ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನಪ್ರತಿನಿಧಿಗಳ ಇನ್ನೊಂದು ಮುಖ...!

Last Updated 6 ಮಾರ್ಚ್ 2011, 6:45 IST
ಅಕ್ಷರ ಗಾತ್ರ

ಮಂಡ್ಯ: ರಾಜಕಾರಣಿಗಳು ಕೈಗೆ ಸಿಗುವುದಿಲ್ಲ. ಅವರದು, ‘ಹಗಲು ವೇಷ’, ನಾಟಕ ಆಡ್ತಾರೆ ಎಂದು ಕಿಡಿಕಾರರುವವರೇ ಹೆಚ್ಚು. ಜಿಲ್ಲೆಯ ಮಟ್ಟಿಗೆ ಜನಪ್ರತಿನಿಧಿ ಗಳಿಗೆ ಇನ್ನೊಂದು ಮುಖವು ಇದೆ. ಅದು, ಕೊಂಚ ಭಿನ್ನ. ನಿಜ. ಜಿಲ್ಲೆಯ ಕೆಲ ರಾಜಕಾರಣಿಗಳು ನಾಟಕವನ್ನೂ ಆಡುತ್ತಾರೆ!

ಈ ರಾಜಕಾರಣಿಗಳಿಗೆ ರಂಗ ಭೂಮಿಯತ್ತಲೂ ಒಲವಿದೆ. ಬಣ್ಣ ಹಚ್ಚಿ ನಿಂತರೆ ಅವರಲ್ಲಿ ರಾಜಕಾರಣಿ ಕಾಣಿಸುವುದಿಲ್ಲ. ನಾಟಕೋತ್ಸವ, ರಂಗ ಚಟುವಟಿ ಕೆಗಳಿಗೆ ನೆರವು ನೀಡುವ ಮೂಲಕ ಉತ್ತೇಜನ ನೀಡುವುದರ ಜೊತೆಗೆ, ಸ್ವತಃ ನಾಟಕಗ ಳಲ್ಲಿಯೂ ಅಭಿನಯಿಸಿ ಅವರು ಗಮನಸೆಳೆದಿದ್ದಾರೆ.

ಕೆವಿಎಸ್ ಅವರು ಹೆಚ್ಚು ಗಮ ನಸೆಳೆಯುವುದು ರಾಜ ಕಾರಣಯೇತರ ಚಟುವಟಿ ಕೆಗಳಿಂದಲೇ. ಅವರ ಹೆಸರಿನಲ್ಲಿ ಇಂದಿಗೂ ರಂಗಗೀತೆ, ಜನಪದ ಗೀತೆ ಸ್ಪರ್ಧೆಗಳು ನಡೆಯುತ್ತಲೇ ಇವೆ. ಇದು ಜನಪ್ರತಿನಿಧಿಗಳ ಇನ್ನೊಂದು ಮುಖ!

ಜನಪರ ಮೌಲ್ಯ, ಆಶಯಗಳನ್ನಿಟ್ಟುಕೊಂಡು ಗೌಡರು ಕೆಲ ಕೃತಿಗಳನ್ನು ರಚಿಸಿದ್ದಾರೆ. ‘ಕೂಡಿ ಬಾಳೋಣ, ಪಾದುಕಾ ಕಿರೀಟ, ದನಿ, ಶಿಷ್ಟಾಚಾರ, ಅಪರಂಜಿ, ಕೋಕಿಲ’ ಅವರುಗಳಲ್ಲಿ ಪ್ರಮುಖವಾದುದು.

ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿ ಆಧಾರಿತ ‘ಪಾದುಕಾ ಕಿರೀಟ’ ಗೌಡರ ನಾಟಕಗಳಲ್ಲೇ ಶ್ರೇಷ್ಠ ಎನ್ನಲಾಗುತ್ತದೆ. ಈ ನಾಟಕದಲ್ಲಿ ‘ದಶರಥ’ ಪಾತ್ರದಲ್ಲಿ ಅಭಿನಯಿಸಿದ್ದ ಗೌಡರು ಮೆಚ್ಚುಗೆಗೂ ಪಾತ್ರರಾಗಿದ್ದರು. ಆರಂಭದಲ್ಲಿ ಗೌಡರು ಸ್ತ್ರೀ ಪಾತ್ರಗಳಲ್ಲಿಯೂ ನಟಿಸಿದ್ದ ಮಾತು ಇದೆ.

ಶಂಕರಗೌಡರ ಸುಪುತ್ರ ಸಚ್ಚಿ ಕೂಡ ಉತ್ತಮ ಕಲಾವಿದರು. ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗದ ಮೇಲೆ ತಮ್ಮದೇ ಆದ ಛಾಪು ಮೂಡಿಸಿ ಗಮನ ಸೆಳೆದಿದ್ದರು.

‘ಜಲಗಾರ’ (ರೈತನ ಪಾತ್ರ), ಸ್ಮಶಾನ ಕುರುಕ್ಷೇತ್ರ (ಧರ್ಮರಾಯನ ಪಾತ್ರ), ರಕ್ತಾಕ್ಷಿ (ಭಟ್ಟ) ಈ ಮೂರು ನಾಟಕಗಳನ್ನು ಪ್ರಕಾಶ್ ಕಲಾ ಸಂಘದ ಬ್ಯಾನರ್‌ನಡಿ ಅಭಿನಯಿಸಿದ್ದರು. ಇಷ್ಟೇ ಅಲ್ಲದೆ, ಇತರೆ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.

ಹಿರಿಯ ರಾಜಕಾರಣಿ ಮಾಜಿ ಸಚಿವ, ನಾಗಮಂಗಲದ ಎಚ್.ಟಿ.ಕೃಷ್ಣಪ್ಪ ಕೂಡಾ ಅವರು ಸ್ವತಃ ಕಲಾವಿದರು. ರಾಮಾಯಣ, ಮಹಾಭಾರತ ಭಾಗಗಳ ಬಹಳಷ್ಟು ನಾಟಕಗಳಲ್ಲಿ ರಾಮ, ಕೃಷ್ಣ, ಆಂಜನೇಯ, ಅರ್ಜುನ, ದೇವೇಂದ್ರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಲ್ಲದೇ, ಪಾತ್ರದಲ್ಲಿ ದೊರೆಯುವ ಹಾಡುಗಳು, ಕಂದಪದ್ಯಗಳನ್ನು ಬಹಳ ರಸವತ್ತಾಗಿ ಹಾಡುತ್ತಿದ್ದರು ಎನ್ನುವ ಮಾತುಗಳನ್ನು ನಾಗಮಂಗಲದಲ್ಲಿ ಬಹುತೇಕ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಮಾಜಿ ಸಂಸದ ಜಿ.ಮಾದೇಗೌಡರು ದಾನಶೂರ ಕರ್ಣ (ಕರ್ಣನ ಪಾತ್ರ)ದಲ್ಲಿ, ಮಾಜಿ ಶಾಸಕ ಎಂ.ಡಿ. ರಮೇಶ್‌ರಾಜು, ಕುರುಕ್ಷೇತ್ರ (ಧರ್ಮ ರಾಯನ) ದಲ್ಲೂ ಶಾಸಕ ಸಿ.ಎಸ್. ಪುಟ್ಟರಾಜು ಕುರುಕ್ಷೇತ್ರ (ಅರ್ಜುನ) ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಉತ್ತಮ ವಾಗ್ಮಿಯೂ ಆದ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ವಿದ್ಯಾರ್ಥಿ ದೆಸೆಯಲ್ಲಿಯೇ ಹಲವು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಬಹುಮಾನವನ್ನೂ ಪಡೆದಿದ್ದಾರೆ. ಶಾಲೆಯೊಂದಕ್ಕೆ ನಿಧಿ ಸಂಗ್ರಹಿಸಲು ಕುರುಕ್ಷೇತ್ರ (ಅಭಿಮನ್ಯು) ನಾಟಕದಲ್ಲೂ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ.

ಮಾಜಿ ಸಚಿವ ಎಂ.ಎಸ್. ಆತ್ಮಾನಂದರು, ಉಡುಪಿಯಲ್ಲಿ ಜರುಗಿದ ಅಖಿಲ ಭಾರತ ಪೌರಾಣಿಕ ನಾಟಕ ಸ್ಪರ್ಧೆಯಲ್ಲಿ ಮಿತ್ರಕಲಾ ವೃಂದ ಬ್ಯಾನರ್‌ನಡಿ ‘ದಾನಶೂರ ಕರ್ಣ’ದ ಧರ್ಮರಾಯನ ಪಾತ್ರದಲ್ಲಿ ಅಭಿನಯಿಸಿದ್ದರು ಅದರ ನಿರ್ದೇಶಕ ಪಿ.ವೆಂಕಟರಾಮಯ್ಯ ಅವರು ನೆನಪಿಸಿಕೊಳ್ಳುತ್ತಾರೆ.

ಮಾಜಿ ಶಾಸಕರಾದ ಜಿ.ಬೊಮ್ಮಯ್ಯ, ಎಚ್.ಡಿ.ಚೌಡಯ್ಯ, ಜಿ.ಬಿ.ಶಿವಕುಮಾರ್, ಮುಡಾ ಅಧ್ಯಕ್ಷರಾಗಿದ್ದ ಎಸ್.ಕೆ.ಗುಂಡುರಾವ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬಣ್ಣ ಹಚ್ಚಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಜಿ.ಬಿ. ಶಿವಕುಮಾರ್ ಗಾಯಕರೂ ಹೌದು.

ಕೆಲ ರಾಜಕಾರಣಿಗಳ ನಾಟಕಕ್ಕೆ ನಿರ್ದೇಶನ ಮಾಡಿರುವ ನಾಟಕ ಅಕಾಡೆಮಿ ಪುರಸ್ಕೃತ ಪಿ.ವೆಂಕಟರಾಮಯ್ಯ ಅವರ ಪ್ರಕಾರ, ‘ರಾಜಕಾರಣಿಯಾಗಿದ್ದರೂ ಹಮ್ಮಿಲ್ಲದೇ ಅಭ್ಯಾ ಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಪಾತ್ರಕ್ಕೆ ಪೂರಕವಾದ ಅಭಿನಯ ವನ್ನು ತೆಗೆಯುತ್ತಿದ್ದೆ. ಸ್ಪಂದಿಸುತ್ತಿದ್ದರು’ ಎಂದು ಸ್ಮರಿಸುತ್ತಾರೆ. ಕನ್ನಡ ನಾಟಕ ರಂಗಭೂಮಿಗೆ ಹೊಸ ಚಾಲನೆ ತಂದುಕೊಟ್ಟ ಎಂ.ಎಲ್.ಶ್ರೀಕಂಠೇಶಗೌಡ, ಬಿ.ಎಂ.ಶ್ರೀಕಂಠಯ್ಯ, ಎ.ಎನ್.ಮೂರ್ತಿರಾಯರು, ಪು.ತಿ.ನ., ಏಕಾಂಕ ನಾಟಕಗಳನ್ನು ಕನ್ನಡ ನಾಟಕ ಕ್ಷೇತ್ರಕ್ಕೆ ಕೊಟ್ಟ ಕೀರ್ತಿ ದಿ. ಕೆ.ಗುಂಡಣ್ಣ, ದಿ. ಕೃ.ನ.ಮೂರ್ತಿ ಅವರಿಗೆ ಸಲ್ಲುತ್ತದೆ.

ಇದೆಲ್ಲದರ ಒಟ್ಟು ಪರಿಣಾಮ ರಂಗಭೂಮಿಯ ಪರ ಇರುವ ಮನಸ್ಸುಗಳು ಇನ್ನು ಸಕ್ರಿಯವಾಗಿರುವ ಕಾರಣ, ಟಿ.ವಿ. ಮತ್ತಿತರ ಮನರಂಜನೆಯ ಹೊಸ ರೂಪಗಳ ಸ್ಪರ್ಧೆಯ ನಡುವೆಯೂ ರಂಗಭೂಮಿ, ಜನಪದ ಕಲೆ ಜಿಲ್ಲೆಯಲ್ಲಿ ಜೀವಂತಿಕೆ ಉಳಿಸಿಕೊಳ್ಳುವುದು ಸಾಧ್ಯವಾಗಿದೆಯೇನೋ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT