ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪ್ರೀತಿಯ ಪೂರ್ಣಿಮಾ...

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕಿಯಾಗಿ, ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ, ಜರ್ಮನ್ ರಂಗನಿರ್ದೇಶಕ ಫ್ರಿಟ್ಜ್ ಬೆನವಿಟ್ಜ್‌ರ ಸಹಾಯಕಿಯಾಗಿ ಕೆಲಸ ಮಾಡಿದ್ದ ಕೆ.ಎಸ್. ಪೂರ್ಣಿಮಾ ಬಹುಮುಖ ಪ್ರತಿಭೆಯ ಉತ್ಸಾಹಿ. ಬೋಧನೆ, ರಂಗ ನಿರ್ದೇಶನ, ಕಾವ್ಯರಚನೆ, ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು 2012ರ ಜುಲೈ 24ರಂದು  ನಿಧನರಾದರು. ಗೆಳತಿ ಪೂರ್ಣಿಮಾ ಅವರ ಬದುಕಿನ ಬಗ್ಗೆ ಹಿರಿಯ ಲೇಖಕಿ ವೈದೇಹಿ ಬರೆದಿರುವ ಅಪೂರ್ವ ನುಡಿಚಿತ್ರ ಇಲ್ಲಿದೆ.

ಅವಳ ಕುರಿತು ಬರೆಯಲಾರೆ ಎಂದು ಇಷ್ಟು ದಿನ ಮುಂದೂಡಿದೆ. ಬರೆದರೆ ಅವಳು ಇಲ್ಲ ಅಂತ ನಾನು ಖಂಡಿತವಾಗಿ ನಂಬಿದಂತಲ್ಲವೆ? ಅದನ್ನು ಒಪ್ಪಿಕೊಂಡಂತಲ್ಲವೆ? ಆ ನಂಬಿಕೆಯೇ ಬರದಿರುವಾಗ ಬರೆಯುವುದು ಹೇಗೆ? ಆದರೆ ಈಗ, ಬರೆಯದೆಯೂ ಇರಲಾರೆ ಅನಿಸುತ್ತಿದೆ. ಎಷ್ಟು ದಿನವಾಯಿತು ಅವಳ ದನಿ ಕೇಳದೆ, ನಗೆ ಕೇಳದೆ, ಆ ಸಜ್ಜನಿಕೆಯ ಹಸನ್ಮುಖ ನೋಡದೆ! ನಾವು ಒಬ್ಬರೊಬ್ಬರು ಕೈ, ಕೈ ಹಿಡಿದು ಒಟ್ಟೊಟ್ಟಿಗೆ ನಡೆಯದೆ.

ಅವಳು ಅಮ್ಮ! ಎಂದು ಉದ್ಗರಿಸದೆ!

***
ಅವಳು ನಮ್ಮ ಕೆ.ಎಸ್. ಪೂರ್ಣಿಮಾ. ನಾನವಳನ್ನು ಕಂಡದ್ದು 1983ರಲ್ಲಿ, `ನೀನಾಸಂ ಚಲನಚಿತ್ರ ರಸಗ್ರಹಣ ಶಿಬಿರ'ಕ್ಕೆ ಹೋದಾಗ.

ಆಗಷ್ಟೇ ಟಿ.ಪಿ. ಅಶೋಕ್ ಮತ್ತು ಅವಳ ಮದುವೆಯಾಗಿತ್ತು. ಹೊಸ ದಂಪತಿಗಳು ಉಲ್ಲಾಸದಿಂದ ಓಡಾಡಿಕೊಂಡಿದ್ದರು. ಪೂರ್ಣಿಮಾ ಅಂದರೆ `ಕಣ್ಣು' ಎಂಬಷ್ಟು ಅವಳ ಕಣ್ಣುಗಳು ಮಿನುಗುತ್ತಿದ್ದವು. ಜೋಡಿಕಣ್ಣುಗಳ ಅಂದಿನ ಆ ಅಸಾಧಾರಣ ಮಿನುಗು ಮುಂದೆಯೂ ಚೈತನ್ಯದ ಮಿನುಗು ಆಗಿ ಅವಳ ಇಡೀ ವ್ಯಕ್ತಿತ್ವದಲ್ಲೇ ಬೆರೆತು ಹೋಗಿತ್ತು. ನಗೆಮರೆಯದ ಮುಖ, ಹೊಂಬಣ್ಣ, ಪುರಾಣದ ದ್ರೌಪದಿಯನ್ನು ನೆನಪಿಸುವಂತೆ ಎತ್ತರ, ತುಂಬು ಮೈಕಟ್ಟು, ಆರೋಗ್ಯವಂತ ಕಳೆ; ಚೆಲುವೆ ಪೂರ್ಣಿಮಾ, ಬಾಹ್ಯದಲ್ಲಿಯೂ ಆಂತರ್ಯದಲ್ಲಿಯೂ. ಖುಷಿ, ಸಂಭ್ರಮ, ಒಳಗಣ ಚಿನ್ನಗುಣ ಹೊಳೆಸುವ ದೃಷ್ಟಿ ಎಲ್ಲ ಚೆಲುವಾದ ಮೊಗದಲ್ಲಿ ಬೆರೆತುಕೊಂಡರೆ ಹೇಗೆ? ಅಂತಿದ್ದಳು ಅವಳು.

ಗೃಹಸ್ಥೊಳಿಕೆ, ಊಟತಿಂಡಿ, ತೋಟ, ತಿರುಗಾಟ, ಸ್ನೇಹ, ಜನ, ಭೇಟಿ ಎಲ್ಲವನ್ನೂ ಇಷ್ಟ ಪಡುವವಳು, ಪ್ರೀತಿವಿಶ್ವಾಸದಲ್ಲಿ ಜೀವನೆಡುವವಳು. ಕವಿಯಾಗಿದ್ದಳು ಅವಳು, ಸೊಗಸುಗಾತಿ. ಕನಸುಗಾತಿ. ಸಾಹಿತ್ಯ ಸಂಗೀತ ಪ್ರಿಯೆ, ವಿದ್ಯಾರ್ಥಿಗಳೊಡನೆ ಅಪೂರ್ವ ಸಖ್ಯ ಸಾಧಿಸಿದ ಪ್ರಾಧ್ಯಾಪಕಿ. ಸ್ವತಃ ಬರೆಯುವವಳಾಗಿಯೂ ಹೆಚ್ಚು ಬರೆಯದೆ, ಬರೆಸುವುದರಲ್ಲೇ ಸುಖ ಕಂಡ ಪ್ರೋತ್ಸಾಹಕಿ.

ಅವಳಿದ್ದಾಗ ಹೆಗ್ಗೋಡಿನ ನಮ್ಮ ದಿನಗಳಿಗೆ ಬೇರೆಯೇ ಒಂದು ಹುರುಪು ಇತ್ತು. ಬೆಳಿಗ್ಗೆ ಗೋಷ್ಠಿ ಆರಂಭಕ್ಕೂ ತುಸು ಮುನ್ನವೇ, ವೇಗವೂ ಅಲ್ಲದ ನಿಧಾನವೂ ಅಲ್ಲದ ಆದರೆ ಉತ್ಸಾಹ ಪುಟಿಪುಟಿವ ಹೆಜ್ಜೆಯಿಡುತ್ತ ದೂರದಿಂದಲೇ ಗುರುತಿನವರನ್ನು ಕಂಡು ಕೈ ಬೀಸುತ್ತ ಅವಳು ಬರುವುದನ್ನು ನೋಡುತ್ತ ನಿಲ್ಲುವುದೇ ಒಂದು ಉಲ್ಲಾಸದ ಕ್ಷಣವಾಗಿತ್ತು. ನಾವೊಂದಿಷ್ಟು ಮಂದಿ ಜೊತೆಗೇ, ಒಬ್ಬರ ಬಳಿಕ ಒಬ್ಬರು ಮಾತಿಗೆ ಮಾತಿನ ಕೊಂಡಿ ಸೇರಿಸುತ್ತ ಶಿಬಿರದ ಜಾಗಕ್ಕೋ ರಂಗಮಂದಿರಕ್ಕೋ ಹೋಗುವವರು. ನಿನ್ನೆ ನೋಡಿದ ನಾಟಕ, ಬೆಳಗ್ಗೆ ಕೇಳಿದ ಉಪನ್ಯಾಸ, ಆಮೇಲೆ ಕಂಡ ಡಾಕ್ಯುಮೆಂಟರಿ, ಉಟ್ಟ ಸೀರೆ ತೊಟ್ಟ ಸರ, ಕಾವ್ಯ, ಕಥೆ, ತಮಾಷೆ, ಹಾಡು, ತೋಟ, ಗೊಬ್ಬರ, ಹಣ್ಣುಹೂವು, ಊರಮೇಲಿನ ವಿಚಾರ, ಯಾರದೋ ಕಷ್ಟ- ಯಾವುದು ಬೇಕು, ಯಾವುದು ಬೇಡ ಒಟ್ಟಿಗಿದ್ದಾಗ. ಈ ಮಧ್ಯೆ ಪೂರ್ಣಿಮಾ ರಾಣಿಯಂತಿದ್ದಳು.

1983ರ ಸಿನೆಮಾ ಚಿತ್ರಗ್ರಹಣ ಶಿಬಿರ ನೆನಪಾಗುತ್ತಿದೆ. ನಾನು ಭಾಗವಹಿಸಿದ ಪ್ರಥಮ ಶಿಬಿರ ಅದು. ಅಂದು `ನೀನಾಸಂ'ನಲ್ಲಿನ ವ್ಯವಸ್ಥೆ ಸಂಕ್ಷಿಪ್ತವಾಗಿತ್ತು. ಒಂದು ಹಾಲಿನಲ್ಲಿ ನಾವು ಮಹಿಳಾ ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆಯಿತ್ತು. ರಾತ್ರಿಯೂಟ ಮುಗಿಸಿದ ನಾವು ಹಾಲಿನಲ್ಲಿನ ಉದ್ದಾನುದ್ದದ ಹಾಸಿಗೆ ಸಾಲಿನಲ್ಲಿ ಮಲಗಿ ಮಾತಿನಲ್ಲೇ ರಾತ್ರಿಯನ್ನು ಹಗಲು ಮಾಡುತಿದ್ದೆವು. ಅಂದು ಆ ಝ್ಞೀಝ್ಞೀಝ್ಞೀ... ಜೀರುಂಡೆ ಕೂಗಿನ ನಿಶ್ಶಬ್ದ ರಾತ್ರಿಗಳಲ್ಲಿ ಅವುಗಳಿಗೆ ಸರಿಗಟ್ಟಿದಂತೆ ಒಬ್ಬೊಬ್ಬರಾಗಿಯೂ ಕೋರಸ್ ಆಗಿಯೂ ಎಷ್ಟೆಲ್ಲ ಹಾಡುಗಳನ್ನು ಖಾಲಿ ಮಾಡಿದ್ದೆವೋ. ನೈಟಿ, ಸಲ್ವಾರ್ ಕಮೀಜ್ ಸಾಮಾನ್ಯವಾಗಿಲ್ಲದ ಕಾಲ ಅದು. ಪೂರ್ಣಿಮಾ ಮಲಗುವ ಹೊತ್ತಿಗೆ ಕೆಂಪು ಹೂವಿನ ಉದ್ದ ಲಂಗ ಮತ್ತು ಉದ್ದ ಕುಪ್ಪಸ ತೊಡುತಿದ್ದಳು. ಆಗ ಅವಳನ್ನು ಕಂಡರೆ ಕೊಂಡಾಟ ಉಕ್ಕುತಿತ್ತು. ಥೇಟ ಹೈಸ್ಕೂಲಿನ ಥ್ರೋಬಾಲ್ ಟೀಮಿನ ಒಬ್ಬ ಬಲಿಷ್ಠ ಸಮರ್ಥ ಆಟಗಾರ್ತಿಯಂತೆ ಕಾಣುತ್ತಿದ್ದ ಅವಳ ಆ ಹುಡುಗಿಚಿತ್ರ ಈಗಲೂ ಮನಸಿಂದ ಮರೆಯಾಗೇ ಇಲ್ಲ. ಇರಬಹುದೆ ಆ ಫೋಟೊ, ಅವಳಣ್ಣ ರಾಜಾರಾಮ್ ಭಂಡಾರದಲ್ಲಿ? ಇರಲಿಕ್ಕಿಲ್ಲ, ಆಗಿನ್ನೂ ಆತನ ಫೋಟೊ ಕಣ್ಣು ಈಗಿನಷ್ಟು ಛಕಛಕ ಆಗಿರಲಿಲ್ಲ.

ಅಂದಿನಿಂದ ಅವ್ಯಾಹತವಾಗಿ ಬೆಳೆದು ಬಂದ ಪ್ರೀತಿಯ ನಂಟು ಒಮ್ಮೆಯಾದರೂ ಕಹಿಗೊಂಡಿದ್ದರೆ ಹೇಳುತಿದ್ದೆ. ಬದಲು ದಿನಹೋದಂತೆ ಅದು ಗಟ್ಟಿಯಾಗಿ ಪಿಸುನುಡಿಯಲ್ಲಿ ಪರಸ್ಪರ ಸುಖದುಃಖ ಹಂಚಿಕೊಳ್ಳುವಷ್ಟು ಸುಂದರ ಬಾಂಧವ್ಯದ ಚೌಕಟ್ಟಿನೊಳಗೆ ಸೇರಿಬಿಟ್ಟಿತು.
1997ರ ಬೇಸಿಗೆಯಲ್ಲಿ ಅಶೋಕ್ ತಂದೆಯ ಅನಾರೋಗ್ಯದ ನಿಮಿತ್ತ ಅವರೆಲ್ಲ ಮಣಿಪಾಲದಲ್ಲಿದ್ದರು. ಅವರ ಆತಂಕದ ದಿನಗಳವು.

ಸುಮಾರು ಹದಿನೈದು ದಿನಗಳ ಕಾಲ ಪೂರ್ಣಿಮಾ ಮತ್ತು ಸರಸಮೂರ್ತಿಯವರು (ಅಶೋಕ್ ಅಕ್ಕ. ಅತ್ತಿಗೆ ನಾದಿನಿಯರ ಜೋಡಿಯೆಂದರೆ ಇದು ಎಂಬಂತಿದ್ದರು ಇಬ್ಬರೂ. ಅತ್ಯಂತ ಸಂಭಾವಿತ ಸಾತ್ವಿಕ ವ್ಯಕ್ತಿತ್ವದ ಸರಸ ಅವರೂ ಕ್ಯಾನ್ಸರಿನಿಂದಲೇ ಪೂರ್ಣಿಮನಿಗಿಂತ ತುಸು ಮೊದಲು ನಿಧನ ಹೊಂದಿದರು) ನಾನು, ನಯನಾ, ಪಲ್ಲವಿ ಜೊತೆಗೇ ಇದ್ದ ದಿನಗಳೂ. ಆ ಅವಧಿ ಮುಗಿಯುವುದರೊಳಗೆ `ಮರೀ' ಎಂದು ವಾತ್ಸಲ್ಯ ಹರಳುಗಟ್ಟಿದಂತೆ ಕರೆದು ಮಕ್ಕಳನ್ನು ಒಳಗು ಮಾಡಿಕೊಂಡು ಅವರ ತಂಪಿನ ಪೂರ್ಣಿಮತ್ತೆ ಆಗಿಬಿಟ್ಟ ಅವಳು, ಮೂರ್ತಿಯವರ ಕೈಹಿಡಿದು ಕೇಳುತಿದ್ದ ಕಾಳಜಿಯ ಪ್ರಶ್ನೆಗಳಿಂದಲೂ ತೋರುವ ಆತ್ಮೀಯತೆಯಿಂದಲೂ ಅವರಿಗೂ ನಮ್ಮ ಮನೆ ಹುಡುಗಿ ಎನಿಸಿದಳು. ತಂದೆಯ ಜೊತೆಗಿರುತ್ತಿದ್ದ ಅಶೋಕ್‌ಗೆ ತುಸು ಬಿಡುವು ಕೊಡಲು ಬೆಳಗೆದ್ದು ಅತ್ತಿಗೆ ನಾದಿನಿ ಆಸ್ಪತ್ರೆಗೆ ಹೋದರೆ ವಾಪಾಸು ಬರುವುದನ್ನೇ ಕಾಯುತಿದ್ದೆ ನಾನು. ಓ ಅಲ್ಲಿ ಅವರು ಬರುತ್ತಿದ್ದರೆ, ಇಲ್ಲಾಗಲೇ ಗೆಲುವು ಹರಡಿಕೊಳ್ಳುವುದು. ಬರುಬರುತ್ತಲೇ ಮಾತಿನ ಬಳ್ಳಿ ಬಿಚ್ಚಿಕೊಳ್ಳುವುದು. ಪೂರ್ಣಿಮಾ ಬಳಿಯೋ ಎಲ್ಲಿಯೂ ನಿರಾಶೆಯ ಮಾತಿಲ್ಲ, ನಾಳೆಗೆ ಎಲ್ಲ ಸರಿಯಾಗುತ್ತದೆ ಎಂಬ ಭರವಸೆ ತಪ್ಪಿದ್ದಿಲ್ಲ. ಸಿಟಿಬಸ್ಸಿನವ ಇಲ್ಲಿ ಇಳಿಸಿ ಎಂದರೆ ಅಲ್ಲಿ ಇಳಿಸಿದ ಎನ್ನುವಾಗಲೂ, ಬಿಸಿಲಲ್ಲಿ ಅಲ್ಲಿಂದ ನಡೆದು ಬರಬೇಕಾಯ್ತು ಎನ್ನುವಾಗಲೂ ಅದೊಂದು ಗೊಣಗು ಆಗದಂತೆ ಸುತ್ತ ನಗೆಯನ್ನು ಮಾಯದಂತೆ ಕಾಪಾಡಿಕೊಳ್ಳುತಿದ್ದ ಅವಳು ಎಂದೂ ಗೊಣಗಿದ್ದೇ ಇಲ್ಲವಲ್ಲ! ತನ್ನನ್ನು ಅತೀವ ಕಂಗೆಡಿಸಿದ ಒಂದು ಕೋರ್ಟು-ಮನೆ ಶತಪಥದ ಕುರಿತೂ?

ಅಚ್ಚರಿಗೊಳ್ಳುತ್ತೇನೆ. ಸಮಸ್ಯೆಗಳ ಎದುರು ಅವಳು ನಿಲ್ಲುತಿದ್ದ ರೀತಿಯಿಂದ ಕೂಡ ನಮ್ಮೆಲ್ಲರ ಅಭಿಮಾನವನ್ನು ಸತತವಾಗಿ ಗೆದ್ದವಳು ಪೂರ್ಣಿಮಾ. ಚಿಕ್ಕಮ್ಮ ಸುಭದ್ರ ಅವರೊಂದಿಗಂತೂ ಸ್ವಂತ ಮಗಳಂತೆ ಇದ್ದು ನಿರಂತರ ಜೊತೆಗೊಟ್ಟವಳು ಅವಳು. ಸಣ್ಣಬುದ್ಧಿ ಎಂಬುದು ಅವಳ ಬಳಿ ಸುಳಿಯದು. ಸನ್ನಿವೇಶ ಬಂದಲ್ಲಿ ತನ್ನನ್ನೇ ಆಚೆ ಒತ್ತರಿಸಿ ತ್ಯಾಗ ಎಂಬುದು ತಿಳಿಯದಂತೆ ತ್ಯಾಗವನ್ನು ಖುಷಿ ಖುಷಿಯಿಂದ ನಿರ್ವಹಿಸಿದವಳು.

ಉದ್ವೇಗಕ್ಕೆ ಒಳಗಾಗದೆ ಸಮಾಧಾನಿಸಿ ನೋಡುವ ಫಿಲಾಸಫಿ ಅವಳದು. ಟೀಕಿಸುವ ಜಾಯಮಾನವಲ್ಲ, ಬದಲು ವಿಶ್ಲೇಷಣೆಯವಳು. ಅವಳದೇ ಸ್ವ-ಭಾವ ಅದು. ಹಾಗೆಂದರೆ ಅವಳಿಗೆ ನೋವು ಆಗುವುದಂತವೇ ಇಲ್ಲವೆ? ಎಂದರೆ, ಇದೆ. ಆದರೆ ಎಂಥ ಪರಿಸ್ಥಿತಿಯಲ್ಲಿಯೂ ಕಂಗೆಡದೆ, ಎಲ್ಲ ಸರಿಯಾಗುತ್ತದೆ, ಅದೇನೆಂದರೆ... ಅದು ಯಾಕಾಯಿತೆಂದರೆ... ಅದು ಹೇಗೆ ಹಾಗಾಯಿತೆಂದರೆ, ಅವರು ಆ ಮಾತು ಯಾಕೆ ಆಡಿದರೆಂದರೆ... ಇತ್ಯಾದಿ ವ್ಯಾಖ್ಯಾನಿಸುವ ಅಖಂಡ ತಾಳ್ಮೆ. `ನೀನಾಸಂ' ಗೋಷ್ಠಿಗಳಲ್ಲಿ ಒಮ್ಮಮ್ಮೆ ಪ್ರಶ್ನೆ ಕೇಳುವಾಗ ಅಥವಾ ಉತ್ತರವನ್ನು ಹೇಳುವಾಗಲೂ ಅವಳ ಈ ಸ್ವಭಾವದಿಂದಾಗಿ ಅವು ಅವಧಿ ದಾಟಿ ದೀರ್ಘವಾಗಿ ಕಿರುನಗೆಯಿಂದ, ಕಣ್ಣ ಮಿಟುಕಿನಿಂದ, ಒಂದು ಚಿವುಟಿನಿಂದ ಅವಳನ್ನು ನಾವು ಎಚ್ಚರಿಸುವುದಿತ್ತು. ಹೊರಬಂದ ಮೇಲೆ ಅದನ್ನೇ ಆಡಿ ನಗುವುದಿತ್ತು. `ಸ್ವಲ್ಪ ಸಣ್ಣದಾಗಿ ಹೇಳಬೇಕು ಕಣೆ' ಅಂತಂದು ಅದಕ್ಕೂ ಅವಳದೊಂದು `ಥೋ, ಅದೇನಾಯ್ತೆಂದರೆ'... ಇತ್ಯಾದಿ ವಿಶ್ಲೇಷಣೆ ಕೇಳುತ್ತ ಅವಳನ್ನೂ ಒಳಗೊಂಡೇ ನಮ್ಮ ನಗೆ ವಿಸ್ತರಿಸುವುದಿತ್ತು.

ಪೂರ್ಣಿಮಾಗೆ ಅದು ಬಂದೀತೆಂಬ ಮಸುಕು ಕಲ್ಪನೆ ಕೂಡ ಬಾರದೆ ದಿನಗಳು ಹುರುಪಿಂದ ಉರುಳುತ್ತಿರುವಾಗ ಕ್ಯಾನ್ಸರ್ ಎಂಬ ಸುದ್ದಿ ಸ್ವೀಕರಿಸುವುದೆಂತು? ಕಳ್ಳಮೃತ್ಯು ಅವಳೆಡೆಗೆ ಸದ್ದಿಲ್ಲದೆ ಕೈ ಚಾಚಿರುವ ಝಲ್ಲೆನಿಸುವ ಸುದ್ದಿ ಅದು. ಸುಳ್ಳು, ಸುಳ್ಳೇ ಸುಳ್ಳು ಎಂದು ಸಾವಿರಸಲ ಹೇಳಿಕೊಂಡರೂ ಸತ್ಯ ಸುಳ್ಳಾಗುವುದಿಲ್ಲವಲ್ಲ. ಅದು ನಿಜವಾಯ್ತು. ಬೆಂಗಳೂರಿನಲ್ಲಿ ಅಣ್ಣ ರಾಜಾರಾಮ್, ಅತ್ತಿಗೆ ಶೈಲಾ ಪ್ರೀತಿ ಅಂತಃಕರಣದಿಂದ ಅವಳನ್ನು ಆರೈಕೆಯ ತೆಕ್ಕೆಗೆ ಆನಿಸಿಕೊಂಡರು. ಬೆಂಗಳೂರು- ಸಾಗರ- ಬೆಂಗಳೂರು ಎಂದು ಆಗಲೇ ಒಂದು ವರ್ಷ ದಾಟಿಯೂ ಹೋಯ್ತು. ನಡುವೆಯೊಮ್ಮೆ ಅವಳೊಂದಿಗೆ ಆಶಾದೇವಿ ಊಟ ಏರ್ಪಡಿಸಿದಾಗ ಒಂದು ದಿನವಿಡೀ ಜೊತೆಯಾಗಿ ಕಳೆದಿದ್ದೆವು. ಅಂದು ಕಿಮೋಥೆರಪಿಯ ಪರಿಣಾಮಗಳನ್ನು ಧರಿಸಿಕೊಂಡೇ ಅವಳು ಇವೆಲ್ಲದರ ವೈಜ್ಞಾನಿಕ ವಿವರ, ಕುಶಾಲು, ತಮಾಷೆ ಇತ್ಯಾದಿಗಳಲ್ಲಿ ಸಹಜವಾಗಿ ಇದ್ದಂತಿದ್ದರೂ ಒದ್ದೆ ಕಣ್ಣಂಚಲ್ಲಿ ನೋವು ತೇಲುತ್ತಿದ್ದುದು ಹೇಗೆ ಅರಿವಾಗುತಿತ್ತು. ಹೋಗದಂತೆ ಅವಳನ್ನು ಹಿಡಿಯಬೇಕು, ಉಳಿಸಿಕೊಳ್ಳಬೇಕು, ಕಾಹಿಲೆಯ ಸೆರೆಯಿಂದ ಬಿಡಿಸಿಕೊಳ್ಳಬೇಕು... ಇಂಥವರನ್ನೂ ಕಳಿಸಬೇಕೆಂದರೆ! ಭೂಮಿ ಬರಡಾಗುವುದೆಂದರೆ ಏನು ಮತ್ತೆ? ನಮ್ಮ ನಮ್ಮ ಪ್ರಪಂಚವಾದರೂ ಶೂನ್ಯವೆನಿಸುವುದು ಯಾವಾಗ? ಇಲ್ಲ ಇಲ್ಲ, ಹಾಗಾಗದು. ಹಾಗಾಗಬಾರದು.

ಪಕ್ಕದಲ್ಲೇ, ಗೋಡೆಗೊರಗಿ ಕುಳಿತು, ಕ್ಯಾನ್ಸರ್‌ನ ಭದ್ರಮುಷ್ಟಿ ತೆರೆದು ಹೊರಗೆ ಬಂದವರ ಮನೋದಾರ್ಢ್ಯದ ಕತೆಗಳನ್ನು ಸ್ವತಃ ಪೂರ್ಣಿಮಾಳೇ ನಮಗೆ ಹೇಳುತಿದ್ದಾಳೆ... ಸರಿಯಾಗುತ್ತದೆ, ಸ್ವಲ್ಪ ನಿಧಾನ, ಬರುವುದು ಬರುತ್ತದೆ, ಪರಿಹಾರವಾಗುವವರೆಗೂ ಸಹಿಸಿಕೋಬೇಕಲ್ಲ ಎನ್ನುತಿದ್ದಾಳೆ. ನಮ್ಮನ್ನು ಒಳಗೊಳಗೇ ಬಿಕ್ಕಿಬಿಕ್ಕಿ ಅಳಿಸುತಿದ್ದಾಳೆ.

***
ಕಳೆದ ವರ್ಷ ಜುಲೈ ಮೊದಲ ವಾರ. ಆಕೆ ಆಗ ಸಾಗರದಲ್ಲೇ ಇದ್ದಳು. ಒಂದು ನಡು ಮಧ್ಯಾಹ್ನ ಅವಳಿಗೆ ಫೋನು ಮಾಡಿದ್ದೆ. ಮಾತಾಡುವಾಗ ಅವಳ ಭಾರ ಉಸಿರಿನ ಸದ್ದು ಕೇಳುತಿತ್ತು. ಆಯಾಸವಾದರೆ ಇನ್ನೊಮ್ಮೆ ಮಾತಾಡುವ ಅಂದರೆ ಏನಿಲ್ಲ, ಸ್ವಲ್ಪ ಆಯಾಸ ಅಷ್ಟೆ. ಅದೆಲ್ಲ ಇದ್ದದ್ದೆ. ಅಶೋಕ್ ಮತ್ತು ನಾನು ಈ ತಿಂಗಳು ನಿಮ್ಮಲ್ಲಿಗೆ ಬರಬೇಕೆಂದಿದ್ದೇವೆ... ಇತ್ಯಾದಿ ನುಡಿದಳು.

ಸುಮಾರು ಅರ್ಧ ತಾಸು ಅವಳ ಮಾತು ಕೇಳುತ್ತ ಕೇಳುತ್ತ ಕಳವಳ ಏರುತ್ತ ಹೋಯಿತು. `ನಾನು ನಾಳೆಯೇ ಹೊರಟು ಬರುತ್ತೇನೆ ಎಂದೆ. ಈ ತಿಂಗಳಿಡೀ ಸಾಗರದಲ್ಲೇ ಇರುತ್ತೇನೆ. ಇದೇ ಹದಿನಾರಕ್ಕೆ ಹೇಗೂ ನೀವು ಹೆಗ್ಗೋಡಿಗೆ ಬರುತ್ತೀರಿ. ಆಗ ಬನ್ನಿ, ಸೀದ ನಮ್ಮನೆಗೇ ಬನ್ನಿ. ಜೊತೆಗೇ ಅಲ್ಲಿಗೆ ಹೋಗೋಣ. ಮುಗಿಸಿ, ಜೊತೆಗೇ ನಾವೂ ಸೇರಿ ನಿಮ್ಮಲ್ಲಿಗೇ ಹೊರಟು ಬಿಡೋಣ. ಎರಡೆರಡು ಬಾರಿ ಬರಲು ನಿಮಗೂ ಏನು ಎಳೆ ವಯಸ್ಸೆ?' ಅಂದಳು. ನಾನು ಕೇಳದೆ ಮರುದಿನಕ್ಕೆ ಹೊರಡುವ ಸನ್ನಾಹ ಮಾಡಿದೆ. ಆದರೆ, ಎಲ್ಲಿಂದ ಬಂತೋ ಮಳೆ. ರೌದ್ರ ಮಳೆ ಅದು. ಮಳೆ, ಜೊತೆಗೆ ಬಿರುಬೀಸಿನ ಗಾಳಿ. ಮನಸ್ಸು ಎರಡಾಯಿತು. ಮತ್ತೆ ಕೇವಲ ಹತ್ತೇದಿನಕ್ಕೆ ಹದಿನಾರನೇ ತಾರೀಕು. ಅವಳೆಂದದ್ದು ಸರಿ, ಆಗಲೇ ಹೋಗುವೆ ಎಂದುಕೊಂಡೆ. ಆದರೆ ಅದೇ ಒಂದು ವಾರದೊಳಗೆ ಆಕೆ ಬೆಂಗಳೂರಿಗೆ ಹೋಗಬೇಕಾಯ್ತು, ಮರುದಿನವೇ ಸಮಸ್ಯೆ ಉಲ್ಬಣಿಸಿ ಐಸಿಯು ಪ್ರವೇಶಿಸಿದ್ದೂ ಆಯ್ತು... ಅಶೋಕ್ ಎಲ್ಲ ಹೇಳಿ `ವಾರ್ಡಿಗೆ ಹಾಕುತ್ತಾರೆ, ಆಗ ಬನ್ನಿ, ಈಗಂತೂ ಅವಳಿಗೆ ಏನೂ ತಿಳಿಯದು'.

ಕೊನೇಗಂಟೆಯ ಸದ್ದೇ ಇದು? ಅವಳು ವಾರ್ಡಿಗೆ ಬರಲೆಂದು ಕಾದು, ಧಾವಂತದಿಂದ ಅವಳಿದ್ದ ಆಸ್ಪತ್ರೆಗೆ ಹೋದರೆ ಎಲ್ಲಿದ್ದಳು ಪೂರ್ಣಿಮಾ? ಆಗಲೇ ಆಚೆ ಹಾದಿಯಲ್ಲಿದ್ದಳು. ಅಂಥಲ್ಲೂ ನನ್ನ ಭುಜವನ್ನು ಗಪ್ಪಂತ ಹಿಡಿದಳು. ಎಷ್ಟೋ ಹೊತ್ತು, ಹಾಗೆಯೇ. ಏನೋ ಹೇಳಲು ಬಯಸಿದಳೆ? ಸುಮಾರು ಹೊತ್ತು ಕಳೆದು ತಲೆಸವರಿ `ಬರಲೆ ಪೂರ್ಣಿಮಾ?' ಉಕ್ಕು ದುಃಖ, ಅಳು, ಅವಳೆದುರು ತಡೆದುಕೊಳ್ಳಲೇ ಬೇಕು. ಹೊರಟು ಎರಡು ಹೆಜ್ಜೆ ಇಟ್ಟದ್ದೇ, ಏಳಲು ಒದ್ದಾಡಿ ಅವಳು ಅರ್ಧಎದ್ದು ಕುಳಿತ ಆ ವೇಗ ... ಅದು ಮಂಪರು ಇರಬಹುದು, ಇಹದ ಪರಿವೆಯೇ ಇಲ್ಲದ ಸ್ಥಿತಿ ಇರಬಹುದು, ಆದರೆ ನನಗೆ ಹಾಗನಿಸದು.

ಜುಲೈ 24, ಮರುಮಾರನೇ ದಿನ ಬೆಳಗಿನ ಜಾವ... ಎಲ್ಲ ಮುಗಿಯಿತು.

ತಾಯಿ, ಪತಿ ಪುತ್ರ, ಅಣ್ಣ ಅತ್ತಿಗೆ, ಬಂಧು ಬಾಂಧವರು, ಪ್ರೀತಿಯ ನೀನಾಸಂ, ಅಕ್ಕರೆಯ ನೆರೆಹೊರೆಯವರು, ಒಡನಾಡಿಗಳು, ಊರವರು, ಆಪ್ತಗೆಳತಿಯರು, ಸಹೋದ್ಯೋಗಿಗಳು, `ಪೂರ್ಣಿಮಾ ಮೇಡಂ' ಎಂದು ಮುತ್ತುವ ಅಪಾರ ವಿದ್ಯಾರ್ಥಿಗಳು- ಎಲ್ಲರನ್ನೂ ನೀರವ ದುಃಖದಲ್ಲಿ ಮುಳುಗಿಸಿ ಆಚೆದಡಕ್ಕೆ ಹೊರಟೇ ಹೋದಳು ಪೂರ್ಣಿಮಾ.

ಈಚೆ, ತಂದೆ ತಾಯಿ ಅಣ್ಣ ಕೇವಲ ಕೆಲದಿನಗಳ ಕೆಳಗಷ್ಟೇ ಅಕ್ಕ, ಈಗ ತನ್ನ ಮನೆ ಮನ ಜೀವನದ ಬೆಳದಿಂಗಳಂತೆ ಇದ್ದ ಮಡದಿ ಪೂರ್ಣಿಮಾಳನ್ನೂ ಕಳುಹಿಸಿ ಮಗನ ಹೆಗಲು ಹಿಡಿದು ತಬ್ಬಲಿಯಂತೆ ಎಲ್ಲ ಬರಿದಾದಂತೆ ನಿಂತಿರುವ, ಗಾಂಭೀರ್ಯದ ಮರೆಯಲ್ಲಿಯೇ ಆಳ ಶೋಕಿಸುವ ಅಶೋಕ್.

***
ಈ ತಿಂಗಳಲ್ಲಿ ಬರುತ್ತೇವೆ ಎಂದವಳು, ಆ ತಿಂಗಳಲ್ಲೇ ಹೋದಳು. ಬಾಗಿಲಲ್ಲಿ ಎಷ್ಟು ಕಾದರೂ ಇನ್ನು ಬಾರಳು. ವರ್ಷ ಕಳೆದರೂ ಇಲ್ಲ, ವರ್ಷಾನುವರ್ಷ ಕಳೆದರೂ. ಅವತ್ತು ಹೋಗಬೇಕು ಅಂದುಕೊಂಡ ದಿನವೇ ಏನೇ ಆಗಲಿ, ಸಾಗರಕ್ಕೆ ಹೋಗಿಯೇ ಬಿಡಬೇಕಿತ್ತು ನಾನು, ಯಾಕೆ ಹೋಗಲಿಲ್ಲ? ಅವಳನ್ನು ಕಾಣಬೇಕಿತ್ತು. ಮಾತಾಡಬೇಕಿತ್ತು, ಯಾಕಾದರೂ ಅವಳು ತಿಂಗಳಾಂತ್ಯದವರೆಗೆ ಊರಿನಲ್ಲಿಯೇ ಇರುವೆ ಎಂದಳೋ. ನಾನಾದರೂ ಯಾಕದನ್ನು ನೆಚ್ಚಿಕೊಂಡೆನೋ. ಅಷ್ಟು ಚೆನ್ನಾಗಿದ್ದವಳು, ಆಚೀಚೆ ನೋಡುವುದರೊಳಗೆ ಎಲ್ಲ ಕಳಚಿಟ್ಟು ಎಲ್ಲಿಯೋ ಯಾವುದೋ ತುರ್ತುಕೆಲಸವಿದೆಯೆಂಬಂತೆ ಹೊರಟೇ ಬಿಟ್ಟಾಳು ಎಂಬ ಕಿಂಚಿತ್ ಸಂಶಯವಾದರೂ ಬಂದಿದ್ದರೆ.
ಎಲ್ಲ ಗೊತ್ತಿದ್ದೂ ಅದು ಘಟಿಸುವುದೆಂದು ನಂಬಲು ಇಷ್ಟಪಡದ, ಘಟಿಸಿದಾಗ ವೇದನೆಯಲ್ಲಿ ಕೊಚ್ಚಿಹೋಗುವ ವಾಸ್ತವಗಳಾದರೂ ಎಷ್ಟಿವೆ!

ಎಂಥ ಸಮಸ್ಯೆಯನ್ನೂ ಅದೊಂದು ಒಗಟೋ ತಾನೀಗ ಅದನ್ನು ಬಿಡಿಸುತ್ತಿರುವೆನೋ ಎಂಬಂತೆ ಇದ್ದಳಲ್ಲವೆ ಪೂರ್ಣಿಮಾ. ಕ್ಯಾನ್ಸರಿನ ಎದುರೂ ಅವಳು ಹಾಗೆಯೇ ಕುಳಿತಿದ್ದಳು. ಒಂದು ಅಸಾಧ್ಯ ಒಗಟಿನೊಂದಿಗೆ ಅನುಸಂಧಾನ ಮಾಡಿದಂತೆ ಆ ಕುರಿತೇ ಕವಿತೆ ಬರೆದಳು. ಸುಳಿದು ಹರಡುತ್ತ ಆಹುತಿ ಪಡೆಯಲು ತಯಾರಾಗಿ ಅವಳನ್ನ ಅದು ಪೂರ್ತಿ ತನ್ನ ಕಬ್ಜಕ್ಕೆ ಸೆಳೆದುಕೊಳ್ಳುವವರೆಗೂ ಧೃತಿಗೆಡದೆ, ಸ್ಥಿರತೆಯಿಂದ ತನ್ನನ್ನು ತಾನು ಸಂತೈಸಿಕೊಂಡಳು. ಮಗ ಸಾರಂಗ ಗೃಹಸ್ಥನಾಗಿ ಒಂದು ಹಂತ ತಲುಪುವವರೆಗಾದರೂ ಇರಬೇಕೆಂದು ಹಂಬಲಿಸಿದಳು. ಪತಿ ಅಶೋಕ್ ಖಿನ್ನತೆಯಲ್ಲಿ ಕುಸಿಯದಂತೆ ಕಾಯ್ದುಕೊಂಡಳು. ನಡುನಡುವೆ ಚೇತರಿಸಿಕೊಂಡಾಗೆಲ್ಲ, ತಾನಿನ್ನು ಓಡಾಡುವುದು ಇನ್ನಷ್ಟು ಮತ್ತಷ್ಟು ಆರೋಗ್ಯದ ದಾರಿಯಲ್ಲಿ ಎಂದೇ ಬಿಂಬಿಸಿದವಳು. 2011ರ ಅಕ್ಟೋಬರ ಸಂಸ್ಕೃತಿ ಶಿಬಿರದಲ್ಲಿ ಅವಳು ಇದ್ದ ರೀತಿಯೂ ಹೇಗೆ ಅದನ್ನು ಪುಷ್ಟೀಕರಿಸಿತ್ತು. ನವೆಂಬರಿನಲ್ಲಿ ಆಳ್ವಾಸ್ ನುಡಿಸಿರಿಗೆ ಮೂಡಬಿದಿರೆಗೆ ಬಂದಾಗಂತೂ ಎಷ್ಟು ಕಳೆಕಳೆಯಾಗಿದ್ದಳು.

ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಕೈಬೀಸಿ ನಡೆದೇ ಬಿಡುವಳೆಂದು ಸಣ್ಣಗಾದರೂ ಊಹಿಸಲು ಸಾಧ್ಯವಿತ್ತೆ?
ಅದೇ ದಶಂಬರದಲ್ಲಿ ಎಲ್ಲ ಹುಸಿಯಾಯಿತು.

***
ಹೆಗ್ಗೋಡು ಎಂದರೆ ನಮಗೆಲ್ಲ ಎಂದಿಗೂ ಪೂರ್ಣಿಮಾ ಸಹಿತವೇ, ಅಲ್ಲಿನ ಮೂಲೆ ಮೂಲೆ, ಕೋಣೆ ಕೋಣೆ, ಸಭಾಂಗಣ, ಥಿಯೇಟರ್... ಎಲ್ಲಿಯೂ ಬೆರೆತು ಹೋದವಳು ಅವಳು. ಇನ್ನೂ ಬಿಡಿಸಿ ಹೇಳಬೇಕೆಂದರೆ, ಕರುಳಿನ ಚೂರಿನಂಥವಳು.

ಸ್ವಸ್ಥ ಆಡುತಿದ್ದ ಮಗು ಅರ್ಧಕ್ಕೇ ಆಟ ಬಿಟ್ಟೆದ್ದು ನಡೆದಂತೆ ಇಂಥಲ್ಲಿಗೆ ಎಂದೇ ಎಂದೂ ಯಾರಿಗೂ ತಿಳಿಯದ ಅನೂಹ್ಯದ ಕಡೆಗೆ ಹೊರಟೇ ಹೋದಳು- ಎಂದರೆ? ಏನರ್ಥ?

ಒಮ್ಮೆ ನಾವೇ ನೀನಾಸಂ ಶಿಬಿರದ ಒಂದು ಬೆಳಗ್ಗೆ ಅರ್ಥದ ಕುರಿತು ನಡೆದ ಚರ್ಚೆ ಮುಗಿಸಿ ಹೊರಬರುತ್ತ ಅರ್ಥ ಹುಡುಕಲು ಹೋದರೆ ಅರ್ಥವಿಲ್ಲಪ್ಪಾ ಎಂದು ಅದನ್ನೇ ಸಸೆಸಸೆದು ಸುರುಳಿಸುರುಳಿ ನಕ್ಕಿದ್ದು ನೆನಪಾಗುತ್ತಿದೆ.

ಆ ನಿರ್ಮಲ ಚೇತನವನ್ನು ಇನ್ನು ಎಲ್ಲಿಂದ ಹುಡುಕಿಕೊಳ್ಳಲಿ?

ಚಿತ್ರಗಳು: ಶಶಿಕಿರಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT