ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನು ಬದಲಾಯಿಸುವ ಕೃತಿಗಳೇ ಉತ್ತಮ ಕೃತಿಗಳು

ಸಾಹಿತ್ಯ ಸಾಂಗತ್ಯ
Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ನಿಮ್ಮ ಬಾಲ್ಯದಲ್ಲಿ ಓದಿಗೆ ಪೂರಕವಾದ ವಾತಾವರಣ ಮನೆಯಲ್ಲಿ ಇತ್ತೆ?
ಇಲ್ಲ ಎಂದೇ ಹೇಳಬಹುದು. ನಾನು ಕವಯಿತ್ರಿಯಾದದ್ದು ಆಕಸ್ಮಿಕ ಎನ್ನಬಹುದು. ನಮ್ಮ ಮನೆಯಲ್ಲಿ ಇದ್ದುದು ರಾಮಕೃಷ್ಣ ಪರಮಹಂಸ, ದಯಾನಂದ ಸರಸ್ವತಿ, ವಿವೇಕಾನಂದ, ವೇದಪ್ರಕಾಶ ಹಾಗೂ ನನಗೆ ತಿಳಿಯದ ಹಿಂದಿ ಭಾಷೆಯಲ್ಲಿದ್ದ ದೇವರು-ಧರ್ಮ ಕುರಿತಂತೆ ಇದ್ದ ಪುಸ್ತಕಗಳು.

ನನ್ನ ತಂದೆ, ಅಜ್ಜಿ ಆರ್ಯ ಸಮಾಜದ ಅನುಯಾಯಿಗಳು. ನಮ್ಮ ಮನೆಯಲ್ಲಿ ಮೂರ್ತಿಪೂಜೆ ಇರಲಿಲ್ಲ. ಯಾವುದೇ ಜಾತಿ ಆಚರಣೆಗಳೂ ಇರಲಿಲ್ಲ. ಆದರೆ, ನಿರಂತರ ದೇವರನ್ನು ಕುರಿತ ಜಿಜ್ಞಾಸೆ ನನ್ನ ತಂದೆ ಮತ್ತು ಅಜ್ಜಿಯ ನಡುವೆ ನಡೆಯುತ್ತಿತ್ತು.

ಮಕ್ಕಳು ಓದುವಂತಹ ಒಂದು ಪುಸ್ತಕವೂ ನಮ್ಮ ಮನೆಯಲ್ಲಿ ಇರಲಿಲ್ಲ.  ನನ್ನ ತಾಯಿ ಹೇಳುತ್ತಿದ್ದ `ಪುಣ್ಯಕೋಟಿ ಗೋವಿನ ಕಥೆ' ನಾನು ಕೇಳಿದ ಮೊದಲ ಕಥೆ. `ಪ್ರಸ್ನೆ ಮಂಥಾರಿ' (ಹೂಸಿನ ಮುದುಕಿ) ಎಂಬ ಕತೆಯೂ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ನನ್ನ ದೊಡ್ಡಮ್ಮ ಹೇಳುತ್ತಿದ್ದ ತುಳು ಜಾನಪದ ಕತೆಗಳೂ ನನ್ನನ್ನು ಪ್ರಭಾವಿಸಿವೆ.

ನೀವು ಓದು ತೀರಾ ಹಚ್ಚಿಕೊಂಡಿದ್ದು ಯಾವಾಗ? ನಿಮ್ಮ ಓದಿನ ಪ್ರಯಾಣ ಹೇಗೆ ಆರಂಭವಾಯಿತು?
ನನ್ನ ಬಂಧುವೊಬ್ಬರು (ವಸಂತ ಮಾಮ) ಪುಸ್ತಕ ಪ್ರೇಮಿಯಾಗಿದ್ದರು. ನನ್ನ ದೊಡ್ಡಮ್ಮನ ಮನೆಯಲ್ಲಿ ವಾಸಿಸುತ್ತಿದ್ದ ಅವರು `ಮಲ್ಲಿಗೆ', `ಸುಧಾ', `ಪ್ರಜಾಮತ', `ಮಯೂರ', `ತುಷಾರ', `ಲಂಕೇಶ್ ಪತ್ರಿಕೆ'ಗಳನ್ನು ತಪ್ಪದೆ ಕೊಂಡುಕೊಳ್ಳುತ್ತಿದ್ದರು. ತಾವು ಓದಿದ ನಂತರ ನನ್ನ ದೊಡ್ಡಮ್ಮನ ಹೆಣ್ಣುಮಕ್ಕಳಿಗೆ ವರ್ಗಾಯಿಸುತ್ತಿದ್ದರು.

ನಾನು ಪ್ರತಿ ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಮೇಲೆ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ನಾನು ನನ್ನ ಅಕ್ಕ ಸುಮನಳೊಂದಿಗೆ ಆಟವಾಡಲು ಹೋಗುವುದಾದರೂ ಅವಳಿಗೆ ಓದುವ ಹುಚ್ಚಿದ್ದರಿಂದ ನನಗೂ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುತ್ತಿದ್ದಳು. ತ್ರಿವೇಣಿ, ಎಂ.ಕೆ.ಇಂದಿರಾ, ಶಿವರಾಮಕಾರಂತ, ಅನುಪಮಾ ನಿರಂಜನ ಮೊದಲಾದವರ ಕಾದಂಬರಿಗಳನ್ನು ಪರಿಚಯಿಸಿದವಳು ಅವಳೇ.

ಅವಳು ಸಣ್ಣಪುಟ್ಟ ಕತೆಗಳನ್ನು ಬರೆದು ತನ್ನದೇ ಮ್ಯಾಗಜೀನ್ ಮಾಡಿ, ಚಿತ್ರ ಬರೆದು ನನಗೆ ಓದಲು ನೀಡುತ್ತಿದ್ದಳು. ನನ್ನ ವಿಮರ್ಶೆ ಬೇಡುತ್ತಿದ್ದಳು. ನನ್ನ ಪ್ರತಿಕ್ರಿಯೆ ಸದಾ ಪಾಸಿಟೀವ್ ಆಗಿರುತ್ತಿತ್ತು! ಇಂಗ್ಲಿಷ್ ಮೇಜರ್ ವಿದ್ಯಾರ್ಥಿನಿಯಾಗಿದ್ದ ಆಕೆ ಇಂಗ್ಲಿಷ್‌ನಲ್ಲಿ ಕವನ ಬರೆಯುತ್ತಿದ್ದಳು. ಕವನವೆಂದರೆ ಇಂಗ್ಲಿಷ್‌ನಲ್ಲೇ ಬರೆಯಬೇಕೇನೂ ಎಂದು ನಾನೂ ನನ್ನ ಪ್ರಥಮ ಕವನ ‘My window companion’  ಎಂಬ ಇಂಗ್ಲಿಷ್ ಕವನವನ್ನು ಬರೆದೆ. ಅದು ಪಿ.ಯು. ಕಾಲೇಜಿನ ವಾರ್ಷಿಕ ಮ್ಯಾಗಜೀನ್‌ನಲ್ಲಿ ಪ್ರಕಟವಾಯಿತು.

ಅನಿರೀಕ್ಷಿತವಾಗಿ ನನಗೆ ಬಹುಮಾನವಾಗಿ ಬಂದ ಕುವೆಂಪು ಅವರ `ವಿಚಾರ ಕ್ರಾಂತಿಗೆ ಆಹ್ವಾನ' ಪುಸ್ತಿಕೆ ನನ್ನ ಆಲೋಚನಾ ಲಹರಿಯನ್ನೇ ಬದಲಿಸಿತು. ಆ ಹೊತ್ತಿನಲ್ಲಿ ಮಹಿಳೆಯರು ನೂರಾರು ಕಾದಂಬರಿಗಳನ್ನು ಬರೆಯುತ್ತಿದ್ದರು. ಕೈಗೆ ಸಿಕ್ಕಿದ್ದನ್ನು ಓದುವುದೇ ಕೆಲಸ. ಓದು, ಓದು, ಓದು, ಶಿವಮೊಗ್ಗದ ಸಾರ್ವಜನಿಕ ಗ್ರಂಥಾಲಯಕ್ಕೆ ದಾಳಿ ಇಡುತ್ತಿದ್ದೆವು. ಪ್ರೈವೇಟ್ ಲೈಬ್ರರಿಗೂ ನಾನು ಮೆಂಬರು. ಆ ಹೊತ್ತು ಮನರಂಜನೆ ಎಂದರೆ ಪುಸ್ತಕ ಮತ್ತು ಆಟ.

ಜತೆಗೆ ಶಾಲೆಗೆ ಭೇಟಿ ನೀಡಿದ ಕುವೆಂಪು, ಕಾರಂತ ಇವರನ್ನು ನೋಡಿ ಅವರಿಗೆ ಜನ ನೀಡುತ್ತಿದ್ದ ಮನ್ನಣೆ ನೋಡಿ `ಸಾಹಿತ್ಯ ತುಂಬ ದೊಡ್ಡದು' ಎಂದು ನನ್ನ ಎಳೆಯ ಮನ ತರ್ಕಿಸಿತು. ನನ್ನ ಎಂಟನೆಯ ತರಗತಿಯಿಂದಲೇ ನನ್ನ ಪ್ರಪಂಚ ಪುಸ್ತಕ ಪ್ರಪಂಚವಾಗಿತ್ತು. ಶಾಲಾ ಪರೀಕ್ಷೆ ನಡೆಯುತ್ತಿರುವಾಗಲೂ ಪಕ್ಕದಲ್ಲಿ ಕಾದಂಬರಿಯೊಂದು ಇರುತ್ತಿತ್ತು. ಅಷ್ಟಕ್ಕೂ ನನ್ನ ತಂದೆ-ತಾಯಿ ಪಠ್ಯಪುಸ್ತಕ ಓದು ಎಂದು ಹೇಳಿದವರೇ ಅಲ್ಲ.

ಪರೀಕ್ಷೆಯಲ್ಲಿ ಫೇಲಾದರೆ ಕೊಟ್ಟಿಗೆ ಕೆಲಸಕ್ಕೆ ಹೋಗಬೇಕಾದೀತು ಎಂದು ಒಂದೇ ಒಂದು ಎಚ್ಚರಿಕೆ ಮಾತು ಹೇಳಿ ಸುಮ್ಮನಾಗುತ್ತಿದ್ದರು. `ಪಾಸಾಗುವುದು' ಮಕ್ಕಳದೇ ಜವಾಬ್ದಾರಿ ಎಂದು ನನ್ನ ಅಜ್ಜಿ ದನಿಗೂಡಿಸುತ್ತಿದ್ದರು. ನಾವು ಯಾವುದೇ ಒತ್ತಡವಿಲ್ಲದೆ ಕತೆ-ಕಾದಂಬರಿ ಓದುತ್ತಾ ಫಸ್ಟ್‌ಕ್ಲಾಸಿನಲ್ಲಿಯೇ ಪಾಸಾಗುತ್ತಿದ್ದೆವು! ನನ್ನ ಓದಿಗೆ ಒಂದು ಹೊಸ ತಿರುವು ಸಿಕ್ಕಿದ್ದು ಮದುವೆಯ ನಂತರ. ನಾಗಭೂಷಣ ಅವರು ಪುಸ್ತಕ ಪ್ರೇಮಿಯಾಗಿದ್ದರಿಂದ.

ನಿಮಗೆ ನಿಮ್ಮ ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಪುಸ್ತಕಗಳ ಬಗ್ಗೆ ಹೇಳಿ.
ಚಂದಮಾಮದ ಕತೆಗಳು, `ಪುಟ್ಟ ಕೆಂಚಮ್ಮ', `ರಾಮ ಮತ್ತು ಅವರೆಗಿಡ', `ಪಿನೋಕಿಯೋ',' `ಸಿಂಡ್ರೆಲ್ಲಾ', `ನಿದ್ರಾಸುಂದರಿ', `ರಾಮಾಯಣ', `ಅಕ್ಬರ್-ಬೀರ್‌ಬಿಲ್ ಕತೆಗಳು', ಮಹಾಭಾರತ, ಪಂಚತಂತ್ರದ ಕಥೆಗಳು, ಈ ಕಥೆಗಳ ಸಚಿತ್ರ ಮಾಲಿಕೆಗಳು - ಮತ್ತೆ ಮತ್ತೆ ಮಗುಚಿ ಹಾಕಿದ ಪುಸ್ತಕಗಳು.

ಒಂದು ಪುಸ್ತಕವನ್ನು ನೂರು ಬಾರಿ ಓದಿದರೂ ಬೇಸರವಿಲ್ಲ! ಮೂರನೇ ತರಗತಿಯ ಪಠ್ಯಪುಸ್ತಕದಲ್ಲಿನ `ಪೆದ್ದ ಗುಂಡ' ನನಗೆ ಅತ್ಯಂತ ಪ್ರಿಯವಾದ ಕತೆ. `ಹುಗ್ಗಿಯ ಹೊಳೆ' ಎಂಬ 4ನೇ ಇಯತ್ತಿಯ ಪಠ್ಯಪುಸ್ತಕದಲ್ಲಿನ ಕಥೆ ನನ್ನನ್ನು ಅಪಾರವಾಗಿ ಬೆರಗುಗೊಳಿಸಿದ ಕಥೆ.

ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು?
ಯಾವುದಾದರೂ ಕೃತಿಯನ್ನು ಓದಿದರೆ ನೀವು ಮೊದಲು ಹೇಗಿರುತ್ತಿರೋ ಆ ಕೃತಿ ಓದಿದ ನಂತರ ಹಾಗೆಯೇ ಇರುವುದಿಲ್ಲ; ಬದಲಾದ ಮನುಷ್ಯರಾಗುತ್ತೀರಿ. ಹಾಗೆ ನಿಮ್ಮನ್ನು ಬದಲಾಯಿಸುವ ಕೃತಿಗಳೇ ಅತ್ಯುತ್ತಮ ಕೃತಿಗಳು ಎಂದು ನನ್ನ ಅನಿಸಿಕೆ. `ಒಂದು ಹುಲ್ಲಿನ ಕ್ರಾಂತಿ', `ರಾಮಕೃಷ್ಣ ವಚನವೇದ', ಗಾಂಧಿಯ `ಹಿಂದ್ ಸ್ವರಾಜ್' `ಆತ್ಮಚರಿತ್ರೆ', ಕುವೆಂಪು, ತೇಜಸ್ವಿ, ಬಾಗಲೋಡಿ ದೇವರಾಯ, ದೇವನೂರ ಮಹಾದೇವ, ಶಾಂತಿನಾಥ ದೇಸಾಯಿ, ವೀಣಾ, ವೈದೇಹಿ ಅವರ ಕಥೆಗಳು. ಬಸವಣ್ಣ, ಅಕ್ಕ, ನೆರೂದಾ, ಅಮೃತಾಪ್ರೀತಂ ಅವರ ಕಾವ್ಯ.

ಹೆಸರಿಸಲು ಹೋದರೆ ಸಾವಿರಾರು ಪುಸ್ತಕಗಳಿವೆ. ನಾನು ದೇಶೀಯ ಭಾಷೆಯ, ಅದರಲ್ಲೂ ಕನ್ನಡ ಭಾಷೆಯ ಪುಸ್ತಕಗಳಿಂದ ಮಾತ್ರ ಹೆಸರಿಸಬಲ್ಲೆ. ನನ್ನ ಓದು ಅಷ್ಟಕ್ಕೇ ಸೀಮಿತ. ಆದರೆ, ಕುವೆಂಪು-ಲಂಕೇಶ್-ಅನಂತಮೂರ್ತಿ ಅವರ ಬರಹಗಳಿಂದ ಜಗತ್ತಿನ ಬೇರೆ ಭಾಷೆಯ ಬರವಣಿಗೆಯ ಸತ್ವವನ್ನು ಪಡೆದಿರುವೆ.

ಯಾವ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ಪ್ರಭಾವ ಬೀರಿವೆ. ಅವು ಬದುಕು, ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿವೆಯೇ?
ನಿಜ ಹೇಳಬೇಕೆಂದರೆ ಸಾಹಿತ್ಯಕ್ಕಿಂತ ಪ್ರವಾಸ-ಸಂಗೀತ-ಸಿನೆಮಾಗಳೇ ನನ್ನನ್ನು ಹೆಚ್ಚು ಪ್ರಭಾವಿಸಿವೆ. ಅತ್ಯುತ್ತಮ ಟಿ.ವಿ. ಸೀರಿಯಲ್‌ಗಳು ನನ್ನ ಅರಿವನ್ನು ವಿಸ್ತರಿಸಿವೆ. ಟಾಲ್‌ಸ್ಟಾಯ್, ಕುವೆಂಪು, ಕಾರಂತ, ಡಿವಿಜಿಯವರ ಕತೆ-ಕಾದಂಬರಿ-ವಿಚಾರ ಸಾಹಿತ್ಯಗಳು ನಾನು ಬದುಕಿ ಬಾಳುವುದನ್ನು ಕಲಿಸಿವೆ.

ಈಗ ಪುಸ್ತಕಗಳಿಗೆ ಭವಿಷ್ಯವಿಲ್ಲ... ನಿಮಗೆ ಏನನಿಸುತ್ತದೆ?
ಜಗತ್ತಿನಲ್ಲಿ ಏನೆಲ್ಲ ಚಟುವಟಿಕೆಗಳು ನಿಲುಗಡೆಯಿಲ್ಲದೆ ನಡೆಯುತ್ತಿರುತ್ತವೆ. ಸಾಹಿತ್ಯ ರಚನೆ, ಓದು ಕೂಡ ಒಂದು ಸೀಮಿತವಾದ ಚಟುವಟಿಕೆ. ಹಸಿದವನಿಗೆ ಒಂದು ಒಳ್ಳೆಯ ಊಟ ನೀಡಿದಾಗ ಹೇಗೆ ತೃಪ್ತಿಯಾಗುತ್ತದೆಯೋ ಹಾಗೆಯೇ ಒಂದು ಒಳ್ಳೆಯ ಕೃತಿಯನ್ನು ಲೇಖಕ ನೀಡಿದಾಗ ಅಂತಹ ತೃಪ್ತಿ ಓದುಗನಿಗೆ ಆಗಬೇಕು! ಅಂತಹ ಪುಸ್ತಕಗಳಿಗೆ ಮಾತ್ರ ಭವಿಷ್ಯವಿದೆ!

ಓದು ಮನುಷ್ಯನ ಬದುಕಿನ ಆತ್ಮದ ಅಗತ್ಯ ಎಂದ ಅನ್ನಿಸುತ್ತದೆಯೇ?
ಒಂದೂ ಪುಸ್ತಕ ಓದದೆ, ಒಂದೂ ಅಕ್ಷರ ಬರೆಯದೆ ದಿವಿನಾಗಿ ಬದುಕಿ ಬಾಳಿ ಹೋದವರಿದ್ದಾರೆ. ಓದು-ಬರಹ ಬಲ್ಲ ಕೆಲವರಿಗೆ ಓದು ಅಗತ್ಯ-ಅಮೂಲ್ಯ ಅನಿಸಬಹುದು. ಒಂದು ಪುಸ್ತಕದ ಜತೆ ಇರುವುದಾದರೆ ಆ ಪುಸ್ತಕ ಬರೆದ ಮನುಷ್ಯನ ಜತೆ ಇದ್ದಂತೆಯೇ ಸೈ. ನಾನಂತು ಪುಸ್ತಕಗಳ ಮೇಲೆ ಅವಲಂಬಿತಳಾಗಿದ್ದೇನೆ.

ಶಿವಮೊಗ್ಗದಂತಹ ಊರಿನಲ್ಲಿರುವುದು ನಿಮ್ಮ ಓದು-ಬರಹಗಳಿಗೆ ಪೂರಕವಾಗಿದೆಯೇ?
ಶಿವಮೊಗ್ಗ ನನ್ನೂರು. ನಾನು ಶಿವಮೊಗ್ಗೆಗೆ ಪ್ರಪ್ರಥಮವಾಗಿ ಬಂದಾಗ ಮೂರು ತಿಂಗಳ ಮಗು. ಮದುವೆಯಾದ ಮೇಲೆ ಮಂಗಳೂರು, ಹಾಸನ, ಮಡಿಕೇರಿ, ಬೆಂಗಳೂರು, ಚಿತ್ರದುರ್ಗ, ಮೈಸೂರು ಇಲ್ಲೆಲ್ಲ ಓಡಾಡುವಂತಾಯಿತು.

ಚಟುವಟಿಕೆಗಳು ಕಡಿಮೆಯಾದರೆ ಏನಾದರೂ ಒಂಚೂರು ಬರೆಯಬಹುದು.  ನನ್ನ ಬರಹದ ಬಗ್ಗೆ ನನಗೆ ಅಂತಹ ಉತ್ಸಾಹವೇನೂ ಇಲ್ಲ. ಎಷ್ಟೆಲ್ಲಾ ಒಳ್ಳೆಯ ಬರಹಗಳು ಈ ಜಗತ್ತಿನಲ್ಲಿ ಇವೆ. ನನ್ನ ಬರಹದ ಇತಿಮಿತಿಗಳು ನನಗೆ ಗೊತ್ತಿದೆ.  ನನಗೆ ನನ್ನ ಊರೇ ಇಷ್ಟ.

ಮಕ್ಕಳಿಗಾಗಿ ಕವಿತೆಗಳನ್ನು ಬರೆದಿದ್ದೀರಿ... ಈಗಿನ ಮಕ್ಕಳು ಓದುತ್ತಾರೆ ಎಂದು ಅನಿಸುತ್ತದೆಯೇ?
ಮಕ್ಕಳು ಎಂದಿಗೂ ಮಕ್ಕಳೇ, ಆಟ-ಊಟ-ನೋಟ ಅವರಿಗೆ ಅತ್ಯಂತ ಪ್ರಿಯವಾದದ್ದು ಪಠ್ಯಪುಸ್ತಕಗಳು, ಶಾಲೆಗಳು ಅವರ ವೈರಿ! ಮಕ್ಕಳಿಗೆ ತಮ್ಮ ದಾರಿ ಆರಿಸಿಕೊಳ್ಳಲು ಪೋಷಕರು ಸಹಕರಿಸಬೇಕು. ಸಾಹಿತ್ಯ-ಸಂಗೀತ ಇತರೆ ಕಲೆಗಳನ್ನು ಪರಿಚಯಿಸಿದರೆ ಸಾಕು. ಆಯ್ಕೆ ಅವರೇ ಮಾಡಿಕೊಳ್ಳುವರು.

ಯಾವ ಲೇಖಕರನ್ನೂ ನಾನು ಶಿಫಾರಸು ಮಾಡಲಾರೆ. ಪ್ರತಿಯೊಂದು ಮಗುವೂ ಸ್ವತಂತ್ರ ಜೀವಿ. ಯಾವುದನ್ನೂ ಯಾರ ಮೇಲೂ ಹೇರಬಾರದು. ಹೇರಿದರೆ ಭಾರ, ಯಾತನೆ. ಗಿಡ-ಮರಗಳನ್ನು, ನದಿ ಬೆಟ್ಟಗುಡ್ಡಗಳನ್ನು, ಪಶುಪಕ್ಷಿ-ಪ್ರಾಣಿಗಳನ್ನು ಪ್ರೀತಿಸದ ಮಕ್ಕಳನ್ನೇ ನಾನು ನೋಡಿಲ್ಲ. ಸಹಜವಾಗಿ ಸ್ವತಂತ್ರವಾಗಿ ಮಗು ಬೆಳೆಯುವ ವಾತಾವರಣ ಕಲ್ಪಿಸಲು ನಮಗೆ ಸಾಧ್ಯವಿದೆ. ಆಯ್ಕೆಯ ದೊಡ್ಡ ಜಗತ್ತು ಅದರ ಮುಂದಿದೆ.
=ಸಂದರ್ಶನ: ಪ್ರಕಾಶ ಕುಗ್ವೆ. ಚಿತ್ರ: ಶಿವಮೊಗ್ಗ ನಾಗರಾಜ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT