ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊಗೆ ಇಂದು ಹಸಿರು ನಿಶಾನೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಮೆಟ್ರೊ~ದ ರೀಚ್- 1ರ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು ಹಸಿರು ನಿಶಾನೆ ತೋರಿಸುವರು. ಮಧ್ಯಾಹ್ನ 3ರ ಬಳಿಕ ಮೆಟ್ರೊ ನಿಲ್ದಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದು. ಸಂಜೆ 4ರಿಂದ ರಾತ್ರಿ 10ರವರೆಗೆ ಪ್ರತಿ ಹತ್ತು ನಿಮಿಷಕ್ಕೊಂದರಂತೆ ರೈಲು ಗಾಡಿಗಳು ಸಂಚರಿಸಲಿವೆ. ಜನರ ಬೇಡಿಕೆ ಮೇರೆಗೆ ರಾತ್ರಿ 11ರವರೆಗೂ ಸೇವೆಯನ್ನು ವಿಸ್ತರಿಸಲು ನಿಗಮವು ಸಿದ್ಧವಿದೆ.

ರೈಲುಗಳು ಪ್ರತಿ ನಿಲ್ದಾಣದಲ್ಲಿ 30 ಸೆಕೆಂಡ್‌ಗಳಷ್ಟು ಸಮಯ ಮಾತ್ರ ನಿಲ್ಲಲಿವೆ. ಇದರಲ್ಲಿ ಬಾಗಿಲು ತೆಗೆಯಲು ಮತ್ತು ಮುಚ್ಚಲು ತಲಾ 5 ಸೆಕೆಂಡ್‌ಗಳು, ಪ್ರಯಾಣಿಕರು ಹತ್ತಿಳಿಯಲು 20 ಸೆಕೆಂಡ್‌ಗಳ ಕಾಲಾವಕಾಶ ಇರಲಿದೆ. 15 ಕೆ.ಜಿ.ಗಿಂತ ಹೆಚ್ಚು ತೂಕದ ಲಗೆಜ್‌ಗಳನ್ನು ಇಟ್ಟುಕೊಂಡು ಪ್ರಯಾಣಿಸಲು ಅವಕಾಶ ಇರುವುದಿಲ್ಲ.

ಸದ್ಯ 4 ರೈಲು ಗಾಡಿಗಳು ಓಡಾಡಲಿವೆ. ಮತ್ತೊಂದು ರೈಲು ಹೆಚ್ಚುವರಿಯಾಗಿ ತುರ್ತು ಬಳಕೆಗೆ ಡಿಪೊದಲ್ಲಿ ಸಿದ್ಧವಾಗಿ ನಿಂತಿರುತ್ತದೆ. ಒಂದು ರೈಲು ಗಾಡಿ 3 ಬೋಗಿಗಳನ್ನು ಒಳಗೊಂಡಿರುತ್ತದೆ. 3 ಬೋಗಿಗಳ ಪೈಕಿ ಮುಂದಿನ ಮತ್ತು ಹಿಂದಿನ ಬೋಗಿಗಳು ಎಂಜಿನ್ ಅಥವಾ ಚಾಲಕನ ಕ್ಯಾಬಿನ್ ಹೊಂದಿರುತ್ತವೆ. ಒಂದು ರೈಲು ಗಾಡಿಯು ಒಂದು ಸಲಕ್ಕೆ ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲಿದೆ.

ಗುರುವಾರ ಸಂಜೆ 4ರಿಂದ ಎಂ.ಜಿ.ರಸ್ತೆ ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣ- ಎರಡೂ ಕಡೆಯಿಂದ ರೈಲುಗಾಡಿಗಳು ಗಂಟೆಗೆ ಆರು ಟ್ರಿಪ್ ಸಂಚಾರ ನಡೆಸಲಿವೆ. ಆರಂಭದ ದಿನಗಳಲ್ಲಿ ನೂಕು ನುಗ್ಗಲು ಆಗುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಒಂದು ನಿಲ್ದಾಣದಲ್ಲಿ ಒಂದು ಟ್ರಿಪ್‌ಗೆ 400 ಮಂದಿ ಮಾತ್ರ ರೈಲು ಹತ್ತಲು ಅವಕಾಶ ಕೊಡಲಾಗುವುದು. ಹೀಗಾಗಿ ಪ್ರಯಾಣಿಕರು ಎಂ.ಜಿ. ರಸ್ತೆ ನಿಲ್ದಾಣದಲ್ಲೇ ರೈಲು ಹತ್ತುವ ಬದಲು ಟ್ರಿನಿಟಿ, ಹಲಸೂರು ಮೊದಲಾದ ನಿಲ್ದಾಣಗಳಿಗೆ ಹೋಗಿ ರೈಲು ಪ್ರಯಾಣದ ಅನುಭವ ಪಡೆದುಕೊಳ್ಳುವುದು ಸೂಕ್ತ ಎಂಬುದು ನಿಗಮದ ಅಧಿಕಾರಿಗಳ ಸಲಹೆ.

ಶುಕ್ರವಾರದಿಂದ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಿಯಮಿತವಾಗಿ ಮೆಟ್ರೊ ರೈಲುಗಳು ಓಡಾಟ ನಡೆಸಲಿವೆ. ದಟ್ಟಣೆ ವೇಳೆ (ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ) 10 ನಿಮಿಷಕ್ಕೊಂದರಂತೆ ಹಾಗೂ ಉಳಿದ ವೇಳೆ (ಬೆಳಿಗ್ಗೆ 6ರಿಂದ 8 ಮತ್ತು ರಾತ್ರಿ 8ರಿಂದ 10ರ ತನಕ) 15 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸಲಿವೆ.

ರೈಲು ಗಾಡಿಗಳಿಗೆ ವಿದ್ಯುತ್ ಪೂರೈಸುವ ಮೂರನೇ ಹಳಿ (ಥರ್ಡ್ ರೈಲ್) ಇರುವುದರಿಂದ ಪ್ಲಾಟ್‌ಫಾರಂ ಅಂಚಿನಿಂದ 1.5 ಅಡಿ ದೂರವೇ ನಿಲ್ಲುವಂತೆ ಹಳದಿ ಬಣ್ಣದ ಪಟ್ಟಿಗಳನ್ನು ಬರೆಸಲಾಗಿದೆ. ರೈಲು ಬರುವಾಗ ಮತ್ತು ಹೋಗುವಾಗ ಹಳದಿ ಪಟ್ಟಿಯ ಒಳಗೆ ಪ್ರಯಾಣಿಕರು ನಿಲ್ಲಬೇಕು.

ಪ್ರತಿ ರೈಲು ಬೋಗಿಗೆ ಒಂದು ಬದಿಯಲ್ಲಿ ನಾಲ್ಕು ದ್ವಾರಗಳಿದ್ದು, ನಾಲ್ಕೂ ದ್ವಾರಗಳ ಬಳಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಚಾಲಕರಿಗೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿನ ಸ್ಥಿತಿಗತಿಯ ಸಂಪೂರ್ಣ ಚಿತ್ರಣ ವೀಕ್ಷಿಸಲು ಅನುಕೂಲವಾಗುವಂತೆ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದೆ. ರೈಲುಗಳ ಒಳಗೆ ಮಾತ್ರವಲ್ಲದೇ ನಿಲ್ದಾಣಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇದರಿಂದ ಯಾವುದೇ ಅಹಿತಕರ ಮತ್ತು ಅನುಚಿತ ಘಟನೆಗಳನ್ನು ತಪ್ಪಿಸಬಹುದು. ಇದರಿಂದ ಪ್ರಯಾಣಿಕರಿಗೆ ತೊಂದರೆ ರಹಿತ ಪ್ರಯಾಣದ ಅನುಭವ ನೀಡಬಹುದು ಎಂಬುದು ನಿಗಮದ ವಿಶ್ವಾಸ.

`ಹೆಚ್ಚಿನ ನೆರವಿಗೆ ಕೇಂದ್ರಕ್ಕೆ ಕೋರಿಕೆ~
ಬಹು ನಿರೀಕ್ಷೆಯ `ನಮ್ಮ ಮೆಟ್ರೊ~ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎರಡನೇ ಹಂತದ ಮೆಟ್ರೊ ಯೋಜನೆಗೆ ಹೆಚ್ಚಿನ ನೆರವು ನೀಡುವಂತೆ ಗುರುವಾರ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಮುಂದಿಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ತಿಳಿಸಿದರು.

ನಗರದಲ್ಲಿ ಬುಧವಾರ `ತೆರಿಗೆ ಭವನ~ದ ಉದ್ಘಾಟನಾ ಸಮಾರಂಭದ ನಂತರ ಮಾತನಾಡುತ್ತಾ, ಉದ್ಘಾಟನೆ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಅಲ್ಲದೆ, ನಗರದಲ್ಲಿ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಸುಸ್ಥಿತಿಗೆ ತರಲು ಮಹಾನಗರ ಪಾಲಿಕೆ, ಬಿಡಿಎ ಹಾಗೂ ಜಲಮಂಡಳಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ಒಂದಷ್ಟು ಯಶಸ್ಸು ಕೂಡ ಸಾಧಿಸಲಾಗಿದೆ ಎಂದರು.

ಭವಿಷ್ಯದ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಮೆಟ್ರೊ ನಿಲ್ದಾಣ ಸಮೀಪ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ನಮ್ಮ ವೆುಟ್ರೊ ಲೋಕಾರ್ಪಣೆ ನಂತರವೂ ನಗರದ ಜನತೆ ವಾಹನ ಸಂಚಾರ ದಟ್ಟಣೆ ಸಮಸ್ಯೆಯಿಂದ ತೊಂದರೆ ಅನುಭವಿಸಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಮೆಟ್ರೊ ಕಾರ್ಡ್
ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಭಾರತೀಯ ಸ್ಟೇಟ್ ಬ್ಯಾಂಕ್, ಡೆಬಿಟ್ ಕಮ್ ಟ್ರಾನ್ಸಿಟ್ ಕಾರ್ಡ್‌ಗಳನ್ನು ಪರಿಚಯಿಸಿದೆ. ಈ ಕಾರ್ಡ್ ಅನ್ನು  ಎಟಿಎಂಗಳಲ್ಲಿ ನಗದು ಪಡೆಯಲು ಬಳಸುವುದರ ಜತೆಗೆ ಅಂಗಡಿ ಮಳಿಗೆಗಳಲ್ಲಿ ಖರೀದಿಗೆ ಬಳಸಬಹುದು.

ಇದೊಂದು ರೀತಿ ಎಲೆಕ್ಟ್ರಾನಿಕ್ ಪರ್ಸ್ ಇದ್ದಂತೆ. ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಟಿಕೆಟ್ ಮಾರಾಟ ಯಂತ್ರಗಳ ಮೂಲಕವೂ ಎಸ್‌ಬಿಐ ಡೆಬಿಟ್/ ಟ್ರಾನ್ಸಿಟ್ ಕಾರ್ಡ್‌ಗಳಿಗೆ ಹಣ ತುಂಬಿಸಬಹುದಾಗಿದೆ.

ನಿಲ್ದಾಣಗಳಲ್ಲಿ ಶೌಚಾಲಯಗಳಿಲ್ಲ
ಮೆಟ್ರೊದ ಯಾವುದೇ ನಿಲ್ದಾಣದ ಒಳ ಆವರಣದಲ್ಲಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ನಿಲ್ದಾಣಗಳ ಹೊರ ಆವರಣದಲ್ಲಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗುವುದು.

ಆರು ನಿಲ್ದಾಣ: ಒಂದು ಕಡೆ ಮಾತ್ರ ಪಾರ್ಕಿಂಗ್
ರೀಚ್- 1ರ ವ್ಯಾಪ್ತಿಯ ಆರು ನಿಲ್ದಾಣಗಳ ಪೈಕಿ ಮೆಟ್ರೊ ಡಿಪೊ ಇರುವ ಬೈಯಪ್ಪನಹಳ್ಳಿಯಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಎಂ.ಜಿ. ರಸ್ತೆ ಸೇರಿದಂತೆ ಐದು ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
ಬೈಯಪ್ಪನಹಳ್ಳಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ಪಾರ್ಕಿಂಗ್ ತಾಣದಲ್ಲಿ 75 ಕಾರುಗಳು ಮತ್ತು 200 ದ್ವಿಚಕ್ರ ವಾಹನಗಳಿಗೆ ಅವಕಾಶ ಇದೆ. ಮುಂದಿನ ದಿನಗಳಲ್ಲಿ ಇಲ್ಲಿ ಹೈಟೆಕ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವ ಉದ್ದೇಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT