ಸ್ಥಿತಿ ಬಂತು ಎಂದು ನಿಮ್ಮ ಮನ ಮರುಗುತ್ತದೆ. ತನ್ನ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ಎಲ್ಲ ದಾಳಿಯಿಂದಾಗಿ ಪಿಸುಗುಟ್ಟುವ ಗ್ಯಾಲರಿ ನಿಧಾನವಾಗಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ.

ನಿಮಗೆ ನೆನಪಿರಬಹುದು. ಹಿಂದೆ ಗೋಲಗುಮ್ಮಟ ಆತ್ಮಹತ್ಯೆಯ ತಾಣವೂ ಆಗಿತ್ತು. ಗೋಲಗುಮ್ಮಟದಿಂದ ಬಿದ್ದು ಅದೆಷ್ಟೋ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಗಿ ಕ್ರಮ ಕೈಗೊಂಡಿದ್ದರಿಂದ ಆ ಗ್ಯಾಲರಿಯತ್ತ ಯಾರೂ ಸುಳಿಯುತ್ತಿಲ್ಲ ಅಷ್ಟೇ.

ಗೋಲಗುಮ್ಮಟದ ಆವರಣದಲ್ಲಿ ಧ್ವನಿ-ಬೆಳಕಿನ ವ್ಯವಸ್ಥೆ ಇಲ್ಲ. ರಾಜ್ಯ ಪ್ರವಾಸೋದ್ಯಮ ಇಲಾಖೆಯವರು ಕೆಲ ವರ್ಷಗಳ ಹಿಂದೆ ಈ ವ್ಯವಸ್ಥೆ ಮಾಡಿದ್ದರಾದರೂ ವಿದ್ಯುತ್ ಬಿಲ್ಲು ಭರಿಸಲಾಗದೆ ಅದು ಸ್ಥಗಿತಗೊಂಡಿತ್ತು. ಉಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದವು. ಉದ್ಯಾನವನ ಉತ್ತಮವಾಗಿದೆ; ಆದರೆ, ಇಲ್ಲಿಯ ಕಾರಂಜಿ ಪುಟಿಯುತ್ತಿಲ್ಲ.

ಅಲ್ಲಿ ಸರ್ಕಾರ, ಪ್ರವಾಸಿಗರು ಸೇರಿಕೊಂಡು ತಾಜ್‌ಮಹಲ್‌ನ್ನು ಸಂರಕ್ಷಿಸುತ್ತಿದ್ದಾರೆ. ನಾವಿಲ್ಲಿ ಎಲ್ಲರೂ ಸೇರಿ ಗೋಲಗುಮ್ಮಟದ ಸೌಂದರ್ಯ- ಪಿಸುಗುಟ್ಟುವ ಗ್ಯಾಲರಿಯನ್ನು ಹಾಳು ಮಾಡುತ್ತಿದ್ದೇವೆ. ಇದು ನ್ಯಾಯವೇ? ನಮ್ಮ ಗೋಲಗುಮ್ಮಟವೂ ತಾಜ್‌ಗೆ ಸರಿಸಾಟಿಯಾಗಿ ನಿಲ್ಲುವುದು ಯಾವಾಗ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT