ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಮ್ಮ ಬದುಕಿನ ಬೆನ್ನೆಲುಬೇ ಮುರಿದು ಹೋಯ್ತು...'

Last Updated 5 ಆಗಸ್ಟ್ 2013, 10:06 IST
ಅಕ್ಷರ ಗಾತ್ರ

ಮೊಳಕಾಲ್ಮುರು:  ಬಿ.ಜಿ.ಕೆರೆ ಬಳಿಯ ಲಕ್ಷ್ಮಿ ಹೈಟೆಕ್ ನರ್ಸರಿ ಎದುರಿನ ಬಳ್ಳಾರಿ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಕ್ಯಾಂಟರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತುಮಕೂರಿನ ನಾಲ್ವರು ಮೀನು ಕಾರ್ಮಿಕರು ಮೃತಪಟ್ಟರು. 

ಇದರಿಂದ ಜೀವನಾಧಾರಕ್ಕಾಗಿ ಇವರನ್ನೇ ನಂಬಿಕೊಂಡಿದ್ದ ಕುಟುಂಬಗಳೂ ಸಹ ಬೀದಿಗೆ ಬಂದಿವೆ. ಘಟನೆಯಲ್ಲಿ ಬಸ್ ಚಾಲಕ ಕೂಡ  ಮೃತಪಟ್ಟಿದ್ದಾರೆ.

`ಈ ನಾಲ್ವರು ಮೀನು ಸಾಗಣೆ ಕೆಲಸ ನಿರ್ವಹಿಸುತ್ತಿದ್ದರು. ದಿನಗೂಲಿಗಳಾಗಿದ್ದ ಅವರು ಸಾಗಣೆಗೂ ಮುನ್ನ ಮೀನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಶನಿವಾರವೂ ಸಹ ನೆರೆಯ ಆಂಧ್ರಪ್ರದೇಶದ ಮಂತ್ರಾಲಯ ಬಳಿ ಮೀನು ಸ್ವಚ್ಛ ಮಾಡಿ ಕ್ಯಾಂಟರ್‌ನಲ್ಲಿ ತುಂಬಿಕೊಂಡು ತುಮಕೂರಿನ ಕಡೆ ಹೋಗುವಾಗ ನಡೆದ ಈ ದುರ್ಘಟನೆ ನಡೆಯಿತು' ಎಂದು ಮೃತರ ಸಂಬಂಧಿಕರು `ಪ್ರಜಾವಾಣಿ'ಗೆ ತಿಳಿಸಿದರು.

ಮೃತಪಟ್ಟ ಸೈಯದ್ ಹುಸೇನ್ ಮತ್ತು ಚಾಂದ್‌ಗೆ ತಲಾ ಮೂವರು ಮಕ್ಕಳು ಇದ್ದಾರೆ. ಭಕ್ಷ್ ಹಾಗೂ ನಯಾಜ್ ಅವರು ತಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಯುವಕರು ಎಂದು ಅವರು ವಿವರಿಸಿದರು.

ತಾಲ್ಲೂಕಿನ ಮೂಲಕ ಹಾದು ಹೋಗಿರುವ ಬೆಂಗಳೂರು- ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಮೊಳಕಾಲ್ಮುರು ತಾಲ್ಲೂಕು ವಲಯದಲ್ಲಿ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ವಾಹನ ಚಾಲಕರ ಅಜಾಗರೂಕತೆ ಪ್ರಮಾಣದಂತೆಯೇ ರಸ್ತೆಫಲಕಗಳ ದುರಸ್ತಿ, ಸೂಚನಾ ಫಲಕಗಳ ಅಳವಡಿಕೆಯಲ್ಲಿ ನಿರ್ಲಕ್ಷ್ಯ ಮಾಡಿರುವ ಹೆದ್ದಾರಿ ಪ್ರಾಧಿಕಾರದ ತಪ್ಪು ಸಹ ಅಷ್ಟೇ ಪ್ರಮಾಣದಲ್ಲಿದೆ. ಫಲಕಗಳು ಕಳ್ಳರ ಪಾಲಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

`ಅಪಘಾತ ವಲಯ' ಎಂದು ಅಪಖ್ಯಾತಿಗೆ ಒಳಗಾಗಿರುವ ಇಲ್ಲಿ ಕಳೆದ 4 ವರ್ಷಗಳಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನಾದರೂ ರಸ್ತೆಬದಿ ಸೂಕ್ತ ಫಲಕಗಳನ್ನು ಅಳವಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT