ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊಗೆ ರೈಲ್ವೆ ಸುರಕ್ಷತಾ ಆಯುಕ್ತರ ಪ್ರಮಾಣ ಪತ್ರ

Last Updated 23 ಸೆಪ್ಟೆಂಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ `ನಮ್ಮ ಮೆಟ್ರೊ~ದ ರೀಚ್- 1ರಲ್ಲಿ ರೈಲು ಸಂಚಾರಕ್ಕೆ ಅಗತ್ಯವಾಗಿದ್ದ ರೈಲ್ವೆ ಸುರಕ್ಷತಾ ಆಯುಕ್ತರ ಪ್ರಮಾಣ ಪತ್ರ ಪಡೆದುಕೊಳ್ಳುವಲ್ಲಿ `ಬೆಂಗಳೂರು ಮೆಟ್ರೊ ರೈಲು ನಿಗಮ~ ಯಶಸ್ವಿಯಾಗಿದೆ. ಇನ್ನು ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವ ಕೆಲಸ ಮಾತ್ರ ಬಾಕಿ ಉಳಿದಿದೆ.

ರೈಲ್ವೆ ಸುರಕ್ಷತಾ ಪ್ರಮಾಣ ಪತ್ರವು ಶುಕ್ರವಾರ ಸಂಜೆ ನಿಗಮದ ಕಚೇರಿ ತಲುಪಿದೆ ಎಂದು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ತಿಳಿಸಿದರು.

`ರೈಲು ಸಂಚಾರ ಆರಂಭಿಸಲು ತಾನು ಸಿದ್ಧವಿರುವುದಾಗಿ ನಿಗಮವು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿದೆ. ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಪ್ರಧಾನಿಯವರ ದಿನಾಂಕವನ್ನು ಖಚಿತಪಡಿಸಿಕೊಂಡು ಉದ್ಘಾಟನೆಯ ದಿನಾಂಕವನ್ನು ನಿಗದಿ ಮಾಡಲಿದ್ದಾರೆ~ ಎಂದು ಅವರು ಹೇಳಿದರು.

ರೈಲ್ವೆ ಸುರಕ್ಷತಾ ಆಯುಕ್ತ ದೀಪಕ್‌ಕುಮಾರ್ ಸಿಂಗ್ ನೇತೃತ್ವದ ತಜ್ಞರ ತಂಡ ಕೆಲ ದಿನಗಳ ಹಿಂದೆ `ರೀಚ್- 1~ರ ಮಾರ್ಗದಲ್ಲಿನ ಸಿಗ್ನಲಿಂಗ್, ವೇಗ ಪರೀಕ್ಷೆ, ಪ್ರಯಾಣಿಕ ಸೌಕರ್ಯಗಳು, ಸುರಕ್ಷತಾ ಕ್ರಮಗಳು ಮತ್ತಿತರ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು.

ಪರಿಶೀಲನೆ ನಂತರ ಸರಿಪಡಿಸಬೇಕಾದ ಅಂಶಗಳ ಬಗ್ಗೆ ಪಟ್ಟಿಯೊಂದನ್ನು ಆಯುಕ್ತರು ನಿಗಮಕ್ಕೆ ಸಲ್ಲಿಸಿದ್ದರು. ನ್ಯೂನತೆಗಳನ್ನು ಸರಿಪಡಿಸಿಕೊಂಡ ಬಗ್ಗೆ ನಿಗಮವು ಆಯುಕ್ತರಿಗೆ ದಾಖಲಾತಿಗಳನ್ನು ಸಲ್ಲಿಸಿತ್ತು. ಅವೆಲ್ಲವನ್ನೂ ಪರಿಶೀಲಿಸಿದ ಬಳಿಕ ಆಯುಕ್ತರು ಪ್ರಮಾಣ ಪತ್ರ ನೀಡಿದ್ದಾರೆ.

ಇತ್ತೀಚೆಗಷ್ಟೇ `ನಮ್ಮ ಮೆಟ್ರೊ~ ಕಾಮಗಾರಿ ಪರಿಶೀಲಿಸಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೆ. 25ರೊಳಗೆ ರೈಲ್ವೆ ಸುರಕ್ಷತಾ ಆಯುಕ್ತರ ಪ್ರಮಾಣ ಪತ್ರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಸಿಎಂ ನಿರೀಕ್ಷೆಯಂತೆಯೇ ಅಷ್ಟರೊಳಗೆ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಉದ್ಘಾಟನೆಗೆ ದಿನ ನಿಗದಿಪಡಿಸಿ ಪ್ರಧಾನಿಯನ್ನು ಆಹ್ವಾನಿಸುವುದಷ್ಟೇ ಬಾಕಿ ಉಳಿದಿದೆ.

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಸೆ. 27ರಂದು ಸ್ವದೇಶಕ್ಕೆ ಮರಳಲಿದ್ದು, ಆನಂತರ ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿ `ನಮ್ಮ ಮೆಟ್ರೊ~ ಉದ್ಘಾಟನೆಗೆ ಆಹ್ವಾನಿಸುವ ಸಾಧ್ಯತೆಯಿದೆ. ಪ್ರಧಾನಿ ಒಪ್ಪಿಗೆ ನಂತರವೇ `ನಮ್ಮ ಮೆಟ್ರೊ~ ಉದ್ಘಾಟನೆ ದಿನಾಂಕ ಕೂಡ ನಿಗದಿಯಾಗಲಿದೆ.

ಒಂದು ವೇಳೆ ತಕ್ಷಣ ಪ್ರಧಾನಿಯವರ ಒಪ್ಪಿಗೆ ದೊರೆಯದಿದ್ದಲ್ಲಿ `ನಮ್ಮ ಮೆಟ್ರೊ~ ಉದ್ಘಾಟನೆ ಸ್ವಲ್ಪ ವಿಳಂಬವಾಗಬಹುದು ಎನ್ನುತ್ತಿವೆ ಬಿಎಂಆರ್‌ಸಿಎಲ್ ಮೂಲಗಳು. ಒಟ್ಟಿನಲ್ಲಿ ಎಲ್ಲವೂ ಪ್ರಧಾನಿ ಒಪ್ಪಿಗೆ ಹಾಗೂ ರಾಜ್ಯ ಸರ್ಕಾರದ ತೀರ್ಮಾನವನ್ನು ಅವಲಂಬಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT